Cini Reviews Cinisuddi Fresh Cini News 

ಮರ್ದಿನಿ ಚಿತ್ರ ಹೇಗಿದೆ..? (ಚಿತ್ರ ವಿಮರ್ಶೆ-ರೇಟಿಂಗ್ : 3.5/5)

ರೇಟಿಂಗ್ :3.5/5
ಚಿತ್ರ : ಮರ್ದಿನಿ
ನಿರ್ದೇಶಕ : ಕಿರಣ್ ಕುಮಾರ್. ವಿ
ನಿರ್ಮಾಪಕ : ಭಾರತಿ ಜಗ್ಗಿ
ಸಂಗೀತ : ಹಿತನ್ ಹಾಸನ್
ಛಾಯಾಗ್ರಾಹಕ : ಅರುಣ್​ ಸುರೇಶ್​
ವಿತರಣೆ : ವೆಂಕಟ್ ಗೌಡ
ತಾರಾಗಣ : ರಿತನ್ಯ ಹೂವಣ್ಣ , ಅಕ್ಷಯ್​, ಮನೋಹರ್​, ಇಂಚರಾ ಜೋಶಿ, ರಚನಾ ಎಸ್​, ಸುಶ್ಮಿತಾ ಹಾಗೂ ಮುಂತಾದವರು…

ಸಾಮಾನ್ಯವಾಗಿ ಎಲ್ಲಿ ದುಷ್ಟರು ಇರ್ತಾರೋ ಅಲ್ಲಿ ಸಂಹರಿಸುವ ಶಕ್ತಿ ಇರುತ್ತದೆ ಅನ್ನೋ ಮಾತಿನಂತೆ ಈ ವಾರ ಬೆಳ್ಳಿ ಪರದೆ ಮೇಲೆ ಬಂದಿರುವ ಚಿತ್ರ ಮರ್ದಿನಿ. ಇದೊಂದು ಕ್ರೈಂ ಸಸ್ಪೆನ್ಸ್ , ಥ್ರಿಲ್ಲರ್ ಚಿತ್ರವಾಗಿದ್ದು , ಒಂದು ಕೊಲೆಯ ಸುತ್ತ ಮಹಿಳಾ ಪೊಲೀಸ್ ಅಧಿಕಾರಿ ತನಿಖೆ ಮಾಡುವ ಪರಿಯನ್ನು ಬಹಳ ಸೂಕ್ಷ್ಮವಾಗಿ ತೆರೆದಿಡುವ ಪ್ರಯತ್ನ ನಡೆದಿದೆ. ಚಿತ್ರದ ಕಥಾ ನಾಯಕಿ ಮರ್ದಿನಿ (ರಿತನ್ಯ) ದಕ್ಷ ಪೊಲೀಸ್ ಅಧಿಕಾರಿ.

ತನ್ನ ಪ್ರಾಮಾಣಿಕತೆ , ನಿಷ್ಠೆಗೆ ತನ್ನ ಕೆಲಸ ಎನ್ನುವ ಮರ್ದಿನಿ ಬೆಂಗಳೂರಿನಲ್ಲಿ ನಡೆಯುವ ಮಕ್ಕಳ ಅಪಹರಣ, ರೌಡಿಗಳನ್ನು ಸದೆಬಡೆದು ಸರ್ಕಾರ ಇಲಾಖೆಯಿಂದ ಪ್ರಶಂಸೆಯನ್ನ ಪಡೆಯುತ್ತಾಳೆ. ಎಲೆಕ್ಷನ್ ಸಮೀಪದಲ್ಲಿರುವ ಚಿಕ್ಕಮಗಳೂರಿಗೆ ವರ್ಗಾವಣೆ ಆಗುವ ಅವಕಾಶ ಬರುತ್ತದೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮುನ್ನಡೆಯುವ ಮರ್ದಿನಿಗೆ ಒಂದು ಮರ್ಡರ್ ಕೇಸ್ ದೊಡ್ಡ ಚಾಲೆಂಜ್ ಆಗುತ್ತದೆ. ಹುಡುಗಿಯೊಬ್ಬಳ ಕೊಲೆ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ರಾಜಕೀಯ , ಪೋಲಿಸ್ ಹಾಗೂ ಜನಸಾಮಾನ್ಯರ ಮೇಲೂ ಅನುಮಾನ ಬರುವಂತೆ ಮಾಡುತ್ತದೆ. ಈ ಕೊಲೆಯ ರೂವಾರಿಯನ್ನು ಹುಡುಕುವ ಹಾದಿಯಲ್ಲಿ ತಿರುವುಗಳು ಎದುರಾಗುತ್ತಾ ಕ್ಲೈಮ್ಯಾಕ್ಸ್ ರೋಚಕ ಹಂತಕ್ಕೆ ಬಂದು ನಿಲ್ಲುತ್ತದೆ.
ಕೊಲೆಯಾದ ಹುಡುಗಿ ಯಾರು…
ಅವಳ ಸಾವಿಗೆ ಕಾರಣವೇನು..
ಇದರ ಸೂತ್ರಧಾರಿ ಯಾರು…
ಮರ್ದಿನಿ ಹುಡುಕುವ ಮಾರ್ಗ ಏನು…
ಈ ಎಲ್ಲ ಪ್ರಶ್ನೆಗೆ ಉತ್ತರ ಸಿಗಬೇಕಾದರೆ ನೀವೆಲ್ಲರೂ “ಮರ್ದಿನಿ”ಯನ್ನು ಒಮ್ಮೆ ನೋಡಬೇಕು.

ಇನ್ನು ಈ ಚಿತ್ರದ ಮೂಲಕ ನಾಯಕ ನಟನಾಗಿ ಬೆಳ್ಳಿಪರದೆ ಪ್ರವೇಶ ಮಾಡಿರುವ ರಿತನ್ಯ ಹೂವಣ್ಣ ಪೊಲೀಸ್ ಅಧಿಕಾರಿ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಒಂದಿಷ್ಟು ಖದರ್ ಹಾಗೂ ಖಡಕ್ ಡೈಲಾಗ್ ಮೂಲಕ ಗಮನ ಸೆಳೆಯುವ ಈ ಪ್ರತಿಭೆ ಆ್ಯಕ್ಷನ್ ದೃಶ್ಯವನ್ನ ಉತ್ತಮವಾಗಿ ನಿರ್ವಹಿಸಿದ್ದಾರೆ. ಅಭಿನಯದಲ್ಲಿ ಇನ್ನೊಂದಷ್ಟು ತಾಲೀಮು ಅಗತ್ಯ ಅನಿಸುತ್ತದೆ. ಪ್ರಥಮ ಚಿತ್ರವಾದರೂ ಸಿಕ್ಕ ಪಾತ್ರಕ್ಕೆ ಜೀವ ತುಂಬಿದ್ದಾರೆ. ಕನ್ನಡಕ್ಕೆ ಮತ್ತೊಬ್ಬ ಲೇಡಿ ಪೊಲೀಸ್ ಸಿಕ್ಕಂತಾಗಿದೆ. ಇನ್ನು ಯುವ ನಟ ಅಕ್ಷಯ್ ದ್ವಿತಿಯಾರ್ಧದಲ್ಲಿ ಬಂದರು ಕೂಡ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಮತ್ತೊಬ್ಬ ನಟ ಮನೋಹರ್ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಾ 2ಶೇಡ್ ಗಳಲ್ಲಿ ಮಿಂಚಿದ್ದಾರೆ.

ಉಳಿದಂತೆ ಬರುವ ಎಲ್ಲಾ ಪಾತ್ರಧಾರಿಗಳು ಚಿತ್ರದ ಓಟಕ್ಕೆ ಜೀವತುಂಬಿದ್ದಾರೆ.ಇನ್ನು ಈ ಚಿತ್ರದ ನಿರ್ದೇಶಕ ಕಿರಣ್ ಕುಮಾರ್. ವಿ ಮರ್ಡರ್ ಮಿಸ್ಟ್ರಿಯ ಕಥೆಯನ್ನು ಪರಿಸರದ ನಡುವೆ ಬಹಳ ಕುತೂಹಲಕಾರಿಯಾಗಿ ಚಿತ್ರೀಕರಿಸಿದ್ದಾರೆ. ಚಿತ್ರದ ಮೊದಲರ್ಧದವರೆಗೂ ಬಹಳ ಕುತೂಹಲಕಾರಿ ಅಂಶದೊಂದಿಗೆ ಸಾಗಿದ್ದು, ದ್ವಿತೀಯಾರ್ಧವು ಕೂಡ ಅಷ್ಟೆ ರೋಚಕವಾಗಿ ಸಾಗಿದರೂ ಕೂಡ ಪೊಲೀಸ್ ಅಧಿಕಾರಿಯ ಶಿಸ್ತುಬದ್ಧ ನಡವಳಿಕೆ ಹಾಗೂ ಪ್ರೀ ಕ್ಲೈಮ್ಯಾಕ್ಸ್ ಹಂತದ ಕೆಲವು ದೃಶ್ಯಗಳು ಮತ್ತಷ್ಟು ಉತ್ತಮವಾಗಿ ಮಾಡಬಹುದಿತ್ತು.

ಒಟ್ಟಾರೆ ಯುವ ಪಡೆಗಳನ್ನ ಕಟ್ಟಿಕೊಂಡು ಮರ್ಡರ್ ಮಿಸ್ಟರಿಯ ಪಯಣದಲ್ಲಿ ರಾಜಕೀಯ, ಪೋಲಿಸ್ ಹಾಗೂ ಪತ್ರಕರ್ತರ ಕಾರ್ಯವೈಖರಿಯ ಸೂಕ್ಷ್ಮತೆಯನ್ನು ತೆರೆದಿಡುವ ಪ್ರಯತ್ನ ಮಾಡಿದ್ದಾರೆ. ಇಂತಹ ಕ್ರೈಂ, ಸಸ್ಪೆನ್ಸ್ , ಥ್ರಿಲ್ಲರ್ ಚಿತ್ರವನ್ನ ನಿರ್ಮಿಸಿರುವ ಭಾರಿತಿ ಜಗ್ಗಿ ರವರ ಸಾಹಸ ಮೆಚ್ಚಬೇಕು. ಈ ಚಿತ್ರಕ್ಕೆ ಹಿತನ್ ಹಾಸನ್ ಸಂಗೀತ ನೀಡಿದ್ದು, ಹಿನ್ನೆಲೆ ಸಂಗೀತ ಚಿತ್ರಕ್ಕೆ ಪೂರಕವಾಗಿ ಸಾಗಿದೆ. ಇನ್ನು ಛಾಯಾಗ್ರಹಣ ಮಾಡಿರುವ ಅರುಣ್ ಸುರೇಶ್ ಕ್ಯಾಮೆರಾ ಕೈಚಳಕ ಕೂಡ ಸೊಗಸಾಗಿ ಮೂಡಿಬಂದಿದೆ. ಆ್ಯಕ್ಷನ್ ಹಾಗೂ ಸಸ್ಪೆನ್ಸ್ ಪ್ರಿಯರಿಗೆ ಈ ಚಿತ್ರ ಖಂಡಿತ ಇಷ್ಟವಾಗಲಿದೆ. ಬಹಳ ಕುತೂಹಲಕಾರಿಯಾಗಿ ಬಂದಿರುವ ಈ ಚಿತ್ರವನ್ನು ವಿತರಕ ವೆಂಕಟ್ ಗೌಡ ರಾಜ್ಯಾದ್ಯಂತ ಬಿಡುಗಡೆ ಮಾಡಿದ್ದು, ಎಲ್ಲರೂ ಒಮ್ಮೆ ಈ ಚಿತ್ರವನ್ನ ನೋಡಬಹುದಾಗಿದೆ.

Related posts