Cini Reviews Cinisuddi Fresh Cini News 

ಮನ ಮುಟ್ಟುವ “ಮಾನ್ಸೂನ್ ರಾಗ” (ಚಿತ್ರವಿಮರ್ಶೆ -ರೇಟಿಂಗ್ :4/5)

ರೇಟಿಂಗ್ :4/5

ಚಿತ್ರ : ಮಾನ್ಸೂನ್ ರಾಗ ನಿರ್ದೇಶಕ : ಎಸ್. ರವೀಂದ್ರನಾಥ್
ನಿರ್ಮಾಪಕ : ಎ..ಆರ್ ವಿಖ್ಯಾತ್
ಸಂಗೀತ : ಅನೂಪ್ ಸೀಳಿನ್
ಛಾಯಾಗ್ರಾಹಕ : ಎಸ್. ಕೆ. ರಾವ್
ತಾರಾಗಣ : ಧನಂಜಯ , ರಚಿತಾರಾಮ್, ಅಚ್ಯುತ್ ಕುಮಾರ್, ಸುಹಾಸಿನಿ, ಶೋಭರಾಜ್‌, ಯಶಾ ಶಿವಕುಮಾರ್‌, ಶಿವಾಂಕ್‌ ಹಾಗೂ ಮುಂತಾದವರು…

ಸಾಮಾನ್ಯವಾಗಿ ಬದುಕಿನಲ್ಲಿ ಸ್ನೇಹ , ಪ್ರೀತಿ, ಗೆಳೆತನ ಅರಿವೇ ಇಲ್ಲದಂತೆ ಯಾವ ಹಂತದಲ್ಲಿ ಬಂದು ಸೆಳೆಯುತ್ತದೆ ಎಂಬುದನ್ನು ಹೇಳುವುದು ಕಷ್ಟಕರ ಸಂಗತಿ. ಬಾಲ್ಯ , ಯೌವನ, ವಯಸ್ಕರ ಹಾಗೂ ಇಳಿವಯಸ್ಸಿನ ಎಲ್ಲಾ ಕಾಲಘಟ್ಟಗಳಲ್ಲೂ ಮನಸ್ಸು ತನ್ನದೇ ಆದ ಆಸೆ ಆಕಾಂಕ್ಷೆಗಳನ್ನು ಹೊಂದಿರುತ್ತದೆ. ಇಂಥದೇ ಸೂಕ್ಷ್ಮ ವಿಚಾರದೊಂದಿಗೆ ಮನಸ್ಸಿನ ತಲ್ಲಣ, ಪ್ರೇಮದ ಸಂಚಲನಗಳನ್ನು ಬೆಸೆದುಕೊಂಡು ತೆರೆಮೇಲೆ ಬಂದಂಥ ಚಿತ್ರವೇ “ಮಾನ್ಸೂನ್ ರಾಗ”.

ಚಿತ್ರದ ಕಥಾಹಂದರ ತೆರೆದುಕೊಳ್ಳುವುದೇ ಸುಂದರ ಪರಿಸರದ ನಡುವೆ ಹಾಡಿನ ಮೂಲಕ. ಸರ್ಕಾರಿ ಇಲಾಖೆ ಗುಮಾಸ್ತನಾಗಿ ಕೆಲಸ ಮಾಡುವ ವ್ಯಕ್ತಿ, ಆ ಊರಿಗೆ ಪಕ್ಕದ ರಾಜ್ಯದಿಂದ ಬರುವ ಮಹಿಳಾ ಉದ್ಯೋಗಿ. ಈ ಆವರಣದ ಸುತ್ತ ಊರಿನ ನಡುವೆ ಒಂದಷ್ಟು ಪ್ರಸಂಗಗಳು. ಈ ನಡುವೆ ಮತ್ತೊಂದು ಕತೆ ತೆರೆದುಕೊಳ್ಳುತ್ತದೆ. ಹಳ್ಳಿಯಲ್ಲಿ ಬಡ ಕುಟುಂಬವೊಂದು ಮೂರ್ತಿಗಳನ್ನು ನಿರ್ಮಿಸುವ ಕಾಯಕ. ಅವನಿಗೊಬ್ಬ ಮುದ್ದಾದ ಮಗು. ಶಾಲೆಯಲ್ಲಿ ಆತನಿಗೊಬ್ಬಳು ಗೆಳತಿ. ಆ ಪುಟಾಣಿ ಮನಸಿನಲ್ಲಿ ಒಂದಷ್ಟು ಸಂಚಲನ.

ಇನ್ನೊಂದು ಕಥೆಯಲ್ಲಿ ರೌಡಿಸಂ ಜೀವನವೇ ನನ್ನ ಬದುಕು ಎಂದು ಅಬ್ಬರಿಸುವ ಹುಡುಗನ ಬಾಳಿನಲ್ಲಿ ಕಾಲೇಜ್ ಹುಡುಗಿಯೊಬ್ಬಳು ಪ್ರವೇಶ. ಜಾತಿ , ಧರ್ಮ ಅಡ್ಡ ಬಂದರೂ ಯಾವುದಕ್ಕೂ ಜಗ್ಗದೆ ಮುಂದೆ ಸಾಗುವ ಈ ಜೋಡಿಯ ಬದುಕಿನಲ್ಲಿ ತಲ್ಲಣ ಸೃಷ್ಟಿ. ಮತ್ತೊಂದು ಕಥೆಯಲ್ಲಿ ಬಾರೊಂದರಲ್ಲಿ ಕೆಲಸ ಮಾಡುವ ವ್ಯಕ್ತಿ. ಯಾವುದಕ್ಕೂ ಜಗ್ಗದೆ, ತನ್ನಿಷ್ಟದಂತೆ ಬದುಕುವ ನಿಗೆ ಎಣ್ಣೆ ಪಡೆಯಲು ಬರುವ ಹುಡುಗಿಯೊಬ್ಬಳ ಮೇಲೆ ಮನಸು.

ಅವಳು ವೇಶ್ಯೆ ಎಂದು ತಿಳಿದರೂ ಅವಳನ್ನು ಮದುವೆಯಾಗಲು ನಿರ್ಧರಿಸುವ ಬದುಕಿನಲ್ಲಿ ಆಗುವ ಎಡವಟ್ಟುಗಳು.ಹೀಗೆ ಈ 4ಕಥೆಗಳು ಒಂದಕ್ಕೊಂದು ಕೊಂಡಿಯಂತೆ ಸಾಗುತ್ತಾ ಚಿತ್ರ ಕ್ಲೈಮ್ಯಾಕ್ಸ್ ಹಂತದಲ್ಲಿ ನಿರೀಕ್ಷಿಸಲು ಸಾಧ್ಯವಾಗದ ಘಟ್ಟಕ್ಕೆ ಬಂದು ನಿಲ್ಲುತ್ತದೆ. ಅದು ಏನು ಎಂಬುದನ್ನು ತಿಳಿಯಬೇಕಾದರೆ ಒಮ್ಮೆ “ಮಾನ್ಸೂನ್ ರಾಗ”. ಚಿತ್ರವನ್ನ ನೀವು ತೆರೆ ಮೇಲೆಯೇ ನೋಡಬೇಕು.

ಒಂದು ವಿಭಿನ್ನ ಚಿತ್ರವನ್ನ ನಿರ್ಮಿಸಲು ನಿರ್ಮಾಪಕರಿಗೆ ಗಟ್ಸ್ ಬೇಕು. ಧೈರ್ಯ ಮಾಡಿ ಕ್ಲಾಸ್ ಅಂಶಗಳೊಂದಿಗೆ ಪ್ರೇಕ್ಷಕರಿಗೆ ನೀಡಿರುವ ನಿರ್ಮಾಪಕ ಎ .ಆರ್. ವಿಖ್ಯಾತ್ ಧೈರ್ಯ ಮೆಚ್ಚಲೇಬೇಕು. ಬಹಳ ಸೂಕ್ಷ್ಮವಾಗಿ ನಿರ್ದೇಶಕ ಎಸ್. ರವೀಂದ್ರನಾಥ್ ಎಲ್ಲಾ ಕಾಲಘಟ್ಟಗಳ ಮನಸ್ಸಿನ ತಲ್ಲಣ, ಸೂಕ್ಷ್ಮ ಸಂವೇದನೆಗಳನ್ನ ಪ್ರೇಮ ಸಿಂಚನದ ಮೂಲಕ ತೆರೆದಿಟ್ಟಿರುವ ರೀತಿ ವಿಭಿನ್ನವಾಗಿದೆ. ಕೆಲವೊಂದು ಸನ್ನಿವೇಶಗಳು ಇರಿಸುಮುರುಸು ಅನ್ನಿಸಿದರೂ ಚಿತ್ರದ ಓಟಕ್ಕೆ ಪೂರಕವಾಗಿ ತೆಗೆದುಕೊಂಡು ಹೋಗಿದ್ದಾರೆ.

ಈ ಚಿತ್ರದಲ್ಲಿ ಅಭಿನಯಿಸಿರುವ ಪ್ರತಿಯೊಂದು ಪಾತ್ರಗಳು ಅಚ್ಚುಕಟ್ಟಾಗಿ ಜೀವ ತುಂಬಿದ್ದಾರೆ. ಇಬ್ಬರು ಪುಟಾಣಿ ಮಕ್ಕಳು , ಹಿರಿಯ ನಟಿ ಸುಹಾಸಿನಿ ಹಾಗೂ ಅಚ್ಯುತ್ ಕುಮಾರ್ , ಶಿವಾಂಕ್ ಹಾಗೂ ಯಶಾ ಕುಮಾರ್ , ಧನಂಜಯ್ ಹಾಗೂ ರಚಿತಾ ರಾಮ್ ಸೇರಿದಂತೆ ಅಭಿನಯಿಸಿರುವ ಎಲ್ಲಾ ಪಾತ್ರಧಾರಿಗಳು ಕೂಡ ಗಮನ ಸೆಳೆಯುವಂತೆ ನಟಿಸಿದ್ದು, ಇಲ್ಲಿ ಯಾವುದೇ ಹೀರೋಯಿಸಂ , ಬಿಲ್ಡಪ್ ಇಲ್ಲದೆ ಕಥೆಗೆ ಏನು ಬೇಕೋ ಅದನ್ನು ಅಚ್ಚುಕಟ್ಟಾಗಿ ಪಾತ್ರಧಾರಿಗಳು ನಿಭಾಯಿಸಿದ್ದಾರೆ.

ಹಾಗೆಯೇ ಈ ಚಿತ್ರದ ಹೈಲೈಟ್ ಗುರು ಕಶ್ಯಪ್‌ ಸಂಭಾಷಣೆ , ಛಾಯಾಗ್ರಹಣ ಮಾಡಿರುವ ಎಸ್ .ಕೆ .ರಾವ್ ಹಾಗೂ ಸಂಗೀತ ಹಾಗೂ ಹಿನ್ನೆಲೆ ಸಂಗೀತ ನೀಡಿರುವ ಅನೂಪ್ ಸಿಳೀನ್ ಅವರ ಕಾರ್ಯವೈಖರಿ ಅದ್ಭುತವಾಗಿ ಮೂಡಿಬಂದಿದೆ.
ಒಟ್ಟಾರೆ ಬಹಳ ವಿಭಿನ್ನವಾಗಿ ಚಿತ್ರ ಬಂದಿದ್ದು, ಹೊಸ ರೀತಿಯ ಚಿತ್ರಗಳನ್ನು ಇಷ್ಟಪಡುವವರಿಗಾಗಿ ಬಂದಿರುವ “ಮಾನ್ಸೂನ್ ರಾಗ” ಚಿತ್ರವನ್ನ ಎಲ್ಲರೂ ಒಮ್ಮೆ ನೋಡಬಹುದು.

Related posts