Cini Reviews Cinisuddi Fresh Cini News 

ಮನಸುಗಳ ತಳಮಳದ ಸ್ಮಿತಪ್ರೇಮಾಯಣ

ಮನಸುಗಳ ತಳಮಳದ ಸ್ಮಿತಪ್ರೇಮಾಯಣ

ರೇಟಿಂಗ್ : 3/5

ಚಿತ್ರ : ಮನಸ್ಮಿತ
ನಿರ್ದೇಶಕ : ಅಪ್ಪಣ್ಣ ಸಂತೋಷ್
ನಿರ್ಮಾಪಕಿ : ಸೀತಮ್ಮ ತಿಮ್ಮಯ್ಯ
ಸಂಗೀತ : ಹರಿಕಾವ್ಯ
ಛಾಯಾಗ್ರಹಣ : ಕೆ. ಎಸ್. ಚಂದ್ರಶೇಖರ್
ತಾರಾಗಣ : ಚರಣ್ ಗೌಡ, ಸಂಜನಾ ದಾಸ್ , ಸುಚೇಂದ್ರ ಪ್ರಸಾದ್, ಶಿಲ್ಪಾ , ವೀಣಾ ಪೊನ್ನಪ್ಪ , ಅತುಲ್ ಕುಲಕರ್ಣಿ, ಪಲ್ಲವಿ ಪುರೋಹಿತ್ , ರಾಜೇಂದ್ರ ಕಾರಂತ್, ಕರಿಸುಬ್ಬು ,ಮೂಗ್ ಸುರೇಶ್ ಹಾಗೂ ಮುಂತಾದವರು…

ಎಲ್ಲ ಕಾಲಘಟ್ಟಕ್ಕೂ ಸರಿದೂಗುವಂತಹ ಬದುಕಿನ ಪಯಣದ ಕಥಾ ಹಂದರದಲ್ಲಿ ಬಾಲ್ಯ, ಯೌವನ , ಆಸೆ , ಬಾಂಧವ್ಯ ಹೀಗೆ ಒಂದಕ್ಕೊಂದು ಕೊಂಡಿ ಯಾಗಿ ಮೂರು ಕಾಲಘಟ್ಟಕ್ಕೂ ಬೆಸೆದುಕೊಳ್ಳುವ ಪ್ರೇಮಾಂಕುರ, ಸಂಬಂಧ, ಆತ್ಮದ ವೇದನೆ, ಸ್ವರ ಸಂಗೀತ ಸುಧೆ ಹೀಗೆ ಎಲ್ಲ ಅಂಶಗಳನ್ನು ಒಳಗೊಂಡು ಮನರಂಜನೆಯ ಜೊತೆಗೆ ಮೈನವಿರೇಳಿಸುವಂಥ ದೃಶ್ಯಗಳ ಸಮಾಗಮದಲ್ಲಿ ಬಂದಿರುವಂತಹ ಚಿತ್ರ ಮನಸ್ಮಿತ. ಬದುಕಿನಲ್ಲಿ ಎಲ್ಲಾ ಇದ್ದರೂ ನೆಮ್ಮದಿ, ಸಂತೋಷ ಮುಖ್ಯ. ಆ ನಿಟ್ಟಿನಲ್ಲಿ ಕುಟುಂಬವೊಂದು ತಮ್ಮ ಫಾರಂ ಹೌಸ್ ಗೆ ಪ್ರವೇಶ ಮಾಡುತ್ತಾರೆ. ಗಂಡ, ಹೆಂಡತಿ ಜೊತೆಗೆ ಮುದ್ದಾದ ಗಂಡು ಮಗು. ದಿನಗಳು ಕಳೆದಂತೆ ತಂದೆ ತಾಯಿಯಿಲ್ಲದ ಹೆಣ್ಣು ಮಗುವೊಂದನ್ನು ಸಾಕುವಂಥ ಪರಿಸ್ಥಿತಿ ಈ ದಂಪತಿ ಎದುರಾಗಿತ್ತದೆ. ಮಕ್ಕಳು ಬೆಳೆದಂತೆ ಮನೆಯ ಮುಖ್ಯಸ್ಥ (ಸುಚೇಂದ್ರ ಪ್ರಸಾದ್)ಇಲ್ಲದೆ ಸಂಸಾರ ಸಾಗುತ್ತದೆ. ತಾಯಿಯ(ಶಿಲ್ಪಾ) ಜೊತೆ ಸಾಕುಮಗಳು ಸಾನಿಯಾ (ಸಂಜನಾ ದಾಸ್). ವಿದ್ಯಾಭ್ಯಾಸ ಬಿಟ್ಟು ತನ್ನ ತಾಯಿ ಹಾಗೂ ಇಷ್ಟಪಟ್ಟ ಗೆಳತಿಯನ್ನು ನೋಡಲು ಬರುವ ಮಗ ಅಕ್ಷಿತ್(ಚರಣ್ ಗೌಡ). ಇವರಿಬ್ಬರ ಮನಸಿನ ತಳಮಳ. ಪ್ರೇಮಾಂಕುರಕ್ಕೆ ದಾರಿ ಮಾಡಿಕೊಳ್ಳುವಷ್ಟರಲ್ಲಿ ಒಂದಿಷ್ಟು ಅಡೆತಡೆ. ಅಗೋಚರ ಶಕ್ತಿ ಓಡಾಟ. ಮನೆಯಲ್ಲಿ ಆಗುತ್ತಿರುವ ಸಮಸ್ಯೆಗಳ ತಿಳಿಯಲು ಮುಂದಾದ ಮೊಮ್ಮಗನಿಗೆ ತನ್ನ ತಾತ ಸಂಗೀತ ವಿದ್ವಾನ್ ಪಂಚಾಕ್ಷರಿ ತಾರಾನಾಥ್(ಅತುಲ್ ಕುಲಕರ್ಣಿ) ಬದುಕಿನ ಪುಟಗಳ ಪುಸ್ತಕ ಕೈಗೆ ಸಿಗುತ್ತದೆ. ಇಲ್ಲಿಂದ ಫ್ಲ್ಯಾಶ್ ಬ್ಯಾಕ್ ಮೂಲಕ ಮತ್ತೊಂದು ತಿರುವು ಪಡೆಯುತ್ತದೆ. ಸುಂದರ ಕನ್ಯೆ ಸಂಗೀತ, ನೃತ್ಯದ ಬಗ್ಗೆ ಅಪಾರ ಆಸಕ್ತಿಯನ್ನು ಬೆಳೆಸಿಕೊಂಡಿರುವ ಬೆಡಗಿ ಚಂದ್ರ ಸ್ಮಿತಾ(ಪಲ್ಲವಿ ಪುರೋಹಿತ್) ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಗುರು ಪಂಚಾಕ್ಷರಿ ಬಳಿ ಬರುತ್ತಾಳೆ. ಸಂಗೀತಕ್ಕೆ ಮನಸೋತು ನಾಟ್ಯವಾಡುತ್ತಳೆ ಗುರುವಿಗೆ ಅನುರಕ್ತಳಾಗುತ್ತಾಳೆ. ಗರ್ಭಿಣಿಯಾದ ಈ ಸೌಂದರ್ಯವತಿ ಗುರುವಿನ ಗೌರವಕ್ಕೆ ಧಕ್ಕೆ ಬರದಂತೆ ಬದುಕಲು ಇಚ್ಛಿಸುವ ಈ ನೃತ್ಯಗಾತಿ ಕುತಂತ್ರಕ್ಕೆ ಸಾವಿಗೀಡಾಗುತ್ತಾಳೆ. ತನ್ನ ಗುರುವಿನ ಕುಟುಂಬ ಸರ್ವನಾಶ ಮಾಡವೇ ಎಂದು ಶಪಥ ಮಾಡಿ ಸಾಯುತ್ತಾಳೆ.
ಮುಂದೆ ಹಲವು ತಿರುವುಗಳನ್ನು ಪಡೆಯುತ್ತದೆ.
ನೃತ್ಯಗಾತಿ ಸಾವಿಗೆ ಕಾರಣ ಯಾರು…
ನಾಯಕನಿಗೆ ಸಿಗುವ ದಾರಿ ಯಾವುದು…
ಆತ್ಮಕ್ಕೆ ಮುಕ್ತಿ ಸಿಗುತ್ತಾ…
ಗೆಳತಿಯನ್ನು ಮದುವೆ ಆಗ್ತನಾ…
ಇಂಥ ಹಲವು ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ನೀವೆಲ್ಲರೂ ಒಮ್ಮೆ ಈ “ಮನಸ್ಮಿತ” ಚಿತ್ರವನ್ನು ನೋಡಬೇಕು.

ಈ ಚಿತ್ರವನ್ನು ನಿರ್ದೇಶನ ಮಾಡಿರುವ ಅಪಣ್ಣ ಸಂತೋಷ್ 3ಕಾಲಘಟ್ಟವನ್ನು ಒಂದೆಡೆಗೆ ಸೇರಿಸುವ ಪ್ರಯತ್ನವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇದೊಂದು ಮ್ಯೂಸಿಕಲ್ ಲವ್ ಸ್ಟೋರಿ, ಎನ್ನಬಹುದು. ಒಂದು ತಾತನ ಪ್ರೇಮಕಥೆಯಾದರೆ ಮತ್ತೊಂದು ಮೊಮ್ಮಗನ ಲವ್‍ಸ್ಟೋರಿ. ಈ ಕಥೆಯನ್ನು ಆಯಾ ಕಾಲಕ್ಕೆ ತಕ್ಕಹಾಗೆ ಪೋಣಿಸಿಕೊಂಡು ಹೋಗಿದ್ದಾರೆ. ಚಿತ್ರದ ಮೊದಲ ಭಾಗ ಸಾಮಾನ್ಯ ಕಥೆ ಎನಿಸಿದರೂ, ದ್ವಿತೀಯ ಭಾಗ ಕುತೂಹಲವನ್ನು ಮೂಡಿಸುತ್ತ ಸಾಗುತ್ತದೆ. ಒಂದಿಷ್ಟು ಅನಾವಶ್ಯಕ ದೃಶ್ಯಗಳನ್ನು ತೆಗೆದು ಮತ್ತಷ್ಟು ಕಥೆಯನ್ನು ಬಿಗಿ ಮಾಡಬಹುದಿತ್ತು. ಪ್ರೇಕ್ಷಕರ ಗಮನ ಸೆಳೆಯುವಂಥ ಚಿತ್ರವನ್ನು ನಿರ್ಮಿಸಿರುವ ನಿರ್ಮಾಪಕರ ಧೈರ್ಯ ಮೆಚ್ಚುವಂತದ್ದು.
ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿರುವ ಚರಣ್ ಗೌಡ ನಟನೆಯ ವಿಚಾರವಾಗಿ ಮತ್ತಷ್ಟು ತರಬೇತಿ ಪಡೆದು ಬರಬೇಕಿತ್ತು ಅನಿಸುತ್ತದೆ. ಇನ್ನು ನಾಯಕಿಯಾಗಿ ಅಭಿನಯಿಸಿರುವ ಸಂಜನಾ ದಾಸ್ ತಕ್ಕ ಮಟ್ಟಿಕ್ಕೆ ಶ್ರಮವಹಿಸಿ ಪಾತ್ರಕ್ಕೆ ನ್ಯಾಯ ಒದಗಿಸುವಲ್ಲಿ ಯಶಸ್ವಿ ಯಾಗಿದ್ದಾರೆ. ನೋಡಲು ಮುದ್ದಾಗಿರುವ ಈ ಬೆಡಗಿಗೆ ಮುಂದೆ ಉಜ್ವಲ ಭವಿಷ್ಯವನ್ನ ಕಾಣಬಹುದು. ಹಿರಿಯ ಕಲಾವಿದ ಅತುಲ್ ಕುಲಕರ್ಣಿ ಸಂಗೀತ ಕಲಿಸಿಕೊಡುವ ಗುರುವಿನ ಪಾತ್ರದಲ್ಲಿ ಲೀಲಾಜಾಲವಾಗಿ ಅಭಿನಯಿಸಿದ್ದಾರೆ. ಇನ್ನೂ ಚಂದ್ರಸ್ಮಿತ ಪಾತ್ರವನ್ನು ಪಲ್ಲವಿ ಪುರೋಹಿತ್ ಅದ್ಭುತವಾಗಿ ನಟಿಸಿ ನೃತ್ಯದ ಮೂಲಕ ಗಮನ ಸೆಳೆಯುತ್ತಾರೆ. ಉಳಿದಂತೆ ನಾಯಕನ ತಂದೆಯ ಪಾತ್ರದಲ್ಲಿ ಸುಚೇಂದ್ರ ಪ್ರಸಾದ್ , ತಾಯಿಯ ಪಾತ್ರದಲ್ಲಿ ಶಿಲ್ಪಾ ಸೇರಿದಂತೆ ರಾಜೇಂದ್ರ ಕಾರಂತ್, ಕರಿಸುಬ್ಬು , ವೀಣಾ ಪೊನ್ನಪ್ಪ , ಸುರೇಶ್, ಸೌಭಾಗ್ಯ, ಪ್ರದೀಪ್ ಪೂಜಾರಿ ಸೇರಿದಂತೆ ಎಲ್ಲಾ ಪಾತ್ರಧಾರಿಗಳು ಪಾತ್ರಕ್ಕೆ ಜೀವ ತುಂಬಿದ್ದಾರೆ.
ಈ ಚಿತ್ರದ ಪ್ರಮುಖ ಆಕರ್ಷಣೆ ಎಂದರೆ ಸಂಗೀತ, ನಾನಾ ಮಜಲುಗಳನ್ನು ಸಂಗೀತ ಸುಧೆಯಲ್ಲಿ ಹರಿಸುವುದರ ಜೊತೆಗೆ ಕಥೆಗೆ ಪೂರಕವಾಗಿ ಬರುವ ಒಂದೊಂದು ಹಾಡು ಮನಸ್ಸನ್ನು ಸೆಳೆಯುವಂತೆ ಮಾಡಿದ್ದಾರೆ ಸಂಗೀತ ನಿರ್ದೇಶಕ ಹರಿಕಾವ್ಯ. ಅದೇ ರೀತಿ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಿರುವ ಕೆ. ಎಸ್. ಚಂದ್ರಶೇಖರ್ ಅವರ ಕ್ಯಾಮೆರಾ ಕೈಚಳಕ ಉತ್ತಮವಾಗಿ ಮೂಡಿಬಂದಿದೆ. ಈ ಚಿತ್ರ ಮ್ಯೂಸಿಕಲ್ ರೊಮ್ಯಾಂಟಿಕ್ ಥ್ರಿಲ್ಲರ್ ಚಿತ್ರವಾಗಿದ್ದು , ಮನರಂಜನೆ ದೃಷ್ಟಿಯಿಂದ ಎಲ್ಲರೂ ಮನಸ್ಮಿತ ಚಿತ್ರವನ್ನ ಒಮ್ಮೆ ನೋಡಬಹುದು.

Related posts