Cinisuddi Fresh Cini News 

ಡಿಪ್ರೆಶನ್ ನಿಂದ ಹೊರಬಂದು ಸಿನಿಮಾ ತಯಾರಿಯಲ್ಲಿದ್ದಾರೆ ಮೈತ್ರಿಯಾ ಗೌಡ

ಬದುಕು ಎಲ್ಲರಿಗೂ ಪಾಠ ಕಲಿಸುತ್ತದೆ. ಅಲ್ಲಿಯವರೆಗೂ ಮನುಷ್ಯನಿಗೆ ತಾಳ್ಮೆ ಬಹಳ ಮುಖ್ಯ. ಜೀವನದಲ್ಲಿ ಹಲವು ಏಳು ಬೀಳುಗಳು ಕಂಡರೂ ಚಿತ್ರರಂಗದಲ್ಲೇ ನೆಲೆಯನ್ನು ಕಂಡುಕೊಳ್ಳಬೇಕೆಂಬ ಕನಸು ಹಲವು ಕಲಾವಿದರಲ್ಲಿ ಇರುತ್ತದೆ. ಅದೇ ರೀತಿಯ ಕನಸನ್ನು ಹೊತ್ತುಕೊಂಡು ಸ್ಯಾಂಡಲ್‍ವುಡ್‍ನಲ್ಲಿ ಮಿಂಚಲು ಹೊರಟವರು ಮೈತ್ರಿಯಾ ಗೌಡ .

ಮೌರ್ಯ ಚಿತ್ರದಿಂದ ಚಿತ್ರ ಜೀವನ ಆರಂಭಿಸಿದ ಮೈತ್ರಿಯಾ ನಂತರ ಸೂರ್ಯ ದಿ ಗ್ರೇಟ್, ಹೃದಯಾ ಐ ಮಿಸ್ ಯು, ಟೋಪಿವಾಲಾ ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದರೂ ನಾಯಕಿಯಾಗುವ ಅವಕಾಶ ಸಿಗಲಿಲ್ಲ. ಈ ನಡುವೆ ಒಂದೆರಡು ಚಿತ್ರಗಳಲ್ಲಿ ಹೀರೋಯಿನ್ ಆಗುವ ಚಾನ್ಸ್ ಸಿಕ್ಕರೂ ಅಷ್ಟರೊಳಗೆ ವೈಯಕ್ತಿಕ ಕಾರಣಗಳಿಂದ ಆ ಅವಕಾಶವನ್ನು ಕೈಚೆಲ್ಲಬೇಕಾಯಿತು.

ಮೂಲತಃ ರೂಪದರ್ಶಿಯಾಗಿರುವ ಮೈತ್ರಿಯಾ ವಿದ್ಯಾವಂತೆಯೂ ಆಗಿದ್ದು ಬಿಲ್ಡರ್ ಕಂಪೆನಿಯೊಂದರಲ್ಲಿ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಕೆಲವು ಜಾಹೀರಾತುಗಳಲ್ಲೂ ಮಿಂಚಿರುವ ಮೈತ್ರಿಯಾ ಸಮಾಜಸೇವೆಯಲ್ಲೂ ತೊಡಗಿಸಿಕೊಂಡಿದ್ದವರು.

ಇದರ ನಡುವೆ ಲವ್ವಿ ಡವ್ವಿಯಾಗಿ ರಾಜಕೀಯದ ಕೊಂಡಿ ಬೆಸೆದು ಕೊಂಡಿದ್ದರಿಂದ ಬಹಳಷ್ಟು ಮುಜುಗರವೂ ಜೊತೆಗೆ ಗೊಂದಲವನ್ನು ಎದುರಿಸಬೇಕಾಯಿತು.

ಸಿನಿಮಾರಂಗದಿಂದ ಕೆಲವು ವರ್ಷಗಳ ಕಾಲ ದೂರ ಉಳಿದಿದ್ದ ಮೈತ್ರಿಯಾಗೆ ಈಗ ವಸಂತ ಕಾಲ ಆರಂಭಗೊಂಡಿದೆ. ಒಂದರ ಮೇಲೊಂದು ಚಿತ್ರಗಳು ಆಕೆಯನ್ನು ಅರಸಿಕೊಂಡು ಬರುತ್ತಿವೆ.

ಸಂಜಯ್ ಆರ್ಯ ನಟಿಸಿ, ನಿರ್ದೇಶಿಸುತ್ತಿರುವ ಹೊಸ ಚಿತ್ರದಲ್ಲಿ ನಟಿಸುತ್ತಿರುವ ಮೈತ್ರಿಯಾ, ಜನಗಣಮನ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ಕಾಂತಮಣಿ ಹಾಗೂ ರಜತ್ ರಘುನಾಥ್ ನಿರ್ದೇಶನದ ಆಗಂತುಕ ಚಿತ್ರಗಳಲ್ಲಿ ನಟಿಸುತ್ತಿರುವಾಗಲೇ ಕೊರೊನಾ ಮಾರಾಮಾರಿ ಇಡೀ ಚಿತ್ರರಂಗವನ್ನು ಸ್ತಬ್ಧಗೊಳಿಸಿದ್ದು , ಸದ್ಯದಲ್ಲೇ ಈ ಮೂರು ಚಿತ್ರಗಳ ಶೂಟಿಂಗ್‍ನಲ್ಲಿ ಮೈತ್ರಿಯಾ ಪಾಲ್ಗೊಳ್ಳಲಿದ್ದಾರೆ, ಈ ನಡುವೆ ಇನ್ನೂ ಹಲವು ಸಿನಿಮಾಗಳ ನಿರ್ಮಾಪಕರು, ನಿರ್ದೇಶಕರು ಇವರನ್ನು ಸಂಪರ್ಕಿಸುತ್ತಿದ್ದಾರೆ.

ಆಗಂತುಕ ಚಿತ್ರದಲ್ಲಿ ಅರಣ್ಯ ಹಿನ್ನೆಲೆ ಕಥೆ ಇದ್ದು ಇದರಲ್ಲಿ ಫಾರೆಸ್ಟ್ ಪೋಲೀಸ್ ಅಧಿಕಾರಿಯಾಗಿ ಖಡಕ್ ಆಗಿ ಮಿಂಚುತ್ತಿದ್ದರೆ, ಲವ್‍ಸ್ಟೋರಿ ಹೊಂದಿರುವ ಕಾಂತಾಮಣಿ ಚಿತ್ರದಲ್ಲಿ ಇವರದು ದ್ವಿಪಾತ್ರವಂತೆ. ಜೊತೆಗೆ ಹಾರರ್ ಕೂಡ ಬೆರೆತಿದ್ದು ಎರಡೂ ಚಿತ್ರಗಳಲ್ಲೂ ಆ್ಯಕ್ಷನ್ ಸೀನ್‍ಗಳು ಹೆಚ್ಚಾಗಿರುವುದರಿಂದ ಅವುಗಳಲ್ಲಿ ಮೈತ್ರಿಯಾ ಸ್ವತಃ ಫೈಟ್ಸ್ ಮಾಡುತ್ತಾರೆ.

ಫೈಟಿಂಗ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳಬೇಕಾಗಿರುವುದರಿಂದ ಕಳೆದ 6 ತಿಂಗಳಿನಿಂದ ಸಾಕಷ್ಟು ವರ್ಕೌಟ್ ಮಾಡುತ್ತಿದ್ದಾರೆ, ಜೊತೆಗೆ ಮಾರ್ಷಲ್ ಆಟ್ರ್ಸ್ ಅನ್ನು ಕಲಿಯುತ್ತಿದ್ದು ಎಷ್ಟೋ ಬಾರಿ ಬಿದ್ದು ಗಾಯಗೊಂಡರೂ ಛಲಬಿಡದೆ ಆ ಕಲೆಯನ್ನು ಕರಗತಮಾಡಿಕೊಂಡು ಆ್ಯಕ್ಷನ್ ದೃಶ್ಯಗಳಲ್ಲಿ ಪಾಲ್ಗೊಳ್ಳಲು ಸಜ್ಜಾಗಿದ್ದಾರಂತೆ.

ಮಗಳನ್ನು ಚಿತ್ರನಟಿಯಾಗಿ ನೋಡಬೇಕೆಂಬ ಕನಸು ಹೊತ್ತಿದ್ದ ಮೈತ್ರಿಯಾಳ ತಂದೆ ಹೃದಯಾಘಾತದಿಂದ ಸಾವನ್ನಪ್ಪಿದರೆ, ತಾಯಿ ಕಿಡ್ನಿ ಸಮಸ್ಯೆಯಿಂದ ಇಹಲೋಕ ತ್ಯಜಿಸಿದ್ದರಿಂದ ಮೈತ್ರೀಯಾ ಡಿಪ್ರೆಷನ್‍ಗೆ ಹೋಗಿದ್ದರಂತೆ.

ಡಿಪ್ರೆಷನ್‍ನಿಂದ ಹೊರಬರಲು ಸಾಕಷ್ಟು ಶ್ರಮ ಪಟ್ಟ ಮೈತ್ರಿಯಾ ಅದಕ್ಕಾಗಿ ಯೋಗ, ಧ್ಯಾನ, ಪುಸ್ತಕ, ಸ್ಫೂರ್ತಿದಾಯಕ ಸ್ಪೀಚ್ ಕೇಳುವ ಮೂಲಕ ಅದರಿಂದ ಹೊರಬಂದಿದ್ದಾರಂತೆ. ನೃತ್ಯ ಹಾಗೂ ಮ್ಯೂಸಿಕ್ ಅಂದರೆ ನನಗೆ ತುಂಬಾ ಇಷ್ಟ ಆದರೆ ಡೆಪ್ರಿಷನ್‍ನಲ್ಲಿದ್ದಾಗ ಇದು ಕೂಡ ನನಗೆ ಕಿರಿಕಿರಿ ಉಂಟುಮಾಡಿದ್ದವು.

ಕೊರೊನಾ ಮಹಾಮಾರಿಯಿಂದ ಕೆಲಸವಿಲ್ಲದೆ ಸಾಕಷ್ಟು ಸಣ್ಣ ಪುಟ್ಟ ಕಲಾವಿದರು ತರಕಾರಿ, ಬೀದಿ ಬದಿ ವ್ಯಾಪಾರ, ಆಟೋ ಚಾಲಕ ವೃತ್ತಿ ಸೇರಿದಂತೆ ಕೆಲವು ಉದ್ಯೋಗಗಳಲ್ಲಿ ತೊಡಗಿಸಿಕೊಂಡಿದ್ದರೆ, ಇನ್ನು ಕೆಲವರು ಡಿಪ್ರೆಷನ್‍ಗೆ ಹೋಗಿದ್ದಾರೆ.

ಆ ರೀತಿ ಡಿಪ್ರೆಷನ್‍ಗೆ ಹೋಗುವ ಬದಲು ಸರಿಯಾದ ಸಮಯ ಬಂದೇ ಬರುತ್ತದೆ ಎಂಬ ಪಾಸಿಟಿವ್ ಥಿಂಕಿಂಗ್ ಮಾಡಬೇಕೆಂದು ಮೈತ್ರಿಯಾ ಧೈರ್ಯದ ಸಂದೇಶಗಳನ್ನು ನೀಡಿದ್ದಾರೆ.

ಚಿತ್ರರಂಗವೇ ತನ್ನ ಫ್ಯಾಷನ್ ಹಾಗೂ ಹೆತ್ತವರ ಕನಸು ಎಂದು ಹೇಳುವ ಮೈತ್ರಿಯಾಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸುವ ಅವಕಾಶಗಳು ಸಿಕ್ಕಿ ಯಶಸ್ವಿ ನಟಿಯಾಗಿಲಿ.

Share This With Your Friends

Related posts