Cinisuddi Fresh Cini News 

ಏ.9ರಿಂದ ಪೇಡ್ ಪ್ರೀಮಿಯರ್ “ಮಹಾನ್ ಹುತಾತ್ಮ” ಕಿರುಚಿತ್ರ

ಅಕ್ಷಯ್ ಎಂಟರ್​ಟೈನ್ ಮೆಂಟ್ ಮತ್ತು ಪುರಾಣಿಕ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಿದ್ಧವಾಗಿದೆ ಮಹಾನ್ ಹುತಾತ್ಮ ಕಿರುಚಿತ್ರ. 2018ರಲ್ಲಿ ಈ ಕಿರುಚಿತ್ರಕ್ಕೆ ಅತ್ಯುತ್ತಮ ಕಿರುಚಿತ್ರ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿಯೂ ಸಿಕ್ಕಿತ್ತು. ಅದಾದ ಬಳಿಕ ಒಂದಲ್ಲ ಎರಡಲ್ಲ 20ಕ್ಕೂ ಅಧಿಕ ಸಿನಿಮೋತ್ಸವಗಳಲ್ಲಿ ಭಾಗವಹಿಸಿ ಹತ್ತಾರು ಅವಾರ್ಡ್​ ಗಳನ್ನೂ ಮುಡಿಗೇರಿಸಿಕೊಂಡಿದೆ. ಇದೀಗ ಇದೇ ಕಿರುಚಿತ್ರ ಬಿಡುಗಡೆಗೆ ಸಿದ್ಧವಾಗಿ ಮುಂದೆ ಬಂದಿದೆ. ಅಂದರೆ, ಏ.9ರಂದು ಪೇಡ್ ಪ್ರೀಮಿಯರ್ ಆಗಲಿದೆ. ಎಂಎಚ್ MHfilm.in ನಲ್ಲಿ ಪ್ರೀಮಿಯರ್ ಆಗಲಿದೆ. 30 ರೂಪಾಯಿ ನೀಡಿ ಈ ಕಿರುಚಿತ್ರವನ್ನು ನೋಡಬಹುದಾಗಿದೆ.

ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸುನೀಲ್ ಪುರಾಣಿಕ್ ಅವರ ಪುತ್ರ ಸಾಗರ್ ಪುರಾಣಿಕ್ ಮಹಾನ್ ಹುತಾತ್ಮ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಶನಿವಾರ ಈ ಚಿತ್ರದ ಪ್ರದರ್ಶನ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ನಡೆಯಿತು. ಬಳಿಕ ಸುದ್ದಿಗೋಷ್ಟಿಯಲ್ಲಿ ಕಿರುಚಿತ್ರ ತಂಡ ಒಂದಷ್ಟು ಮಾಹಿತಿ ಹಂಚಿಕೊಂಡಿತು.

ಮೊದಲಿಗೆ ಕಿರುಚಿತ್ರದ ನಿರ್ಮಾಪಕ ಮತ್ತು ನಾಯಕ ಅಕ್ಷಯ್ ಚಂದ್ರಶೇಖರ್ ಮಾತನಾಡಿ, ನಾನು ಮೂಲತಃ ಬೆಳಗಾವಿಯವನು. ಮೂರು ವರ್ಷದ ಕನಸಿದು. ಮೊದಲಿಂದಲೂ ಭಗತ್ ಸಿಂಗ್ ಫಾಲೋವರ್​ ಆಗಿದ್ದರಿಂದ ಅವರ ಕುರಿತು ಸಿನಿಮಾ ಮಾಡುವ ಆಲೋಚನೆ ಇತ್ತು. ಅಂದಿನಿಂದ ಶುರುವಾಗಿದ್ದ ಜರ್ನಿಗೆ ಸಾಗರ್ ಜತೆಯಾದರು.

ಸಿನಿಮಾ ಬದಲಿಗೆ ಮೊದಲು 80 ಸಾವಿರ ಬಜೆಟ್ ನಲ್ಲಿ ಕಿರುಚಿತ್ರ ಮಾಡುವ ಆಲೋಚನೆ ಹಾಕಿಕೊಂಡೆವು. ಆದರೆ, ಅದು ದೊಡ್ಡ ಮಟ್ಟದಲ್ಲಿ ಸಿದ್ಧವಾಯ್ತು. ದಕ್ಷಿಣ ಭಾರತದಲ್ಲಿ ಅತೀ ಹೆಚ್ಚು ಬಜೆಟ್ ವುಳ್ಳ ಕಿರುಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಕನ್ನಡದ ಈ ಕಿರುಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯೂ ಸಿಕ್ಕಿತು. ಸೈನಿಕ ಮತ್ತು ಭಗತ್ ಸಿಂಗ್ ಪಾತ್ರದಲ್ಲಿ ಈ ಕಿರುಚಿತ್ರದಲ್ಲಿದ್ದೇನೆ. ಮುಂದಿನ ದಿನಗಳಲ್ಲಿ ಸಿನಿಮಾ ಮಾಡುವ ಆಲೋಚನೆಯೂ ಇದೆ ಎಂದರು.

ಚಿತ್ರದಲ್ಲಿ ಡ್ರಾಮಾ ಜ್ಯೂನಿಯರ್ಸ್ ಖ್ಯಾತಿಯ ಅಚಿಂತ್ಯ ಸಹ ನಟಿಸಿದ್ದು, ವಿಶೇಷ ಪಾತ್ರದಲ್ಲಿಯೇ ಗಮನಸೆಳೆಯುತ್ತಾನೆ. ಇನ್ನುಳಿದಂತೆ ಮಂಗಳೂರು ಮೂಲದ ಅದ್ವಿತಿ ಶೆಟ್ಟಿ ಈ ಕಿರುಚಿತ್ರದಲ್ಲಿ ದುರ್ಗಾ ಬಾಬಿ ಪಾತ್ರದಲ್ಲಿ ನಟಿಸಿದ್ದಾರೆ. ಹಿಸ್ಟೋರಿಕ್ ಪಾತ್ರಗಳನ್ನು ಮಾಡುವ ಆಸೆ ಇತ್ತು. ಅದನ್ನು ಮಹನ್ ಹುತಾತ್ಮ ಮೂಲಕ ಈಡೇರಿಸಿಕೊಂಡಿದ್ದೇನೆ. ಕಿರುಚಿತ್ರ ಸಿದ್ಧವಾಗಿ ಮೂರು ವರ್ಷಗಳಾದರೂ ಒಂದೇ ಬಾರಿಯೂ ವೀಕ್ಷಣೆ ಮಾಡಿರಲಿಲ್ಲ. ಇದೀಗ ನೋಡಿದ್ದೇನೆ. ಒಂದೊಳ್ಳೆ ಸಿನಿಮಾ ರೀತಿಯಲ್ಲಿ ರಿಚ್ ಆಗಿ ಮೂಡಿಬಂದಿದೆ ಎಂದರು.

ಇನ್ನು ನಿರ್ದೇಶನದ ಜತೆಗೆ ಚಂದ್ರಶೇಖರ್ ಆಜಾದ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಕಡಿಮೆ ಬಜೆಟ್ ನಲ್ಲಿ ಮಾಡಬೇಕೆಂದುಕೊಂಡಿದ್ದ ಕಿರುಚಿತ್ರವಿದು. ದೊಡ್ಡ ಮಟ್ಟದಲ್ಲಿ ಸಿದ್ಧವಾಗಿದೆ. ಸರಿ ಸುಮಾರು 25 ಲಕ್ಷ ಇದಕ್ಕೆ ಖರ್ಚಾಗಿದೆ. ಸ್ವಾತಂತ್ರ್ಯ ಪೂರ್ವದ ಶೈಲಿಯ ಕಟ್ಟಡ ಬೇಕಿತ್ತು. ಮಲ್ಲೇಶ್ವರದ ಕಾಲೇಜನ್ನು ಬಳಸಿಕೊಂಡಿದ್ದೇವೆ.

ಡಿಸಿಎಂ ಅಶ್ವತ್ಥನಾರಾಯಣ ಅದನ್ನು ಒದಗಿಸಿಕೊಟ್ಟಿದ್ದಾರೆ. ಸೈನಿಕರ ಜತೆಗಿನ ಕಾಳಗಕ್ಕೆ ತುರಹಳ್ಳಿಯ ಅರಣ್ಯದಲ್ಲಿ ಶೂಟ್ ಮಾಡಿದ್ದೇವೆ. ನಮ್ಮ ಈ ಕಿರುಚಿತ್ರಕ್ಕೆ ಅಮೆರಿಕಾ, ಲಖನೌ, ಜೈಪುರ, ಹಾಲಿವುಡ್ ಸಿಲ್ವರ್ ಸ್ಕ್ರೀನ್, ಪುಣೆ ಇಂಟರ್ ನ್ಯಾಶನಲ್, ಚಿತ್ರ ಭಾರತಿ, ಇಂಡೋ ಗ್ಲೋಬಲ್, ಲೇಕ್ ಸಿಟಿ, ಕಿಟಾಕ್ ಹೀಗೆ 20ಕ್ಕೂ ಅಧಿಕ ಚಿತ್ರೋತ್ಸವಗಳಲ್ಲಿ ಭಾಗವಹಿಸಿ ಹತ್ತಾರು ಪ್ರಶಸ್ತಿಗಳನ್ನು ಪಡೆದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಕನ್ನಡದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಕಿರುಚಿತ್ರ ಎಂಬ ಹೆಮ್ಮಯೂ ನಮಗಿದೆ ಎಂದು ಸಂತಸ ಹಂಚಿಕೊಂಡರು ಸಾಗರ್ ಪುರಾಣಿಕ್. ಚಿತ್ರದಲ್ಲಿ ವರುಣ್ ಶ್ರೀನಿವಾಸ್ ರಾಜಗುರು ಪಾತ್ರ ಮಾಡಿದ್ದಾರೆ.

ಅಭಿಲಾಷ್ ಕಲಾತಿ ಛಾಯಾಗ್ರಹಣ, ಮಹೇಶ್ ಎಸ್ ಸಂಕಲನ, ಸೌಂಡ್ ಡಿಸೈನ್ ಅನಂತ್ ಕಾಮತ್, ಸಾಗರ್ ಪುರಾಣಿಕ್, ಅಕ್ಷರಾ ಭಾರದ್ವಾಜ್, ಶ್ರವಣ್ ಕವತ್ತೂರ್ ಚಿತ್ರಕಥೆ ಬರೆದಿದ್ದಾರೆ. ಅಕ್ಷಯಚಂದ್ರಶೇಖರ್, ಹಿರಿಯ ನಟ ಶ್ರೀನಾಥ್, ಸಾಗರ್ ಪುರಾಣಿಕ್, ಅದ್ವಿತಿ ಶೆಟ್ಟಿ, ಅಚಿಂತ್ಯ ಪುರಾಣಿಕ್, ವರುಣ್ ಶ್ರೀನಿವಾಸ್, ಕುಲ್ದೀಪ್, ಮನೋಜ್, ಶಶಿಕುಮಾರ್, ಪೀಟರ್ ಮುಖ್ಯಭೂಮಿಕೆಯಲ್ಲಿದ್ದಾರೆ.

Related posts