Cini Reviews Cinisuddi Fresh Cini News 

ಮದಗಜ ಚಿತ್ರ ಹೇಗಿದೆ..? ( ಚಿತ್ರವಿಮರ್ಶೆ – ರೇಟಿಂಗ್ : 4/5 )

ಚಿತ್ರ : ಮದಗಜ
ನಿರ್ಮಾಪಕ : ಉಮಾಪತಿ ಶ್ರೀನಿವಾಸ ಗೌಡ
ನಿರ್ದೇಶಕ: ಎಸ್. ಮಹೇಶ್ ಕುಮಾರ್
ಸಂಗೀತ : ರವಿ ಬಸ್ರೂರು ಛಾಯಾಗ್ರಹಣ : ನವೀನ್ ಕುಮಾರ್
ತಾರಾಗಣ : ಶ್ರೀಮುರಳಿ, ಆಶಿಕಾ ರಂಗನಾಥ್, ದೇವಯಾನಿ, ಜಗಪತಿ ಬಾಬು, ಗರುಡಾ ರಾಮ್, ರಂಗಾಯಣ ರಘು, ಚಿಕ್ಕಣ್ಣ ,ಅನಿಲ್ ಕುಮಾರ್ , ಶಿವರಾಜ್. ಕೆ .ಆರ್ ಪೇಟೆ ಧರ್ಮಣ್ಣ ಹಾಗೂ ಮುಂತಾದವರು…

ರೇಟಿಂಗ್ : 4/5

ಭರ್ಜರಿ ಆ್ಯಕ್ಷನ್ ದೃಶ್ಯಗಳ ಜೊತೆಗೆ ಮನಮಿಡಿಯುವ ಬಾಂಧವ್ಯದ ಸನ್ನಿವೇಶಗಳು ಮೂಲಕ ಅದ್ದೂರಿಯಾಗಿ ಪ್ರೇಕ್ಷಕರ ಮುಂದೆ ಬಂದಿರುವ ಚಿತ್ರ ಮದಗಜ. ನೀರಿಗಾಗಿ ಹಲವಾರು ವಿಚಾರಗಳಲ್ಲಿ ಗದ್ದಲ , ಹೊಡೆದಾಟ , ಕಾನೂನು ಎಲ್ಲವನ್ನು ಎದುರಿಸುವ ಸಂದರ್ಭಗಳನ್ನ ಸಾಮಾನ್ಯವಾಗಿ ನೋಡಿಯೇ ಇರ್ತೇವೆ. ತಾಯಿ ಮಗನ ಬಾಂಧವ್ಯ , ಊರು ಊರುಗಳ ನಡುವಿನ ದ್ವೇಷ , ಮೈ ಜುಮ್ಮೆನಿಸುವ ಸನ್ನಿವೇಶಗಳ , ಖದರ್ ಡೈಲಾಗ್ ,ಪ್ರೀತಿಯ ಸಿಂಚನ , ಹಾಸ್ಯದ ಝಲಕು ಹೀಗೆ ಸಂಪೂರ್ಣ ಮನರಂಜನಾ ಮಾಸ್ ಅಂಶವನ್ನು ಒಳಗೊಂಡಿದೆ.

ಚಿತ್ರದ ಕಥಾಹಂದರ ತೆರೆದುಕೊಳ್ಳುವುದೇ ಎರಡು ಊರುಗಳ ಮಧ್ಯೆ ನಡೆಯುತ್ತಿರುವ ಹಗೆತನದ ಮೂಲಕ. ನೀನಾ… ನಾನಾ… ನನ್ನದೇ ಅಧಿಪತ್ಯ ನಡೆಯಬೇಕೆು ಎನ್ನುತ್ತಾ ಜನರಿಗೆ ಕಷ್ಟವನ್ನ ನೀಡುತ್ತಾ ಪಕ್ಕದ ಊರಿಗೆ ನೀರು ಸಿಗದಂತೆ ಅವರ ಆಸ್ತಿಯನ್ನ ಕಬಳಿಸುವ ವ್ಯಕ್ತಿ (ಅನಿಲ್ ಕುಮಾರ್) ಹಾಗೂ ಅವನ ಊರಿನವರು… ಮತ್ತೊಬ್ಬ ವ್ಯಕ್ತಿ ಜನರಿಗೆ ಸ್ಪಂದಿಸುತ್ತಾ ಏನೇ ಆಗಲಿ ನ್ಯಾಯ ಕೊಡಿಸುತ್ತೇನೆ ಎಂದು ಅವರ ಪರವಾಗಿ ಧ್ವನಿ ಎತ್ತುತ್ತಾ ವಿರೋಧಿಯನ್ನು ಎದುರಿಸುವ ವ್ಯಕ್ತಿ (ಜಗಪತಿ ಬಾಬು) ಹಾಗೂ ಅವರ ಬಳಗ.

ಕಾಲದಿಂದ ಕಾಲಕ್ಕೆ ಇದು ನಿರಂತರವಾಗಿದ್ದರೂ , ಇಪ್ಪತ್ತ ಎಂಟ್ ವರ್ಷಗಳ ನಂತರ ವಾರಣಾಸಿಯಲ್ಲಿ ಘಾಟ್ ಗಳಲ್ಲಿ ಮೃತದೇಹಗಳನ್ನು ಸುಡುವುದಕ್ಕೆ ಟೆಂಡರ್ ಅಬ್ಬರ , ಗಲಾಟೆ ನಿರಂತರ. ಏನೇ ಸಮಸ್ಯೆ ಬಂದರೂ ಸೈ… ಎಂದು ವಿರೋಧಿಗಳ ಅಡಗಿಸುತ್ತಾ ಭರ್ಜರಿ ಎಂಟ್ರಿ ಕೊಡುವ ನಾಯಕ ಸೂರ್ಯ (ಶ್ರೀಮುರಳಿ).

ವಾರಣಾಸಿಗೂ ಈ ಊರಿಗೂ ಏನು ಸಂಬಂಧ ಅನ್ನುವುದಕ್ಕೆ ಒoದು ಕೊಂಡಿ ಬೆಸೆದುಕೊಂಡಿರುತ್ತದೆ. ಸೂರ್ಯನ ಜವಾಬ್ದಾರಿ ಹೊತ್ತುಕೊಂಡು ವಾರಣಾಸಿಯಲ್ಲಿ ಕಾಪಾಡುತ್ತಾ ಬರುವವನೇ (ರಂಗಾಯಣ ರಘು). ನಾಯಕ ವಾರಣಾಸಿಯಲ್ಲಿ ಯಾವುದೇ ಸಮಸ್ಯೆ ಇದ್ದರೂ ಬಗೆಹರಿಸಿ ಅವರಿಂದ ಹಣ ಪಡೆಯುತ್ತಿರುತ್ತಾನೆ. ಡೀಲ್ ಮಾಡಿಕೊಡುವ ವ್ಯಕ್ತಿಯಿಂದ ಹಣ ಸಿಗದಿದ್ದಾಗ ಆಸ್ತಿ ಪತ್ರ ಪಡೆದು ಆ ಊರಿಗೆ ಹೋಗಿ ಅದನ್ನು ಮಾರಿ ಹಣ ಪಡೆಯಲು ನಿರ್ಧರಿಸುತ್ತಾನೆ.

ನಾಯಕ (ಶ್ರೀಮುರಳಿ) ಗೆಳೆಯ (ಚಿಕ್ಕಣ್ಣ) ರೊಂದಿಗೆ ಊರು ಪ್ರವೇಶ ಮಾಡುತ್ತಾನೆ. ಜನರಿಗಾಗಿ ನಿಂತಿರುವ (ಜಗಪತಿ ಬಾಬು) ಮನೆಗೆ ಬರುವ ಸೂರ್ಯ ಅವರ ಮಡದಿ (ದೇವಯಾನಿ) ಮೂಲಕ ಮನೆ ಒಳಗೆ ಪ್ರವೇಶ ಮಾಡುತ್ತಾನೆ. ಅಲ್ಲೊಂದಷ್ಟು ಆರ್ಭಟ, ಅಬ್ಬರದ ನಡುವೆ ನಾಯಕಿ ( ಆಶಿಕಾ ರಂಗನಾಥ್) ಭೇಟಿಯಾಗುತ್ತಾನೆ. ಇದರ ನಡುವೆ ಮಮತೆಯ ಬಾಂಧವ್ಯ . ಕಣ್ಣು ಭಾವಿಸದಿದ್ದರೂ ಕರುಳು ಭಾವಿಸುತ್ತದೆ ಅನ್ನೋ ಹಾಗೇ ಸಂದರ್ಭಗಳು ಎದುರಾಗುತ್ತವೆ.

ಒಂದಷ್ಟು ಹಾಸ್ಯ ಸಂದರ್ಭಗಳು , ಪ್ರೀತಿಯ ತಳಮಳಗಳ ನಡುವೆ ನಾಯಕ ಸೂರ್ಯ ಬಗ್ಗೆ ಮನೆ ಒಡತಿ ತಿಳಿಯುವ ಸಂದರ್ಭ ಎದುರಾಗುತ್ತದೆ. ಅಲ್ಲಿ ಒಂದಷ್ಟು ಫ್ಲ್ಯಾಶ್ ಬ್ಯಾಕ್ ಮೂಲಕ ನಡೆದ ಘಟನೆಯು ಮನೆ ಒಡತಿ (ದೇವಯಾನಿ) ಹಾಗೂ ಬಸವಣ್ಣ ನೊಂದಿಗೆ ಭಿಕ್ಷಾಟನೆಗೆ ಬರುವ (ರಂಗಾಯಣ ರಘು) ಮೂಲಕ ತೆರೆದುಕೊಳ್ಳುತ್ತದೆ. ಇದರ ನಡುವೆ 2 ಊರುಗಳ ದ್ವೇಷ , ವೈಷಮ್ಯ ತಾರಕಕ್ಕೇರುತ್ತದೆ.

ಭರ್ಜರಿ ಫೈಟ್ ಫೈಟ್ ನ ನಡುವೆ ಚಿತ್ರದ ಮೊದಲ ಭಾಗ ಮುಗಿಯುತ್ತಿದ್ದಂತೆ. ಎರಡನೇ ಭಾಗ ಬಹಳಷ್ಟು ಕುತೂಹಲಕಾರಿ ಅಂಶಗಳಿಂದ ಆರಂಭಗೊಳುತ್ತದೆ. ಜೈಲ್ ನಿಂದ ಹೊರಬರುವ ವ್ಯಕ್ತಿ (ಗರುಡ ರಾಮ್) ಮತ್ತೊಂದು ಊರಿನ ರಾಕ್ಷಸನ ಮಗ. ಮತ್ತೆ 2 ಊರಿನ ಕಾಳಗ, ರಂಪಾಟ ,ಖದರ್ ಡೈಲಾಗ್ ಗಳ ಮೂಲಕ ಅಬ್ಬರಿಸುತ್ತಾರೆ. ಒಂದಕ್ಕೊಂದು ಕೊಂಡಿ ಬೆಸೆದುಕೊಂಡಂತೆ ಸಾಗುವ ಚಿತ್ರಕಥೆಯಲ್ಲಿ ಹಲವಾರು ಪ್ರಶ್ನೆಗಳು ಎದುರಾಗುತ್ತವೆ.

ನಾಯಕ ಸೂರ್ಯ ಯಾರು…
ವಾರಣಾಸಿ ವ್ಯಕ್ತಿಗೂ ಈ ಊರಿನವರಿಗೂ ಸಂಬಂಧವೇನು..
ಜಗಳಕ್ಕೆ ಕಾರಣ ಏನು…
ನಾಯಕಿಗೆ ಪ್ರೀತಿ ಸಿಗುತ್ತಾ…
ಕ್ಲೈಮ್ಯಾಕ್ಸ್ ನಲ್ಲಿ ಸಿಗುವ ಉತ್ತರ ಏನು…
ಈ ಎಲ್ಲಾ ಪ್ರಶ್ನೆಗಳಿಗೆ ನಿಮಗೆ ಉತ್ತರ ಸಿಗಬೇಕಾದ್ರೆ ನೀವು ಚಿತ್ರಮಂದಿರಕ್ಕೆ ಹೋಗಿ “ಮದಗಜ” ಸಿನಿಮಾವನ್ನು ನೋಡಲೇಬೇಕು.

“ಮದಗಜ” ನಾಗಿ ಶ್ರೀಮುರಳಿ ಹೈವೋಲ್ಟೇಜ್ ಕರೆಂಟ್ ನoತೆ ಆರಂಭದಿಂದ ಅಂತ್ಯದವರೆಗೂ ಅಬ್ಬರಿಸಿದ್ದಾರೆ. ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ, ತಂದೆ ತಾಯಿಯ ಸಂಬಂಧದ ಸನ್ನಿವೇಶಗಳಲ್ಲಿ ಪಾದವನ್ನು ಮುಟ್ಟಿ ಮನೋಜ್ಞವಾಗಿ ಅಭಿನಯಿಸಿದ್ದಾರೆ ಶ್ರೀಮುರಳಿ. ಖದರ್ ಡೈಲಾಗ್ , ಭರ್ಜರಿ ಆಕ್ಷನ್ , ಬೊಂಬಾಟ್ ಸ್ಟೆಪ್ ಮೂಲಕ ಮತ್ತೊಮ್ಮೆ ಅಬ್ಬರಿಸಿದ್ದಾರೆ.
ಇನ್ನು ನಾಯಕಿಯಾಗಿ ಅಭಿನಯಿಸಿರುವ ಆಶಿಕಾ ರಂಗನಾಥ್ ಕೂಡ ಹಳ್ಳಿ ಹುಡುಗಿಯಾಗಿ ಸೊಗಡಿಗೆ ತಕ್ಕಂತೆ ಅಭಿನಯಿಸಿದ್ದಾರೆ. ನಾಯಕನ ಪ್ರೀತಿಸುವ ಕೆಲವು ಸಂದರ್ಭಗಳು , ಸಿಗರೇಟ್ ಸೇದುವ ಹಾಗೂ ಸೈಕಲ್ ಓಡಿಸುವ ದೃಶ್ಯಗಳು ಗಮನ ಸೆಳೆಯುತ್ತವೆ.

ಚಿತ್ರ ಆರ್ಭಟದಿಂದ ಆರಂಭಗೊಂಡಾಗ ತೆಲುಗು ನಟ ಜಗಪತಿ ಬಾಬು ಹಾಗೂ ತಮಿಳಿನ ನಟಿ ದೇವೆಯನಿ ನೋಡುತ್ತಿದ್ದರೆ ಪರಭಾಷಾ ಚಿತ್ರ ಕಣ್ಮುಂದೆ ಹಾದುಹೋದಂತಾಗುತ್ತದೆ. ಇವರಿಬ್ಬರ ಕೂಡ ತಮ್ಮ ತಮ್ಮ ಪಾತ್ರವನ್ನು ಲೀಲಾಜಾಲವಾಗಿ ಅಭಿನಯಿಸಿದ್ದಾರೆ. ಇನ್ನೂ ಕನ್ನಡದವರು ಅಂದಾಕ್ಷಣ ನೆನಪಿಗೆ ಬರುವಂತ ರಂಗಾಯಣ ರಘು ಸಿಕ್ಕ ಪಾತ್ರಕ್ಕೆ ಜೀವತುಂಬಿ ಉತ್ತಮವಾಗಿ ಅಭಿನಯಿಸಿದ್ದಾರೆ ಇನ್ನೂ ಹಾಸ್ಯ ದೃಶ್ಯಗಳಲ್ಲಿ ಬರುವಂಥ ಚಿಕ್ಕಣ್ಣ , ಶಿವರಾಜ್. ಕೆ. ಆರ್ ಪೇಟೆ , ಧರ್ಮಣ್ಣ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ.

ಖಳ ನಟರಾಗಿ ತೆರೆ ಮೇಲೆ ಬಂದಂಥ ಅನಿಲ್ ಕುಮಾರ್ ಉತ್ತಮವಾಗಿ ಅಭಿನಯಸಿದ್ದು , ಮತ್ತೊಬ್ಬ ಪ್ರತಿಭೆ ಚಿತ್ರರಂಗಕ್ಕೆ ಸಿಕ್ಕಂತಾಗಿದೆ. ಇನ್ನೂ ಗರುಡ ರಾಮ್ ಕೂಡ ಖದರ್ ಡೈಲಾಗ್ ಮೂಲಕ ಅಬ್ಬರಿಸಿದ್ದು ,ಒಂಟಿ ಕಣ್ಣಿನ ಖಳನಟನಾಗಿ ಗಮನ ಸೆಳೆಯುತ್ತಾರೆ.

ಅಯೋಗ್ಯ ಚಿತ್ರವನ್ನ ನಿರ್ದೇಶನ ಮಾಡಿದಂತಹ ಮಹೇಶ್ ಕುಮಾರ್ ಇನ್ನು ಮಂದೆ ಮದಗಜ ಮಹೇಶ್ ಎಂದೇ ಕರೆಯಬಹುದು. ಯಾಕಂದ್ರೆ ಚಿತ್ರದ ಕಥಾವಸ್ತುವನ್ನು ಬಹಳ ಅಚ್ಚುಕಟ್ಟಾಗಿ ಆಯ್ಕೆ ಮಾಡಿಕೊಂಡಿದ್ದು , ಅದ್ದೂರಿ ಚಿತ್ರವನ್ನು ಅಚ್ಚುಕಟ್ಟಾಗಿ ಮಾಡಬಲ್ಲೆ ಎಂದು ತೋರಿಸಿದ್ದಾರೆ.

ಚಿತ್ರದುದ್ದಕ್ಕೂ ಸಾಹಸ ದೃಶ್ಯಗಳು , ಸೆಂಟಿಮೆಂಟ್ ಸನ್ನಿವೇಶಗಳು , ಖಡಕ್ ಡೈಲಾಗ್ , ಪ್ರೀತಿಯ ಸೆಳೆತವನ್ನ ಕಥೆಗೆ ಪೂರಕವಾಗಿ ಸಾಗಿಸಿಕೊಂಡು ಹೋಗುತ್ತಾರೆ. ಆ್ಯಕ್ಷನ್ ದೃಶ್ಯಗಳೇ ಹೆಚ್ಚಾಗಿದ್ದು , ಒಂದಷ್ಟು ರಿಲ್ಯಾಕ್ಸ್ ಅಂಶಗಳ ಜೊತೆಗೆ ಪ್ರೀತಿಯ ಕಡೆ ಸ್ವಲ್ಪ ಒತ್ತು ಕೊಡಬಹುದಿತ್ತು ಅನ್ಸುತ್ತೆ. ತಮ್ಮ ಎರಡನೇ ಚಿತ್ರದಲ್ಲೇ ಮತ್ತಷ್ಟು ಭರವಸೆಯನ್ನು ಹುಟ್ಟಿಸುವ ನಿರ್ದೇಶಕರಾಗಿ ಕಾಣುತ್ತಾರೆ.

ಅದ್ದೂರಿ ಚಿತ್ರವನ್ನು ನಿರ್ಮಿಸುವುದು ಸುಲಭದ ಮಾತಲ್ಲ , ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಚಿತ್ರವನ್ನ ರಾಯಲ್ ಆಗಿ ನಿರ್ಮಿಸಿದ್ದಾರೆ. ಸಿನಿಮಾ ನೋಡುವ ಪ್ರೇಕ್ಷಕರಿಗೆ ಮಾಸ್ ಅಂಶಗಳೊಂದಿಗೆ ಮನರಂಜನೆಯ ಮಹಾಪೂರವೇ ಸಿಗುತ್ತದೆ. ಈ ಚಿತ್ರದ ಕೆಲವು ಹೈಲೈಟ್ ಗಳಲ್ಲಿ ಪ್ರಮುಖವಾದದ್ದು ಸಂಭಾಷಣೆ ಬರದಂಥ ಚಂದ್ರಮೌಳಿ , ಸಂಗೀತ ನೀಡಿದಂಥ ರವಿ ಬಸ್ರೂರು ರ ಹಿನ್ನೆಲೆ ಸಂಗೀತ , ಛಾಯಾಗ್ರಹಣ ಮಾಡಿರುವಂತ ನವೀನ್ ಕುಮಾರ್ ಹಾಗೂ ಸಾಹಸ ದೃಶ್ಯಗಳನ್ನು ಇಡೀ ಸಿನಿಮಾದ ಬೆನ್ನೆಲುಬಾಗಿ ಎದ್ದು ಕಾಣುತ್ತದೆ. ಒಟ್ಟಾರೆ ಮಾಸ್ ಹಾಗೂ ಕ್ಲಾಸ್ ಅಭಿಮಾನಿಗಳಿಗೆ ಇಷ್ಟವಾಗುವಂತಹ ವಿಭಿನ್ನ ಕಥಾ ಹಂದರ ಆಗಿ ತೆರೆಮೇಲೆ ಮದಗಜ ಚಿತ್ರವನ್ನು ಎಲ್ಲರೂ ಒಮ್ಮೆ ನೋಡಬಹುದಾಗಿದೆ.

Related posts