Cini Reviews Cinisuddi Fresh Cini News 

‘ಅಪ್ಪು’ಗೆಯಲ್ಲಿ “ಲಕ್ಕಿ ಮ್ಯಾನ್” (ಚಿತ್ರವಿಮರ್ಶೆ – ರೇಟಿಂಗ್ : 4.5/5)

ರೇಟಿಂಗ್ : 4.5/5

ಚಿತ್ರ : ಲಕ್ಕಿ ಮ್ಯಾನ್
ನಿರ್ದೇಶಕ : ನಾಗೇಂದ್ರ ಪ್ರಸಾದ್​
ನಿರ್ಮಾಪಕರು : ಪಿ.ಆರ್​. ಮೀನಾಕ್ಷಿ ಸುಂದರಂ, ಆರ್​. ಸುಂದರ ಕಾಮರಾಜ್​
ಛಾಯಾಗ್ರಾಹಕ : ಜೀವ ಶಂಕರ್
ಸಂಗೀತ : v2 ವಿಜಯ್, ವಿಕಿ
ತಾರಾಗಣ : ಡಾರ್ಲಿಂಗ್ ಕೃಷ್ಣ, ರೋಶಿನಿ ಪ್ರಕಾಶ್, ಸಂಗೀತ ಶೃಂಗೇರಿ, ಪುನೀತ್ ರಾಜ್ ಕುಮಾರ್, ನಾಗಭೂಷಣ್, ಪ್ರಭುದೇವ , ಸಾಧು ಕೋಕಿಲ, ರಂಗಾಯಣ ರಘು, ಸುಂದರ್ ರಾಜ್ ಹಾಗೂ ಮುಂತಾದವರು…

ಜೀವನದಲ್ಲಿ ಏನೇ ಕಷ್ಟ , ದುಃಖ ಹಾಗೂ ಸುಖ ಎದುರಾದರೂ ಪರವಾಗಿಲ್ಲ ಆದರೆ ಭಗವಂತನ ದಯೆ ನಮ್ಮ ಮೇಲೆ ಇರಲಿ ಅನ್ನೋ ಮಾತು ನಾವೆಲ್ಲ ಕೇಳಿದ್ದೇವೆ. ಬದುಕಿನುದ್ದಕ್ಕೂ ಹಂತ ಹಂತವಾಗಿ ಮನುಷ್ಯ ಕೆಲವು ಸಮಸ್ಯೆಗಳನ್ನು ಎದುರಿಸಿ ಸಾಗುವುದು ಸರ್ವೇಸಾಮಾನ್ಯ. ಒಂದು ವೇಳೆ ಅದು ಕಷ್ಟ ಎಂದು ಅನಿಸಿದಾಗ ಭಗವಂತ ಪ್ರತ್ಯಕ್ಷನಾಗಿ ಬದುಕು ಸುಗಮವಾಗಿ ನಡೆಸಲು ಮತ್ತೊಂದು ಅವಕಾಶ ನೀಡಿದರೆ ಏನಾಗಬಹುದು, ಹೌದು ಇದು ಬದುಕಿನಲ್ಲಿ ಮತ್ತೊಂದು ಪವಾಡವೇ ಎಂದೆನಿಸುತ್ತದೆ. ಇಂತಹದೇ ಎಳೆಯನ್ನು ಬಹಳ ರೋಮಾಂಚನಕಾರಿಯಾಗಿ ಹಾಸ್ಯ ಮಿಶ್ರಣದೊಂದಿಗೆ ನೆಮ್ಮದಿಯ ಬದುಕಿನ ಹಾದಿಯನ್ನು ತೆರೆದಿಡುವ ಪ್ರಯತ್ನವಾಗಿ ಬಂದಿರುವ ಚಿತ್ರವೇ “ಲಕ್ಕಿಮ್ಯಾನ್”.

ನಾವು ಮಾಡುವ ಒಳ್ಳೆಯ ಕೆಲಸ ಮತ್ತೊಬ್ಬರಿಗೆ ಸಹಾಯ ಆಗಬೇಕು, ಅದು ಅವರ ಬದುಕಿಗೆ ದಾರಿ ಆಗಬೇಕು, ಎಲ್ಲರಿಗೂ ಸ್ಫೂರ್ತಿದಾಯಕ ವಾಗಿರಬೇಕೆಂಬ ಆಲೋಚನೆಯಲ್ಲಿ ಅದೆಷ್ಟೋ ಜನರಿಗೆ ಸಹಾಯ ಹಸ್ತವನ್ನು ಚಾಚಿ , ಅಭಿಮಾನಿಗಳ ಪ್ರೀತಿ, ವಿಶ್ವಾಸ ಗಳಿಸಿದಂತ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಪ್ರೀತಿಯ ಅಪ್ಪು ಬದುಕಿದ್ದಾಗ ಮಾಡಿದ ಸೇವೆ ಈಗ ಎಲ್ಲೆಡೆ ಬೆಳಕಿಗೆ ಬರುತ್ತಿದೆ. ಅಭಿಮಾನಿಗಳು ದೇವರಾಗಿ ಆರಾಧಿಸುತ್ತಿರುವ ಅಪ್ಪು ಈ ಚಿತ್ರದಲ್ಲಿ ದೇವರಾಗಿ ಕಾಣಿಸಿ ಕೊಂಡಿದ್ದಾರೆ. ಒಬ್ಬ ಪ್ರಾಮಾಣಿಕ ವ್ಯಕ್ತಿಯ ಬದುಕಿನಲ್ಲಿ ಎದುರಾಗುವ ಸಮಸ್ಯೆಗೆ ಮತ್ತೊಂದು ಅವಕಾಶ ನೀಡುವ ಪಾತ್ರದಲ್ಲಿ ಕಾಣಿಸಿಕೊಳ್ಳುವ ಅಪ್ಪುವಿಗೆ ಬದುಕಲು ಭಗವಂತ ಮತ್ತೊಂದು ಅವಕಾಶ ಕೊಡಬೇಕಿತ್ತು ಅನ್ನಿಸುತ್ತದೆ. ಇಡೀ ಚಿತ್ರದ ಸೂತ್ರಧಾರಿ ಯಾಗಿ ಪುನೀತ್ ರಾಜ್ ಕುಮಾರ್ ಅಭಿನಯಿಸಿರು ವುದು ವಿಶೇಷ.

ಚಿತ್ರದ ಕಥಾಹಂದರ ತೆರೆದುಕೊಳ್ಳುವುದೇ ಮೂವರು ಗೆಳೆಯರು ಶಾಲಾದಿನ ಗಳಿಂದಲೂ ಒಟ್ಟಿಗೆ ಬೆಳೆದು, ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಾ ಯಾವುದೇ ವಿಚಾರ ಬಂದರೂ ಮೂವರು ಮಾತುಕತೆ ಮೂಲಕ ತೀರ್ಮಾನಕ್ಕೆ ಬರುತ್ತಾರೆ. ಒಮ್ಮೆ ನಾಯಕ ಅರ್ಜುನ್ (ಡಾರ್ಲಿಂಗ್ ಕೃಷ್ಣ) ಬಾಲ್ಯದ ಸ್ನೇಹಿತೆಯಾದ ಅನು (ಸಂಗೀತ ಶೃಂಗೇರಿ) ಮದುವೆ ಆಗುವ ಸಂದರ್ಭ ಎದುರಾಗುತ್ತದೆ. ಕೆಲಸವಿಲ್ಲದ ನಾಯಕ ಮಾವನ ಕoಬೋರ್ಡ್ ಕಂಪೆನಿಯಲ್ಲಿ ಕೆಲಸ ಮಾಡುವ ಸ್ಥಿತಿ ಎದುರಾಗುತ್ತಿದೆ.

ಅರ್ಜುನ ತನ್ನ ಬಾಲ್ಯದ ಗೆಳತಿ ಅನು ಳನ್ನ ಹೆಂಡತಿಯಾಗಿ ಸ್ವೀಕರಿಸುವುದಕ್ಕೆ ತಳಮಳ. ಇದರ ನಡುವೆ ತನ್ನ ಕಾಲೇಜಿನ ಸೀನಿಯರ್ ವಿದ್ಯಾರ್ಥಿ ಮೀರಾ (ರೋಶನಿ ಪ್ರಕಾಶ್) ಭೇಟಿ.ಈ ಎಲ್ಲಾ ವಿಚಾರವನ್ನು ಗೆಳೆಯ ಶೆಟ್ಟಿ(ನಾಗಭೂಷಣ್) ಗಮನಕ್ಕೂ ಬರುತ್ತದೆ. ಮುಂದೆ ಹಲವು ಕಿರಿಕಿರಿಯ ನಡುವೆ ದಾಂಪತ್ಯ ಜೀವನ ಕಷ್ಟ ಎನಿಸುತ್ತದೆ. ಕೆಲವೇ ದಿನಗಳಲ್ಲಿ ಡಿವೋರ್ಸ್​ಗಾಗಿ ಆತ ಕೋರ್ಟ್​ ಮೆಟ್ಟಿಲು ಏರುತ್ತಾನೆ.

ಇನ್ನೇನು ವಿಚ್ಛೇದನ ಸಿಗುತ್ತದೆ ಎನ್ನುವಷ್ಟರಲ್ಲಿ ಮತ್ತೊಬ್ಬ ವ್ಯಕ್ತಿ (ಸಾಧು ಕೋಕಿಲ) ಕಾಣಿಸುತ್ತಾರೆ. ಮುಂದೆ ನಡೆಯುವ ಎಲ್ಲ ವಿಚಾರ ತಿಳಿಸುವ ಆ ವ್ಯಕ್ತಿ ನಿನಗೆ ವಿಚ್ಛೇದನ ಸಿಗಬೇಕಾದರೆ ನಮ್ಮ ಭಗವಂತನನ್ನು ಭೇಟಿ ಮಾಡು ಎನ್ನುತ್ತಾನೆ. ತನ್ನ ಕಣ್ಣೆದುರೇ ಪವಾಡ ನಡೆದಂತೆ ದಿಗ್ಭ್ರಮೆಗೊಂಡು ನಾಯಕ ಪವಾಡ ಪುರುಷ ಜ್ಯೋತಿಷಿ ಇರಬೇಕೆಂದು ನೋಡಲು ಹೋಗುತ್ತಾನೆ. ಅಲ್ಲಿ ಪ್ರತ್ಯಕ್ಷವಾಗುವವರೇ ಭಗವಂತ (ಪುನೀತ್ ರಾಜ್ ಕುಮಾರ್). ನಾಯಕ ತನ್ನ ಫ್ಲ್ಯಾಶ್ ಬ್ಯಾಕ್ ವಿಚಾರ ಹೇಳುತ್ತಾ ನನ್ನ ಜೀವನದಲ್ಲಿ ಭಗವಂತ ಆಟವಾಡಿದ್ದಾನೆ ಎಂದು ದೂಷಿಸುತ್ತಾನೆ.

ಇವನ ಮಾತನ್ನು ಗಮನಿಸಿದ ಭಗವಂತ ನಾಯಕನಿಗೆ ಎರಡನೇ ಅವಕಾಶವನ್ನು ನೀಡುತ್ತಾರೆ. ಮಾಡಿದ ತಪ್ಪನ್ನು ಸರಿಪಡಿಸಿಕೊಂಡು, ನಾಯಕ ಬೇರೆ ಹುಡುಗಿಯನ್ನು ಮದುವೆಯಾಗಲು ನಿರ್ಧರಿಸುತ್ತಾನೆ. ಇಲ್ಲಿಂದ ಕಥೆಗೆ ಮತ್ತೊಂದು ಟ್ವಿಸ್ಟ್ ತೆರೆದುಕೊಳ್ಳುತ್ತದೆ. ಟೈಮ್​ ಟ್ರಾವೆಲಿಂಗ್​ ರೀತಿಯ ಈ ಕಥೆಯಲ್ಲಿ ದೇವರು ಕೊಟ್ಟ ಎರಡನೇ ಅವಕಾಶವನ್ನು ಕಥಾನಾಯಕನ ಬದುಕಿಗೆ ಹೊಸ ರೂಪ ನೀಡುತ್ತಾ ಹೋಗುತ್ತದೆ.
ಎರಡನೇ ಅವಕಾಶ ಪಾಲಿಸುತ್ತಾ..?
ಡಿವೋರ್ಸ್​ ಸಿಗುತ್ತಾ..?
ಯಾರನ್ನು ಮದುವೆ ಆಗ್ತಾನೆ..?
ಭಗವಂತ ತೋರುವ ದಾರಿ ಯಾವುದು..? ಈ ಎಲ್ಲಾ ವಿಚಾರವನ್ನು ತಿಳಿಯಬೇಕಾದರೆ ನೀವು “ಲಕ್ಕಿ ಮ್ಯಾನ್” ಚಿತ್ರವನ್ನು ನೋಡಬೇಕು.

ಈ ಚಿತ್ರವನ್ನು ಬಹಳ ಅಚ್ಚುಕಟ್ಟಾಗಿ ಸ್ನೇಹ, ಪ್ರೀತಿ, ನಂಬಿಕೆ, ಸಂಬಂಧಗಳ ಬೆಸುಗೆ , ಭಗವಂತನ ಲೀಲೆ ಮೂಲಕ ಸುಂದರವಾಗಿ ಮನಮುಟ್ಟುವಂತೆ ಪ್ರೇಕ್ಷಕರ ಮುಂದೆ ತನ್ನ ಪ್ರಥಮ ಪ್ರಯತ್ನದಲ್ಲೇ ತೆರೆದಿಟ್ಟಿದ್ದರೆ ನಿರ್ದೇಶಕ ನಾಗೇಂದ್ರ ಪ್ರಸಾದ್. ಚಿತ್ರದ ದ್ವಿತೀಯ ಭಾಗ ಸ್ವಲ್ಪ ವೇಗವಾಗಿಸ ಬಹುದಿತ್ತು. ನಗುವಿನ ಮೂಲಕವೇ ಎಲ್ಲವನ್ನೂ ಹೇಳುತ್ತಾ ಬದುಕಿನ ಸೂಕ್ಷ್ಮ ವಿಚಾರವನ್ನು ಒಬ್ಬನೇ ವ್ಯಕ್ತಿಯ ಎರಡು ಡಿಫರೆಂಟ್​ ಲವ್​ ಸ್ಟೋರಿಗಳನ್ನ ಹೇಳಿರುವ ರೀತಿ ಚಿತ್ರದ ಪ್ರಮುಖ ಅಂಶವಾಗಿ ಕಾಣುತ್ತದೆ.

ದೇವರಾಗಿ ಕಾಣಿಸಿಕೊಂಡಿರುವ ಪುನೀತ್​ ರಾಜ್​ಕುಮಾರ್​ ಅವರಿಗೆ ಸಾಧುಕೋಕಿಲ ಸಾಥ್​ ನೀಡಿದ್ದಾರೆ. ಇಬ್ಬರ ಕಾಂಬಿನೇಷನ್​ನಲ್ಲಿ ಮೂಡಿಬಂದ ಕಾಮಿಡಿ ದೃಶ್ಯಗಳು ಚೆನ್ನಾಗಿದೆ. ಈ ಚಿತ್ರದಲ್ಲಿ ಗೆಸ್ಟ್ ಅಪಿರಿಯನ್ಸ್ ಎಂದುಕೊಂಡಿದ್ದ ಅಭಿಮಾನಿಗಳಿಗೆ ಪುನೀತ್ ರಾಜ್ ಕುಮಾರ್ ದೇವರಾಗಿ ಅಭಿಮಾನಿಗಳ ಕಣ್ಣೆದುರಿಗೆ ಬಂದಿದ್ದಾರೆ. ಅಪ್ಪು ಧ್ವನಿ ಕೇಳಿದಾಕ್ಷಣ ಮನಸ್ಸು ತಲ್ಲಣಗೊಳ್ಳುತ್ತದೆ. ಅವರು ನಮ್ಮೊಟ್ಟಿಗೆ ಇದ್ದಾರೆ ಎನಿಸುತ್ತದೆ. ಚಿತ್ರದಲ್ಲಿ ಅಪ್ಪುವಿನ ಹಾಸ್ಯದ ಚಟಾಕಿಗಳು, ಸಂದೇಶದ ಮಾತುಗಳು ಮನಮುಟ್ಟುವಂತಿದೆ.

ಈ ಚಿತ್ರದಲ್ಲಿ ಭಗವಂತರಾಗಿ ಕಾಣಿಸಿಕೊಂಡಿರುವ ಪುನೀತ್ ಆ್ಯಕ್ಷನ್ ದೃಶ್ಯದಲ್ಲಿ ಯಾರೊಬ್ಬರನ್ನು ಮುಟ್ಟದೆ ಮ್ಯಾಜಿಕ್ ರೂಪದಲ್ಲಿ ಫೈಟ್ ಮಾಡಿರುವುದು ಗಮನ ಸೆಳೆಯುತ್ತದೆ. ಇಡೀ ಚಿತ್ರದ ಕೇಂದ್ರ ಬಿಂದು ಆಗಿರುವ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಚಿತ್ರ ಇದಾಗಿದ್ದರೂ ಅವರು ಸದಾ ನೆನಪಿನಲ್ಲಿ ಉಳಿಯುವಂಥ ಪಾತ್ರಗಳಲ್ಲಿ ಇದು ಒಂದಾಗಿದೆ.


ಇನ್ನು ಚಿತ್ರದ ನಾಯಕ ಡಾರ್ಲಿಂಗ್​ ಕೃಷ್ಣ ಬಹಳ ಲೀಲಾಜಾಲವಾಗಿ ಲವಲವಿಕೆ ಯಿಂದ ಹುಡುಗಾಟದ ಯುವಕನಾಗಿ, ಗೆಳೆಯನಾಗಿ, ಪ್ರೇಮಿಯಾಗಿ ಜೀವತುಂಬಿ ನಟಿಸಿದ್ದಾರೆ. ಇನ್ನು ನಾಯಕಿಯಾಗಿರುವ ಸಂಗೀತಾ ಶೃಂಗೇರಿ ಕೂಡ ಉತ್ತಮ ಅಭಿನಯ ನೀಡಿದ್ದಾರೆ. ಲಿಫ್ಟ್ ಒಂದರಲ್ಲಿ ನಡೆಯುವ ಡೈವರ್ಸ್ ಸನ್ನಿವೇಶ ನಾಯಕ ನಾಯಕಿ ಇಬ್ಬರೂ ಅದ್ಭುತವಾಗಿ ನಟಿಸಿದ್ದಾರೆ.

ಮತ್ತೊಬ್ಬ ನಟಿ ರೋಷಿನಿ ಪ್ರಕಾಶ್​ ಸಹಜಾಭಿನಯ ಮೂಲಕ ಗಮನ ಸೆಳೆಯುತ್ತಾರೆ. ಇನ್ನು ಸಾಧುಕೋಕಿಲ ಕೂಡ ಪುನೀತ್ ರಾಜ್ ಕುಮಾರ್ ಜತೆ ಸೇರಿಕೊಂಡು ನಗಿಸಿದ್ದಾರೆ. ಹಾಗೆಯೇ ರಂಗಾಯಣ ರಘು ಕೂಡ ಕoಬೋರ್ಡ್ ಕಂಪೆನಿಯ ಮಾಲೀಕನಾಗಿ ಮನರಂಜನೆಯ ರಸದೌತಣ ನೀಡಿದ್ದಾರೆ. ನಾಗಭೂಷಣ್​ ಕೂಡ ಗೆಳೆಯನಾಗಿ ಕಾಮಿಡಿ ಕಚಗುಳಿ ನೀಡಿ ಗಮನ ಸೆಳೆದಿದ್ದಾರೆ. ಉಳಿದಂತೆ ಅಭಿನಯಿಸಿರುವ ಎಲ್ಲಾ ಪಾತ್ರಧಾರಿಗಳು ಚಿತ್ರದ ಓಟ್ಟಕ್ಕೆ ಸಾಥ್ ನೀಡಿದ್ದಾರೆ. ಇಂತಹ ವಿಭಿನ್ನ ಚಿತ್ರವನ್ನು ನಿರ್ಮಿಸಿರುವ ಪಿ.ಆರ್.

ಮೀನಾಕ್ಷಿ ಸುಂದರಂ, ಸುಂದರ್ ಕಾಮರಾಜ್ ಅವರು ನಿಜವಾಗಲೂ ಅದೃಷ್ಟವಂತರು. ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಿರುವ ಜೀವ ಶಂಕರ್ ಕೆಲಸ ಉತ್ತಮವಾಗಿದೆ. ಸಂಗೀತ ನೀಡಿರುವ V2 ವಿಜಯ್ ಹಾಗೂ ವಿಕ್ಕಿ ರವರು ಕೆಲಸ ಸೊಗಸಾಗಿದೆ. ಇನ್ನು ವಿಶೇಷವಾಗಿ ಚಿತ್ರದ ಪ್ರಮೋಷನಲ್​ ಹಾಡಿನಲ್ಲಿ ಪ್ರಭುದೇವ ಮತ್ತು ಪುನೀತ್​ ರಾಜ್​ಕುಮಾರ್ ಅವರು ಜೊತೆಯಾಗಿ ಡ್ಯಾನ್ಸ್​ ಮಾಡಿರುವುದು ಚಿತ್ರದ ಹೈಲೈಟ್ ಗಳಲ್ಲಿ ಮತ್ತೊಂದು ಪ್ರಮುಖವಾದದ್ದು , ಸಂಪೂರ್ಣ ಮನೋರಂಜನೆ ನೀಡಿರುವ ಚಿತ್ರವಾಗಿ ಹೊರಬಂದಿರುವ ಲಕ್ಕಿ ಮ್ಯಾನ್ ಚಿತ್ರವನ್ನ ಎಲ್ಲರೂ ಒಮ್ಮೆ ನೋಡಿ. ಕಣ್ತುಂಬಿಕೊಳ್ಳಲು ಎಲ್ಲರೂ ಒಮ್ಮೆ ಚಿತ್ರವನ್ನು ನೋಡಲೇಬೇಕು.

Related posts