Cini Reviews Cinisuddi Fresh Cini News 

LOVE YOU “ರಚ್ಚು” ಚಿತ್ರ ಹೇಗಿದೆ…? (ಚಿತ್ರ ವಿಮರ್ಶೆ – ರೇಟಿಂಗ್ : 3.5/5 )

ರೇಟಿಂಗ್ :3.5/5

ಚಿತ್ರ : LOVE YOU ರಚ್ಚು
ನಿರ್ದೇಶಕ : ಶಂಕರ್.ಎಸ್.ರಾಜ್
ನಿರ್ಮಾಪಕ : ಗುರು ದೇಶಪಾಂಡೆ
ಸಂಗೀತ : ಮಣಿಕಾಂತ ಕದ್ರಿ ಛಾಯಾಗ್ರಹಣ :ಶ್ರೀ ಕ್ರೇಜಿ ಮೈಂಡ್ ತಾರಾಗಣ : ಅಜಯ್ ರಾವ್ , ರಚಿತಾ ರಾಮ್ ,ಅಚ್ಯುತ್ ಕುಮಾರ್ , ಬಿ .ಸುರೇಶ್ , ರಾಘು ಶಿವಮೊಗ್ಗ, ಅರವಿಂದ್ ರಾವ್ , ನಂದಗೋಪಾಲ ಹಾಗೂ ಮುಂತಾದವರು…

ಈಗಾಗಲೇ ಪ್ರೀತಿ , ಪ್ರೇಮದ ಸುತ್ತ ಹಲವಾರು ಚಿತ್ರಗಳು ಬಂದು ಹೋಗಿದೆ. ಕೆಲವೊಂದು ನವಿರಾದ ಪ್ರೇಮ ಕಾವ್ಯವಾದರೆ ಮತ್ತೊಂದಷ್ಟು ಥ್ರಿಲ್ಲರ್ , ಸಸ್ಪೆನ್ಸ್ ಇರುವ ಪ್ರೇಮ ಪಯಣವು ಕೂಡ ಬೆಳ್ಳಿ ಪರದೆ ಮೇಲೆ ಆಗಾಗ ಬಂದು ಪ್ರೇಕ್ಷಕರ ಗಮನವನ್ನು ಸೆಳೆಯುತ್ತಿವೆ. ಈ ಚಿತ್ರವೂ ಕೂಡ ಎರಡನೇ ಸಾಲಿಗೆ ಸೇರಿದೆ. ಪ್ರೀತಿಸುವವರಿಗೆ ಮೊದಲು ನಂಬಿಕೆ ಬಹಳ ಮುಖ್ಯ. ಆದರೆ ಆ ನಂಬಿಕೆ ಉಳಿಸಿಕೊಳ್ಳುವ ಹಾದಿಯೂ ಅಷ್ಟೇ ಕಷ್ಟ ಎಂಬುದನ್ನು ತಿಳಿದಿರಬೇಕು. ಸ್ನೇಹ , ಸಂಬಂಧ , ವ್ಯಾಮೋಹ , ಗೆಳೆತನ , ಪ್ರೀತಿ ಎಲ್ಲದಕ್ಕೂ ಒಂದು ಅಳತೆ , ಗೌರವ ಇದ್ದೇ ಇರುತ್ತೆ. ಅದನ್ನ ಎಷ್ಟು ಸಮತೋಲನದಲ್ಲಿ ನಿಭಾಯಿಸ್ತೀವಿ ಅನ್ನೋದು ಅಷ್ಟೇ ಪ್ರಮುಖ ವಿಚಾರ. ಹೌದು ಪ್ರತಿಯೊಬ್ಬ ಮನುಷ್ಯನು ಕೂಡ ತನ್ನ ಬದುಕಿನ ಹಾದಿಯಲ್ಲಿ ಯಾವುದೇ ಘಟನೆ ಸಂಭವಿಸಿದರೂ ಅದನ್ನು ತಾನು ಹೇಗೆ ನಿಭಾಯಿಸುತ್ತಾನೆ ಜೊತೆಗೆ ಸರಿ ಹಾಗೂ ತಪ್ಪು ಗಳನ್ನು ಹೇಗೆ ಸ್ವೀಕರಿಸುತ್ತಾನೆ ಎಂಬ ಹಲವಾರು ವಿಚಾರಗಳನ್ನ ಒಳಗೊಂಡಂತ ಕಥಾನಕವನ್ನು ಕ್ರೈಮ್ , ಸಸ್ಪೆನ್ಸ್ , ಹಾಗೂ ಥ್ರಿಲ್ಲರ್ ಮೂಲಕ ತೆರೆಮೇಲೆ ತೆರೆದಿಡುವ ಪ್ರಯತ್ನವನ್ನು ಮಾಡಿದ್ದಾರೆ.

ಸಿನಿಮಾ ತೆರೆದುಕೊಳ್ಳುವುದೇ ನಾಯಕನ ಅಜಯ್ ವೃತ್ತಿಪರ ಕೆಲಸದ ಮೂಲಕ. ತನ್ನ ಪ್ರೀತಿಯ ಪತ್ನಿಗೆ ಮೊದಲ ವರ್ಷದ ಹುಟ್ಟು ಹಬ್ಬದ ಉಡುಗೊರೆಯಾಗಿ ಡೈಮೆಂಡ್ ನೆಕ್ಲೆಸ್ ಆನ್ನು ಖರೀದಿಸಿ ಬೇರೆ ರಾಜ್ಯದಿಂದ ತನ್ನ ಮನೆಯತ್ತ ಸಾಗುವ ದಾರಿಯಲ್ಲಿ ತನ್ನ ಪ್ರೀತಿಯ ಫ್ಲ್ಯಾಶ್ ಬ್ಯಾಕ್ ನೆನಪಿಸಿಕೊಳ್ಳುತ್ತಾನೆ. ಅಜಯ್ ತನ್ನ ಪತ್ನಿ ರಚ್ಚು ನೊಂದಿಗೆ ಫೋನ್ ನಲ್ಲಿ ತಾನು ಬರುವ ಸಮಯ ತಿಳಿಸಿ, ಏರ್ ಪೋರ್ಟ್ನಲ್ಲಿ ಕಾರ್ ಡ್ರೈವರ್ ಗೆ ಕಾಯುತ್ತಾನೆ. ಅವನ ಬರದ ಕಾರಣ ಟ್ಯಾಕ್ಸಿ ಮಾಡಿಕೊಂಡು ಮನೆಗೆ ತೆರಳುತ್ತಾನೆ. ತಡರಾತ್ರಿ ಆಗಿದ್ದರೂ ತನ್ನ ಪ್ರೀತಿಯ ಪತ್ನಿಗೆ ತಾನು ತಂದ ಉಡುಗೊರೆ ನೀಡಲು ಮನೆಯ ಒಳಗೆ ಪ್ರವೇಶ ಮಾಡಿದಾಗ ಅವನ ಕಣ್ಣೆದುರು ಕಾಣುವ ಭೀಕರ ದೃಶ್ಯವೇ ಕೊಲೆ. ಇಲ್ಲಿಂದ ಕತೆಯ ದಿಕ್ಕೇ ಬದಲಾಗುತ್ತಾ ಹೋಗುತ್ತದೆ.
ಈ ಕೊಲೆಯನ್ನು ಮುಚ್ಚಿಡಲು ಮಾಡುವ ಹರ ಸಾಹಸವೇ ದೊಡ್ಡ ಹಾದಿಯಂತೆ ಸಾಗುತ್ತದೆ. ನಾಯಕ ಅಜಯ್ ತನ್ನ ಪತ್ನಿ ರಚ್ಚು ಗಾಗಿ ಕೊಲೆಯಾದ ವ್ಯಕ್ತಿಯನ್ನು ಕಾರಿನಲ್ಲಿ ಸಾಗಿಸಿ ಯಾರು ಇಲ್ಲದ ಸ್ಥಳದಲ್ಲಿ ಎಸೆಯುವ ಪ್ರಯತ್ನಕ್ಕೆ ಮುಂದಾಗುತ್ತಾನೆ. ಇವರ ಹಾದಿಯಲ್ಲೇ ಬ್ಲಾಕ್ ಮೇಲ್ ಕೆಲಸವು ನಡೆಯುತ್ತದೆ. ಹೀಗೆ ಒಂದರ ಹಿಂದೆ ಒಂದಂತೆ ತೊಂದರೆಗಳು ಎದುರಾಗುತ್ತಾ ಸಾಗುತ್ತದೆ. ಚಿತ್ರದ ಕ್ಲೈಮ್ಯಾಕ್ಸ್ ಬಹಳ ಕುತೂಹಲಕಾರಿಯಾಗಿ ಕೂಡಿದೆ.
ಕೊಲೆಯಾದ ವ್ಯಕ್ತಿ ಯಾರು…
ಈ ದಂಪತಿಗಳಿಗೆ ಕಂಟಕ ಯಾರು…
ಕೊಲೆಗೆ ಕಾರಣವೇನು…
ಬ್ಲಾಕ್ ಮೇಲ್ ಮಾಡಿದವರು ಯಾರು…
ಕ್ಲೈಮ್ಯಾಕ್ಸ್ ನಲ್ಲಿ ಸಿಕ್ಕ ಉತ್ತರ ಏನು…
ಈ ಎಲಾ ಪ್ರಶ್ನೆಗಳಿಗೆ ನಿಮಗೆ ಉತ್ತರ ಬೇಕಾದರೆ ನೀವೆಲ್ಲರೂ ಲವ್ ಯು ರಚ್ಚು ಚಿತ್ರವನ್ನು ನೋಡಬೇಕು.

ಇನ್ನು ಈ ಚಿತ್ರದ ಶೀರ್ಷಿಕೆಗೆ ಸೂಕ್ತವಾದ ನಾಯಕನಾಗಿ ಅಭಿನಯಿಸಿರುವ ಅಜಯ್ ರಾವ್ ಲೀಲಾಜಾಲವಾಗಿ ತಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ. ಹೆಂಡತಿಯನ್ನು ಹೆಚ್ಚು ಪ್ರೀತಿಸುವ ಗಂಡನಾಗಿ ಏನೆಲ್ಲ ಮಾಡುತ್ತಾನೆ. ನೋವು ನಲಿವಿಗೆ ಗಂಡ ಹೇಗೆ ಸ್ಪಂದಿಸುತ್ತಾನೆ ಎಂಬುದನ್ನು ಅಚ್ಚುಕಟ್ಟಾಗಿ ಅಭಿನಯಿಸುವ ಮೂಲಕ ಆ್ಯಕ್ಷನ್ ದೃಶ್ಯಗಳಲ್ಲಿ ಕೂಡ ಉತ್ತಮವಾಗಿ ಕಾಣಿಸಿಕೊಂಡಿದ್ದಾರೆ.
ನಾಯಕಿಯಾಗಿ ಅಭಿನಯಿಸಿರುವ ರಚಿತಾ ರಾಮ್ ಕೂಡ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದಂತೆ ಮೈಚಳಿ ಬಿಟ್ಟು ಹಲವು ಶೇಡ್ ಗಳಲ್ಲಿ ರೋಮಾಂಚನಕಾರಿಯಾಗಿ ಅಭಿನಯಿಸಿದ್ದಾರೆ. ಇನ್ನು ಈ ಚಿತ್ರದಲ್ಲಿ ನಾಯಕಿಯ ತಂದೆಯ ಪಾತ್ರದಲ್ಲಿ ಅಚ್ಯುತ್ ಕುಮಾರ್ , ಪೊಲೀಸ್ ಇನ್ಸ್ ಪೆಕ್ಟರ್ ಪಾತ್ರದಲ್ಲಿ ನಟಿಸಿರುವ ನಂದ , ಡ್ರೈವರ್ ಪಾತ್ರದಲ್ಲಿ ರಾಘು ಶಿವಮೊಗ್ಗ , ರೌಡಿಯಾಗಿ ಅರವಿಂದ್ ರಾವ್ ಸೇರಿದಂತೆ ಉಳಿದ ಪಾತ್ರಗಳು ಸಿಕ್ಕ ಅವಕಾಶಕ್ಕೆ ಜೀವ ತುಂಬಿ ಅಭಿನಯಿಸಿದ್ದಾರೆ.

ಪ್ರೀತಿಯ ಸುತ್ತ ಹೆಣೆದಿರುವ ಮರ್ಡರ್ ಮಿಸ್ಟ್ರಿಯ ಥ್ರಿಲ್ಲರ್ ಚಿತ್ರದ ಕಥೆಯನ್ನ ಆಯ್ಕೆ ಮಾಡಿಕೊಂಡಿರುವ ನಿರ್ಮಾಪಕ ಗುರು ದೇಶಪಾಂಡೆ ಚಿತ್ರಕ್ಕೆ ಬೇಕಾದ ಎಲ್ಲ ಸವಲತ್ತುಗಳನ್ನು ಅಚ್ಚುಕಟ್ಟಾಗಿ ನೀಡಿದ್ದಾರೆ. ಇನ್ನು ನಿರ್ದೇಶಕ ವಿಚಾರಕ್ಕೆ ಬಂದರೆ ಕಥೆಗೆ ಪೂರಕವಾದ ಚಿತ್ರಕತೆ ಹೆಣೆದಿದ್ದರೂ , ಚಿತ್ರದ ಮೊದಲ ಭಾಗ ನಿಧಾನಗತಿಯಲ್ಲಿ ಸಾಗುತ್ತದೆ. ಇನ್ನು ಚಿತ್ರದ ಎರಡನೇ ಭಾಗ ಕೂಡ ಕ್ಲೈಮ್ಯಾಕ್ಸ್ ಅಂತ ಗಮನ ಸೆಳೆಯುವಂತೆ ಮಾಡಿದ್ದಾರೆ. ನಿರ್ದೇಶಕರ ಪ್ರಥಮ ಪ್ರಯತ್ನ ಆದರೂ ತಮ್ಮ ಸಾಮರ್ಥ್ಯ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಇನ್ನೂ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಒಂದು ಹಾಡು ಗುನುಗುವಂತಿದೆ. ಆದರೂ ಹಿನ್ನೆಲೆ ಸಂಗೀತ ಮತ್ತಷ್ಟು ಉತ್ತಮವಾಗಬಹುದಿತ್ತು. ಹಾಗೆಯೇ ಸುಂದರ ತಾಣಗಳ ದೃಶ್ಯಗಳನ್ನು ಅಚ್ಚುಕಟ್ಟಾಗಿ ಸೆರೆ ಹಿಡಿಯುವುದರಲ್ಲಿ ಛಾಯಾಗ್ರಹಕ ಶ್ರೀ ಕ್ರೇಜಿಮೈಂಡ್ಸ್ ಕೆಲಸ ಸೊಗಸಾಗಿ ಮೂಡಿಬಂದಿದೆ.

ಸದ್ಯ ಸಮಾಜದಲ್ಲಿ ಇಂಥ ಘಟನೆಗಳು ಅಲ್ಲಲ್ಲಿ ನಡೆಯುತ್ತಿದೆ ಎನ್ನಬಹುದು. ಪ್ರೀತಿ , ನಂಬಿಕೆ ಹಾಗೂ ಸಂಬಂಧಗಳಿಗೆ ಎಷ್ಟು ಗೌರವ ಕೊಡಬೇಕೆನ್ನುವುದು ಚಿತ್ರದಲ್ಲಿ ಕಾಣಬಹುದು. ನಾವು ಹೇಗೆ ನಡೆದುಕೊಳ್ಳುತ್ತೇವೆಯೋ ಹಾಗೆಯೇ ನಮ್ಮ ಬದುಕು ನಮ್ಮನ್ನು ಕರೆದುಕೊಂಡು ಹೋಗುತ್ತದೆ. ನಾವು ಮಾಡಿದ ತಪ್ಪನ್ನು ನಾವೇ ಅನುಭವಿಸಬೇಕು ಎಂಬ ತಾತ್ಪರ್ಯವು ಹೇಳಿರುವ ಈ ಚಿತ್ರವು ಗಮನ ಸೆಳೆಯುತ್ತದೆ. ಒಟ್ನಲ್ಲಿ ಈ ಚಿತ್ರವನ್ನ ಎಲ್ಲರೂ ಒಮ್ಮೆ ನೋಡಬಹುದು.

Related posts