Cini Reviews Cinisuddi Fresh Cini News 

“ಲಂಕೆ”ಯಲ್ಲಿ ಯೋಗಿಯ ಹವಾ (ಚಿತ್ರ ವಿಮರ್ಶೆ)

ರೇಟಿಂಗ್ : 4/5
ಚಿತ್ರ : ಲಂಕೆ
ನಿರ್ದೇಶಕ : ರಾಮ್ ಪ್ರಸಾದ್
ನಿರ್ಮಾಪಕರು : ಪಟೇಲ್ ಶ್ರೀನಿವಾಸ್, ಸುರೇಖಾ ರಾಮ್ ಪ್ರಸಾದ್
ಸಂಗೀತ: ಕಾರ್ತಿಕ್ ಶರ್ಮಾ ಛಾಯಾಗ್ರಹಕ : ರಮೇಶ್ ಬಾಬು ತಾರಾಗಣ : ಯೋಗಿ , ಕೃಷಿ ತಾಪಂಡ , ಸಂಚಾರಿ ವಿಜಯ್ , ಕಾವ್ಯ ಶೆಟ್ಟಿ, ಎಸ್ತರ್ ನೊರೊನ್ಹಾ, ಶರತ್ ಲೋಹಿತಾಶ್ವ, ಗಾಯತ್ರಿ ಜಯರಾಮನ್, ಶೋಭ್ ರಾಜ್, ಸುಚೇಂದ್ರಪ್ರಸಾದ್, ಡ್ಯಾನಿ ಕುಟ್ಟಪ್ಪ , ಪ್ರಶಾಂತ್ ಸಿದ್ದಿ ಹಾಗೂ ಮುಂತಾದವರು.

ಮನರಂಜನಾ ದೃಷ್ಟಿಯೊಂದಿಗೆ ಆಕ್ಷನ್ ಹಾಗೂ ಮಾಸ್ ಅಂಶವನ್ನು ಒಳಗೊಂಡಂಥ “ಲಂಕೆ” ಚಿತ್ರ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುವುದರಲ್ಲಿ ಯಶಸ್ವಿಯಾಗಿದೆ. ಕೋವೀಡ್ ಕಾರಣದಿಂದ ಚಿತ್ರಮಂದಿರಕ್ಕೆ 50% ಅನುಮತಿ ಸಿಕ್ಕರೂ ಸಿನಿ ಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಚಿತ್ರದ ಕಥಾ ಹಂದರವೂ ಸಮಾಜದಲ್ಲಿ ನಡೆಯುತ್ತಿರುವ ಕೆಲವು ದುಷ್ಕೃತ್ಯಗಳ ಕನ್ನಡಿ ಹಿಡಿದಂತೆ ಕಾಣುತ್ತದೆ. ಹೂವು ಹಣ್ಣು ಹಾಗೂ ಹೆಣ್ಣು ಎಲ್ಲರ ಗಮನ ಸೆಳೆಯುವುದು ಸರ್ವೆ ಸಾಮಾನ್ಯ. ಸಮಾಜದಲ್ಲಿ ಹೆಣ್ಣಿನ ಮೇಲೆ ನಡೆಯುವ ಅದೆಷ್ಟೋ ದೌರ್ಜನ್ಯಕ್ಕೆ ಒಂದಲ್ಲ ಒಂದು ದಿನ ನಾಂದಿ ಹಾಡಲೇಬೇಕಾಗುತ್ತದೆ. ಇಂಥದೇ ಅಂಶದೊಂದಿಗೆ ಪ್ರೀತಿ , ಗೆಳೆತನ , ದ್ವೇಷದ ವಿಚಾರವನ್ನು ಬಹಳ ಸೂಕ್ಷ್ಮವಾಗಿ ತೆರೆ ಮೇಲೆ ತರುವ ಪ್ರಯತ್ನವನ್ನು ಮಾಡದೆ “ಲಂಕೆ”ಯ ಚಿತ್ರತಂಡ.

ಯಾರು ದಿಕ್ಕುದೆಸೆ ಇಲ್ಲದೆ ಅನಾಥ ಹುಡಗನಾಗಿ ಜೈಲಿನಿಂದ ಹೊರಬರುವ ನಾಯಕ ರಾಮ್ (ಲೂಸ್ ಮಾದ ಯೋಗಿ), ನಗರದಲ್ಲಿ ಸಾಗುವ ಮಾರ್ಗ ಮಧ್ಯೆ ಸಿಗುವ ಗೆಳೆಯ ಜಾಕಿ (ಪ್ರಶಾಂತ್ ಸಿದ್ದಿ) ಇಲ್ಲಿ ನಡೆಯುವ ಹಣದ ಗುದ್ದಾಟದಲ್ಲಿ ಸಹಾಯ ಮಾಡುವ ನಾಯಕಿ ಪಾವನಿ (ಕೃಷಿ ತಾಪಂಡ) ಆಶ್ರಮ ನಡೆಸುವ ಹುಡುಗಿ ಹಣವನ್ನು ಹಿಂತಿರುಗಿಸುವಂತೆ ಹೇಳಿ ಸಾಗುತ್ತಾಳೆ.

ನಂತರ ಗೆಳಯ ಜಾಕಿ ನಾಯಕ ರಾಮ್ ನನ್ನು ಏರಿಯಾ ಕಂಟ್ರ್ಯಾಕ್ಟರ್ ಡಾನ್ ನಾಯ್ಡು (ಡ್ಯಾನಿ ಕುಟ್ಟಪ್ಪ) ಅಡ್ಡಕ್ಕೆ ಸೇರಿಸುತ್ತಾನೆ. ಅವನೊಟ್ಟಿಗೆ ಸೇರಿಕೊಂಡು ದುಷ್ಮನ್ ಗಳನ್ನು ಎದುರಿಸಿ ಬದ್ಧವೈರಿ ಗರಡಿ ಮನೆ ಕೃಷ್ಣಪ್ಪನನ್ನು ಕೊಲೆ ಮಾಡಿ ತನ್ನ ಹವಾ ಮೆಂಟೇನ್ ಮಾಡುತ್ತಿರುತ್ತಾನೆ.

ಇದೊಂದು ಟ್ರ್ಯಾಕ್ ನಡೆಯುತ್ತಿದ್ದರೆ ಮತ್ತೊಂದೆಡೆ ವೇಶ್ಯಾವಾಟಿಕೆ ದಂಧೆ ಎಗ್ಗು ಸಿಗ್ಗಿಲ್ಲದೆ ರಾಜಕೀಯ ವ್ಯಕ್ತಿ ಸುಚೇಂದ್ರ ಪ್ರಸಾದ್ ಹಾಗೂ ಪೊಲೀಸ್ ಅಧಿಕಾರಿ ಶೋಭ್ ರಾಜ್ ಸಹಕಾರಿಯಾದಿoದ ರಾಜಾರೋಷವಾಗಿ ನಡೆಯುತ್ತಿರುತ್ತದೆ.

ಇದರ ಅರಿವೇ ಇಲ್ಲದೆ ವೃದ್ಧರಿಗೆ ಹಾಗೂ ಮುದ್ದು ಮಕ್ಕಳಿಗೆ ಸಹಾಯ ಮಾಡುತ್ತಾ ವೃದ್ಧಾಶ್ರಮ ನಡೆಸುವ ನಾಯಕಿ ಪಾವನಾಳ ಸರಳತೆ ಮುಗ್ಧತೆ ಕಂಡು ನಾಯಕ ರಾಮ್ ಪ್ರೀತಿಸಲು ನಿರ್ಧರಿಸುತ್ತಾನೆ. ಎಲ್ಲರ ಕಷ್ಟಕ್ಕೆ ಸ್ಪಂದಿಸುವ ನಾಯಕಿ ಅಚಾನಕ್ಕಾಗಿ ವೇಶ್ಯಾವಾಟಿಕೆ ಅಡ್ಡಕ್ಕೆ ಪ್ರವೇಶ ಮಾಡುತ್ತಾಳೆ.

ಈ ದಂಧೆಯ ರೂವಾರಿ ಯಾಗಿ ಮತ್ತೊಬ್ಬ ನಟಿ ಮಂದಾರ (ಕಾವ್ಯ ಶೆಟ್ಟಿ) ದಂಧೆ ಯಜಮಾನಿಯಾಗಿ ಕಂಗೊಳಿಸುತ್ತಾಳೆ. ಈಕೆಗೆ ಸಹಕಾರಿಯಾಗಿ ಬಿಜ್ಲಿ (ಶರತ್ ಲೋಹಿತಾಶ್ವ) ಮಂಗಳಮುಖಿಯಾಗಿ ಸಾಥ್ ನೀಡುತ್ತಾಳೆ. ರಾಜಕೀಯಕ್ಕೆ ಸೇರುವ ಮಂದಾರ ಕನಸಿಗೆ ಈ ದಂಧೆಯ ಅಡ್ಡವೇ ಕೇಂದ್ರಬಿಂದು.

ನಾಯಕಿಯನ್ನು ಹುಡುಕಿಕೊಂಡು ಸಾಗುವ ನಾಯಕ ಈ ಮಾಂಸದ ಅಡ್ಡಕ್ಕೆ ಪ್ರವೇಶ ಮಾಡುತ್ತಾನೆ. ಹೀಗೆ ಒಂದರ ಹಿಂದೆ ಮತ್ತೊಂದು ಎನ್ನುವಂತೆ ಸಂಪರ್ಕಗಳ ಬೆಸೆದುಕೊಂಡು ಹಲವು ಟ್ವಿಸ್ಟ್ ಗಳು ಮೂಲಕ ಕಥಾ ಹಂದರ ಸಾಗುತ್ತದೆ. ಚಿತ್ರದ ಮೊದಲ ಭಾಗ ಇದರ ಸುತ್ತ ಸಾಗಿದರೆ. ದ್ವಿತೀಯಾರ್ಧ ಹಲವಾರು ಫ್ಲ್ಯಾಶ್ ಬ್ಲಾಕ್ ಮೂಲಕ ಮತ್ತೊಂದು ರೂಪ ಪಡೆಯುತ್ತದೆ.

ಬಾಲ್ಯದ ಬದುಕಿನ ನಾಯಕ ರಾಮ್ ತಂದೆ ಜಾನಕಿರಾಮ (ಸಂಚಾರಿ ವಿಜಯ್) ತಾಯಿಯಾಗಿ (ಎಸ್ತರ್ ನರೋನ್ಹಾ) ಇವರ ಬದುಕು , ಬವಣೆ ಒಂದಷ್ಟು ಸಮಸ್ಯೆಗಳೂ ದುರ್ಘಟನೆಯ ನೆನಪು ಇಡೀ ಚಿತ್ರದ ಓಟಕ್ಕೆ ಕೊಂಡಿಯಂತೆ ಬೆಸೆದುಕೊಂಡಿದೆ.

ಒಟ್ಟಾರೆ ಗಮನಿಸುತ್ತಾ ಹೋದರೆ ಲಂಕೆಯನ್ನು ದಹಿಸುತ್ತಾನಾ….
ನಾಯಕನಿಗೆ ಪ್ರೀತಿ ಸಿಗುತ್ತಾ…
ಫ್ಲ್ಯಾಶ್ ಬ್ಯಾಕ್ ರಹಸ್ಯ ಏನು…
ಹೀಗೆ ನಾನಾ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ನೀವೆಲ್ಲರೂ ಒಮ್ಮೆ “ಲಂಕೆ” ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡಬೇಕು.

ಇನ್ನು ಪಾತ್ರಧಾರಿಗಳ ವಿಚಾರಕ್ಕೆ ಹೇಳುವುದಾದರೆ ಬಹಳ ಗ್ಯಾಪ್ ನಂತರ ನಟ ಲೂಸ್ ಮಾದ ಯೋಗಿ ನೈಜವಾಗಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಹಾಗೆಯೇ ಆ್ಯಕ್ಷನ್ ದೃಶ್ಯಗಳಲ್ಲಿ ಖದರ್ ಆಗಿ ನಟಿಸಿದ್ದಾರೆ ಮತ್ತು ಹಾಡುಗಳಲ್ಲಿ ಕೂಡ ಭರ್ಜರಿ ಸ್ಟೆಪ್ಸ್ ಗಳನ್ನು ಹಾಕಿ ಗಮನ ಸೆಳೆಯುತ್ತಾರೆ.

ಇಡೀ ಚಿತ್ರವನ್ನು ಆವರಿಸಿಕೊಂಡು ಸಂಭಾಷಣೆ ಮೂಲಕ ಗಮನ ಸೆಳೆದಿದ್ದಾರೆ. ಇನ್ನು ನಟಿ ಕೃಷಿ ತಾಪಂಡ ಪಾವನಿ ಪಾತ್ರಕ್ಕೆ ಮತ್ತಷ್ಟು ಕಸರತ್ತು ಮಾಡಬಹುದಿತ್ತು. ಅದೇ ರೀತಿ ಮಂದಾರ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕಾವ್ಯ ಶೆಟ್ಟಿ ಬೋಲ್ಡ್ ಪಾತ್ರವನ್ನು ಇನ್ನಷ್ಟು ಗಟ್ಟಿ ಗೂಳಿಸಬಹುದಿತ್ತು.

ಬಿಜ್ಲಿ ಎಂಬ ಮಂಗಳಮುಖಿಯ ಪಾತ್ರದಲ್ಲಿ ಶರತ್ ಲೋಹಿತಾಶ್ವ ಗಮನ ಸೆಳೆಯುತ್ತಾರೆ. ಗೆಳೆಯನ ಪಾತ್ರ ಮಾಡಿರುವ ಪ್ರಶಾಂತ್ ಸಿದ್ದಿಗೆ ಸಿಕ್ಕ ಅವಕಾಶವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.ಹಾಗೆಯೇ ಕಲಾವಿದರಾದ ಶೋಭ್ ರಾಜ್ , ಸುಚೇಂದ್ರ ಪ್ರಸಾದ್ ಕೂಡ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ಇನ್ನೂ ಫ್ಲ್ಯಾಶ್ ಬ್ಯಾಕ್ ನಲ್ಲಿ ಬರುವ ಸಂಚಾರಿ ವಿಜಯ್ ಕುಡುಕನ ಪಾತ್ರವಾದರೂ ಗಮನ ಸೆಳೆಯುತ್ತಾರೆ. ಅವರ ಮಡದಿಯಾಗಿ ಎಸ್ತರ್ ನರೋನಾ ಚಿಕ್ಕ ಪಾತ್ರವಾದರೂ ಚೊಕ್ಕವಾಗಿ ಅಭಿನಯಿಸಿದ್ದಾರೆ. ಉಳಿದಂತೆ ಪುಟಾಣಿಗಳು ಕೂಡ ಉತ್ತಮವಾಗಿ ನಟಿಸಿದ್ದಾರೆ. ಹಾಗೆಯೇ ಹಿರಿಯ ನಟಿ ಗಾಯತ್ರಿ ಜಯರಾಮನ್ ಕೆಲವೇ ಹೊತ್ತು ಬಂದರು ಪರದೆಯ ಮೇಲೆ ಅಬ್ಬರಿಸಿದ್ದಾರೆ.

ಇಂತಹ ವಿಭಿನ್ನ ಚಿತ್ರವನ್ನು ನಿರ್ಮಿಸಲು ಮುಂದಾದ ಪಟೇಲ್ ಶ್ರೀನಿವಾಸ್ ಹಾಗೂ ಸುರೇಖಾ ರಾಮ್ ಪ್ರಸಾದ್ ರವರ ಧೈರ್ಯವನ್ನ ಮೆಚ್ಚಲೆಬೇಕು. ಇನ್ನು ನಿರ್ದೇಶಕ ರಾಮ್ ಪ್ರಸಾದ್ ಕೂಡ ಇಂತಹ ಕಥೆಯನ್ನ ಆಯ್ಕೆ ಮಾಡಿಕೊಂಡು ಅದಕ್ಕೆ ಅಚ್ಚುಕಟ್ಟಾದ ಚಿತ್ರಕತೆ ಬರೆದು ಪ್ರೇಕ್ಷಕರ ಮುಂದೆ ತಂದಿಡುವುದರಲ್ಲಿ ಯಶಸ್ವಿಯಾಗಿದ್ದಾರೆ.

ಚಿತ್ರದ ಸಂಭಾಷಣೆಗಳಲ್ಲಿ ಒಂದಷ್ಟು ಹಿಡಿತ ಮಾಡಬಹುದಿತ್ತು. ಒಟ್ಟಾರೆ ಚಿತ್ರದ ಓಟದಲ್ಲಿ ಎಲ್ಲವೂ ಬೆಸೆದುಕೊಂಡು ಸಮಾಜದಲ್ಲಿ ನಡೆಯುವ ಕೆಲವು ದುಷ್ಕೃತ್ಯಗಳ ಬಗ್ಗೆ ತಿಳಿಸುವ ಪ್ರಯತ್ನವನ್ನು ಮಾಡಿದ್ದಾರೆ. ಅದೇ ರೀತಿ ಚಿತ್ರದ ಯುವ ಸಂಗೀತ ನಿರ್ದೇಶಕ ಕಾರ್ತಿಕ್ ಶರ್ಮಾ ಕೆಲಸ ಮೆಚ್ಚಲೇಬೇಕು. ಛಾಯಾಗ್ರಾಹಕ ರಮೇಶ್ ಬಾಬು ಅವರು ಕ್ಯಾಮರಾ ಕೈಚಳಕ ಗಮನಾರ್ಹವಾಗಿದೆ. ಹಬ್ಬದ ಕೊಡುಗೆಯಾಗಿ ಬಿಡುಗಡೆಗೊಂಡಿರುವ “ಲಂಕೆ” ಯ ಚಿತ್ರವನ್ನ ಎಲ್ಲರೂ ಒಮ್ಮೆ ನೋಡಬಹುದು.

Related posts