Cinisuddi Fresh Cini News 

ಯಶಸ್ಸಿನ ಸಂಭ್ರಮದಲ್ಲಿ “ಕೋಟಿಗೊಬ್ಬ-3”

ಸ್ಯಾಂಡಲ್ ವುಡ್ ನ ಕಿಚ್ಚ , ಅಭಿನಯ ಚಕ್ರವರ್ತಿ ಸುದೀಪ್ ಅಭಿನಯದ ಕೋಟಿಗೊಬ್ಬ-3 ಚಿತ್ರ ಭರ್ಜರಿ ಪ್ರದರ್ಶನ ಕಾಣ್ತಿದೆ. ಎಲ್ಲಾ ಚಿತ್ರಮಂದಿರಗಳ ಪ್ರೇಕ್ಷಕರು ಹಾಗೂ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಈ ಸಂತಸವನ್ನ ಹಂಚಿಕೊಳ್ಳಲು ಚಿತ್ರತಂಡ ಬೆಂಗಳೂರಿನ ಅಶೋಕ ಹೋಟೆಲ್‍ನಲ್ಲಿ ಗ್ರ್ಯಾಂಡ್ ಇವೆಂಟ್ ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ಕಲಾವಿದರು ತಂತ್ರಜ್ಞರು ಹಾಗೂ ಚಿತ್ರೋದ್ಯಮದ ಗಣ್ಯರ ದಂಡೇ ಸೇರಿತ್ತು. ವರ್ಣರಂಜಿತವಾದ ವೇದಿಕೆಯ ಮೇಲೆ ಹಾಡುಗಳು ಹಾಗೂ ನೃತ್ಯಗಳ ಪ್ರದರ್ಶನವು ಅದ್ದೂರಿಯಾಗಿತ್ತು. ಈ ಚಿತ್ರದ ಕಲಾ ನಿರ್ದೇಶಕ ಅರುಣ್ ಸಾಗರ್ ನಿರೂಪಣೆಯಲ್ಲಿ ಕಾರ್ಯಕ್ರಮ ಆರಂಭಗೊಂಡು ಚಿತ್ರತಂಡದ ತಂತ್ರಜ್ಞರು ಹಾಗೂ ಕಲಾವಿದರು ಚಿತ್ರದ ಅನುಭವಗಳನ್ನು ಹಂಚಿಕೊಂಡರು.

ನಿರ್ಮಾಪಕ ಸೂರಪ್ಪಬಾಬು ಭಾವುಕರಾಗಿ ಮಾತನಾಡುತ್ತ ನಾನು ಈವರೆಗೆ ನಿರ್ಮಿಸಿದ ಯಾವುದೇ ಚಿತ್ರದ ಡೇಟ್ ಅನೌನ್ಸ್ ಮಾಡಿದ ಮೇಲೆ ಮುಂದೆ ಹಾಕಿದ್ದಿಲ್ಲ, ಇದೇ ಮೊದಲ ಬಾರಿಗೆ ನನ್ನ ಸಿನಿಮಾ ತಡೆಯುವ ಪ್ರಯತ್ನ ನಡೆಯಿತು, ಈ ಸಂದರ್ಭದಲ್ಲಿ ಕಾಲ್ ಮಾಡಿದ ಸುದೀಪ್, ನಾನಿದ್ದೀನಿ, ಏನೇ ಇದ್ದರೂ ನಾನು ನೋಡಿಕೊಳ್ತೇನೆ, ಧೈರ್ಯವಾಗಿರಿ ಎಂದು ಧೈರ್ಯ ತುಂಬಿದರು.

ಇಷ್ಟು ವರ್ಷ ನಾನು ಉಳಿಸಿಕೊಂಡು ಬಂದಿದ್ದ ಗೌರವಕ್ಕೆ ಧಕ್ಕೆಯಾಗಿತ್ತು, ನನ್ನ ಮಗಳೂ ಸಹ ಕಾಲ್‍ಮಾಡಿ ಧೈರ್ಯ ತುಂಬಿದ್ದರಿಂದ ನಾನಿಲ್ಲಿ ನಿಂತಿದ್ದೇನೆ, ಜಾಕ್‍ಮಂಜು, ಸೈಯದ್ ಸಲಾಂ, ಗಂಗಾಧರ್ ಇವರೆಲ್ಲ ನನಗೆ ಹೆಗಲಾಗಿ ನಿಂತಿದ್ದರಿಂದ ಸಿನಿಮಾ ಬಿಡುಗಡೆಯಾಯಿತು. ಸುದೀಪ್ ಸರ್ ಜೊತೆ ನಾನೇನೇ ಜಗಳ ಆಡಿದ್ದರೂ ಅದು ಸಿನಿಮಾಗಾಗಿ ಮಾತ್ರ, ಅವರು ಮುಂದೆ ನನಗೆ ಕಾಲ್‍ಶೀಟ್ ಕೊಡುತ್ತಾರೋ ಇಲ್ವೋ ಗೊತ್ತಿಲ್ಲ, ಆದರೆ ನನ್ನ ಜೀವ ಇರೋವರ್ಗೂ ಅವರಿಗೆ ಕೃತಜ್ಞನಾಗಿರುತ್ತೇನೆ.

ಈ ಕಾರ್ಯಕ್ರಮವನ್ನು ಶ್ರೇಯಸ್ ಮೀಡಿಯಾ ಪರವಾಗಿ ಮಿತ್ರ ನವರಸನ್ ಆಯೋಜಿಸಿದ್ದಾರೆ, ಅವರಿಂದ ಕನ್ನಡ ಚಿತ್ರಗಳ ಪ್ರೊಮೋಷನ್‍ಗೆ ತುಂಬಾ ಹೆಲ್ಪ್ ಆಗುತ್ತಿದೆ, ಎಲ್ಲರೂ ಅವರನ್ನು ಬಳಸಿಕೊಳ್ಳಬೇಕು ಹಾಗೂ ಮೊದಲ ದಿನ ಪ್ರದರ್ಶನ ಕಾಣದಿದ್ದಕ್ಕೆ ಸುದೀಪ್ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದೇನೆ. ಈಗ ಚಿತ್ರ ಉತ್ತಮವಾಗಿ ಪ್ರದರ್ಶನ ಕಾಣ್ತಿದೆ ಚಿತ್ರ ಯಶಸ್ಸಿಗೆ ಅವರೆಲ್ಲರೂ ಸಾಕಷ್ಟು ಸಹಕಾರಿ ಆಗಿದ್ದಾರೆ. ಮುಂದೆಯೂ ಸಹಕರಿಸಿ ಎಂದು ಕೇಳಿಕೊಂಡರು.

ನಂತರ ಕಿಚ್ಚ ಸುದೀಪ್ ಮಾತನಾಡುತ್ತ ಕೊನೇಗಳಿಗೆಯಲ್ಲಿ ಬಾಬು ಅವರಿಗೆ ಕರೆಮಾಡಿ ನಾನಿದ್ದೀನಿ ಅಂತ ಹೇಳಬೇಕಾದರೆ ಅದಕ್ಕೆ ಕಾರಣ ನಾನಲ್ಲ, ನಾನಿಷ್ಟು ವರ್ಷ ಸಂಪಾದಿಸಿದ್ದ ಸ್ನೇಹಿತರ ಬಳಗ, ಅವರಿಗೆ ನಾನಿಲ್ಲಿ ಥ್ಯಾಂಕ್ಸ್ ಹೇಳುತ್ತೇನೆ.

ಸಿನಿಮಾ ಒಂದು ಪೇಂಟಿಂಗ್, ಅದು ಇಷ್ಟು ಚೆನ್ನಾಗಿ ಬರಬೇಕಾದರೆ ಶಿವಕಾರ್ತೀಕ್, ಗೆಳೆಯ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ , ಕಲಾವಿದರಾದ ರವಿಶಂಕರ್, ಮಡೊನ್ನ, ಅಭಿರಾಮಿ, ಆಶಿಕಾ ಅಲ್ಲದೆ ಇನ್ನೂ ಅನೇಕರು ಈ ಸಕ್ಸಸ್‍ನಲ್ಲಿ ಪಾಲುದಾರರು ಎಂದರು, ನಂತರ ಪೈರಸಿ ಕುರಿತಾಗಿ ಹೇಳುತ್ತಾ ಪೈರಸಿ ಬಗ್ಗೆ ಎಷ್ಟೇ ಮುನ್ನೆಚ್ಚರಿಕೆ ವಹಿಸಿದ್ರೂ ಮಾಡಿದರು. ಎ

ಲ್ಲಕಡೆ ಕೆಟ್ಟ ಜನ ಇರುತ್ತಾರೆ, ಅವರ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು ಅಷ್ಟೆ. ನಮ್ಮತಂಡ ಹಗಲು ರಾತ್ರಿ ಕಷ್ಟಪಟ್ಟು ಸಾಕಷ್ಟು ಲಿಂಕ್‍ಗಳನ್ನು ಡಿಲೀಟ್ ಮಾಡಿಸಿದೆ. ಈ ಹಂತದಲ್ಲಿ ಗಿರೀಶ್ ಅವರ ಶ್ರಮವನ್ನು ಮೆಚ್ಚಲೇಬೇಕು, ಜನರಿಗೂ ಅಷ್ಟೇ, ಈಗಾಗಲೇ ಎರಡು ವರ್ಷದಿಂದ ಮೊಬೈಲ್, ಟಿವಿಯಲ್ಲಿ ಸಿನಿಮಾಗಳನ್ನು ನೋಡಿದ್ದೀರಿ. ಈಗಲಾದರೂ ಅದರಿಂದ ಹೊರಬಂದು ಚಿತ್ರಮಂದಿರದಲ್ಲಿ ಸಿನಿಮಾನೋಡಿ.

ಮೊಬೈಲಿನಲ್ಲಿ ನೋಡುವುದಕ್ಕೂ, ಥಿಯೇಟರಿನಲ್ಲಿ ಸಿನಿಮಾ ನೋಡುವುದಕ್ಕೂ ವ್ಯತ್ಯಾಸ ಏನೆಂಬುದನ್ನೇ ನೀವೇ ಕಂಡುಕೊಳ್ಳಿ. ಅಲ್ಲದೆ ಕಲೇಕ್ಷನ್ ಅನ್ನೋದು ನನಗೆ ಮಾನದಂಡ ಆಗಿಲ್ಲ. ನಿರ್ಮಾಪಕರು, ವಿತರಕರು ಖುಷಿಯಾಗಿದ್ದಾರೆ ನನಗೆ ಅಷ್ಟು ಸಾಕು. ನಿರ್ಮಾಪಕರು ಕಲೆಕ್ಷನ್ ಬಗ್ಗೆ ಏನಾದರೂ ಹೇಳಿದರೆ ನಾನು ಅದನ್ನು ಅನುಮೋದಿಸಬೇಕು ಎಂದೂ ಸುದೀಪ್ ಹೇಳಿದರು.

ನಟ ಉಪೇಂದ್ರ ಮಾತನಾಡಿ ಸುದೀಪ್ ಹೆಸರಿನಲ್ಲೆ ಕಿಚ್ಚು ಇದೆ, ಅವರು ತಮ್ಮ ಜೊತೆ ಕೆಲಸ ಮಾಡೋರಿಗೆಲ್ಲ ಕಿಚ್ಚು ಹಚ್ಚಿಬಿಡ್ತಾರೆ. ಇಂತಹ ಪ್ಯಾoಡಮಿಕ್ ಸಂದರ್ಭದಲ್ಲಿ ಒoದು ಉತ್ತಮ ಚಿತ್ರವನ್ನು ಸುದೀಪ್ ಅವರು ನೀಡಿದ್ದಾರೆ. ಅವರಿಗೆ ನಾನು ಚಿತ್ರೋದ್ಯಮದ ಪರವಾಗಿ ಧನ್ಯವಾದ ತಿಳಿಸುತ್ತೇನೆ. ಇಡೀ ತಂಡ ಬಹಳ ಶ್ರಮವಹಿಸಿ ಈ ಚಿತ್ರವನ್ನ ಮಾಡಿದ್ದಾರೆ. ಪ್ರೇಕ್ಷಕರು ಕೂಡ ಅಷ್ಟೇ ಇಷ್ಟಪಟ್ಟು ಬರುತ್ತಿದ್ದಾರೆ. ಇಡೀ ತಂಡಕ್ಕೆ ಶುಭವಾಗಲಿ ಎಂದರು.

ಇನ್ನು ಈ ಚಿತ್ರದ ನಾಯಕಿಯರು ಹಾಗೂ ಕಲಾವಿದರು, ಸಂಗೀತ ನಿರ್ದೇಶಕರು ಸೇರಿದಂತೆ ಚಿತ್ರದಲ್ಲಿ ದುಡಿದಂಥ ಎಲ್ಲರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಒಟ್ಟಾರೆ ಕೋಟಿಗೊಬ್ಬ -3 ಈಗ ಉತ್ತಮ ಪ್ರದರ್ಶನ ಕಾಣುತ್ತಿದ್ದು , ಎಲ್ಲರ ಮನಸ್ಸನ್ನು ಗೆದ್ದು ಮುಂದೆ ಸಾಗುತ್ತಿದೆ. ಸುದೀಪ್ ಅಭಿಮಾನಿಗಳಿಗೆ ಈ ಚಿತ್ರ ಭರ್ಜರಿ ಮನರಂಜನೆಯ ರಸದೌತಣವನ್ನು ನೀಡಿದೆ.

Related posts