‘ಕಿರಿಕ್ ಶಂಕರ್’ ಚಿತ್ರ ಹೇಗಿದೆ..? (ಚಿತ್ರವಿಮರ್ಶೆ-ರೇಟಿಂಗ್ : 3.5/5)
ರೇಟಿಂಗ್ : 3.5/5
ಚಿತ್ರ: ಕಿರಿಕ್ ಶಂಕರ್
ನಿರ್ದೇಶಕ : ಅನಂತರಾಜು.ಆರ್ ನಿರ್ಮಾಪಕ: ಎನ್.ಎಂ. ಕುಮಾರ್
ಛಾಯಾಗ್ರಾಹಕ : ಜೆ.ಜೆ. ಕೃಷ್ಣ
ಸಂಗೀತ : ವೀರ್ ಸಮರ್ಥ್
ತಾರಾಗಣ: ಯೋಗೀಶ್, ಅದ್ವಿಕಾ ರೆಡ್ಡಿ, ರಿತೇಶ್, ನಾಗೇಂದ್ರ ಅರಸ್, ಬಲರಾಜವಾಡಿ, ಪ್ರಶಾಂತ್ ಸಿದ್ದಿ ಹಾಗೂ ಮುಂತಾದವರು…
ಸಾಮಾನ್ಯವಾಗಿ ಊರು ಅಂದಮೇಲೆ ಅಲ್ಲೊಂದಿಷ್ಟು ಪಡ್ಡೆ ಹುಡುಗರ ಗುಂಪು, ತಂದೆ ತಾಯಿ ಇಲ್ಲದ ನಾಯಕ (ಯೋಗಿ) ತನ್ನ ಇಬ್ಬರು ತಂಗಿಯರೊಂದಿಗೆ ಬದುಕು. ಇನ್ನೂ ಮೂವರು ಗೆಳೆಯರು ಮನೆಯವರ ಮಾತಿಗೋ ತಲೆ ಕೆಡಿಸಿಕೊಳ್ಳದೆ ತಾವು ನಡೆದದ್ದೇ ದಾರಿ ಎಂಬಂತೆ ಓಡಾಟ. ಸರಿಯಾದ ಕೆಲಸವಿಲ್ಲದ ನಾಲ್ವರು ಮಾಡುವ ತುಂಟಾಟ ತರಲೆ ಜೊತೆಗೆ ಸಣ್ಣಪುಟ್ಟ ಕಿರಿಕ್ ನಿಂದಲೇ ಊರಲ್ಲೇ ತಮ್ಮದೇ ಹವಾ ಸೃಷ್ಟಿ ಮಾಡಿಕೊಂಡು ಆರ್ಭಟಿಸುವವರನ್ನ ಎದುರಿಸುತ್ತಾ ನೊಂದವರಿಗೆ ಸಹಕಾರಿಯಾಗಿ ಸಮಯಕ್ಕೆ ತಕ್ಕಂತೆ ಜೀವನ ಸಾಗಿಸುವ ಹುಡುಗರ ಬದುಕಿನಲ್ಲಿ ನಾಯಕಿ (ಅದ್ವಿಕಾ) ಆಗಮನ. ಅಲ್ಲೊಂದಷ್ಟು ತಿರುವುಗಳ ಸಮಾಗಮ.
ಇನ್ನೂ ಪ್ರೇಮಿಗಳಿಬ್ಬರು ಮದುವೆ ಆಗುವ ಹಂತಕ್ಕೆ ಬರುವಷ್ಟರಲ್ಲಿ ಸಮಸ್ಯೆಯೊಂದು ಎದುರಾಗುತ್ತದೆ. ಇದರ ನಡುವೆ ನಾಲ್ವರು ಹುಡುಗರ ಬದುಕಿಗೆ ಉತ್ತಮ ಮಾರ್ಗ ಸಿಗುವ ಹಾದಿ. ಪ್ರತಿಯೊಬ್ಬ ಮನುಷ್ಯನಿಗೂ ಜೀವನ ಎಷ್ಟು ಮುಖ್ಯವೋ… ಆರೋಗ್ಯವೂ ಅಷ್ಟೇ ಮುಖ್ಯವಾಗಿರುತ್ತೆ. ಕೆಲವು ಕಾಯಿಲೆಗಳು ಮಾರಕವಾಗಿ ಬಹುತೇಕರ ಬಾಳಿನಲ್ಲಿ ಬಿರುಗಾಳಿಯನ್ನೇ ಎಬ್ಬಿಸುತ್ತದೆ.
ಇದು ಒಬ್ಬಿಬ್ಬರ ನೋವಲ್ಲ, ಇದಕ್ಕೆ ಸೂಕ್ತ ಸೇವೆ ಹಾಗೂ ಪರಿಹಾರ ಸಿಗುವುದು ಕೂಡ ಅಷ್ಟೇ ಮುಖ್ಯ. ಆ ನಿಟ್ಟಿನಲ್ಲಿ ಹುಡುಗರ ಜೊತೆಗೆ ಗ್ರಾಮಸ್ಥರ ಹೋರಾಟ. ಇದಕ್ಕೆ ರಾಜಕೀಯ ಮುಖಂಡರು ಎಷ್ಟು ಅವಶ್ಯಕ ಎಂಬ ವಿಚಾರವನ್ನು ಹೇಳುವುದರ ಜೊತೆಗೆ ಸಂದೇಶವನ್ನು ಕೂಡ ನೀಡಿರುವ ಚಿತ್ರ ಈ ಕಿರಿಕ್ ಶಂಕರ್.
ಇನ್ನೂ ವಿಭಿನ್ನ ಚಿತ್ರವನ್ನು ನಿರ್ಮಿಸಿರುವ ನಿರ್ಮಾಪಕ ಎನ್ .ಎಂ. ಕುಮಾರ್ ಅವರ ಆಲೋಚನೆ ಉತ್ತಮವಾಗಿದೆ. ಪರಿವರ್ತನೆ ಹಾದಿಯತ್ತ ಸಾಗಲು ಹುಡುಗರಿಗೆ ದಾರಿ ತೋರುವ ಹುಡುಗಿಯ ಜೊತೆಗೆ ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನು ಸಾರುವ ಚಿತ್ರವನ್ನು ನಿರ್ಮಿಸಿ ಗಮನ ಸೆಳೆಯುತ್ತಾರೆ.
ನಿರ್ದೇಶಕ ಅನಂತರಾಜು. ಆರ್ ಈ ಚಿತ್ರವನ್ನು ಬಹಳ ಸೂಕ್ಷ್ಮವಾಗಿ ಹೊರತಂದಿದ್ದಾರೆ. ಫ್ಲ್ಯಾಶ್ ಬ್ಯಾಕ್ ಮೂಲಕ ತೆರೆದುಕೊಳ್ಳುವ ಕತೆಯಲ್ಲಿ ನಾಯಕ ಜೈಲಿಗೆ ಸೇರುವುದು ಅಲ್ಲಿ ತನ್ನ ಬದುಕಿನ ಹಾದಿ ಯಾವೆಲ್ಲ ತಿರುವನ್ನು ಪಡೆದುಕೊಂಡಿದೆ ಎಂಬ ವಿಚಾರವನ್ನು ಹಾಸ್ಯ ಮಿಶ್ರಣದೊಂದಿಗೆ ಸಂದೇಶವನ್ನ ಹೇಳಿದ್ದಾರೆ. ಚಿತ್ರದ ಮೊದಲ ಭಾಗ ಕೊಂಚ ನಿಧಾನಗತಿಯಾಗಿದ್ದು, ದಾರಿ ತಪ್ಪಿದ ಮಕ್ಕಳ ಬದುಕಿನಲ್ಲಿ ಸರಿ ಯಾದ ಮಾರ್ಗ ಕಾಣುವ ಅಂಶ ಹಾಗೂ ಆರೋಗ್ಯ ವಿಚಾರದ ಕುರಿತಂತೆ ಜಾಗೃತಿ ಮೂಡಿಸುವ ವಿಚಾರ ಗಮನ ಸೆಳೆಯುತ್ತದೆ.
ಯೋಗೀಶ್ ಹುಣಸೂರು ರವರ ಕತೆ ಹಾಗೂ ಸಂಭಾಷಣೆ ಗಮನ ಸೆಳೆಯುತ್ತದೆ. ಇನ್ನು ಈ ಚಿತ್ರಕ್ಕೆ ಸಂಗೀತ ನೀಡಿರುವ ವೀರ್ ಸಮರ್ಥ್ ಅವರ ಕೆಲಸ ಉತ್ತಮವಾಗಿ ಮೂಡಿಬಂದಿದೆ. ಅದೇ ರೀತಿ ಛಾಯಾಗ್ರಾಹಕ ಜೆ. ಜೆ .ಕೃಷ್ಣ ಕೂಡ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ತೋರಿಸಿದ್ದಾರೆ.
ಇನ್ನು ನಾಯಕ ಯೋಗಿ ಕೂಡ ತಮ್ಮ ಪಾತ್ರವನ್ನು ಲೀಲಾಜಾಲವಾಗಿ ನಿರ್ವಹಿಸಿದ್ದಾರೆ. ತಂದೆ ತಾಯಿ ಇಲ್ಲದ ಅನಾಥ ಹುಡುಗನಾಗಿ ತನ್ನ ತಂಗಿಯರ ಮುದ್ದಿನ ಅಣ್ಣನಾಗಿ ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿವುದರ ಜೊತೆಗೆ ಪಡ್ಡೆ ಹುಡುಗನಾಗಿ ಜಾಗೃತಿ ಮೂಡಿಸುವ ವಿಚಾರದ ಮುಂಚೂಣಿಯಲ್ಲಿ ನಿಲ್ಲುವ ಯೋಗಿ ಆ್ಯಕ್ಷನ್ ಸನ್ನಿವೇಶಗಳು ಹಾಗೂ ಹಾಡುಗಳಲ್ಲಿ ಕೂಡ ಗಮನ ಸೆಳೆಯುತ್ತಾರೆ.ಇನ್ನೂ ಹಾಸ್ಯ ದೃಶ್ಯಗಳಲ್ಲಿ ರಿತೇಶ್ ಹಾಗೂ ಇಬ್ಬರು ಪಾತ್ರಧಾರಿಗಳು ಕೂಡ ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಇನ್ನೂ ನಾಯಕಿಯಾಗಿ ಅಭಿನಯಿಸಿರುವ ಅದ್ವಿಕಾ ತನ್ನ ಪ್ರಥಮ ಪ್ರಯತ್ನದಲ್ಲೇ ತಕ್ಕ ಮಟ್ಟಕ್ಕೆ ಶ್ರಮ ವಹಿಸಿದ್ದಾರೆ. ಇನ್ನಷ್ಟು ಶ್ರಮ ತರಬೇತಿ ಅಗತ್ಯ ಎನಿಸುತ್ತದೆ. ಉಳಿದಂತೆ ಖಳನಾಯಕನಾಗಿ ನಾಗೇಂದ್ರ ಅರಸ್, ಮುಖ್ಯಮಂತ್ರಿ ಪಾತ್ರದಲ್ಲಿ ಬಲರಾಜ ವಾಡಿ, ಪ್ರಶಾಂತ್ ಸಿದ್ದಿ ಸೇರಿದಂತೆ ಪೋಷಕ ಪಾತ್ರಧಾರಿಗಳು ತಮ್ಮ ತಮ್ಮ ಪಾತ್ರಕ್ಕೆ ಜೀವತುಂಬಿ ನಟಿಸಿದ್ದಾರೆ.
ಹುಡುಗರ ತುಂಟಾಟ, ತರಲೆ ಒಂದಷ್ಟು ಪ್ರೇಮದ ಸೆಳೆತ ಹಾಗೂ ಅಂತ್ಯದಲ್ಲಿ ಸಂದೇಶವನ್ನು ಹೇಳಿರುವ ರೀತಿ ಎಲ್ಲರ ಗಮನ ಸೆಳೆಯುತ್ತಿದೆ. ಒಟ್ಟಾರೆ ಈ ಚಿತ್ರವನ್ನ ಎಲ್ಲರೂ ಒಮ್ಮೆ ನೋಡಬಹುದಾಗಿದೆ.