Cinisuddi Fresh Cini News 

ಕಿಚ್ಚೋತ್ಸವಕ್ಕೆ 1.23 ಮಿಲಿಯನ್ ಟ್ವೀಟ್

ಸ್ಯಾಂಡಲ್ ವುಡ್ ನಲ್ಲಿ ಇದೊಂದು ದಾಖಲೆ ಸರಿ… ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್ ಹುಟ್ಟುಹಬ್ಬ ಇನ್ನು 100 ದಿನ ಮುಂಚಿತವಾಗಿಯೇ ದೇಶದಾದ್ಯಂತ ಇರುವ ಕಿಚ್ಚನ ಅಭಿಮಾನಿ ಬಳಗವು ಸಂಭ್ರಮದಲ್ಲಿ ತೊಡಗಿದ್ದಾರೆ. ಹೌದು… ನೆಚ್ಚಿನ ನಟನೊಬ್ಬನ ಹುಟ್ಟುಹಬ್ಬದ ನೂರು ದಿನ ಮುಂಚಿತವಾಗಿಯೇ ಸಾಮಾಜಿಕ ಜಾಲತಾಣಗಳಲ್ಲಿ ಟ್ವೀಟ್ ಮಾಡುವ ಮೂಲಕ ಸಂಭ್ರಮ ಆಚರಿಸುವುದು ಪರಭಾಷಾ ಚಿತ್ರರಂಗದಲ್ಲಿ ಸರ್ವೆ ಸಾಮಾನ್ಯವಾಗಿದೆ.

ಈಗ ಸ್ಯಾಂಡಲ್ವುಡ್ನಲ್ಲೂ ಈ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಕಿಚ್ಚನ ಅಭಿಮಾನಿ ಬಳಗಗಳು ಎಲ್ಲರೂ ಒಟ್ಟಿಗೆ ಸೇರಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಕಿಚ್ಚೋತ್ಸವ 2020 ಯ ವಿಶೇಷ ಸಿಡಿಪಿ ಮತ್ತು100DaysForKicchotsava ಎಂಬ ಹ್ಯಾಷ್ ಟ್ಯಾಗ್‌ ಅನ್ನು ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ವಿಶೇಷವಾಗಿ ವಿನ್ಯಾಸಗೊಳಿಸಿರುವುದನ್ನು ಯುವ ನಟ ನಿರೂಪ್ ಭಂಡಾರಿ ಲೋಕಾರ್ಪಣೆ ಮಾಡಿದ್ದರು.

ವಿಶೇಷ ಎಂದರೆ ನಟನೊಬ್ಬನ ಹುಟ್ಟು ಹಬ್ಬಕ್ಕೆ 100 ದಿನ ಮುಂಚಿತವಾಗಿಯೇ ಶುಭ ಕೋರುವ ಸಂಪ್ರದಾಯ ಒಂದು ರೀತಿ ಹಬ್ಬದ ಸಂಭ್ರಮದಂತೆ ಕಾಣ್ತದೆ. ಕನ್ನಡ ಚಿತ್ರರಂಗಕ್ಕೆ ಇದೊಂದು ಹೊಸ ರೀತಿಯ ಪ್ರಯತ್ನ ಎಂದೇ ಹೇಳಬಹುದು.

ಕನ್ನಡ ಸಿನಿಮಾ ಪ್ರಿಯರು ಹಾಗೂ ಕಿಚ್ಚನ ಅಭಿಮಾನಿ ಬಳಗದ ಪ್ರೀತಿ, ವಿಶ್ವಾಸ ಯಾವ ರೀತಿ ಇದೆ ಎಂಬುದನ್ನು ಈ ಒಂದು ಟ್ವೀಟ್ ಮೂಲಕ ಕಾಣಬಹುದಾಗಿದೆ. ಇದಕ್ಕೆ ನಿದರ್ಶನ ಎಂಬಂತೆ 24 ಗಂಟೆಯ ಒಳಗೆ 100DaysForKicchotsava ಎಂಬ ಹ್ಯಾಷ್ ಟ್ಯಾಗ್‌ನಡಿ 1.23 ಮಿಲಿಯನ್‌ಗೂ ಅಧಿಕ ಟ್ವೀಟ್‌ಗಳು ಆಗಿರುವುದೇ ಸಾಕ್ಷಿಯಾಗಿದೆ.

ನಿಜವಾಗಿಯೂ ಕಿಚ್ಚನ ಅಭಿಮಾನಿ ಬಳಗಕ್ಕೆ ಇದು ಒಂದು ರೀತಿ ಹಬ್ಬದ ಸಂಭ್ರಮವೇ ಆಗಿದೆ. ಇದೊಂದು ರೀತಿ ಟ್ರೆಂಡಿಂಗ್ ಆರಂಭಗೊಂಡಿದ್ದು , ಸ್ಯಾಂಡಲ್ ವುಡ್ ನಲ್ಲಿ ಹಲವು ನಟ ನಟಿಯರ ಹುಟ್ಟುಹಬ್ಬದ ನೂರು ದಿನ ಮುಂಚಿತವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಈ ಟ್ರೆಂಡಿಂಗ್ ಆರಂಭಗೊಂಡು ಚಿತ್ರೋದ್ಯಮದಲ್ಲಿ ಅಭಿಮಾನಿ ಬಳಗಗಳು ಹೆಚ್ಚು ಹೆಚ್ಚು ಸೃಷ್ಟಿಯಾಗಲಿ.

ಚಂದನವನದಲ್ಲಿ ಇಂತಹ ಒಂದು ಟ್ರೆಂಡಿಂಗ್ ಶುರು ಮಾಡಿದ ಕಿಚ್ಚನ ಅಭಿಮಾನಿ ಬಳಗ ಹಾಗೂ ಇದಕ್ಕೆ ಕಾರಣಕರ್ತರಾದ ಎಲ್ಲರಿಗೂ ಒಂದು ಹ್ಯಾಟ್ಸಾಪ್ ಹೇಳಲೇಬೇಕು. ನೂರು ದಿನ ಮುಂಚಿತವಾಗಿ ಈ ರೀತಿಯಾದ ಒಂದು ಅದ್ಭುತ ಟ್ರೆಂಡಿಂಗ್ ಕೆಲಸಕ್ಕೆ ಮುಂದಾದಂತ ಅಭಿಮಾನಿ ಬಳಗ ಇನ್ನು ಕಿಚ್ಚನ ಹುಟ್ಟುಹಬ್ಬವನ್ನು ಯಾವ ರೀತಿ ಆಚರಿಸುತ್ತಾರೆ ಎಂಬ ಕುತೂಹಲ ಈಗ ಎಲ್ಲರ ಗಮನವನ್ನು ಸೆಳೆಯುತ್ತಿದೆ.

Related posts