Cinisuddi Fresh Cini News 

‘ಕವಲುದಾರಿ’ಯ ಯಶಸ್ಸಿನ ಖುಷಿ ಹಂಚಿಕೊಂಡ ಚಿತ್ರತಂಡ

ಪುನೀತ್‍ರಾಜ್‍ಕುಮಾರ್ ಅವರು ತಮ್ಮ ಪಿಆರ್‍ಕೆ ಸಂಸ್ಥೆ ಮೂಲಕ ಅರ್ಪಿಸಿರುವ ಚೊಚ್ಚಲ ಚಿತ್ರವಾದ ಕವಲುದಾರಿಯು ಪ್ರೇಕ್ಷಕರ ಗಮನ ಸೆಳೆದು ಯಶಸ್ಸಿನ ಹಾದಿಯಲ್ಲಿ ಸಾಗಿದೆ. ಈ ಸಂತೋಷವನ್ನು ಹಂಚಿಕೊಳ್ಳಲು ಚಿತ್ರತಂಡವು ಮೊನ್ನೆ ಸಂತಸ ಕೂಟವನ್ನು ಹಮ್ಮಿಕೊಂಡಿತ್ತು.

ಅಶ್ವಿನಿ ಪುನೀತ್‍ಕುಮಾರ್ ಅವರು ನಿರ್ಮಿಸಿರುವ ಕವಲುದಾರಿಗೆ ಹೇಮಂತ್‍ರಾವ್ ಅವರ ನಿರ್ದೇಶನವಿದ್ದು ಚಿತ್ರವು 25 ದಿನಗಳನ್ನು ಪೂರೈಸಿ 50 ದಿನಗಳತ್ತ ಹೆಜ್ಜೆಹಾಕಿದೆ. ಅನಂತ್‍ನಾಗ್, ಅಚ್ಚುತಕುಮಾರ್, ಸಂಪತ್‍ಕುಮಾರ್, ರಿಷಿ, ರೋಷಿನಿ ಪ್ರಕಾಶ್, ಸಂಗೀತ ನಿರ್ದೇಶಕ ಚರಣ್‍ರಾಜ್ ಸೇರಿದಂತೆ ಚಿತ್ರತಂಡದವರು ಅಂದು ತಮ್ಮ ಸಂತಸವನ್ನು ಹಂಚಿಕೊಂಡರು.

ನಿರ್ದೇಶಕ ಹೇಮಂತ್‍ರಾವ್ ಅವರು ಮಾತನಾಡಿ, ಪ್ರೇಕ್ಷಕರ ಪ್ರೋತ್ಸಾಹ ಹಾಗೂ ಮಾಧ್ಯಮದವರ ಉತ್ತಮ ವಿಮರ್ಶೆಗಳಿಂದಾಗಿ ಕವಲುದಾರಿ ಚಿತ್ರವು 25 ದಿನಗಳನ್ನು ಪೂರೈಸಿದೆಯಾದರೂ ಈ ಚಿತ್ರ ಗಳಿಸಿದ ಬಂಡವಾಳ ಎಷ್ಟು ಎಂಬುದು ನಮಗೂ ನಿಖರವಾಗಿ ಗೊತ್ತಿಲ್ಲ, ವಿತರಕರಿಂದ ನಾವು ಅದರ ಬಗ್ಗೆ ಮಾಹಿತಿಯನ್ನು ಕೂಡ ಪಡೆದಿಲ್ಲ ಎಂದು ಚಿತ್ರ ಗಳಿಸಿದ ಕಲೆಕ್ಷನ್ ಗುಟ್ಟು ಬಿಟ್ಟುಕೊಡದೆ ಜಾಣ್ಮೆ ಪ್ರದರ್ಶಿಸಿದರು.

ಪ್ರಾರಂಭದಲ್ಲಿ ಪ್ರೇಕ್ಷಕರು ಇದನ್ನು ಯಾವ ರೀತಿ ಸ್ವೀಕರಿಸುತ್ತಾರೋ ಎಂಬ ಸಣ್ಣ ಗೊಂದಲವಿತ್ತು. ಆಗ ಅನಂತ್‍ಸರ್ ಧೈರ್ಯ ತುಂಬಿದರು. 275 ಚಿತ್ರಗಳಲ್ಲಿ ನಟಿಸಿದ್ದ ಅಂತಹ ಹಿರಿಯ ನಟರ ಅನುಭವದ ಮಾತುಗಳು ನಿಜವಾಗಿದೆ ಎಂದು ನಿರ್ದೇಶಕರು ಖುಷಿ ವ್ಯಕ್ತಪಡಿಸಿದರು.

ವಿತರಕ ಧೀರಜ್ ಮಾತನಾಡಿ, ಪ್ರೇಕ್ಷಕರು ಕವಲುದಾರಿ ಚಿತ್ರವನ್ನು ಇಷ್ಟಪಟ್ಟು ವೀಕ್ಷಿಸುತ್ತಿದ್ದಾರೆ, ನಿರ್ಮಾಪಕರು, ನಾವುಗಳು ಲಾಭದಲ್ಲಿ ಇz್ದÉೀವೆಂದು ವಿವರ ನೀಡಿದರು. ಆದರೆ ಎಷ್ಟೆಂದು ಹೇಳದೆ ಹೇಮಂತ್‍ರಾವ್ ಹಾದಿಯನ್ನೇ ಅನುಸರಿಸಿದರು.

ಹಿರಿಯ ನಟ ಅನಂತ್‍ನಾಗ್ ಮಾತನಾಡಿ, ಕವಲುದಾರಿಗೆ ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ, ಮಾಧ್ಯಮಗಳು ಕೂಡ ಉತ್ತಮ ಪ್ರಶಂಸೆ ಕೊಟ್ಟಿರುವುದನ್ನು ನೋಡಿ ನನ್ನ ಹೃದಯ ತುಂಬಿ ಬಂತು.

ಇಡೀ ಚಿತ್ರತಂಡದವರು ತುಂಬಾ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರಿಂದ ಕವಲುದಾರಿ ಒಂದು ಅದ್ಭುತ ಚಿತ್ರವಾಗಿದ್ದು, ಚಿತ್ರದ ಕಲೆಕ್ಷನ್ ಕೂಡ ಚೆನ್ನಾಗಿದೆ, ಈ ಚಿತ್ರಕ್ಕೆ 3 ಕೋಟಿ ಬಂಡವಾಳ ಹೂಡಿದ್ದು, 6 ಕೋಟಿ ಕಲೆಕ್ಷನ್ ಆಗಿದೆ ಎಂದು ಹೇಳುವ ಮೂಲಕ ಹೇಮಂತ್‍ರಾವ್, ಧೀರಜ್ ಬಚ್ಚಿಟ್ಟಿದ್ದ ರಹಸ್ಯವನ್ನು ಬಯಲು ಮಾಡಿದರು.

ನಟಿ ರೋಶಿನಿ ಪ್ರಕಾಶ್ ಮಾತನಾಡಿ, ಕವಲುದಾರಿ ಚಿತ್ರದಲ್ಲಿನ ನನ್ನ ಪಾತ್ರವು ನನಗೆ ಖುಷಿ ಕೊಟ್ಟಿತ್ತು, ಈಗ ಚಿತ್ರ ಸಕ್ಸಸ್ ಆಗಿರುವುದರಿಂದ ಅದರ ಆನಂದ ದುಪ್ಪಟ್ಟಾಗಿದೆ. ಸಂತೋಷ ಕೂಟಕ್ಕೆ ನನ್ನನ್ನು ಕರೆದಾಗ ತೃಪ್ತಿತನದಿಂದ ಬಂದಿರುವುದಾಗಿ ಹೇಳಿದರು.

ನಾಯಕ ರಿಶಿ, ಅಚ್ಯುತಕುಮಾರ್, ಸಂಪತ್, ಸಿರಿ, ಛಾಯಾಗ್ರಾಹಕ ಅದ್ವೈತಗುರುಮೂರ್ತಿ, ಸಂಗೀತ ನಿರ್ದೇಶಕ ಚರಣ್‍ರಾಜ್, ಸಮನ್ವಿತಾ ಸಂತೋಷದಲ್ಲಿ ಪಾಲ್ಗೊಂಡು ಅನುಭವಗಳನ್ನು ಹಂಚಿಕೊಂಡರು. ಪುನೀತ್‍ರಾಜ್‍ಕುಮಾರ್ ಶೂಟಿಂಗ್ ಸಲುವಾಗಿ ವಿದೇಶಕ್ಕೆ ಹೋಗಿದ್ದರಿಂದ ಅವರ ಅನುಪಸ್ಥಿತಿಯಲ್ಲಿ ಗೋಷ್ಟಿಯು ನಡೆಯಿತು.

ಸ್ಯಾಂಡಲ್‍ವುಡ್‍ನಲ್ಲಿ ತಮ್ಮ ನಟನೆಯ ಮೂಲಕ ಪವರ್ ಸೃಷ್ಟಿಸಿರುವ ಪುನೀತ್‍ರಾಜ್‍ಕುಮಾರ್ ಅವರು ನಿರ್ಮಿಸಿರುವ ಕವಲುದಾರಿಯು ಸಕ್ಸಸ್ ಆಗುವ ಮೂಲಕ ನಿರ್ಮಾಪಕನಾಗಿಯೂ ಗೆದ್ದಿದ್ದು ಅವರ ನಿರ್ಮಾಣ ಸಂಸ್ಥೆಯಿಂದ ಮತ್ತಷ್ಟು ಉತ್ತಮ ಚಿತ್ರಗಳು ಬರುವಂತಾಗಲಿ.

Share This With Your Friends

Related posts