Cinisuddi Fresh Cini News 

ಮಾಧ್ಯಮಗಳ ವಿರುದ್ಧ ಶಿವಣ್ಣ ಗರಂ ಆಗಿದ್ದರ ಹಿಂದಿನ ಕಾರಣ ಗೊತ್ತೇ..?


ಚುನಾವಣೆ ಭರಾಟೆ, ಐಪಿಎಲ್ ಅಬ್ಬರದ ನಡುವೆಯೂ ಬಿಡುಗಡೆಗೊಂಡ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರು ನಟಿಸಿರುವ ಕವಚ ಚಿತ್ರವು ನಿರ್ಮಾಪಕರ ಮೊಗದಲ್ಲಿ ಕೊಂಚವಾದರೂ ನಗೆ ಮೂಡಿಸಿದೆ. ರೀಮೇಕ್ ಚಿತ್ರಗಳಲ್ಲಿ ನಟಿಸಲ್ಲ ಎಂದು ಹೇಳಿದ್ದ ಶಿವಣ್ಣ ಬಹಳ ವರ್ಷಗಳ ನಂತರ ಒಪ್ಪಂ ಎಂಬ ಚಿತ್ರದ ರೀಮೇಕ್ ಆದ ಕವಚದಲ್ಲಿ ನಟಿಸಿದ್ದು ಶಿವಣ್ಣನ ಅಭಿನಯಕ್ಕೆ ಎಲ್ಲರಿಂದ ಪ್ರಶಂಸೆಗ ಸುರಿಮಳೆ ಹರಿದು ಬಂದಿದೆ.

ಕವಚ ಚಿತ್ರತಂಡವು ಮೊನ್ನೆ ಪತ್ರಿಕಾಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು. ಅಲ್ಲಿ ಶಿವರಾಜ್‍ಕುಮಾರ್ ಅವರು ಟೀವಿ ಚಾನಲ್‍ಗಳ ಅತಿರೇಕದ ಬಗ್ಗೆ ಬೇಸರದಿಂದ ಮಾತನಾಡಿದರು. ಇದು ಚುನಾವಣೆಯ ಸಮಯ ನಮ್ಮ ರಾಜ್ಯದಲ್ಲೂ ಚುನಾವಣೆ ಕಾವು ಏರಿದ್ದು ಎರಡು ಹಂತಗಳಲ್ಲಿ ಮತದಾನಗಳು ನಡೆಯಲಿವೆ. ಈ ಬಾರಿ ಮೈಕಾಸೂರನ ಅಬ್ಬರವಿಲ್ಲದಿದ್ದರೂ ನ್ಯೂಸ್ ಚಾನಲ್‍ಗಳು ಬೊಬ್ಬಿರಿಯುತ್ತಿವೆ. ಬೆಳಗ್ಗೆಯಿಂದ ಮಧ್ಯರಾತ್ರಿಯವರೆಗೂ ಟೀವಿ ಆನ್ ಮಾಡಿದರೆ ಸಾಕು ಸಿನಿಮಾ ಸುದ್ದಿಗಳ ಬದಲು ರಾಜಕೀಯ ಸುದ್ದಿಗಳೇ ಬಿತ್ತರವಾಗುತ್ತಿರುತ್ತವೆ.

ಅತಿಯಾದರೆ ಅಮೃತವೂ ವಿಷಯವಾಗುತ್ತದೆ ಅನ್ನುತ್ತಾರಲ್ಲ ಹಾಗೆ ಟಿವಿ ಮಾಧ್ಯಮದವರು ಪ್ರಸಾರ ಮಾಡುತ್ತಿರುವ ಚುನಾವಣೆಗಳ ಸುದ್ದಿಯನ್ನು ನೋಡಿ ನೋಡಿ ಪ್ರೇಕ್ಷಕರ ತಲೆ ಚಿಟ್ಟು ಹಿಡಿಸುತ್ತಿದ್ದಾರೆ. ಆದರೆ ವೃತ್ತ ಪತ್ರಿಕೆಗಳು ಚುನಾವಣೆಯ ವಿಷಯವನ್ನು ಪ್ರಕಟಿಸಿದರೂ ಕೂಡ, ಸಿನಿಮಾ ಸುದ್ದಿಗಳನ್ನು ಪ್ರಕಟಿಸಲು ಪ್ರತ್ಯೇಕ ಜಾಗವನ್ನು ಮೀಸಲಿಟ್ಟಿದ್ದಾರೆ.

ಇದರಿಂದ ಚಿತ್ರರಂಗಕ್ಕೆ ಒಳ್ಳೆಯದಾಗುತ್ತದೆ. ಇಷ್ಟು ವರ್ಷಗಳಿಂದ ಚಿತ್ರರಂಗದಲ್ಲಿರುವ ನನಗೆ ಮಾಧ್ಯಮಗಳ ಬಗ್ಗೆ ಮಾತನಾಡುವ ಅಧಿಕಾರವಿದೆ. ಕವಚದಂಥಹ ಸದಭಿರುಚಿಯ ಚಿತ್ರಕ್ಕೆ ಟೀವಿ ಮಾಧ್ಯಮದಲ್ಲಿ ಸೂಕ್ತ ಮನ್ನಣೆ ಸಿಕ್ಕಲಿಲ್ಲ. ಉತ್ತಮ ಕಥಾವಸ್ತುವಿನಿಂದ ಕೂಡಿರುವ ಕೆಲವು ಸಿನಿಮಾಗಳ ಕಥೆಯೇ ಇದೇ ಆಗಿದೆ ಎಂದು ಶಿವಣ್ಣ ಬೇಸರದಿಂದ ಹೇಳಿಕೊಂಡರು.


ದೃಶ್ಯ ಮಾಧ್ಯಮದವರು ನನ್ನ ಸಂದರ್ಶನ ಕೇಳಿದಾಗ ಅವರೊಂದಿಗೆ ಸಂತೋಷದಿಂದಲೇ ಮಾತನಾಡಿದ್ದೇನೆ, ಆದರೆ ನಮ್ಮ ಕವಚ ಚಿತ್ರ ಬಿಡುಗಡೆಯಾದರೂ ಕೂಡ ಅವರು ಈ ಚಿತ್ರದ ಬಗ್ಗೆ ಮಾತನಾಡಲು ಮುಂದೆ ಬಂದಿಲ್ಲ? ಅದರಿಂದ ನನಗೆ ಬೇಸರವಾಗಿದೆ , ಆಗಂತ ನಾನು ಟೀವಿ ಮಾಧ್ಯಮದವರನ್ನು ಜರಿಯುತ್ತಿಲ್ಲ, ಚುನಾವಣೆಯ ಹೆಸರಿನಲ್ಲಿ ಕನ್ನಡ ಸಿನಿಮಾಗಳನ್ನು ಮರೆಯಬೇಡಿ ಎಂದು ಹೇಳುತ್ತಿದ್ದೇನೆ, ನನ್ನ ಮಾತಿನಿಂದ ಅವರಿಗೆ ನೋವಾಗಿದ್ದರೆ ಕ್ಷಮಿಸಿ ಎಂದರು.


ದಿನದ 12 ಗಂಟೆ ಅವಧಿಯಲ್ಲಿ ಒಂದು ಗಂಟೆಯಾದರೂ ಸಿನಿಮಾ ಸುದ್ದಿಯನ್ನು ಬಿತ್ತರ ಮಾಡಿ, ಐದು ವರ್ಷಕ್ಕೊಮ್ಮೆ ಬರುವ ಚುನಾವಣೆಯನ್ನು ವೈಭವೀಕರಿಸುವ ಭರದಲ್ಲಿ ಸಿನಿಮಾರಂಗವನ್ನು ಅಲ್ಲಗಳೆಯಬೇಡಿ ಎಂದು ಹೇಳಿದರು. ಶಿವರಾಜ್‍ಕುಮಾರ್ ಆಡಿದ ಮಾತುಗಳಿಗೆ ಕನ್ನಡ ನ್ಯೂಸ್ ಚಾನಲ್‍ಗಳನ್ನು ವೀಕ್ಷಿಸುವ ಹಲವರು ಶಿವಣ್ಣನ ಮಾತಿನಲ್ಲಿ ಸತ್ಯವಿದೆ. ನ್ಯೂಸ್ ಚಾನಲ್‍ಗಳು ಕನ್ನಡ ಚಿತ್ರರಂಗಕ್ಕೆ ಬೆಂಬಲ ನೀಡಿದರೆ ನಮ್ಮಲ್ಲೂ ದೊಡ್ಡ ಮಟ್ಟದ ಚಿತ್ರಗಳು ಬಂದು ಸ್ಯಾಂಡಲ್‍ವುಡ್‍ನ ಏಳಿಗೆ ಆಗುತ್ತದೆ ಎಂದು ಹೇಳುತ್ತಿದ್ದಾರೆ. ಅಂದು ನಡೆದ ಸುದ್ದಿಗೋಷ್ಠಿಯಲ್ಲಿ ಕವಚ ಚಿತ್ರತಂಡವು ಹಾಜರಿದ್ದರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

Share This With Your Friends

Related posts