ಸಾವಯವ ಕೃಷಿಯತ್ತ ಬೆಳಕು ಚೆಲುವ ಕಾಸಿನಸರ (ಚಿತ್ರವಿಮರ್ಶೆ-ರೇಟಿಂಗ್ : 3.5/5)
ರೇಟಿಂಗ್ : 3.5/5
ಚಿತ್ರ : ಕಾಸಿನಸರ
ನಿರ್ದೇಶಕ : ನಂಜುಂಡೇಗೌಡ ನಿರ್ಮಾಪಕ : ದೊಡ್ಡನಾಗಯ್ಯ
ಸಂಗೀತ: ಶ್ರೀಧರ್ ಸಂಭ್ರಮ್
ಛಾಯಾಗ್ರಹಣ : ವೇಣು
ತಾರಾಗಣ : ವಿಜಯ್ ರಾಘವೇಂದ್ರ , ಹರ್ಷಿಕಾ ಪೂಣಚ್ಚ , ಉಮಾಶ್ರೀ , ನೀನಾಸಂ ಅಶ್ವಥ್, ಸಂಗೀತಾ, ಮಂಡ್ಯ ರಮೇಶ್, ಹನುಮಂತೇಗೌಡ, ಸುಧಾ ಬೆಳವಾಡಿ ಹಾಗೂ ಮುಂತಾದವರು…
ಇಡೀ ದೇಶದ ಬೆನ್ನೆಲುಬು ಅಂದರೆ ಅದು ರೈತ. ಎಲ್ಲಿಯವರೆಗೂ ರೈತಾಪಿ ಜನರು ಇರ್ತಾರೋ ಅಲ್ಲಿಯವರೆಗೂ ನಮ್ಮ ದೇಶದ ಜನರಿಗೆ ಅನ್ನದಾತನ ಶ್ರೀರಕ್ಷೆ ಇದ್ದೇ ಇರುತ್ತದೆ. ಆಧುನಿಕ ತಂತ್ರಜ್ಞಾನ ಎಷ್ಟೇ ಮುಂದುವರೆದರು, ಬದುಕಲು ಭೂಮಿತಾಯಿಯ ಆಸರೆ ಅಷ್ಟೇ ಮುಖ್ಯ. ಕೃಷಿ ಬದುಕು, ಸಂಬಂಧಗಳ ಬೆಸುಗೆ, ಕಾಸಿನ ಸರದ ಮಹತ್ವ , ಸೋದರರ ಮನಸ್ತಾಪ, ಆಸ್ತಿಯ ಗುದ್ದಾಟ, ಪ್ರೀತಿಯ ಸೆಳೆತ, ಭೂಗಳರ ರಣತಂತ್ರದ ಜೊತೆಗೆ ಸಾವಯವ ಕೃಷಿಯ ವಿಚಾರವನ್ನು ಕೇಂದ್ರವನ್ನಾಗಿ ಇಟ್ಟುಕೊಂಡು ಈ ವಾರ ಬಿಡುಗಡೆಯಾದ ಚಿತ್ರ “ಕಾಸಿನಸರ”. ಚಿತ್ರದ ಕಥಾನಾಯಕ ಸುಂದರೇಶ್ ( ವಿಜಯ್ ರಾಘವೇಂದ್ರ) ಕಾಲೇಜಿನಲ್ಲಿ ಕೃಷಿ ವಿದ್ಯಾರ್ಥಿಯಾಗಿ ಉತ್ತಮ ವಿದ್ಯಾಭ್ಯಾಸ ಮಾಡಿ ಗೋಲ್ಡ್ ಮೆಡಲ್ ಪಡೆದು ತನ್ನ ಹುಟ್ಟೂರಿಗೆ ಬರುತ್ತಾನೆ.
ತನ್ನ ಅಣ್ಣನ ಸಹಕಾರದೊಂದಿಗೆ ಓದಿ ಬೆಳೆದ ಸುಂದರೇಶ್ ತಾಯಿಯ ಆಸೆಯಂತೆ ಉತ್ತಮ ಹೆಸರನ್ನು ಪಡೆದಿರುತ್ತಾನೆ. ಸುಂದರೇಶ್ ಸಾವಯವ ಕೃಷಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ರೈತನಾಗಿ ಊರಲ್ಲಿ ಉಳಿಯಬೇಕೆಂದು ಬಯಸುತ್ತಾನೆ. ಇದನ್ನು ಒಪ್ಪದ ಅಣ್ಣ ಅತ್ತಿಗೆ ಓದಿಗೆ ತಕ್ಕಂತ ಕೆಲಸವನ್ನು ಹುಡುಕಿಕೊಂಡು ನಮ್ಮೆಲ್ಲರನ್ನು ನೋಡಿಕೋ ಎಂಬ ಮಾತಿಗೆ ಒಪ್ಪದ ಸುಂದರೇಶನಿಗೆ ಅಣ್ಣ ಆಸ್ತಿಯನ್ನು ಎರಡು ಭಾಗ ಮಾಡಿ ಕೊಡಿ ನನ್ನ ದಾರಿ ನೋಡಿಕೊಂಡು ಪಟ್ಟಣ ಸೇರುತ್ತೇನೆ ಎಂದು ಊರಿನ ಮುಖ್ಯಸ್ಥರಲ್ಲಿ ಕೇಳುತ್ತಾನೆ. ಅದರಂತೆ ಎರಡು ಭಾಗವು ಆಗುತ್ತದೆ.
ಆದರೆ ಮನೆಯ ಹಿರಿಯ ಜೀವ ತಾಯವ್ವ (ಉಮಾಶ್ರೀ) ಈ ಘಟನೆಗಳನ್ನ ನೋಡಿ ದಿಕ್ಕು ತೋಚದಂತೆ ಆಗುತ್ತಾಳೆ. ಕಿರಿಯ ಮಗ ತಾಯಿಯನ್ನು ನೋಡಿಕೊಳ್ಳುತ್ತೇನೆ ಎನ್ನುವಾಗ, ಊರ ಮುಖಂಡರು ಒಪ್ಪುತ್ತಾರೆ. ಹಾಗೆ ಆಕೆಯ ಬಳಿ ಇದ್ದ ಹಿರಿಯರಿಂದ ಬಂದಂತಹ ಕಾಸಿನಸರ ಕೂಡ ತಾಯಿಯ ಬಳಿ ಇರುವುದೇ ಸೂಕ್ತ ಎಂದು ತಿಳಿಸುತ್ತಾರೆ. ಮುಂದೆ ದಲ್ಲಾಳಿಯ ಮುಖಾಂತರ ಸುಂದರೇಶ್ ನಿಗೆ ಮದುವೆ ಮಾಡಲು ಮುಂದಾಗುವ ತಾಯಿಗೆ ಮಗನ ಕಾಲೇಜಿನ ಗೆಳತಿ ಮಲ್ಲಿಗೆ( ಹರ್ಷಿಕಾ ಪೊನ್ನಚ್ಚ) ತನ್ನ ತಂದೆ ತಾಯಿಯನ್ನು ಒಪ್ಪಿಸಿ ಮದುವೆಯಾಗಲು ನಿರ್ಧರಿಸುತ್ತಾಳೆ.
ವಿಶೇಷ ಎಂದರೆ ರಾಷ್ಟ್ರಕವಿ ಕುವೆಂಪುರವರ ಆಶಯದಂತೆ ಮಂತ್ರ ಮಾಂಗಲ್ಯ ಮದುವೆಗೆ ಆಗುವ ಮೂಲಕ ಹೊಸ ಬದುಕಿಗೆ ನಾಂದಿ ಬರೆಯುತ್ತಾರೆ. ಮುಂದೆ ರೈತ ಸುಂದರೇಶ ಯಾವುದೇ ಕೆಮಿಕಲ್ ಔಷಧಿ, ಬೀಜಗಳಿಗೆ ಮಾರುಹೋಗದೆ ಸ್ವತಂತ್ರವಾಗಿ ಸಾವಯವ ಕೃಷಿಗೆ ತನ್ನನ ಒಡ್ಡಿಕೊಳ್ಳುತ್ತಾನೆ. ಫಲವತ್ತು ಭೂಮಿಯಲ್ಲಿ ಉತ್ತಮ ಬೆಳೆಯನ್ನ ಕಂಡರು ಸೂಕ್ತ ಬೆಲೆ ಸಿಗದ ಸಂಕಷ್ಟಕ್ಕೆ ಸಿಲ್ಕುತ್ತಾನೆ.
ಇದನ್ನು ಗಮನಿಸುವ ಪತ್ನಿ ತನ್ನ ತಂದೆಯ ಮನೆಯ ಸಹಾಯ ಕೇಳಿ ಪಡೆದರು ಒಪ್ಪದ ಗಂಡ. ತಾಯಿ ಮಗನ ಸಂಕಷ್ಟ ನೋಡಿ ತನ್ನ ಬಳಿ ಇರುವ ಕಾಸಿನ ಸರವನ್ನು ಅಡವಿಟ್ಟು ಸಮಸ್ಯೆ ಬಗೆಹರಿಸಿಕೊಂಡು ಬದುಕು ನಡೆಸಲು ದಾರಿ ತೋರಿಸುತಾಳೆ. ಮತ್ತೊಂದೆಡೆ ಭೂಗಳ್ಳರು ಕಂಪನಿಗಳ ಜೊತೆ ಕೈಜೋಡಿಸಿಕೊಂಡು ರಾಜಕೀಯ ನಾಯಕರ ಸಹಕಾರದಲ್ಲಿ ಹಳ್ಳಿ ಜನರನ್ನ ಹಣದ ಜಾಲಕ್ಕೆ ಸಿಲುಕಿಸಿ ಅವರ ಕೈಯಲ್ಲಿ ಕೆಲಸ ಮಾಡಿಸಿಕೊಂಡು ಜಾಗವನ್ನು ಕಿತ್ತುಕೊಳ್ಳಲು ಹುನ್ನಾರ ನಡೆಸುತ್ತಾರೆ. ಇದು ರೈತರ ಕೋಪ ಕಾರಣವಾಗುತ್ತದೆ. ಇದರ ನಡುವೆ ಅಣ್ಣ ತಮ್ಮಂದಿರ ಭೂಮಿ ವಿಚಾರವಾಗಿ ತಗಾದೆ. ಹೀಗೆ ಎಲ್ಲವೂ ಒಂದಕ್ಕೊಂದು ಕೊಂಡಿಯಂತೆರುವ ವಿಚಾರಕ್ಕೆ ಸುಂದರೇಶ್ ಮುಂದೆ ನಿಲ್ಲುತ್ತಾನೆ.
ಸುಂದರೇಶ್ ಎದುರಿಸುವ ಸಮಸ್ಯೆ ಏನು…
ಸಾವಯವ ಕೃಷಿ ಏನಾಗುತ್ತದೆ…
ರೈತರಿಗೆ ನ್ಯಾಯ ಸಿಗುತ್ತಾ…
ಒಡೆದ ಕುಟುಂಬ ಏನಾಗುತ್ತೆ…
ಇನ್ನು ಇಂತಹ ಹಲವು ಪ್ರಶ್ನೆಗೆ ಉತ್ತರ ಕಾಸಿನ ಸರದಲ್ಲಿ ಸಿಗುತ್ತೆ .
ವ್ಯವಸಾಯದ ಬದುಕಿನಲ್ಲಿ ಹೊಸ ಕ್ರಾಂತಿಯನ್ನೇ ಮಾಡಿದಂತಹ
ಡಾ. ರಾಜಕುಮಾರ್ ಅಭಿನಯದ ಬಂಗಾರದ ಮನುಷ್ಯ ಚಿತ್ರ ನೆನಪಿಸುತ್ತದೆ. ಈ ರೀತಿಯ ಪಾತ್ರವನ್ನು ಮೊದಲ ಬಾರಿಗೆ ಅಭಿನಯಿಸಿರುವ ವಿಜಯ್ ರಾಘವೇಂದ್ರ ಪಾತ್ರದಲ್ಲಿ ಪರ್ಕಾಯ ಪ್ರವೇಶ ಮಾಡಿ ನೈಜ್ಯವಾಗಿ ನಟಿಸಿದ್ದಾರೆ. ಇನ್ನು ನಾಯಕಿಯಾಗಿ ಅಭಿನಯಿಸಿರುವ ಹರ್ಷಿಕಾ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಇನ್ನು ವಿಶೇಷವಾಗಿ ತಾಯಿಯ ಪಾತ್ರವನ್ನು ಮಾಡಿರುವ ಹಿರಿಯ ನಟಿ ಉಮಾಶ್ರೀ ಲೀಲಾಜಾಲಾವಾಗಿ ನಿರ್ವಹಿಸಿ ಎಲ್ಲರ ಗಮನ ಸೆಳೆಯುತ್ತಾರೆ. ಇನ್ನು ನಾಯಕನ ಅಣ್ಣ ಅತ್ತಿಗೆಯಾಗಿ ನಿನಸಂ ಅಶ್ವಥ್, ಸಂಗೀತ ಹಾಗೂ ನಾಯಕಿಯ ತಂದೆ ತಾಯಿಯಾಗಿ ಹನುಮಂತೇಗೌಡ, ಸುಧಾ ಬೆಳವಾಡಿ ಸೇರಿದಂತೆ ಎಲ್ಲಾ ಪಾತ್ರಧಾರಿಗಳು ಅಚ್ಚುಕಟ್ಟಾಗಿ ಅಭಿನಯಸಿದ್ದಾರೆ.
ಇಂತಹ ಒಂದು ವಿಭಿನ್ನ ಕಥೆಯನ್ನ ಆಯ್ಕೆ ಮಾಡಿಕೊಂಡಿರುವ ನಿರ್ದೇಶಕ ಎನ್. ಆರ್. ನಂಜುಂಡೇಗೌಡ ರವರ ಧೈರ್ಯವನ್ನ ಮೆಚ್ಚಲೇಬೇಕು. ಭೂಮಿ ತಾಯಿಯ ರಕ್ಷಣೆ, ರೈತರ ಬದುಕು , ಬವಣೆ , ಸಾವಯವ ಕೃಷಿಯ ಬಗ್ಗೆ ಜಾಗೃತಿ, ಕೂಡು ಕುಟುಂಬಗಳ ಬಿರುಕು, ಪ್ರೀತಿಯಲ್ಲಿ ಒಂದು ಸಾರ್ಥಕತೆ ಹೀಗೆ ಬಹಳಷ್ಟು ವಿಚಾರವನ್ನು ಬಹಳ ಪೂರಕವಾಗಿ ವೀಕ್ಷಕರ ಮುಂದೆ ತರೆದಿಟ್ಟಿದ್ದಾರೆ.
ಮೂಲತಃ ಕೃಷಿಕರಾಗಿರುವ ನಿರ್ವಾಪಕ ಈ. ದೊಡ್ಡನಾಗಯ್ಯ ಒಂದು ಉತ್ತಮ ಚಿತ್ರವನ್ನು ಪ್ರೇಕ್ಷಕರಿಗೆ ನೀಡಿದ್ದಾರೆ. ಇನ್ನು ಶ್ರೀಧರ್.ವಿ. ಸಂಭ್ರಮ್ ಸಂಗೀತ ಮಧುರವಾಗಿ ಬಂದಿದೆ. ಅಷ್ಟೇ ಸೊಗಸಾಗಿ ಸುಂದರ ದೃಶ್ಯಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ ಛಾಯಾಗ್ರಹಕ ಹೆಚ್. ಸಿ. ವೇಣು. ಒಟ್ಟಾರೆ ಯುವಕರು , ರೈತಕುಟುಂಬ ದವರು ಈ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಬೇಕು, ಹಾಗೆಯೇ ಎಲ್ಲರು ಕೂಡ ಈ “ಕಾಸಿನಸರ” ಚಿತ್ರವನ್ನು ನೋಡಬಹುದು.