“ಕಾಸಿನ ಸರ” ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ
ಹೆಬ್ಬೆಟ್ ರಾಮಕ್ಕ ನಂತರ ನಿರ್ದೇಶಕ ಎನ್.ಆರ್. ನಂಜುಂಡೇಗೌಡ ಅವರ ಸಾರಥ್ಯದ ರೈತರ ಬದುಕು ಬವಣೆಗಳನ್ನು ಹೇಳುವ ಕಾಸಿನ ಸರ ಚಿತ್ರವು ಕಳೆದ ವಾರ ತೆರೆಕಂಡು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಜೊತೆಗೆ ಮಾದ್ಯಮಗಳು ನೀಡಿದ ಪ್ರತಿಕ್ರಿಯೆಗೆ ಕೃತಜ್ಞತೆ ಅರ್ಪಿಸಲೆಂದು ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ನಂಜುಂಡೇಗೌಡ ನಮ್ಮ ಚಿತ್ರ ನಿಮ್ಮೆಲ್ಲರ ಪ್ರೋತ್ಸಾಹದಿಂದ ಯಶಸ್ವಿಯಾಗಿ ಎರಡನೇ ವಾರಕ್ಕೆ ಕಾಲಿಟ್ಟಿದೆ. ನನ್ನ 30ವರ್ಷಗಳ ಚಿತ್ರರಂಗದ ಜೀವನದಲ್ಲಿ ಈ ಥರದ ಪ್ರತಿಕ್ರಿಯೆ ಎಂದೂ ಸಿಕ್ಕಿರಲಿಲ್ಲ.
ಕಾಸಿನಸರ ನನ್ನ ಬದುಕಿಗೆ, ಹತ್ತಿರವಾದ ಚಿತ್ರ. ರೈತ ಸಮುದಾಯಕ್ಕೆ ಮನಮುಟ್ಟುವ ಸಿನಿಮಾ. ಮೊದಲಿಂದಲೂ ನಾನು ಬಂದಂಥ ಬೇರಿನ ಬಗ್ಗೆ ಸಿನಿಮಾ ಮಾಡಬೇಕೆಂಬ ತುಡಿತವಿತ್ತು. ಶಿವಮೊಗ್ಗ ಕೃಷಿ ವಿದ್ಯಾಲಯದ ಉಪಕುಲಪತಿಗಳು ಸಿನಿಮಾನೋಡಿ ತುಂಬಾ ಚೆನ್ನಾಗಿದೆ ಎಂದು ಪ್ರತಿಕ್ರಯಿಸಿದ್ದಾರೆ.
ಜಿಕೆವಿಕೆಯಲ್ಲಿ ಎಲ್ಲರಿಗೂ ಸಿನಿಮಾ ತೋರಿಸಬೇಕೆಂಬ ಸಿದ್ದತೆ ನಡೆಯುತ್ತಿದೆ. ಈ ಸಿನಿಮಾ ಒಂದು ಸಾರ್ಥಕ ಭಾವನೆ ಮೂಡಿಸಿದೆ. ಒಂದು ಸಿನಿಮಾ ಸಮಾಜಕ್ಕೆ ಅರ್ಪಣೆಯಾದಾಗ ಆಗುವ ಖುಷಿ ಬೇರೆ ಇಲ್ಲ. ಸೋಷಿಯಲ್ ಮೀಡಿಯಾ ಎಷ್ಟೇ ಬಂದರೂ ಪತ್ರಿಕಾ ಮಾದ್ಯಮಕ್ಕೆ ಅದರದೇ ಆದ ಧ್ವನಿ ಇದ್ದೇ ಇದೆ.
ಈಗ ಸಿಕ್ಕಾಪಟ್ಟೆ ಪೈಪೋಟಿಯಿದೆ. ಒತ್ತಡಗಳ ಮಧ್ಯೆ ಕೂಡ ನಮ್ಮ ಸಿನಿಮಾಗೆ ವಿಷೇಶವಾದ ಸ್ಥಾನಮಾನ ಕೊಟ್ಟಿದ್ದಕ್ಕೆ ನಮ್ಮ ತಂಡ ಕೃತಜ್ಞವಾಗಿದೆ. ಸಿಂಗಲ್ ಸ್ಕ್ರೀನ್ ಸೇರಿ 70 ಥೇಟರುಗಳಲ್ಲಿ ನಮ್ಮ ಚಿತ್ರ ರಿಲೀಸಾಗಿತ್ತು. ಮೌತ್ ಪಬ್ಲಿಸಿಟಿಯಿಂದಲೇ ನಮ್ಮ ಚಿತ್ರ ಹೆಚ್ಚು ಪ್ರಚಾರವಾಗುತ್ತಿದೆ. ಶುಕ್ರವಾರದಿಂದ ಕೆಲ ತಾಲ್ಲೂಕುಗಳಿಗೆ ರೀಚ್ ಆಗಿದ್ದೇವೆ. ಹೆಚ್ಚು ಬೆಳೆ ಬೆಳೆಯಬೇಕೆಂಬ ಎನ್ನುವ ಧಾವಂತದಲ್ಲಿ ಭುಮಿಯನ್ನು ವಿರೂಪಗೊಳಿಸುವುದು ಕಡಿಮಡಯಾಗಬೇಕಾಗಿದೆ. ಮಂಡ್ಯದಲ್ಲಿ ಇಡೀ ರೈತಸಂಘದವರು ಇಡೀ ಪ್ರದರ್ಶನವನ್ನು ಬುಕ್ ಮಾಡಿಕೊಂಡು ನೋಡಿದ್ದಾರೆ ಎಂದು ಹೇಳಿದರು.
ನಿರ್ಮಾಪಕ ದೊಡ್ಡನಾಗಯ್ಯ ಅವರೂ ಚಿತ್ರಕ್ಕೆ ಜನ ನೀಡುತ್ತಿರುವ ಪ್ರೋತ್ಸಾಹಕ್ಕೆ ಖುಷಿ ವ್ಯಕ್ತಪಡಿಸಿ ಈಗಿನ ಕಾಲದಲ್ಲಿ ಕೂಡು ಕುಟುಂಬ, ಕೌಟುಂಬಿಕ ಸಂಬಂಧಗಳು, ಅದರ ಮಹತ್ವ ದೂರವಾಗುತ್ತಿವೆ. ನಮ್ಮ ಸಂಸ್ಕೃತಿ ಅದರ ಮೌಲ್ಯಗಳು ಮರೆಯಾಗುತ್ತಿವೆ. ನಮ್ಮ ಚಿತ್ರವನ್ನು ಬಂಗಾರದ ಮನುಷ್ಯ ಚಿತ್ರಕ್ಕೆ ಹೋಲಿಸಿ, ನಾವೆಲ್ಲ ನಿರೀಕ್ಷೆ ಮಾಡಿದ್ದಕ್ಕಿಂತ ಚೆನ್ನಾಗಿ ಜನರಿಗೆ ತಲುಪಿಸಿದ್ದೀರಿ.
ಗ್ರಾಜುಯೇಟ್ ಆದ ಹುಡುಗಿ ಹಳ್ಳಿಗೆ ಬಂದು ಕೃಷಿ ಮಾಡುವುದು ಎಲ್ಕರಿಗೂ ತಲುಪಿದೆ ಎಂದು ಹೇಳಿದರು. ಕೊಡಗಿನ ಕುವರಿ ಹರ್ಷಿಕಾ ಪೂಣಚ್ಚ ಮಾತನಾಡಿ ಸಂಪಿಗೆ ಅನ್ನೋ ಪಾತ್ರ ನನ್ನೆಲ್ಲ ಕೆಲಸಗಳಿಗೆ ಕಾರಣ. ನಮ್ಮಮ್ಮ ನನ್ನ ಯಾವುದೇ ಚಿತ್ರದಲ್ಲಾದರೂ ಒಂದಾದರೂ ನೆಗೆಟಿವ್ ಹುಡುಕುತ್ತಿದ್ದರು. ಆದರೆ ಇಡೀ ಸಿನಿಮಾವನ್ನು ಖುಷಿಯಿಂದ ನೋಡಿದ್ದಾರೆ.
ಎಲ್ಲರ ಮನೆಯಲ್ಲೂ ಇಂಥ ಹೆಣ್ಣು ಮಕ್ಕಳಿದ್ದರೆ ಅಲ್ಲಿ ಜಗಳವೇ ಇರಲ್ಲ. ಸಂಬಂಧಗಳ ಜೊತೆಗೆ ಆರ್ಗ್ಯಾನಿಕ್ ಫಾರ್ಮಿಂಗ್ ಬಗ್ಗೆ ಮೆಸೇಜಿದೆ. ಈ ಸಿನಿಮಾ ನನಗೆ ಬೇರೊಂದು ರೀತಿಯ ಅನುಭವ ನೀಡಿದ್ದಲ್ಲದೆ, ನನ್ನ ಕರಿಯರ್ ನಲ್ಲಿ ಲೈಫ್ ಲಾಂಗ್ ನೆನಪಲ್ಲುಳಿಯುತ್ತದೆ ಎಂದರು.
ನಂಜುಂಡೇಗೌಡ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ಚಿನ್ನಾರಿಮುತ್ತ ವಿಜಯ ರಾಘವೇಂದ್ರ ಒಬ್ಬ ಪ್ರಗತಿಪರ ರೈತನಾಗಿ ಕಾಣಿಸಿಕೊಂಡಿದ್ದಾರೆ. ಶ್ರೀಧರ್ ಸಂಭ್ರಮ್ ಅವರ ಸಂಗೀತದ ಹಾಡುಗಳು, ವೇಣು ಅವರ ಕ್ಯಾಮೆರಾ ವರ್ಕ್ ಈ ಚಿತ್ರಕ್ಕಿದೆ. ಈ ಚಿತ್ರದಲ್ಲಿ ಸಚಿವ ಸೋಮಶೇಖರ್ ಅವರು ಕೃಷಿ ಸಚಿವರಾಗೇ ಕಾಣಿಸಿಕೊಂಡಿದ್ದಾರೆ.