Cinisuddi Fresh Cini News 

‘ಕಾಸಿನ ಸರ’ ಚಿತ್ರಕ್ಕೆ ಚಾಲನೆ

ನೇಟಿವ್ ಕ್ರಿಯೇಷನ್ಸ್ ಅರ್ಪಿಸುವ ಗ್ರಾಮೀಣ ಸೊಗಡಿನ ಕೌಟುಂಬಿಕ ಕತೆಯನ್ನು ಒಳಗೊಂಡ “ಕಾಸಿನ ಸರ” ಚಿತ್ರದ ಚಿತ್ರೀಕರಣಕ್ಕೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಕ್ಲ್ಯಾಪ್ ಮಾಡಿ ಚಾಲನೆ ನೀಡಿದರು.

ನಗರದ ಮಲೇಶ್ವರಂನ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾತನಾಡಿದ ಸಚಿವರು, ‘ಉತ್ತಮ ಕಥೆಯನ್ನು ಒಳಗೊಂಡಿರುವ ಚಿತ್ರ ಇದಾಗಿದ್ದು ಕುಟುಂಬ ಪ್ರಧಾನ ಚಿತ್ರ.

ಸ್ನೇಹಿತರಾಗಿರುವ ದೊಡ್ಡನಾಗಯ್ಯ ಅವರಿಗೆ ಕೃಷಿ ಎಂದರೆ ತುಂಬಾ ಅಚ್ಚುಮೆಚ್ಚು. ಗ್ರಾಮೀಣ ಭಾಗದಿಂದ ಬಂದವರಾಗಿದ್ದು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡವರು ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಚಿತ್ರ ಉತ್ತಮವಾಗಿ ಮೂಡಿಬರಲಿ.

ಚಿತ್ರತಂಡಕ್ಕೆ ಯಶಸ್ಸು ಸಿಗಲಿ. “ಕಾಸಿನ ಸರ” ಎಲ್ಲಾ ಕಡೆ ಸದ್ದು ಮಾಡಲಿ, ಚಿತ್ರತಂಡಕ್ಕೆ ಶುಭವಾಗಲಿ’ ಎಂದರು.ನಾಯಕ ವಿಜಯ ವಿಜಯ್​ ರಾಘವೇಂದ್ರ ಮಾತನಾಡಿ, ‘ಇಲ್ಲಿ ವಿಷಯ ಚೆನ್ನಾಗಿದೆ. ಅದನ್ನೊಂದು ಕತೆಯ ರೂಪದಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ. ಇಲ್ಲಿ ಕಾಸಿನ ಸರ ಎನ್ನುವುದು ಬರೀ ಒಡವೆಯಲ್ಲ.

ಗ್ರಾಮೀಣ ಭಾಗದಲ್ಲಿ ಕಾಸಿನ ಸರಕ್ಕೆ ಅದರದ್ದೇ ಆದ ಮಹತ್ವವಿದೆ. ಅದು ಬರೀ ಆಡಂಬರವಲ್ಲ. ಅದಕ್ಕೊಂದು ಒಳಾರ್ಥವಿದೆ. ಅದರ ಜೊತೆಗೆ ರೈತರ ಸಮಸ್ಯೆಗಳೂ ಇವೆ. ಈ ಚಿತ್ರದಲ್ಲಿ ಸುಂದರೇಶ ಎಂಬ ರೈತ ಹೋರಾಟಗಾರನಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ವ್ಯವಸಾಯದ ಮೇಲೆ ಭರವಸೆ ಇಟ್ಟು ಬರುವ ಯುವಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದರು.

ಹರ್ಷಿಕಾ ಪೂಣಾಚ್ಛ ಮಾತನಾಡಿ, ‘ಈ ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಸಂಪಿಗೆ. ಕೃಷಿ ವಿದ್ಯಾರ್ಥಿನಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಈಗಿನ ತಲೆಮಾರಿನವರು ಓದು ಮುಗಿಸಿ ಐಟಿ ಕಂಪನಿಗಳಲ್ಲಿ, ವಿದೇಶಗಳಲ್ಲಿ ಕೆಲಸ ಹುಡುಕುತ್ತಿರುವ ಸಂದರ್ಭದಲ್ಲಿ ನಾನು ಕೃಷಿಯಲ್ಲಿ ತೊಡಗಿಸಿಕೊಳ್ಳುವ ಯುವತಿಯ ಪಾತ್ರ ಮಾಡುತ್ತಿದ್ದೇನೆ. ಇಷ್ಟು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ನಾನು ಇಂಥದ್ದೊಂದು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಇದೊಂದು ನೈಜ ಪಾತ್ರವಾಗಿದ್ದು ಅಭಿನಯಕ್ಕೆ ಸಾಕಷ್ಟು ಪ್ರಾಮುಖ್ಯತೆ ಇದೆ’ ಎಂದರು.

ನಿರ್ದೇಶಕ ನಂಜುಂಡೇಗೌಡ ಮಾತನಾಡಿ, ‘ಇಲ್ಲಿ ಕಾಸಿನ ಸರ ಬರೀ ಆಭರಣವಲ್ಲ. ಅದಕ್ಕೆ ಮೌಲ್ಯವಿದೆ. ಅದಕ್ಕೊಂದು ಪರಂಪರೆ, ಸಂಪ್ರದಾಯವಿದೆ. ಅದೇ ರೀತಿ ಕೃಷಿಗೂ ತನ್ನದೇ ಆದ ಪರಂಪರೆ ಸಂಪ್ರದಾಯವಿದೆ. ಅದನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡುತ್ತಿದ್ದೇವೆ.

ಇದೊಂದು ನಿಜಕ್ಕೂ ವಿಭಿನ್ನವಾದ ಚಿತ್ರ. ಕೃಷಿ ಒಂದು ಕಡೆ ತಾಂತ್ರಿಕವಾಗಿ ಆಧುನಿಕರಣಗೊಳ್ಳುತ್ತಿದೆ. ಇನ್ನೊಂದು ಕಡೆ ಕೃಷಿಯನ್ನು ಅವಲಂಬಿಸಿರುವ ಜನಸಮೂಹ ಆತಂಕಕ್ಕೆ ಒಳಗಾಗಿದೆ. ಈ ವಿಷಯಗಳನ್ನು ಸೂಕ್ಷ$್ಮವಾಗಿ ಹೇಳುವ ಪ್ರಯತ್ನ ಇದು. ಗ್ರಾಮೀಣ ಭಾಗದ ಕಥೆಯಾದ್ದರಿಂದ ಚೆನ್ನಪಟ್ಟಣ್ಣ, ಮಳವಳ್ಳಿ ಮುಂತಾದ ಕಡೆ 40 ದಿನಗಳ ಚಿತ್ರೀಕರಣ ನಡೆಯಲಿದೆ’ ಎಂದರು.

ನಿರ್ಮಾಪಕರಾದ ದೊಡ್ಡನಾಗಯ್ಯ ಮಾತನಾಡಿ, ‘ಇಂದಿನ ದಿನಗಳಲ್ಲಿ ಕೌಟುಂಬಿಕ ಸಂಬಂಧಗಳು ದೂರವಾಗುತ್ತಿವೆ. ನಮ್ಮ ಸಂಸ್ಕೃತಿ ಮರೆಯಾಗುತ್ತಿದೆ. ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಹೀಗಾಗಿ ಇವುಗಳ ಮಹತ್ವವನ್ನು ಸಾರುವ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಿತ್ರಕತೆಗಾಗಿ ಹುಡುಕಾಡಿದಾಗ ನಂಜುಡೇಗೌಡ ಅವರು “ಕಾಸಿನ ಸರ” ಕತೆಯನ್ನು ಹೇಳಿದರು. ತುಂಬಾ ಇಷ್ಟವಾಯಿತು. ಚಿಕ್ಕಬಜೆಟ್ ನ ಚಿತ್ರಗಳ ಮೂಲಕ ಹೊಸ ಪ್ರತಿಭೆಗಳ ಅವಕಾಶ ನೀಡುವುದರ ಜೊತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಬೇಕು ಎಂಬ ಅಭಿಲಾಷೆಯೊಂದಿಗೆ ಚಿತ್ರ ನಿರ್ಮಿಸಲಾಗುತ್ತಿದೆ. ಚಿತ್ರೀಕರಣ ಆರಂಭವಾಗಿದೆ. ಚಿತ್ರದ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯವಿದೆ’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಛಾಯಗ್ರಾಹಕ ವೇಣುಗೋಪಾಲ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮಾ.ಹರೀಶ್, ಹಿರಿಯ ನಿರ್ಮಾಪಕರಾದ ಚಿನ್ನೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related posts