Cini Reviews Cinisuddi Fresh Cini News 

ಶಿಕ್ಷಣ ಶಿಕ್ಷೆ ಆಗಬಾರದು ಎಂದ ಕನ್ನಡ ಮೇಷ್ಟ್ರು ( ಚಿತ್ರ ವಿಮರ್ಶೆ – ರೇಟಿಂಗ್ : 3.5/5 )

ಚಿತ್ರ : ಕಾಳಿದಾಸ ಕನ್ನಡ ಮೇಷ್ಟ್ರು
ನಿರ್ದೇಶಕ : ಕವಿರಾಜ್
ನಿರ್ಮಾಪಕ : ಉದಯ್ ಕುಮಾರ್
ಸಂಗೀತ : ಗುರುಕಿರಣ್ ಛಾಯಾಗ್ರಾಹಕ : ಗುಂಡ್ಲುಪೇಟೆ ಸುರೇಶ್
ತಾರಾಗಣ : ಜಗ್ಗೇಶ್ , ಮೇಘನಾ ಗಾಂವ್ಕರ್ , ಮಾ. ಆರ್ಯ , ಮಾ. ಓಂ ,
ತಬಲಾನಾಣಿ , ಅಂಬಿಕಾ, ನಾಗಾಭರಣ, ಉಷಾ ಭಂಡಾರಿ ಹಾಗೂ ಮುಂತಾದವರು…

ಪ್ರಸ್ತುತ ಸಮಾಜದಲ್ಲಿ ಮಕ್ಕಳಿಗೆ ಶಿಕ್ಷಣ ಶಿಕ್ಷೆ ಆಗಬಾರದು ಎಂಬ ವಿಚಾರವನ್ನು ಬಹಳ ಸೂಕ್ಷ್ಮವಾಗಿ ತೆರೆದಿಡುವುದರ ಜೊತೆಗೆ ಖಾಸಗಿ ಶಾಲೆಗಳ ಹಗಲು ದರೋಡೆ ಒಂದು ದೊಡ್ಡ ದಂಧೆಯಾಗಿ ನಡೆಯುತ್ತಿದ್ದು , ತಂದೆ ತಾಯಂದಿರ ಪರದಾಟ, ಸರ್ಕಾರಿ ಶಾಲೆಗಳ ಸ್ಥಿತಿ ಗತಿ , ವ್ಯವಸ್ಥೆಯ ಬಗ್ಗೆ ಹೋರಾಟ ಹೀಗೆ ಇಡೀ ಶಿಕ್ಷಣ ವ್ಯವಸ್ಥೆ ಯಾವ ನಿಟ್ಟಿನತ್ತ ತಲುಪಿದೆ ಎಂಬ ಸಂಪೂರ್ಣ ಮಿಶ್ರಣದ ಚಿತ್ರವಾಗಿ ಈ ವಾರ ಬೆಳ್ಳಿಪರದೆ ಮೇಲೆ ಬಂದಿದೆ ಕಾಳಿದಾಸ ಕನ್ನಡ ಮೇಷ್ಟ.

ಚಿತ್ರದ ಕಥಾ ಹಂದರದ ಪ್ರಕಾರ ನಾಯಕ ಕಾಳಿದಾಸ ( ಜಗ್ಗೇಶ್) ಸರ್ಕಾರಿ ಶಾಲೆಯ ಕನ್ನಡ ಮೇಷ್ಟ್ರಾಗಿ 1 ರಿಂದ 7 ನೇ ತರಗತಿಯವರೆಗೂ ಒಂದೇ ರೂಮ್ ನಲ್ಲಿ ಮಕ್ಕಳಿಗೆ ಅಚ್ಚುಮೆಚ್ಚಿನ ಶಿಕ್ಷಕನಾಗಿ ಅಳಿವಿನ ಅಂಚಿನಲ್ಲಿರುವ ಶಾಲೆಯನ್ನು ಉನ್ನತ ಮಟ್ಟಕ್ಕೆ ತರುವ ಪ್ರಯತ್ನದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುತ್ತಾನೆ.

ಇದರ ನಡುವೆ ಬಡ ಮೇಷ್ಟ್ರು ವಿನ ಬದುಕು ತಾನು ಪ್ರೀತಿಸಿ ಮದುವೆಯಾದ ಪತ್ನಿ ಸುಮಾ (ಮೇಘನಾ ಗಾಂವ್ಕರ್) ಇವರಿಗೆ ಒಂದು ಮುದ್ದಾದ ಮಗು. ತಾಯಿಗೆ ಮಗನನ್ನು ಹೈಫೈ ಶಾಲೆಯಲ್ಲಿ ಸೇರಿಸಬೇಕು, ಸ್ಟೇಟಸ್ ಮೈಂಟೇನ್ ಮಾಡಬೇಕೆಂಬ ಹಂಬಲ. ಆದರೆ ತಂದೆಗೆ ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕು ಎಂಬ ಮನಸ್ಥಿತಿ.

ಸರ್ಕಾರಿ ಶಾಲೆಯಲ್ಲಿ ಮಗನನ್ನು ಓದಿಸಬೇಕೆಂಬ ಆಸೆ. ಇದೊಂದು ರೀತಿ ಹಗ್ಗ ಜಗ್ಗಾಟದ ಬದುಕು. ತನ್ನ ಪ್ರೀತಿಯ ಹೆಂಡತಿಗೆ ಬುದ್ದಿ ಹೇಳಲು ಆಗದೆ , ಮಧ್ಯಮ ವರ್ಗದ ಬಡಮೇಷ್ಟ್ರು ಹೆಂಡತಿಯ ಮೊಂಡುತನಕ್ಕೆ ಸೋತು , ಗೊಡ್ಡ ಬೆದರಿಕೆಗೆ ಹೆದರಿ ಮಗನನ್ನು ಇಂಗ್ಲಿಷ್ ಶಾಲೆಗೆ ಸೇರಿಸಲು ಪಡುವ ಕಷ್ಟ , ಕಾರ್ಪಣ್ಯಗಳು ಮಗನ ಅಡ್ಮಿಷನ್ ಗೆ ಅಪ್ಲಿಕೇಷನ್ ತರಲು ಪರದಾಟ , ಮಗನನ್ನು ಶಾಲೆಗೆ ಸೇರಿಸಲು ತಂದೆ ಎದುರಿಸುವ ಸಂದರ್ಶನ , ನಂತರ ಖಾಸಗಿ ಶಾಲೆಯ ಡೊನೇಷನ್ ಭೂತಗಳಿಗೆ ಹಣವನ್ನು ಒಗ್ಗೂಡಿಸುವ ಹಾದಿ , ನಂತರ ಹೈಫೈ ಶಾಲೆಗಳ ವ್ಯವಸ್ಥೆಗೆ ಹೊಂದಿಕೊಳ್ಳಲು ಆಗುವ ಪರದಾಟ , ಮಕ್ಕಳಿಗೆ ಒತ್ತಡದಲ್ಲಿ ಶಿಕ್ಷಣದ ಕಿರುಕುಳ, ಇದರಿಂದ ಆಗುವ ಸಮಸ್ಯೆಗಳು ಮುಂದಾಗುವ ತೊಂದರೆ , ಅನಾಹುತಗಳು ಹಾಗೆಯೇ ಸರ್ಕಾರಿ ಶಾಲೆಯ ಬದುಕು, ಬವಣೆ ಮುಚ್ಚುವ ಹಂತಕ್ಕೆ ಬಂದಾಗ ಎದುರಾಗುವ ಸಮಸ್ಯೆಗಳು ಇವೆಲ್ಲವನ್ನು ಒಬ್ಬ ಸರಕಾರಿ ಮೇಷ್ಟ್ರು ಯಾವ ರೀತಿ ಎದುರಿಸುತ್ತಾನೆ… ತನ್ನ ನಿಲುವು ಏನಾಗಿರುತ್ತದೆ… ತನ್ನ ಪುಟ್ಟ ಸಂಸಾರದ ಸ್ಥಿತಿಗತಿ ಪಾಡು…
ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ಬೇಕೇ… ಬೇಡವೇ… ಎಂಬ ಎಲ್ಲಾ ಅಂಶವನ್ನು ನೀವು ನೋಡಬೇಕಾದರೆ ಒಮ್ಮೆ ಕಾಳಿದಾಸ ಕನ್ನಡ ಮೇಷ್ಟ್ರ ಚಿತ್ರವನ್ನು ವೀಕ್ಷಿಸಬೇಕು.

ಇನ್ನು ಮಕ್ಕಳ ಕನಸು ಹೇಗಿರುತ್ತದೆ, ಶಿಕ್ಷಣ ಅಂದರೆ ಅದು ಹೇಗಿರಬೇಕು, ಪೋಷಕರು ಮಕ್ಕಳ ಮೇಲೆ ಯಾಕೆ ಒತ್ತಡ ಹಾಕಬೇಕು, ಸರ್ಕಾರಿ ಶಾಲೆ ಏಕೆ ಬೇಕು, ಇವೆರಲ್ಲದ ಮಧ್ಯೆ ರಾಜಕೀಯ ಲಾಭ ಹೇಗಿರುತ್ತದೆ ಎಂಬ ಹಲವಾರು ಅಂಶಗಳನ್ನು ಇಟ್ಟುಕೊಂಡು ಈ ಚಿತ್ರದ ಮೂಲಕ ಸೂಕ್ಷ್ಮವಾಗಿ ಕಥೆಯನ್ನು ತೆರೆದಿಟ್ಟಿದ್ದಾರೆ ನಿರ್ದೇಶಕ ಕವಿರಾಜ್ .

ಈ ಶಿಕ್ಷಣ ವ್ಯವಸ್ಥೆಯ ವಿಚಾರ ಹೊಸದೇನೋ ಅನ್ನಿಸದಿದ್ದರೂ ಚಿತ್ರದ ನಿರೂಪಣಾ ಶೈಲಿಯಲ್ಲಿ ನೈಜ ನಟನೆ ಆಧಾರವಾಗಿ ಇಟ್ಟುಕೊಂಡು ಒಂದು ಕುಟುಂಬದ ಎಳೆಯಾಗಿ ಆರಂಭದಿಂದ ಅಂತ್ಯದವರಗೆ ಹಾಸ್ಯ ಮಿಶ್ರಣದೊಂದಿಗೆ ಸಂದೇಶವನ್ನು ಹೇಳಿರುವ ರೀತಿ ಮೆಚ್ಚುವಂಥದ್ದು , ಚಿತ್ರದ ಓಟ ಮತ್ತಷ್ಟು ವೇಗವಾಗಿದ್ದರೆ ಚೆನ್ನಾಗಿರುತ್ತಿತ್ತು , ಸಮಾನ ಶಿಕ್ಷಣ ಜಾರಿ ಅತ್ಯಗತ್ಯ ಎನ್ನುವುದನ್ನು ಹಿರಿಯ ಕಿರಿಯರೆಲ್ಲರಿಗೂ ಸುಲಭವಾಗಿ ಮನದಟ್ಟು ಮಾಡಿಸಿದ್ದಾರೆ.

ಇನ್ನು ನವರಸ ನಾಯಕ ಜಗ್ಗೇಶ್ ಕನ್ನಡ ಮೇಷ್ಟ್ರ ಯಾಗಿ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಕನ್ನಡ ಭಾಷೆಯ ಮೇಲಿನ ಪ್ರೀತಿ , ಶಕ್ತಿಯನ್ನು ಸರ್ವರಿಗೂ ಮನಮುಟ್ಟುವಂತೆ ತಮ್ಮ ಪಾತ್ರದ ಮೂಲಕ ತೆರೆದಿಟ್ಟಿದ್ದಾರೆ. ಖಾಸಗಿ ಶಾಲೆಯ ಶಿಕ್ಷಣ ವ್ಯವಸ್ಥೆಯ ಹಗಲು ದರೋಡೆಯ ವಿರುದ್ಧ ಹೋರಾಡುವ ನಾಯಕನಾಗಿ ಎಲ್ಲರ ಗಮನವನ್ನು ಸೆಳೆಯುತ್ತಾರೆ. ಇನ್ನು ಮುದ್ದಾಗಿ ಕಾಣುವ ಮೇಘನಾ ಗಾಂವಕರ್ ಪ್ರೀತಿಯ ಹೆಂಡತಿಯಾಗಿ , ಮಗುವಿನ ತಾಯಿಯಾಗಿ ಅಚ್ಚುಕಟ್ಟಾಗಿ ತಮ್ಮ ಪಾತ್ರ ಪೋಷಣೆಯನ್ನು ಮಾಡಿದ್ದಾರೆ.

ಉಳಿದಂತೆ ಅಭಿನಯಿಸಿರುವ ಪುಟ್ಟ ಮಕ್ಕಳಾದ ಆರ್ಯ ಹಾಗೂ ಓo , ಹಿರಿಯ ನಟ ಜೈಜಗದೀಶ್ , ತಬಲಾ ನಾಣಿ , ಹಿರಿಯ ನಟಿ ಅಂಬಿಕಾ ಸೇರಿದಂತೆ ಎಲ್ಲ ಪಾತ್ರಗಳು ಅಚ್ಚುಕಟ್ಟಾಗಿ ತಮ್ಮ ತಮ್ಮ ಪಾತ್ರಗಳನ್ನು ನಿಭಾಯಿಸಿದ್ದಾರೆ. ಹಾಗೆಯೇ ಸಂಗೀತ ನಿರ್ದೇಶಕ ಗುರುಕಿರಣ್ ಸುಮಧುರ ರಾಗ ಗಮನ ಸೆಳೆಯುತ್ತದೆ. ಗುಂಡ್ಲುಪೇಟೆ ಸುರೇಶ್ ಕ್ಯಾಮೆರಾ ಚಳಕ ಅಚ್ಚುಕಟ್ಟಾಗಿದೆ.

ಈ ಚಿತ್ರದ ಕಥಾ ಸಾರಾಂಶವೇ ವಿಶೇಷವಾಗಿದ್ದು , ಶಿಕ್ಷಣ ವ್ಯವಸ್ಥೆ , ತಂದೆ ತಾಯಂದಿರ ಜವಾಬ್ದಾರಿ , ಮಕ್ಕಳ ಭವಿಷ್ಯದ ಕನಸು , ರಾಜಕಾರಣಿಗಳ ಒಳಮರ್ಮ ಹೀಗೆ ಇಡೀ ಸಮಾಜದ ಒಂದು ಶಿಕ್ಷಣ ವ್ಯವಸ್ಥೆ ಯಾವ ರೂಪ ಪಡೆದುಕೊಂಡಿದೆ. ಇದಕ್ಕೆ ಪರಿಹಾರ ಇದೆಯೇ… ಇಲ್ಲವೇ… ಎಂಬುದರ ಸೂಕ್ಷ್ಮ ವಿಚಾರವನ್ನು ಹೇಳಹೊರಟಿರುವ ಇಡೀ ತಂಡದ ಶ್ರಮ ಮೆಚ್ಚಲೇಬೇಕು. ಒಟ್ಟಾರೆ ಇಡೀ ಕುಟುಂಬ ಸಮೇತ ಕುಳಿತು ನೋಡಬಹುದಾದ ಒಂದು ಉತ್ತಮ ಚಿತ್ರ ಇದಾಗಿದೆ.

Share This With Your Friends

Related posts