ಸಂಜೀವಿನಿ ಶಕ್ತಿಯ ಹುಡುಕಾಟದಸುತ್ತ ಕರ್ಮಣ್ಯೇ ವಾದಿಕಾರಸ್ತೇ (ಚಿತ್ರವಿಮರ್ಶೆ -ರೇಟಿಂಗ್ : 3.5/5
ಚಿತ್ರ : ಕರ್ಮಣ್ಯೇ ವಾದಿಕಾರಸ್ತೇ
ನಿರ್ದೇಶಕ : ಶ್ರೀಹರಿ ಆನಂದ್
ನಿರ್ಮಾಪಕ : ಡಾ.ರಮೇಶ್ ರಾಮಯ್ಯ
ಸಂಗೀತ : ರುತ್ವಿಕ್ ಮುರುಳೀಧರ್
ಛಾಯಾಗ್ರಹಕ : ಉದಯಲೀಲಾ
ತಾರಾಗಣ : ಪ್ರತೀಕ್ ಸುಬ್ರಮಣ್ಯ, ದಿವ್ಯಾ ಗೌಡ, ನಾಟ್ಯರoಗ, ಅಭಿಷೇಕ್ ಶೆಟ್ಟಿ, ಉಗ್ರo ಮoಜು , ಸೂರ್ಯಕಾಂತ ಗುಣಕಿಮಠ ಹಾಗೂ ಮುಂತಾದವರು…
ರೇಟಿಂಗ್ : 3.5/5
ಪ್ರತಿಯೊಂದು ಜೀವರಾಶಿಯೂ ನಮ್ಮ ನೈಸರ್ಗಿಕ ಜೀವಿಸುವುದಕ್ಕೆ ಶಕ್ತಿಯುತ ಔಷಧಿ ಗುಣಗಳನ್ನು ನೀಡುತ್ತಾ ಬಂದಿದೆ.ಅದು ಇಂದಿನದಲ್ಲ ಅನಾದಿ ಕಾಲದಿಂದಲೂ ನಮಗೆ ಅರಿವಿಗೆ ಬಾರದಂತೆ ಅದೆಷ್ಟೋ ಶಕ್ತಿಗಳು ನಮ್ಮ ಜೊತೆ ಸಾಗುತ್ತಾ ಬಂದಿದೆ. ಈ ದೈವದತ್ತ ಕೊಡುಗೆ ಬಗ್ಗೆ ಬಹಳಷ್ಟು ಸಂಶೋಧನೆಗಳು ಇಂದಿಗೂ ನಡೆಯುತ್ತಾ ಬಂದಿದೆ.
ಆದರೆ ಮಹಾಭಾರತದಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಹೇಳುವ ಮಾತಿನಂತೆ ನಿನ್ನ ಕೆಲಸ ನೀನು ಮಾಡು…ಆದರೆ ಕರ್ಮ ಫಲಗಳನ್ನು ನನಗೆ ಬಿಟ್ಟುಬಿಡು ಎನ್ನುವಂತೆ ಚಿತ್ರದ ಕಥಾ ಹಂದರವೂ ಅಷ್ಟೇ ಸೂಕ್ಷ್ಮತೆಯಿಂದ ಸಾಗಿದೆ. ವೇದ, ಪುರಾಣ, ಆಧ್ಯಾತ್ಮಿಕ ,ಜ್ಯೋತಿಷಿಗಳ ಆಚಾರ ವಿಚಾರಗಳ ಬಗ್ಗೆ ನಂಬುವ ಮನುಷ್ಯರ ನಡುವೆ ವೈಜ್ಞಾನಿಕವಾಗಿ ಪುರಾತತ್ವ ಶಾಸ್ತ್ರದ ಸಂಶೋಧನೆಯ ಮೂಲ ಅಂಶಗಳನ್ನು ಬಹಳ ಅಚ್ಚುಕಟ್ಟಾಗಿ ಕೊಂಡಿಯಂತೆ ಒಂದು ಕೊಲೆಯ ಸುತ್ತ ನಿಗೂಢ ರೀತಿ ಭೇದಿಸುವ ತಂತ್ರಗಾರಿಕೆ ಮೂಲಕ ಹೊರಬಂದಿರುವ ಚಿತ್ರವೇ ಕರ್ಮಣ್ಯೇ ವಾಧಿಕಾರಸ್ತೇ.
ಯಾವುದೆ ವಿಚಾರವನ್ನಾದರೂ ಸೂಕ್ಷ್ಮವಾಗಿ ಗ್ರಹಿಸಿ ಅದರ ಮೂಲ ಹುಡುಕುವ ಬುದ್ಧಿವಂತಿಕೆ ಬಳಸಿಕೊಳ್ಳುವ ಬಾಲಕ ಶಾಲೆಯಿಂದಲೂ ತನ್ನ ಬದುಕಿನ ದಿಕ್ಕನ್ನೇ ಬದಲಿಸಬಲ್ಲೇ ಎನ್ನುತ್ತ ಸಾಗುವ ನಾಯಕ ದೇವಕಿನಂದ ಶಾಸ್ತ್ರಿ( ಪ್ರತೀಕ್ ಸುಬ್ರಹ್ಮಣ್ಯ) ಮನುಷ್ಯನ ಭಾವನೆಗಳಿಗೆ ಬೆಲೆಕೊಡದೆ ಜಾತಕ, ಭವಿಷ್ಯ , ಆಧ್ಯಾತ್ಮವನ್ನು ನಂಬುವ ವ್ಯಕ್ತಿ , ಇನ್ನು ಈ ಚಿತ್ರದ ನಾಯಕಿ ಜಾಹ್ನವಿ (ದಿವ್ಯಾ ಗೌಡ) ಭಾವನೆಗಳಿಗೆ ಹೆಚ್ಚು ಬೆಲೆಕೊಡುವ ಆರ್ಕಿಯಾಲಾಜಿಕಲ್ ಸ್ಟೂಡೆಂಟ್. ಆಗಾಗ ಇವರಿಬ್ಬರ ಭೇಟಿ ಗೊಂದಲದ ಗೂಡಾಗಿರುತ್ತದೆ.
ಇದರ ನಡುವೆ ನಾಯಕಿಯನ್ನ ತನ್ನ ಸ್ವಂತ ಮಗಳಂತೆ ನೋಡಿಕೊಳ್ಳುವ ಗುರು ಪುರಾತತ್ವ ಇಲಾಖೆಯ ತಜ್ಞ ಡಾ .ಸೂರ್ಯಕಾಂತ್ ಗುಣಕಿಮಠ ಸಾವು ಎಲ್ಲರ ಗಮನದ ಕೇಂದ್ರವಾಗುತ್ತದೆ. ಇದು ಹೃದಯಾಘಾತದ ಸಾವು ಎಂದು ವರದಿ ಬಂದರೂ ನಾಯಕಿಗೆ ಕೊಲೆಯೋ ಅಥವಾ ಸಹಜ ಸಾವು ಎಂಬ ಪ್ರಶ್ನೆ ಮೂಡುತ್ತದೆ. ಯಾಕೆಂದರೆ ಇದಕ್ಕೆ ಒಂದು ಕಾರಣ ಇದೆ. ಗುರುಗಳು ನಾಯಕಿಗೆ ಕೊಟ್ಟ ಆ ವಸ್ತುವೇ ಮೂಲ.
ಅದೊಂದು ಪ್ರಜಲ್ ಬಾಕ್ಸ್ ಆಗಿರುತ್ತದೆ. ಮತ್ತೊಂದೆಡೆ ನಾಯಕ ನಾಯಕಿಯ ಜಗಳವೇ ಮುಂದೆ ಇವರಿಬ್ಬರ ಸ್ನೇಹ, ಪ್ರೀತಿಗೆ ದಾರಿ ಮಾಡಿಕೊಡುತ್ತದೆ. ಮುಂದೆ ಸೂರ್ಯಕಾಂತ್ ಗುಣಕಿಮಠ ಅವರ ಸಾವಿನ ಪ್ರಕರಣದಲ್ಲಿ ರಾಜಕೀಯ ತಂತ್ರದೊಂದಿಗೆ ಪೊಲೀಸ್ ತನಿಖೆ ಆರಂಭ.
ಈ ಜಾಡನ್ನು ಹಿಡಿಯಲು ಹೊರಟ ನಾಯಕ, ನಾಯಕಿಗೆ ಹಲವಾರು ಆಶ್ಚರ್ಯಗಳು ಅಲ್ಲಿ ಕಾಡಿರುತ್ತವೆ. ಚೈನಾದಿಂದ ಬಂದ ಹಾಂಗ್ಕಾಂಗ್ ಯೂನಿವರ್ಸಿಟಿ ಸ್ಟೂಡೆಂಟ್ (ಟೆಸ್ರಿoಗ್ ಟೆಸ್ಮಡಾ) ಡೋಲ್ಮಾ ಎಂಬ ಯುವತಿಯೂ ಗುಣಕಿಮಠ ಬಳಿ ಇದ್ದ ಬಾಕ್ಸ್ ಗಾಗಿ ಹುಡುಕಾಡುತ್ತಿರುತ್ತಾಳೆ.
ಆ ಮೂಲ ಮಣಿಯ ಬಾಕ್ಸ್ ನೂರಾರು ವರ್ಷಗಳ ಹಿಂದೆ ಚೈನಾ ದೇಶದ ರಾಜ ಮನೆತನ ಹಾಗೂ ದೇಶದಾದ್ಯಂತ ಇರುವ ಮೂಲ ಔಷಧಿ ಗುಣಗಳ ಸಂಗ್ರಹದ ಕಥಾನಕ ತೆರೆದುಕೊಳ್ಳುತ್ತದೆ. ಪ್ರಸ್ತುತ ಬಾಕ್ಸ್ ನಲ್ಲಿದ್ದ ನಕ್ಷೆಯ ಮೂಲಕ ಮೂಲ ಮೃತ್ಯು ಸಂಜೀವಿನಿಯನ್ನು ಹುಡುಕಿಕೊಂಡು ನಾಯಕ, ನಾಯಕಿ ಹಾಗೂ ಚೈನಾದಿಂದ ಬಂದ ಡೋಲ್ಮಾ ಬ್ರಹ್ಮಗಿರಿ ಬೆಟ್ಟಕ್ಕೆ ಹೊರಡುತ್ತಾರೆ.
ಸಾವಿರಾರು ಕೋಟಿ ಬೆಲೆಬಾಳುವ ಒಂದು ಅತ್ಯಮೂಲ್ಯವಾದ ಮೃತ್ಯುಸಂಜೀವಿನಿ ಮಣಿ ಅದಾಗಿದ್ದು,ಇದಕ್ಕಾಗಿದೊಡ್ಡ ಜಾಲವೇ ತಂತ್ರವನ್ನು ರೂಪಿಸಿರುತ್ತಿದೆ.
ಸಂಜೀವಿನಿ ಕಲ್ಲು ಸಿಗುತ್ತಾ…
ಗುಣಕಿಮಠ ಕೊಲೆಯ ಮಾಡಿದು ಯಾರು…
ರಾಜಕೀಯ ಹಾಗೂ ಪೊಲೀಸ್ ಕೈವಾಡ ಇದೆಯಾ…
ಚೈನಾಗೆ ಸೇರುತ್ತಾ ಸಂಜೀವಿನಿ…
ಇಂಥ ಹಲವು ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ನಿವೆಲ್ಲರೂ ಒಮ್ಮೆ ಈ ಕರ್ಮಣ್ಯೇ ವಾಧಿಕಾರಸ್ತೇ ಚಿತ್ರವನ್ನು ನೋಡಲೇಬೇಕು.
ಒಂದು ವಿಭಿನ್ನ ಕಥೆಯನ್ನು ಬಹಳ ಸೂಕ್ಷ್ಮವಾಗಿ ತೆರೆಮೇಲೆ ತರುವ ಪ್ರಯತ್ನ ಮಾಡಿರುವ ನಿರ್ದೇಶಕ ಶ್ರೀಹರಿ ಆನಂದ್ ಅವರ ಆಲೋಚನೆ ಉತ್ತಮವಾಗಿದೆ. ಕ್ರೈಮ್, ಥ್ರಿಲ್ಲರ್ ಹಾಗೂ ಪುರಾತತ್ವ ಸಂಶೋಧನದ ಸಂಜೀವಿನಿ ಔಷಧಿ ಗುಣಗಳ ಬಗ್ಗೆ ಚಿತ್ರ ವೀಕ್ಷಕರಿಗೆ ಸಖತ್ ಥ್ರಿಲ್ಲಿಂಗ್ ಅನುಭವ ನೀಡುವಂತೆ ಮೊದಲ ನಿರ್ದೇಶನಲೇ ಗಮನ ಸೆಳೆಯುತ್ತಾರೆ. ಮೃತ್ಯು ಸಂಜೀವಿನಿ ಮಣಿಯನ್ನು ಹುಡುಕುವ ಪ್ರಯತ್ನದಲ್ಲಿ ಸಾಗುವ ಕಥೆ ಮತ್ತಷ್ಟು ವೇಗ ಮಾಡಬಹುದು.
ಹೊಸತನದ ಕಥೆಗೆ ನಿರ್ಮಾಪಕರು ಸಾಥ್ ನೀಡಿರುವುದು ಮೆಚ್ಚಲೇಬೇಕು. ನಾಯಕ ಪ್ರತೀಕ್ ಸುಬ್ರಮಣ್ಯ ತಮ್ಮ ಪಾತ್ರಕ್ಕೆ ಇನ್ನಷ್ಟು ತಾಲೀಮು ಅಗತ್ಯ ಅನಿಸುತ್ತದೆ. ಆದರೂ ಚಿತ್ರದ ಓಟಕ್ಕೆ ಪೂರಕವಾಗಿ ಸಾಥ್ ನೀಡಿದ್ದಾರೆ. ನಾಯಕಿ ದಿವ್ಯಾಗೌಡ ನೋಡಲು ಮುದ್ದಾಗಿದ್ದು, ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಬಹುದಿತ್ತು. ಇನ್ನು ಉತ್ತರ ಬಾರತ ಮೂಲದ ಮಾಡೆಲ್ ಸಿರಿಸಿಂದ ತನ್ನ ಡೋಲ್ಮಾ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಪೊಲೀಸ್ ಇನ್ಸ್ ಪೆಕ್ಟರ್ ಪಾತ್ರದಲ್ಲಿ ಉಗ್ರಂ ಮಂಜು ಗಮನ ಸೆಳೆಯುತ್ತಾರೆ.
ಉಳಿದಂತೆ ಬರುವ ಹಾಸ್ಯ ಪಾತ್ರದಲ್ಲಿ ನಾಟ್ಯರಂಗ, ಅಭಿಷೇಕ್ ಶೆಟ್ಟಿ ಹಾಗೂ ಬಹುತೇಕ ಪಾತ್ರಧಾರಿಗಳು ಚಿತ್ರದ ಪಾತ್ರಕ್ಕೆ ಜೀವ ತುಂಬಿದ್ದಾರೆ. ದಾಂಡೇಲಿಯ ಅರಣ್ಯ ಪ್ರದೇಶ, ಮಲ್ಪೆಯ ತೀರವನ್ನು ಸುಂದರವಾಗಿ ಉದಯ ಲೀಲಾ ತಮ್ಮ ಕ್ಯಾಮೆರಾ ಕೈಚಳಕದ ಮೂಲಕ ತೋರಿಸಿದರೆ. ಇನ್ನೂ ರುತ್ವಿಕ್ ಮುರುಳೀಧರ್ ಅವರ ಹಿನ್ನೆಲೆ ಸಂಗೀತ ಹೆಚ್ಚು ಗಮನ ಸೆಳೆಯುತ್ತದೆ. ಒಟ್ಟಾರೆ ವಿಭಿನ್ನ , ವಿಶಿಷ್ಟ ಶೈಲಿಯ ಚಿತ್ರವು ಪ್ರೇಕ್ಷಕರ ಮುಂದೆ ನೋಡಬಹುದಾಗಿದೆ.