Cinisuddi Fresh Cini News 

ಸೆನ್ಸಾರ್ ಅಂಗಳಕ್ಕೆ “ಕ್ರಾಂತಿವೀರ”

ಭಾರತ ಮಾತೆ ತನ್ನ ಮಡಿಲಲ್ಲಿ ದೇಶಪ್ರೇಮಿಗಳು , ವೀರಯೋಧರು, ಹೋರಾಟಗಾರರನ್ನ ತುಂಬಿಕೊಂಡಿದೆ. ಸ್ವಾತಂತ್ರ ಸಂಗ್ರಾಮದ ಸಮಯದಲ್ಲಿ ಧುಮುಕಿದ ಅತ್ಯಂತ ಕಿರಿಯ ವಯಸಿನ ಕ್ರಾಂತಿಕಾರಿ ಮತ್ತು ಸ್ವಾತಂತ್ರ ಹೋರಾಟಗಾರ ಎನಿಸಿಕೊಂಡ ಭಗತ್‍ಸಿಂಗ್ ಅವರ ಜೀವನಚರಿತ್ರೆ ಕುರಿತಾದ ಚಲನಚಿತ್ರ “ಕ್ರಾಂತಿವೀರ” ನಿರ್ಮಾಣವಾಗುತ್ತಿದೆ.

ದಕ್ಷಿಣ ಭಾರತದಲ್ಲೇ ಮೊಟ್ಟ ಮೊದಲಬಾರಿಗೆ ಈ ಯುವ ಕ್ರಾಂತಿಕಾರಿಯ ಬಯೋಪಿಕ್ ಬೆಳ್ಳಿತೆರೆ ಮೇಲೆ ಬರುತ್ತಿದೆ. ಯುವ ನಟ ಅಜಿತ್ ಜಯರಾಜ್ ಈ ಚಿತ್ರದಲ್ಲಿ ಕ್ರಾಂತಿವೀರ ಭಗತ್‍ಸಿಂಗ್ ಆಗಿ ಕಾಣಿಸಿಕೊಂಡಿದ್ದಾರೆ. ಇಂಥ ಮಹಾನ್ ವ್ಯಕ್ತಿಯ ಚಿತ್ರವನ್ನು ಯುವ ನಿರ್ದೇಶಕ ಆದತ್ ಸಾರಥ್ಯದಲ್ಲಿ ಸಿದ್ಧವಾಗುತ್ತಿದೆ.

ಒಂದಷ್ಟು ಕಿರುಚಿತ್ರಗಳು ಹಾಗೂ ಚಲನಚಿತ್ರ ನಿರ್ದೇಶನ ಮಾಡುವ ಮೂಲಕ ಗುರುತಿಸಿಕೊಂಡಿರುವ ಆದತ್ ಇದೇ ಮೊದಲಬಾರಿಗೆ ಒಬ್ಬ ಯುವ ದೇಶಭಕ್ತನ ಬಯೋಪಿಕ್ ಮಾಡುವ ಸಾಹಸಕ್ಕೆ ಕೈಹಾಕಿದ್ದಾರೆ. ಸದ್ಯ ಈ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು , ಸೆನ್ಸಾರ್ ಅಂಗಳಕ್ಕೆ ಹೊರಡಲು ಸಿದ್ಧವಾಗುತ್ತಿದೆ.

ಬೆಂಗಳೂರಿನ ಕಂಠೀರವ ಸ್ಟುಡಿಯೋ ಅಲ್ಲದೆ ಕೆಜಿಎಫ್, ಹುಬ್ಬಳ್ಳಿ , ಬಾಗಲಕೋಟೆ, ಶಿವಮೊಗ್ಗ ಜೈಲ್ ಅಲ್ಲದೆ ಜಲಿಯನ್ ವಾಲಾಬಾಗ್‍ನ ಸೆಟ್ ಹೀಗೆ ಮುಂತಾದೆಡೆಗಳಲ್ಲಿ 63 ದಿನಗಳ ಚಿತ್ರೀಕರಣ ನಡೆಸಲಾಗಿದೆ.
1907ರಲ್ಲಿ ಜರನವಾಲಾ ತಾಲ್ಲೂಕಿನ ಬಂಗಾ ಎಂಬ ಚಿಕ್ಕ ಹಳ್ಳಿಯಲ್ಲಿ ಜನಿಸಿದ ಭಗತ್‍ಸಿಂಗ್ ಬದುಕಿದ್ದು ಕೇವಲ 24 ವರ್ಷ.

ಕಿರಿ ವಯಸ್ಸಿನಲ್ಲಿಯೇ ಭಗತ್‍ಸಿಂಗ್‍ ರಲ್ಲಿ ಹೋರಾಟದ ಕಿಚ್ಚು ಹಚ್ಚಿದವರೆಂದರೆ ಆತನ ಚಿಕ್ಕಪ್ಪ ಅಜಿತ್‍ಸಿಂಗ್. ಈ ಯುವ ಹೋರಾಟಗಾರರನ್ನು 1931ರ ಮಾರ್ಚ್ 23ರಂದು ಗಲ್ಲಿಗೇರಿಸಲಾಯಿತು.
ಈ ಚಿತ್ರದಲ್ಲಿ 9 ಹಾಡುಗಳಿದ್ದು, ಪ್ರತಾಪ್ ಎಸ್. ಸಂಗೀತ ಸಂಯೋಜನೆ ಮಾಡಿದ್ದಾರೆ.

ಇನ್ನು ಈ ಚಿತ್ರದಲ್ಲಿ ನಟ ಪ್ರಮೋದ್ ಶೆಟ್ಟಿ ಚಂದ್ರಶೇಖರ ಆಜಾದ್‍ರ ಪಾತ್ರದಲ್ಲೂ, ಸಾಹಿತಿ ವಿ.ನಾಗೇಂದ್ರಪ್ರಸಾದ್ ಅವರು ಲಾಲಾ ಲಜಪತ್‍ರಾಯ್ ಆಗಿಯೂ ಬಣ್ಣ ಹಚ್ಚಿದ್ದಾರೆ. ನಟಿ ಭವಾನಿ ಪ್ರಕಾಶ್ ಭಗತ್‍ಸಿಂಗ್‍ರ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು , ಜೋಸೈಮನ್ ತಂದೆಯ ಪಾತ್ರ ನಿರ್ವಹಿಸಿದ್ದಾರೆ.

ಹಿರಿಯ ನಟ ಧರ್ಮ ಜೈಲರ್ ಪಾತ್ರ ಮಾಡಿದ್ದಾರೆ. ಜೊತೆಗೆ ಲಕ್ಷ್ಮಣ ಎಂಬ ಹೊಸ ಪ್ರತಿಭೆ ಕೂಡ ನಟಿಸಿದ್ದಾರೆ. ಆದತ್ ಅವರ ಈ ಸಾಹಸಕ್ಕೆ ಚಂದ್ರಕಲಾ ಟಿ.ರಾಥೋಡ್, ಮಂಜುನಾಥ ನಾಯಕ್ ಹಾಗೂ ಆರ್ಜೂರಾಜ್ ನಿರ್ಮಾಪಕರಾಗಿ ಬೆನ್ನಹಿಂದೆ ನಿಂತಿದ್ದಾರೆ.

ಜೊತೆಗೆ ತ್ರಿವಿಕ್ರಮ ಸಾಫಲ್ಯ , ಪ್ರಶಾಂತ್ ಕಲ್ಲೂರ ಕೂಡ ಕೈಜೋಡಿಸಿದ್ದಾರೆ. ಹೀರಾಲಾಲ್ ಮೂವೀಸ್ ಹಾಗೂ ಎಬಿ ನೆಟ್‍ವರ್ಕ್, ಧೃತಿ ಕ್ರಿಯೇಶನ್ಸ್, ಕಲ್ಲೂರ ಸಿನಿಮಾಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಇನ್ನು ಚಿತ್ರದ ಕುರಿತು ಹೆಚ್ಚಿನ ಮಾಹಿತಿಯನ್ನು ತಂಡ ಸದ್ಯದಲ್ಲೇ ನೀಡದೆಯಂತೆ.

Related posts