Cini Reviews Cinisuddi Fresh Cini News 

ಆತ್ಮಗಳ ಅಟ್ಟಹಾಸ ಕಪಾಲ (ಚಿತ್ರವಿಮರ್ಶೆ -ರೇಟಿಂಗ್ : 3.5/5)

ರೇಟಿಂಗ್ : 3.5/5

ಚಿತ್ರ : ಕಪಾಲ
ನಿರ್ದೇಶಕ : ವಿನಯ್ ವಿದುನಂದನ್
ನಿರ್ಮಾಪಕ : ಸೌಮ್ಯ.ಕೆ.ಶೆಟ್ಟಿ
ಸಂಗೀತ : ಸಚಿನ್ ಬಸ್ರೂರ್
ಛಾಯಾಗ್ರಾಹಕ : ಪ್ರವೀಣ್. ಎಂ. ಪ್ರಭು
ತಾರಾಗಣ : ಅಭಿಮನ್ಯು ಪ್ರಜ್ವಲ್, ಸುಷ್ಮಾ ಗೌಡ, ಪ್ರತೀಕ್ಷಾ ಗೌಡ, ಆರ್ಯನ್ ಚೌಧರಿ , ಯಮುನಾ ಶ್ರೀನಿಧಿ, ಅಶೋಕ್ ಹೆಗ್ಡೆ, ಬಿ. ಎಂ. ಗಿರಿರಾಜ್ ಹಾಗೂ ಮುಂತಾದವರು…

ಭೂಮಿಯ ಮೇಲೆ ಕಣ್ಣಿಗೆ ಕಾಣದ ಅದೆಷ್ಟೋ ಅಗೋಚರ ಶಕ್ತಿಗಳು ತನ್ನ ಅಟ್ಟಹಾಸವನ್ನು ಮೆರೆದಿದೆ ಎಂದೇ ಹೇಳಬಹುದು. ಮಾಟ, ಮಂತ್ರ , ತಂತ್ರಗಳ ಜೊತೆಗೆ ಕಾಶ್ಮಾರಾ ಕೈಚಳಕದಂತಹ, ಊಹಿಸಲು ಅಸಾಧ್ಯವಾದ ಕಥಾನಕ ಚಿತ್ರಗಳು ಬರುವುದು ಬಹಳ ಅಪರೂಪ.

ಆ ನಿಟ್ಟಿನಲ್ಲಿ ರೋಮಾಂಚನಕಾರಿ ಯಾಗಿ ಪ್ರತಿ ಹಂತದಲ್ಲೂ ಮೈನವಿರೇಳಿಸುವ ದೃಶ್ಯಗಳನ್ನ ತೆರೆಮೇಲೆ ತೆರೆದಿಡುವ ಪ್ರಯತ್ನದೊಂದಿಗೆ ಮನುಷ್ಯನ ಮೇಲೆ ಮಂತ್ರ , ತಂತ್ರ ಶಕ್ತಿಯ ಪ್ರಯೋಗ, ಅತೃಪ್ತ ಆತ್ಮಗಳಿಗೆ ದಿಗ್ಬಂಧನ ಹೀಗೆ ಹಲವು ಅಂಶಗಳ ಬಗ್ಗೆ ತೆರೆ ಮೇಲೆ ತಂದಿರುವ ಚಿತ್ರವೇ “ಕಪಾಲ”.

ಇಡೀ ಚಿತ್ರದ ಪ್ರಮುಖ ವಸ್ತು ಒಂದು ಕ್ಯಾಮೆರಾ ಅದರಲ್ಲಿ ಸಿಗುವ 4 ಗೆಳೆಯರ ಒಟ್ಟಿಗೆ ಇರುವ ಫೋಟೋ. ಈ ಫೋಟೋ ಪ್ರಿಂಟ್ ತೆಗೆದವನಿಗೆ ಎದುರಾಗುವ ದುಷ್ಟ ಶಕ್ತಿಗಳ ಕಾಟ. ಇದರ ಪರಿಹಾರಕ್ಕೆ ಬರುವ ಮಾಂತ್ರಿಕ. ಸೋದರನಿಗೆ ಎದುರಾಗಿರುವ ಸಮಸ್ಯೆ ಪರಿಹರಿಸಲು ಅಣ್ಣನ ಹರಸಾಹಸ.

ದಟ್ಟ ಅರಣ್ಯ ಪ್ರದೇಶದ ನಡುವೆ ಇರುವ ಊರಿಗೆ ಹೋಗಿ ಅದರ ಮಾಹಿತಿ ಪಡೆಯಲು ಮುಂದಾಗುವ ಗೆಳೆಯರು. ಮುಂದೆ ಒಂದೊಂದೇ ಘಟನೆಗಳು ರೋಚಕವಾಗಿದ್ದು, ಹಲವಾರು ವರ್ಷಗಳ ಹಿಂದೆ ನಡೆದ ಘಟನೆ ಫ್ಲ್ಯಾಶ್ ಬ್ಯಾಕ್ ಮೂಲಕ ತೆರೆದುಕೊಳ್ಳುತ್ತಾ ಹೋಗುತ್ತದೆ. ಕಪಾಲಾಕ್ಷ ಒಬ್ಬ ಯುವ ಮಾಂತ್ರಿಕ.

ಆತ ಊರಿನ ಯಜಮಾನನ ಸೊಸೆಯನ್ನೇ ತನ್ನ ಕೈವಶ ಮಾಡಿಕೊಂಡು ತನ್ನ ಗಂಡನಿಗೇ ವಿಷ ಹಾಕಿ ಕೊಲ್ಲುವಂತೆ ಮಾಡುತ್ತಾನೆ. ತನ್ನ ಮಗನ ಸಾವಿಗೆ ಕಾರಣನಾದ ಹಾಗೂ ತನ್ನ ಸೊಸೆ ಗರ್ಭಿಣಿಯಾಗಲು ಕಾರಣನಾದನೆಂದು ಆ ಯಜಮಾನ ಮಾಂತ್ರಿಕನನ್ನು ಮತ್ತೊಬ್ಬ ಶಕ್ತಿಯುತ ಮಾಂತ್ರಿಕನ ಮೂಲಕ ಬಂಧಿಸಿ ಟ್ಟಿರುತ್ತಾನೆ.

ಸುಮಾರು ವರ್ಷಗಳ ಹಿಂದೆ ನಡೆದ ಘಟನೆಗೂ ಪ್ರಸ್ತುತ ಇರುವ ಘಟನೆಗೆ ಏನು ಸಂಬಂಧ ಎಂಬುದು ಇಲ್ಲಿ ಮುಖ್ಯ ಪ್ರಶ್ನೆಯಾಗಿರುತ್ತದೆ. ಇವೆಲ್ಲದಕ್ಕೂ ಉತ್ತರ ಸಿಗಬೇಕಾದರೆ ಒಮ್ಮೆ ನೀವು ಈ ಕಪಾಲ ಚಿತ್ರವನ್ನು ನೋಡಬೇಕು.

ಈ ಚಿತ್ರದಲ್ಲಿ ಅಭಿನಯಿಸಿರುವ ಎಲ್ಲಾ ಪ್ರತಿಭೆಗಳ ಕೂಡ ಬಹಳ ಅಚ್ಚುಕಟ್ಟಾಗಿ ತಮ್ಮ ಪಾತ್ರಗಳಿಗೆ ಜೀವ ತುಂಬುವ ಮೂಲಕ ಗಮನಸೆಳೆದಿದ್ದಾರೆ. ಅಂತೆಯೇ ವಿಭಿನ್ನ ಪ್ರಯತ್ನದ ಈ ಚಿತ್ರ ನಿರ್ಮಿಸಿದ ನಿರ್ಮಾಪಕರ ಧೈರ್ಯವನ್ನ ಮೆಚ್ಚಲೆಬೇಕು.

ಇನ್ನೂ ನಿರ್ದೇಶಕ ಕೂಡ ಬಹಳ ಅಚ್ಚುಕಟ್ಟಾಗಿ ಚಿತ್ರಕಥೆಯನ್ನು ಸಿದ್ಧಪಡಿಸಿಕೊಂಡು ಮೈ ರೋಮಾಂಚನ ಗೊಳಿಸುವಂಥ ದೃಶ್ಯಗಳನ್ನು ತೆರೆ ಮೇಲೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಹಾಸ್ಯ ದೃಶ್ಯಗಳನ್ನು ಸೇರಿಸಬಹುದಿತ್ತು. ಕೆಲವೊಂದು ಸನ್ನಿವೇಶಗಳನ್ನ ಕಡಿತಗೊಳಿಸುವ ಮೂಲಕ ವೇಗವಾಗಿಸಬಹುದಿತು.

ಉತ್ತಮ ಪ್ರಯತ್ನವನ್ನು ನಿರ್ದೇಶಕ ಮಾಡಿ ಗಮನ ಸೆಳೆದಿದ್ದಾರೆ. ಇಡೀ ಚಿತ್ರದ ಹೈಲೈಟ್ ಗಳಲ್ಲಿ ಚಿತ್ರದ ಹಿನ್ನೆಲೆ ಸಂಗೀತ ಹಾಗೂ ಛಾಯಾಗ್ರಾಹಕರ ಕೈಚಳಕ ಸೊಗಸಾಗಿ ಮೂಡಿಬಂದಿದೆ. ತಾಂತ್ರಿಕವಾಗಿ ಚಿತ್ರತಂಡ ಶ್ರಮ ಪಟ್ಟಿರೋದು ಕಾಣುತ್ತದೆ. ವಿಭಿನ್ನವಾದ ಹಾರರ್, ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರವನ್ನು ಕೊನೆಯವರೆಗೆ ಕುತೂಹಲಕರವಾಗಿ ತೆಗೆದುಕೊಂಡು ಹೋಗಿರುವ ಈ ಚಿತ್ರವನ್ನು ಒಮ್ಮೆ ನೋಡಬಹುದಾಗಿದೆ.

Related posts