ಜಿನಿವಾ ನಗರದಲ್ಲಿ “ಕಾಂತಾರ” ಚಿತ್ರದ ಪ್ರದರ್ಶನ
“ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾ”, “ಪರ್ಮನೆಂಟ್ ಮಿಷನ್ ಆಫ್ ಟು ದಿ ಯು ಎನ್” ಹಾಗೂ ಜಿನಿವಾದ ಕೆಲವು ಅಂತರಾಷ್ಟ್ರೀಯ ಸಂಸ್ಥೆಗಳಿಂದ ಪ್ರದರ್ಶನದ ಆಯೋಜನೆ. ಹೊಂಬಾಳೆ ಫಿಲಂಸ್ ನಿರ್ಮಾಣದ ಹಾಗೂ ರಿಷಭ್ ಶೆಟ್ಟಿ ನಟಿಸಿ, ನಿರ್ದಶಿಸಿರುವ “ಕಾಂತಾರ” ಚಿತ್ರ ಈಗಾಗಲೇ ವಿಶ್ವದಾದ್ಯಂತ ಜನಮನ್ನಣೆ ಪಡೆದಿದೆ.
ಸ್ವಿಜರ್ಲ್ಯಾಂಡ್ ನ ಜಿನಿವಾ ನಗರದಲ್ಲಿ ಕಳೆದ ಕೆಲವು ದಿನಗಳಿಂದ ವಿಶ್ವಸಂಸ್ಥೆಯ ವಾರ್ಷಿಕ ಸಭೆ ನಡೆಯುತ್ತಿದೆ. ಇದರಲ್ಲಿ ಪಾಲ್ಗೊಂಡಿರುವ ರಿಷಭ್ ಶೆಟ್ಟಿ ಅವರು ಈಗಾಗಲೇ ಕೆಲವು ಉಪಯುಕ್ತ ವಿಷಯಗಳ ಬಗ್ಗೆ ಅಲ್ಲಿ ಮಾತನಾಡಿದ್ದಾರೆ.
ಮಾರ್ಚ್ 17 ರ ಸಂಜೆ ಜಿನಿವಾದ ಕಾಲಮಾನದ ಪ್ರಕಾರ ಸಂಜೆ 6.30ಕ್ಕೆ “ಹಾಲ್ ಸಂಖ್ಯೆ 13ರ ಪಾಥೆ ಬಾಲೆಕ್ಸರ್ಟ್” ನಲ್ಲಿ “ಕಾಂತಾರ” ಚಿತ್ರ ಪ್ರದರ್ಶನವಾಗಲಿದೆ. “ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾ”
“ಪರ್ಮನೆಂಟ್ ಮಿಷನ್ ಆಫ್ ಟು ದಿ ಯು ಎನ್” ಹಾಗೂ ಕೆಲವು ಅಂತರಾಷ್ಟ್ರೀಯ ಸಂಸ್ಥೆಗಳು(ಜಿನಿವಾ) ಆಯೋಜಿಸಿರುವ ಈ ಪ್ರದರ್ಶನದಲ್ಲಿ ರಿಷಭ್ ಶೆಟ್ಟಿ ಅವರು ಪಾಲ್ಗೊಳ್ಳಲಿದ್ದಾರೆ. ಪ್ರದರ್ಶನದ ನಂತರ ರಿಷಭ್ ಶೆಟ್ಟಿ, ಔತಣಕೂಟದಲ್ಲಿ ಭಾಗವಹಿಸಲಿದ್ದಾರೆ ಹಾಗೂ “ಕಾಂತಾರ” ಚಿತ್ರದ ಕುರಿತು ಮಾತನಾಡಲಿದ್ದಾರೆ.
ಕನ್ನಡದ ಚಿತ್ರವೊಂದು ವಿಶ್ವದಾದ್ಯಂತ ಈ ರೀತಿ ಮೆಚ್ಚುಗೆಗೆ ಪಾತ್ರವಾಗುತ್ತಿರುವುದು ನಿಜಕ್ಕೂ ಹೆಮ್ಮೆ.ರಿಷಭ್ ಶೆಟ್ಟಿ ಮೊದಲಿನಿಂದಲೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಈ ಚಿತ್ರವನ್ನು ಅರ್ಪಿಸಿರುವುದಾಗಿ ಹೇಳುತ್ತಾ ಬರುತ್ತಿದ್ದಾರೆ. ಮಾರ್ಚ್ 17 ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬ.
ಅದೇ ದಿನ ಈ ಪ್ರದರ್ಶನ ಆಯೋಜನೆಯಾಗಿರುವುದು ವಿಶೇಷ. ಅವರ ಹುಟ್ಟುಹಬ್ಬದ ದಿನ ಪ್ರದರ್ಶನವಾಗಲಿರುವ ಈ ಪ್ರದರ್ಶನವನ್ನು ಪುನೀತ್ ರಾಜಕುಮಾರ್ ಅವರಿಗೆ ಅರ್ಪಿಸುವುದಾಗಿ ರಿಷಭ್ ಶೆಟ್ಟಿ ತಿಳಿಸಿದ್ದಾರೆ.