Cini Reviews Cinisuddi Fresh Cini News 

ಕಾಂತಾರ ಚಿತ್ರ ಹೇಗಿದೆ..? (ಚಿತ್ರ ವಿಮರ್ಶೆ-ರೇಟಿಂಗ್ : 4/5)

ರೇಟಿಂಗ್ : 4/5
ಚಿತ್ರ : ಕಾಂತಾರ
ನಿರ್ದೇಶಕ ; ರಿಷಬ್ ಶೆಟ್ಟಿ
ನಿರ್ಮಾಪಕ : ವಿಜಯ್ ಕಿರಗಂದೂರು
ತಾರಾಗಣ : ರಿಷಬ್ ಶೆಟ್ಟಿ , ಸಪ್ತಮಿ ಗೌಡ , ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಹಾಗೂ ಮುಂತಾದವರು…

ನಮ್ಮ ನಾಡು, ನೆಲೆ, ಬೇರು, ಸಂಸ್ಕೃತಿಯ ಬಗ್ಗೆ ತಲೆಮಾರುಗಳಿಂದ ನಾವು ಕೇಳಿದ್ದೇವೆ. ಆಚರಣೆ, ಆಚಾರ, ವಿಚಾರಗಳು ತನ್ನದೇ ಆದ ಮಹತ್ವವನ್ನು ಉಳಿಸಿಕೊಂಡು ಸಾಗುತ್ತಾ ಬಂದಿದೆ. ಪೂರ್ವಜರ ಕಾಲದಿಂದಲೂ ಒಂದು ನೆಲೆಗಟ್ಟು ದಟ್ಟ ಕಾಡಿನೊಳಗೆ ಆಯಾ ಪ್ರಾಂತ್ಯದಲ್ಲಿ ಬೆಸೆದುಕೊಂಡು ಸಾಗಿದೆ. ಅರಣ್ಯ ಉಳಿವಿಗಾಗಿ ಅಧಿಕಾರಿಗಳ ಒದ್ದಾಟ. ಕಾಡಿನೊಳಗೆ ನೆಲೆ ಕಂಡಿರುವ ಜನರು ಜಾಗ ಬಿಟ್ಟು ನೆಲೆ ಕಾಣುವ ಗೊಂದಲ.

ಅಲ್ಲೊಂದಷ್ಟು ಮುಖ್ಯಸ್ಥರ ತಂತ್ರ ಕುತಂತ್ರ. ಗ್ರಾಮಸ್ಥರು ಹಾಗೂ ಪೋಲಿಸರ ನಡುವೆ ಗುದ್ದಾಟ. ಅಲ್ಲೊಂದು ಸಣ್ಣ ಪ್ರೇಮಕಥೆ. ಗ್ರಾಮದ ಆಚಾರ , ವಿಚಾರ, ಆಟ, ಓಟ, ಒದ್ದಾಟ, ಬೇಟೆ ಹೀಗೆ ನಾನಾ ವಿಚಾರಗಳ ಸಂಗಮವಿದೆ. ಇದಕ್ಕೆ ಪೂರಕವಾಗಿ ದೈವಶಕ್ತಿಯ ಆಜ್ಞೆ ಚಿತ್ರದ ಕೇಂದ್ರಬಿಂದುವಾಗಿ ಬೆಳಕು ಚೆಲ್ಲುತ್ತದೆ. ಇಂತಹದೇ ಸೂಕ್ಷ್ಮ ಎಳೆಯ ಅಂಶಗಳನ್ನ ಒಳಗೊಂಡು ಚಿತ್ರಣವಾಗಿ ಹೊರಬಂದಿರುವುದೇ ಕಾಂತಾರ.

ಚಿತ್ರದ ಕಥಾಹಂದರ ತೆರೆದುಕೊಳ್ಳುವುದೇ ರಾಜನೊಬ್ಬ ತನ್ನ ಆಳ್ವಿಕೆಯಲ್ಲಿ ಪೂಜೆ, ಪುನಸ್ಕಾರಗಳ, ದೈವತ್ವ ನಂಬಿ ಬದುಕಿದವನು. ಆಸ್ತಿ , ಅಂತಸ್ತು ಶಕ್ತಿ ಎಲ್ಲವೂ ಇದ್ದರೂ ನೆಮ್ಮದಿ ಶಾಂತಿ ಹುಡುಕುತ್ತಾ ಸಾಗುವ ರಾಜನಿಗೆ ಕಾಡಿನೊಳಗೆ ದೈವಶಕ್ತಿಯ ಅನುಗ್ರಹವಾಗುತ್ತದೆ. ದೇವರ ಆಜ್ಞೆಯಂತೆ ಆ ಪ್ರಾಂತ್ಯದ ಜನರಿಗೆ ಜಾಗವನ್ನ ಉಡುಗೊರೆಯಾಗಿ ನೀಡುತ್ತಾನೆ. ಅವನಿಗೆ ನೆಮ್ಮದಿ, ಶಾಂತಿ ಸಿಗುತ್ತದೆ.

ಮುಂದೆ ತಲೆಮಾರಿನ ನಂತರ ಆ ವಂಶದ ಕುಡಿಗಳು ಜಾಗಕ್ಕಾಗಿ ಮುಗಿ ಬೀಳುತ್ತಾರೆ. ಆರಂಭದಲ್ಲೇ ದೈವಶಕ್ತಿಯ ಶಾಪಕ್ಕೆ ಪೂರ್ವಜರ ಮಾತು ಮೀರಿದಕ್ಕೆ ಬಲಿಯಾಗುತ್ತಾನೆ.ಮುಂದಿನ ತಲೆಮಾರಿನವರ ಬದುಕು ತೆರೆದುಕೊಳ್ಳುತ್ತದೆ. ಆ ಊರಿನ ಮುಖ್ಯಸ್ಥ ತನ್ನ ಜನರೊಂದಿಗೆ ನೆಮ್ಮದಿ ಬದುಕನ್ನು ಎಲ್ಲ ವರ್ಗದ ಜನರೊಂದಿಗೆ ಬೆಸೆದುಕೊಳ್ಳುತ್ತಾ ಊರಿನ ಎಲ್ಲಾ ವಿಚಾರಗಳಿಗೂ ಸ್ಪಂದಿಸುತ್ತಾ ಕಂಬಳದ ಓಟ, ಗ್ರಾಮದ ಪೂಜೆ ಇತ್ಯಾದಿಗಳಿಗೆ ಬೆನ್ನೆಲುಬಾಗಿ ನಿಲ್ಲುತ್ತಾನೆ. ಭೂತ ಕೋಲದ ಕುಟುಂಬದವನಾದರೂ ಕಥಾನಾಯಕ ತನ್ನದೇ ಗೆಳೆಯರ ಬಳಗದೊಂದಿಗೆ ಊರಿನ ಓಡಾಡಿಕೊಂಡು ಕಂಬಳ ಆಟವಾಡುತ್ತಾ, ಕಾಡಿನೊಳಗೆ ಬೇಟೆಯಾಡುತ್ತಾ ಜೀವನ ನಡೆಸುತ್ತಾನೆ.

ಕಾಡನ್ನು ಸಂರಕ್ಷಿಸಲು ಬರುವ ಅಧಿಕಾರಿ ಹಾಗೂ ತಂಡ. ಇದಕ್ಕೆ ಸೆಡ್ಡು ಹೊಡೆದು ನಿಲ್ಲುವ ನಾಯಕ. ಇದರ ನಡುವೆ ಮುಖ್ಯಸ್ಥರು ನಡೆಸುವ ಹಾವು ಏಣಿ ಆಟ. ಗ್ರಾಮದಲ್ಲಿ ಬೆಳೆದ ನಾಯಕಿ ಅರಣ್ಯ ಇಲಾಖೆಗೆ ನಾಯಕನ ಮೂಲಕ ಸೇರ್ಪಡೆ. ಅವರಿಬ್ಬರ ಪ್ರೀತಿ ಪ್ರೇಮದ ಸಮಾಗಮ. ಕಾಡಿನಲ್ಲಿ ವಾಸಿಸುವ ಜನರ ಭೂ ಒತ್ತುವರಿ ವಿಚಾರ ತೆರೆದುಕೊಳ್ಳುತ್ತದಂತೆ. ಎಲ್ಲವೂ ಅಯೋಮಯ ವಾಗುತ್ತದೆ. ಒಂದು ಅಚಾತುರ್ಯದಿಂದ ನಾಯಕ ಜೈಲುಪಾಲಾಗುತ್ತಾನೆ. ಇದು ಮತ್ತೊಂದು ತಿರುವು ಪಡೆದುಕೊಳ್ಳುತ್ತದೆ. ನಾಯಕನಿಗೆ ಆಗಾಗ ಕನಸಿಗೆ ಕಾಣುವ ದೈವಶಕ್ತಿಯ ವಿಚಾರ ಗೊಂದಲವನ್ನು ಉಂಟುಮಾಡುತ್ತದೆ. ಕ್ಲೈಮ್ಯಾಕ್ಸ್ ಹಂತಕ್ಕೆ ರೋಚಕವಾಗಿ ಬಂದು ನಿಲ್ಲುತ್ತದೆ.
ಕಾಂತಾರ ಅಂದರೇನು…
ದೈವಶಕ್ತಿ ಹೇಳುವುದೇನು…
ಕಾಡಿನಲ್ಲಿ ವಾಸಿಗಳ ಸ್ಥಿತಿಗತಿ…
ಅರಣ್ಯ ಅಧಿಕಾರಿಗಳ ಪಾಡು…
ನಾಯಕನ ಬದುಕು…
ಇಂಥ ಹಲವು ವಿಚಾರಗಳ ಬಗ್ಗೆ ತಿಳಿದುಕೊಳ್ಳಬೇಕಾದರೆ ನಿವೆಲ್ಲರೂ ಒಮ್ಮೆ ಕಾಂತಾರ ಚಿತ್ರವನ್ನು ನೋಡಬೇಕು.

ಸದನ ವಿಭಿನ್ನ ಚಿತ್ರಗಳಿಗೆ ಮುಂಚೂಣಿಯಲ್ಲಿ ನಿಲ್ಲುವ ಹೊಂಬಾಳೆ ಫಿಲಂಸ್ ನ ನಿರ್ಮಾಪಕ ವಿಜಯ್ ಕಿರಗಂದೂರು ಉತ್ತಮ ಚಿತ್ರವನ್ನು ಜನರಿಗೆ ನೀಡಿದ್ದಾರೆ.
ಇಡೀ ಚಿತ್ರದಲ್ಲಿ ಶಿವನ ಪಾತ್ರ ಮಾಡಿರುವ ರಿಷಬ್ ಶೆಟ್ಟಿ ಆವರಿಸಿಕೊಂಡಿದ್ದಾರೆ. ದೈವಾರಾಧನೆ , ಭೂತ ಕೋಲದ ಸಾಂಪ್ರದಾಯಿಕ, ಸಂಸ್ಕೃತಿಯನ್ನು ಜೀವಂತಗೊಳಿಸುವ ದೃಶ್ಯ ವೈಭವವನ್ನ ತೆರೆದಿಟ್ಟಿದ್ದಾರೆ. ತಾನೊಬ್ಬ ಬಹುಮುಖ ಪ್ರತಿಭೆ ಎಂಬುದನ್ನ ನಿರೂಪಿಸಿದ್ದಾರೆ.

ಕಾಡಿನಲ್ಲಿ ವಾಸಿಸುವ ಜನರ ಬದುಕು ಬವಣೆ, ಅವರು ಎದುರಿಸುತ್ತಿರುವ ಸಮಸ್ಯೆಗಳ ಸೂಕ್ಷ್ಮವಾಗಿ ತೆರೆದಿಡುವುದರ ಜೊತೆಗೆ ಯಾರಿಗೆ ತಲುಪಬೇಕೋ ಅವರಿಗೆ ಮುಟ್ಟುವ ಕೆಲಸಕ್ಕೆ ಮುಂದಾಗಿರುವುದು ಎದ್ದು ಕಾಣುತ್ತದೆ. ನಿರ್ದೇಶನದ ಜೊತೆಗೆ ನಟನೆಯನ್ನೂ ಮಾಡುತ್ತಾ ಉತ್ತಮ ಚಿತ್ರವನ್ನು ಕಟ್ಟಿಕೊಡುವುದರಲ್ಲಿ ರಿಷಬ್ ಶೆಟ್ಟಿ ಯಶಸ್ವಿಯಾಗಿದ್ದಾರೆ. ಇನ್ನು ನಾಯಕಿಯಾಗಿ ಲೀಲಾ ಪಾತ್ರ ಮಾಡಿರುವ ಸಪ್ತಮಿ ಗೌಡ ಕೂಡ ಪಾತ್ರಕ್ಕೆ ಸೂಕ್ತವಾಗಿ ಕಾಣಿಸಿಕೊಂಡಿದ್ದು, ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ಎಂದಿನಂತೆ ಅಚ್ಯುತ್ ಕುಮಾರ್ ಯಾವುದೇ ಪಾತ್ರ ಕೊಟ್ಟರೂ ಲೀಲಾಜಾಲವಾಗಿ ಅಭಿನಯಿಸುತ್ತಾರೆ. ಊರಿನ ಮುಖ್ಯಸ್ಥನಾಗಿ ಮಿಂಚಿದ್ದಾರೆ. ಇನ್ನೂ ಅವರ ಸಹಚರರಾಗಿ ಪ್ರಮೋದ್ ಶೆಟ್ಟಿ ಕೂಡ ಗಮನ ಸೆಳೆಯುತ್ತಾರೆ. ಅರಣ್ಯ ಅಧಿಕಾರಿಯ ಪಾತ್ರದಲ್ಲಿ ನಟ ಕಿಶೋರ್ ಕೂಡ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಉಳಿದಂತೆ ಬರುವ ಎಲ್ಲ ಪಾತ್ರಧಾರಿಗಳು ಕೂಡ ಚಿತ್ರದ ಓಟಕ್ಕೆ ಪೂರಕವಾಗಿ ಕಾಣಿಸಿಕೊಂಡಿದ್ದಾರೆ.

ಅಷ್ಟೇ ಅಚ್ಚುಕಟ್ಟಾಗಿ ನಿರ್ದೇಶಕ ರಿಷಬ್ ಶೆಟ್ಟಿ ಆಯ್ಕೆ ವಿಚಾರವನ್ನು ಬಹಳ ಸೂಕ್ಷ್ಮವಾಗಿ ಮಾಡಿದ್ದಾರೆ. ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ರವರ ಹಿನ್ನೆಲೆ ಸಂಗೀತ ಬಹಳ ಸೊಗಸಾಗಿ ಮೂಡಿಬಂದಿದ್ದು, ಛಾಯಾಗ್ರಾಹಕ ಅರವಿಂದ್ ಕಶ್ಯಪ್ ಕೈಚಳಕ ಹಾಗೂ ಸಂಕಲನ, ಸಾಹಸ ನಿರ್ದೇಶಕರ ಕೆಲಸ ಅಷ್ಟೇ ಅಚ್ಚುಕಟ್ಟಾಗಿ ಬಂದಿದೆ. ಒಟ್ಟಾರೆ ಬಹಳ ವಿಭಿನ್ನವಾಗಿ ಮೂಡಿಬಂದಿರುವ ಈ ಚಿತ್ರವನ್ನ ಒಮ್ಮೆ ಎಲ್ಲರೂ ಚಿತ್ರಮಂದಿರದಲ್ಲಿ ಹೋಗಿ ನೋಡಿ.

Related posts