Cinisuddi Fresh Cini News 

“ಕದ್ದ ಚಿತ್ರ”ದ ಟೈಟಲ್ ಪ್ರೊಮೊ ಬಿಡುಗಡೆ

ಹೊಸತನ ವಿಭಿನ್ನತೆ ನಿರೀಕ್ಷಿಸುವ ಸಿನಿಮಾ ಪ್ರಿಯರಿಗಾಗಿಯೇ ಹಲವಾರು ತಂಡಗಳು ವಿಶೇಷ ರೀತಿಯಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಆ ನಿಟ್ಟಿನಲ್ಲಿ ಈಗ ಬಿಡುಗಡೆಗೊಂಡಿರುವ ಚಿತ್ರದ ಶೀರ್ಷಿಕೆಯೇ ಬಹಳ ವಿಶೇಷವಾಗಿದೆ. ಅದುವೇ “ಕದ್ದ ಚಿತ್ರ” ಹೌದು ಇದು ಯಾವುದೇ ಚಿತ್ರದ ಕದ್ದ ದೃಶ್ಯಗಳಲ್ಲ… ಚಿತ್ರದ ಶೀರ್ಷಿಕೆ ಹಾಗೇ ಇಟ್ಟಿದ್ದಾರೆ ಚಿತ್ರತಂಡ. ಬಹಳಷ್ಟು ರಂಗಭೂಮಿ ಪ್ರತಿಭೆಗಳು ಒಗ್ಗೂಡಿಕೊಂಡು ಸಿದ್ಧಪಡಿಸುತ್ತಿರುವ ಈ “ಕದ್ದ ಚಿತ್ರ” ದ ಟೈಟಲ್ ಪ್ರೋಮೋ ಬಿಡುಗಡೆ ಇತ್ತೀಚಿಗೆ ರೇಣುಕಾಂಬ ಥಿಯೇಟರ್ ನಲ್ಲಿ ನೆರವೇರಿತು.

ಸರಿಸುಮಾರು 50 ಚಿತ್ರಗಳಲ್ಲಿ ಅಭಿನಯಿಸಿರುವ ಚಿನ್ನಾರಿ ಮುತ್ತ ನಟ ವಿಜಯ ರಾಘವೇಂದ್ರ ಮೊದಲ ಬಾರಿಗೆ “ಕದ್ದ ಚಿತ್ರ” ದಲ್ಲಿ ಸಿಗರೇಟ್ ಸೇದುವ ಟೈಟಲ್ ಪ್ರೋಮೋ ನಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕ ವಿಜಯರಾಘವೇಂದ್ರ ಮಾತನಾಡುತ್ತಾ ಈ ಚಿತ್ರದಲ್ಲಿ ಒಬ್ಬ ಬರಹಗಾರನಾಗಿ ಬಣ್ಣ ಹಚ್ಚಿದ್ದು , ಬಹಳಷ್ಟು ವಿಶೇಷತೆಯನ್ನು ಒಳಗೊಂಡಿದೆಯಂತೆ.

ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಆಗಿದ್ದು, ಮಿಕ್ಸೆಡ್ ಎಮೋಶನ್ ಚಿತ್ರದ ಕಥಾ ಹಂದರವಾಗಿದೆ. ನಿರ್ದೇಶಕರು ಬಹಳ ಅಚ್ಚುಕಟ್ಟಾಗಿ ಕಥೆಯನ್ನ ಸಿದ್ಧಪಡಿಸಿದ್ದಾರೆ. ಇದು ನನಗೂ ಒಂದು ಚಾಲೆಂಜಿಂಗ್ ಪಾತ್ರವಾಗಿತ್ತು , ಹಾಗೂ ಸಿಗರೇಟ್ ಕೂಡ 1ಪಾತ್ರವಾಗಿ ಕಾಣಿಸುತ್ತದೆ. ಚಿತ್ರೀಕರಣದಲ್ಲಿ ಸಿಗ್ರೇಟ್ ಗಾಗಿ ಒಂದು ಬಜೆಟ್ ಮೀಸಲಿಟಿತ್ತು ಚಿತ್ರತಂಡ. 3ವರ್ಷದ ಹಿಂದೆ ಈ ಕತೆಯ ಮಾತುಕತೆ ನಡೆದಿತ್ತು.

ಈ ರೀತಿಯ ಪಾತ್ರ ನಾನು ಮಾಡಬಹುದಾ ಎಂಬ ಪ್ರಶ್ನೆಯೂ ನನ್ನನ್ನು ಕಾಡಿತ್ತು , ಆದರೆ ಅದಕ್ಕೆ ನ್ಯಾಯ ಒದಗಿಸುವ ಪ್ರಯತ್ನ ಮಾಡಿದ್ದೇನೆ. ಇದೊಂದು ಪ್ರಾಮಾಣಿಕ ಪ್ರಯತ್ನದ ಚಿತ್ರವಾಗಿ ಹೊರ ಬರಲಿದೆ. ಈ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಎಲ್ಲರೂ ಕುಟುಂಬದಂತೆ ಸೇರಿ ಕೆಲಸವನ್ನು ಮಾಡಿದ್ದಾರೆ. ನಿರ್ದೇಶಕರು ರಂಗಭೂಮಿ ಕಲಾವಿದರು ಮತ್ತು ಅವರ ಬರವಣಿಗೆ ಬಹಳ ಸೊಗಸಾಗಿದೆ.ಹಾಗೆಯೇ ನಿಮ್ಮ ಸಹಕಾರ ಚಿತ್ರತಂಡದ ಮೇಲೆ ಇರಲಿ ಎಂದರು.

ರಂಗಭೂಮಿ ಪ್ರತಿಭೆ ಸುಹಾಸ್ ಕೃಷ್ಣ ನಿರ್ದೇಶನದ ಈ ಚಿತ್ರಕ್ಕೆ “ಕದ್ದ ಚಿತ್ರ” ಎಂಬ ಶೀರ್ಷಿಕೆ ಇಟ್ಟಿದ್ದಾರೆ. ಇವರು ರಂಗಕರ್ಮಿ ಹಾಗೂ ಹಿರಿಯ ಪತ್ರಕರ್ತ ಎ. ಎಸ್ ಮೂರ್ತಿ ರವರ ಗರಡಿಯಲ್ಲಿ ಪಳಗಿದ ಪ್ರತಿಭೆ. ಈ ಹಿಂದೆ ಸುಹಾಸ್ ಪಿ5 ಎಂಬ ಚಿತ್ರವನ್ನ ನಿರ್ದೇಶನ ಮಾಡಿದ್ದು, ಇದು ಇವರ ಎರಡನೇ ಚಿತ್ರ. ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರವಾಗಿದ್ದು , ರೆಗ್ಯುಲರ್ ಪ್ಯಾಟರ್ನ್ ಅಲ್ಲದೆ ಬೇರೆ ರೀತಿಯಲ್ಲಿ ಈ ಚಿತ್ರವನ್ನು ತೋರಿಸಬಹುದು ಎಂಬ ಪ್ರಯತ್ನಕ್ಕೆ ಕೈಹಾಕಿದ್ದಾರoತೆ.

ಈ ಚಿತ್ರದ ನಾಯಕ ಒಬ್ಬ ಬರಹಗಾರನಾಗಿದ್ದು , ಅವನ ದೃಷ್ಟಿಕೋನದಲ್ಲಿ ಕಥೆ ಸಾಗಲಿದೆ. ಇದರಲ್ಲಿ ಎಮೋಶನ್ , ಸಸ್ಪೆನ್ಸ್ ಎಲ್ಲವೂ ಒಳಗೊಂಡಿದ್ದು, ವಿಭಿನ್ನ ಸ್ಟೈಲಿಶ್ ಹಾದಿಯಲ್ಲಿ ಕಥೆ ಸಾಗಲಿದೆ. ಈಗಾಗಲೇ ಚಿತ್ರದ 70 %ಶೂಟಿಂಗ್ ಮುಗಿದಿದ್ದು, ವೈನಾಡು ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ.ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಹಿತಿ ನೀಡಲಿದ್ದೇನೆ ನಿಮ್ಮೆಲ್ಲರ ಸಹಕಾರ ಇರಲಿ ಎಂದು ಕೇಳಿಕೊಂಡರು.

ಇನ್ನು ಈ ಚಿತ್ರವನ್ನ ಯುವ ನಿರ್ಮಾಪಕ ಸಂದೀಪ್. ಎಚ್. ಕೆ ನಿರ್ಮಾಣ ಮಾಡಿದ್ದು , ಇವರು 2006 ರಲ್ಲಿ ಕಾಲೇಜಿಗೆ ಬೆಂಗಳೂರಿಗೆ ಬಂದು ಸಿನಿಮಾ ನೋಡುವ ಕ್ರೇಜ್ ಬೆಳೆಸಿಕೊಂಡರು. ನಂತರ ತಾವು ಪ್ರೀತಿಸಿದ ಹುಡುಗಿಯೊಂದಿಗೆ ಸಿನಿಮಾ ನೋಡುತ್ತಾ ಅವರನ್ನು ವಿವಾಹವಾಗಿ ಈಗ ದಂಪತಿಗಳು ಸೇರಿ ಚಿತ್ರವನ್ನು ನಿರ್ಮಿಸಿದ್ದಾರೆ.

ಮೂಲದ ಕಂಟ್ರಾಕ್ಟರ್ ಆಗಿರುವ ಸಂದೀಪ್ .ಎಚ್. ಕೆ ಈ ಚಿತ್ರಕ್ಕೆ ಯಾವುದೇ ರೀತಿಯ ಬಜೆಟ್ ಪ್ಲಾನ್ ಮಾಡದೆ ಚಿತ್ರೀಕರಣಕ್ಕೆ ಬೇಕಾದ ಎಲ್ಲಾ ಅನುಕೂಲತೆಗಳನ್ನು ಮಾಡಿಕೊಟ್ಟಿದ್ದಾರೆ. ಹೊಸಕೋಟೆ ಮೂಲದ ನಿರ್ಮಾಪಕರು ನಿರ್ದೇಶಕ ಸುಹಾಸ್ ಗೆ ಆತ್ಮೀಯ ಗೆಳೆಯರ ಕೂಡ ಹೌದು. ಈ ಚಿತ್ರದ ಶೀರ್ಷಿಕೆ ಹಾಗೂ ಕಥೆ ವಿಭಿನ್ನವಾಗಿದ್ರಿಂದ ನಿರ್ಮಾಪಕರ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಈ ಚಿತ್ರದ ನಾಯಕಿಯಾಗಿ ನಮ್ರತಾ ಸುರೇಂದ್ರನಾಥ್ ಅಭಿನಯಿಸಿದ್ದು , ಇವರು ನಿರ್ದೇಶಕರೊಂದಿಗೆ ರಂಗಭೂಮಿಯಲ್ಲಿ ಕೆಲಸವನ್ನ ಮಾಡಿದ್ದಾರೆ. ಈ ಹಿಂದೆ ಪಿ5 ಚಿತ್ರದಲ್ಲಿ ಅಭಿನಯಿಸಿದ್ದು, ಈಗ “ಕದ್ದ ಚಿತ್ರ” ದಲ್ಲೂ ಕೂಡ ವಿಜಯರಾಘವೇಂದ್ರಗೆ ಹೆಂಡತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಚಿತ್ರದ ನಿರ್ದೇಶಕರ ಬಹುತೇಕ ಎಲ್ಲಾ ಮಾತುಗಳನ್ನು ನಾಯಕಿ ಮಾತನಾಡಿದ್ದು ವಿಶೇಷವಾಗಿತ್ತು ,ಚಿತ್ರೀಕರಣದ ಕುರಿತು ತಂಡದ ಕಾರ್ಯವೈಖರಿಯ ಬಗ್ಗೆ ಸಂಕ್ಷಿಪ್ತವಾಗಿ ಹೇಳುತ್ತಾ , ಇದು ಕೃತಿ ಚೌರ್ಯದ ಬಗ್ಗೆ ಇರುವಂಥ ಸಿನಿಮಾ, ಇದು ಕದ್ದ ಸಿನಿಮಾ ಅಲ್ಲ ಎಂದು ಮಾಹಿತಿ ನೀಡಿದರು.

ಇನ್ನೂ ಹಲವಾರು ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಮಿಂಚುತ್ತಿರುವ ಬಾಲನಟಿ ಬೇಬಿ ಆರಾಧ್ಯ ಕೂಡ ಈ ನಾಯಕ ನಾಯಕಿಯರ ಮುದ್ದಿನ ಮಗಳಾಗಿ ಅಭಿನಯಿಸಿದ್ದಾರೆ.ಮತ್ತೊಂದು ಪ್ರಮುಖ ಪಾತ್ರದಲ್ಲಿ ನಿರ್ದೇಶಕ ರಘು ಶಿವಮೊಗ್ಗ ಅಭಿನಯಿಸಿದ್ದು, ಚಿತ್ರದಲ್ಲಿ ಪಬ್ಲಿಷರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಉಳಿದಂತೆ ಬಾಲಾಜಿ ಮನೋಹರ್ ,ತಾನ್ವಿ ಹಾಗೂ ಸುಜಿತ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಚಿತ್ರಕ್ಕೆ ಶ್ರೀ ಕ್ರೇಜಿ ಮೈಂಡ್ ಸಂಕಲನ ಜೊತೆಗೆ ಛಾಯಾಗ್ರಹಣ ಕೂಡ ಮಾಡಿದ್ದಾರೆ. ಹಾಗೆಯೇ ಇವರೊಟ್ಟಿಗೆ ಗೌತಮ್ ಮನು ಕೂಡ ಛಾಯಾಗ್ರಹಣ ಮಾಡಿದ್ದಾರೆ. ಈ ಹಿಂದೆ ಪಿ5 ಚಿತ್ರಕ್ಕೆ ಸಂಗೀತ ಮಾಡಿದ ಕೃಷ್ಣರಾಜ “ಕದ್ದ ಚಿತ್ರ” ಕ್ಕೆ 4ಹಾಡುಗಳಿಗೆ ಸಂಗೀತ ಮಾಡುತ್ತಿದ್ದಾರೆ. ಈ ಚಿತ್ರದ ಕಲಾ ನಿರ್ದೇಶನವನ್ನ ದುಶ್ಯಂತ್ ಮಾಡಿದ್ದು, ನೃತ್ಯ ನಿರ್ದೇಶನವನ್ನು ಸ್ಟಿಫನ್ ನಿರ್ವಹಿಸಿದ್ದಾರೆ. ಶಾನ್ವಿ ಟಾಕೀಸ್ ಬ್ಯಾನರ್ ನಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಟೈಟಲ್ ಪ್ರೊಮೋ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಗಮನವನ್ನು ಸೆಳೆಯುತ್ತಿದೆ.

Related posts