Cinisuddi Fresh Cini News 

ವಿಭಿನ್ನವಾಗಿ ಪ್ರಚಾರ ಆರಂಭಿಸಿದ “ಕಡಲ ತೀರದ ಭಾರ್ಗವ” ಚಿತ್ರತಂಡ

ಚಿತ್ರೀಕರಣ ಮುಕ್ತಾಯವಾದ ಮೇಲೆ ಚಿತ್ರತಂಡ ತನ್ನದೇ ಆದ ರೀತಿಯಲ್ಲಿ ಪ್ರಚಾರ ಕಾರ್ಯ ಆರಂಭಿಸುತ್ತಾರೆ. ಆದರೆ “ಕಡಲ ತೀರದ ಭಾರ್ಗವ” ಚಿತ್ರತಂಡ ತಮ್ಮ ಪ್ರಚಾರ ಕಾರ್ಯವನ್ನು ವಿನೂತನ ಶೈಲಿಯಲ್ಲಿ ಆರಂಭಿಸಿದೆ.

ಇತ್ತೀಚೆಗೆ ಬ್ಲೀಡ್ ಆರ್ ಸಿ ಬಿ ಅವರ ಸಹಯೋಗದೊಂದಿಗೆ ಜೆ.ಪಿ.ನಗರದ ಪುಟ್ಟೇನಹಳ್ಳಿ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.ರಘುದೀಕ್ಷಿತ್, ಅಲೋಕ್, ಭಾ.ಮ.ಹರೀಶ್, ಬೃಂದಾ ಆಚಾರ್ಯ, ದಿಶಾ ಪೂವಯ್ಯ ಮುಂತಾದ ಗಣ್ಯರು ಈ ರಕ್ತದಾನ ಶಿಬಿರಕ್ಕೆ ಆಗಮಿಸಿ ಚಾಲನೆ ನೀಡಿದರು.

ಬೆಂಗಳೂರು, ಕುಂದಾಪುರ, ಭಟ್ಕಳ, ಕುಮಟಾ, ಮುರುಡೇಶ್ವರ ಮುಂತಾದ ಕಡೆ 63 ದಿನಗಳ ಚಿತ್ರೀಕರಣ ನಡೆದಿದೆ. ವರುಣ್ ರಾಜು ಹಾಗೂ ಭರತ್ ಗೌಡ ನಿರ್ಮಿಸುತ್ತಿರುವ ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ವರ್ಕ್ ಬಿರುಸಿನಿಂದ ಸಾಗಿದೆ. ಜೂನ್ ನಲ್ಲಿ ಚಿತ್ರ ತೆರೆಗೆ ಬರಲಿದೆ.

ಪನ್ನಗ ಸೋಮಶೇಖರ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಅನಿಲ್ ಸಿ ಜೆ ಸಂಗೀತ ನಿರ್ದೇಶನ, ಕೀರ್ತನ್ ಪೂಜಾರ್ ಛಾಯಾಗ್ರಹಣ ಹಾಗೂ ಆಶಿಕ್ ಕುಸುಗೊಳ್ಳಿ , ಉಮೇಶ್ ಭೋಸಗಿ ಅವರ ಸಂಕಲನವಿದೆ.

ಪಟೇಲ್ ವರುಣ್ ರಾಜು, ಭರತ್ ಗೌಡ, ಶೃತಿ ಪ್ರಕಾಶ್, ಕೆ.ಎಸ್.ಶ್ರೀಧರ್, ರಾಘವ್ ನಾಗ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಇದು ಸಾಹಿತಿ ಶಿವರಾಮ ಕಾರಂತ ಅವರ ಜೀವನ ಕುರಿತಾದ ಚಿತ್ರವಲ್ಲ.‌  ಕಡಲ ತೀರದಲ್ಲಿ ವಾಸಿಸುವ ನಾಯಕನ ಹೆಸರು ಭಾರ್ಗವ ಅಂತ.‌ ಹಾಗಾಗಿ ಈ ಚಿತ್ರದ ಶೀರ್ಷಿಕೆ “ಕಡಲ ತೀರದ ಭಾರ್ಗವ” ಎಂದು ಚಿತ್ರತಂಡ ಸ್ಪಷ್ಟನೆ ನೀಡಿದೆ.

Related posts