ಭಾರಿ ನಿರೀಕ್ಷೆ ಮೂಡಿಸಿದ್ದ ಕಬ್ಜ ಚಿತ್ರ ಹೇಗಿದೆ..? (ಚಿತ್ರವಿಮರ್ಶೆ : ರೇಟಿಂಗ್-4/5)
ಚಿತ್ರ : ಕಬ್ಜ
ನಿರ್ದೇಶಕ : ಆರ್. ಚಂದ್ರು
ಸಂಗೀತ : ರವಿ ಬಸ್ರೂರು ಛಾಯಾಗ್ರಹಕ : ಎ. ಜೆ. ಶೆಟ್ಟಿ
ತಾರಾಗಣ : ಉಪೇಂದ್ರ , ಶ್ರೀಯಾ ಶರಣ್, ಸುದೀಪ್, ಶಿವರಾಜ್ ಕುಮಾರ್, ಸುನೀಲ್ ಪುರಾಣಿಕ್, ಮುರಳಿ ಶರ್ಮ, ಅನೂಪ್ ರೇವಣ್ಣ , ಸುಧಾ, ತಾನ್ಯಾ ಹೋಪ್, ಕಬೀರ್ ದುಹನ್ ಸಿಂಗ್, ನೀನಾಸಂ ಅಶ್ವತ್ಥ್ ಹಾಗೂ ಮುಂತಾದವರು…
ಸಾಮಾನ್ಯವಾಗಿ ಯಾವುದೇ ಕಾಲಘಟ್ಟದ ಚಿತ್ರವಾದರೂ ಆಯಾ ಸಂದರ್ಭಕ್ಕೆ ತಕ್ಕಂತೆ ದೃಶ್ಯಗಳನ್ನ ಕಟ್ಟಿಕೊಟ್ಟು , ನೈಜಕ್ಕೆ ಹತ್ತಿರ ಎನ್ನುವಂತೆ ರೂಪಗೊಳ್ಳುವ ಚಿತ್ರಗಳು ಪ್ರೇಕ್ಷಕರನ್ನ ಬಹಳ ಬೇಗ ಸೆಳೆಯುತ್ತದೆ. ಆ ನಿಟ್ಟಿನಲ್ಲಿ ಈ ವಾರ ಬಿಡುಗಡೆಗೊಂಡಿರುವ ಕಬ್ಜ ಚಿತ್ರ ಸ್ವತಂತ್ರ ಪೂರ್ವ , ನಂತರ ಹಾಗೂ ಪ್ರಸ್ತುತ ಭೂಗತ ಲೋಕದ ವಿಚಾರದೊಂದಿಗೆ ಮನಮಿಡಿಯುವ ದೃಶ್ಯಗಳು , ದೇಶಪ್ರೇಮ, ರಾಜಕೀಯ ತಂತ್ರ , ಪ್ರೀತಿಯ ಸೆಳೆತ ಹೀಗೆ ಒಂದಕ್ಕೊಂದು ಕೊಂಡಿಯಂತೆ ಬೆಸೆದುಕೊಂಡು ಪ್ರೇಕ್ಷಕರ ಮುಂದೆ ಅದೃಷ್ಟದ ಪರೀಕ್ಷೆಗೆ ಬಂದಿದೆ.
ಚಿತ್ರದ ಕಥಾ ವಸ್ತು ತೆರೆದುಕೊಳ್ಳುವುದೇ ಭೂಗತ ಲೋಕದಲ್ಲಿ ಡಾನ್ಗಳು ಎಂದು ಮೆರೆಯುವರನ್ನು ಒಂದೆಡೆ ಸೇರಿಸಿ ದಕ್ಷ ಪೊಲೀಸ್ ಅಧಿಕಾರಿ ಭಾರ್ಗವ್ ಬಕ್ಷಿ (ಸುದೀಪ್) ಮೂಲಕ ಎಚ್ಚರಿಕೆ ನೀಡಿ ಅಂಡರ್ವರ್ಲ್ಡ್ ಅನ್ನೋ ದುನಿಯಾ ಬಗ್ಗೆ ಬೆಳಕು ಚೆಲ್ಲುತ್ತಾನೆ. ಸ್ವತಂತ್ರ ಪೂರ್ವ ದಿಂದಲೂ ಮೊಘಲರು , ಬ್ರಿಟಿಷರ ದಬ್ಬಾಳಿಕೆಯಲ್ಲಿ ಭಾರತ ಸಿಲುಕಿಕೊಂಡಿತು.
ಸ್ವತಂತ್ರಕ್ಕಾಗಿ ಭಾರತೀಯರು ಶ್ರಮಿಸುತ್ತಿದ್ದ ಕಾಲಘಟ್ಟ.1945 ರಲ್ಲಿ ಉತ್ತರ ಭಾರತದ ಪ್ರಾಂತ್ಯದ ಅಮರೇಶ್ವರ ಎಂಬ ಸ್ವತಂತ್ರ ಹೋರಾಟಗಾರ ಬ್ರಿಟಿಷರ ಕತಂತ್ರಕ್ಕೆ ಬಲಿಯಾಗುತ್ತಾನೆ. ಹಾಗೆ ಇಡೀ ಊರೇ ಸರ್ವನಾಶವಾಗುತ್ತದೆ. ಬ್ರಿಟಿಷರಿಂದ ತಪ್ಪಿಸಿಕೊಳ್ಳುತ್ತಾ ಅಮರೇಶ್ವರನ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ದಕ್ಷಿಣ ಭಾರತದ ಅಮರಾಪುರಕ್ಕೆ ಬಂದು ನೆಲೆಸುತ್ತಾರೆ. ಬದುಕಿಗಾಗಿ ಚರಕದಿಂದ ಬಟ್ಟೆ ನೇಯುತ್ತಾ ಮಕ್ಕಳನ್ನು ಬೆಳೆಸುತ್ತಾಳೆ.
ಹಿರಿಯ ಮಗ ಸಂಕೇಶ್ವರ (ಸುನಿಲ್ ಪುರಾಣಿಕ್) ತಾಯಿಯ ಜೊತೆಯಲ್ಲಿದ್ದರೆ. ಎರಡನೇ ಮಗ ಆರ್ಕೇಶ್ವರ (ಉಪೇಂದ್ರ) ವಾಯು ಸೇನೆಯ ಪೈಲೆಟ್ ತರಬೇತಿ ಪಡೆದಿರುತ್ತಾರೆ. ಕೆಲಸಕ್ಕೆ ಹೋಗುವ ಮುನ್ನ ತಾಯಿ , ಅಣ್ಣ ಹಾಗೂ ತನ್ನ ಮುದ್ದಾದ ಪ್ರೇಯಸಿ ಮಧುಮತಿ (ಶ್ರೇಯ ಶರಣ್) ರಾಜ ಮನೆತನದ ವೀರ ಬಹದ್ದೂರ್ ರವರ ಒಬ್ಬಳೇ ಮಗಳು ಯುವರಾಣಿಯನ್ನು ನೋಡಲು ಬರುತ್ತಾನೆ. ಅಮರಾಪುರದಲ್ಲಿ ಡಾನ್ ಖಲೀಲ್ ಆರ್ಭಟ ಜೋರಾಗಿರುತ್ತೆದೆ.
ಆ ವೇಳೆ ರಾಜಮನೆತನ , ರಾಜಕೀಯ ಮುಖಂಡರು ಹಾಗೂ ಭೂಗತಲೋಕದ ಮಧ್ಯೆ ಸಮರ ಶುರುವಾಗಿ ಕತ್ತಿ ಮಸೆಯುತ್ತಿರುತ್ತಾರೆ. ಜನರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಎದುರು ನಿಲ್ಲುವ ಅಣ್ಣ ಸಂಕೇಶ್ವರನ ಕೊಲೆಯಾಗತ್ತೆ. ಇಬ್ಬರು ಮಕ್ಕಳಲ್ಲಿ ಒಬ್ಬನನ್ನ ಕಳೆದುಕೊಂಡ ತಾಯಿ ಕಂಗಾಲಾಗುತ್ತಾಳೆ. ಇನ್ನು ಅರ್ಕೇಶ್ವರ ಬಹಳ ಶಾಂತ ಸ್ವಭಾವದವನು, ಇವನ ಬದುಕು ಏನು ಎನ್ನುವಷ್ಟರಲ್ಲಿ ಅರ್ಕೇಶ್ವರ ಭೂಗತಲೋಕ್ಕೆ ಎಂಟ್ರಿ ಕೊಡುವ ಮೂಲಕ ಮೊದಲಾ ಮೊದಲ ಭಾಗ ಮುಗಿಯುತ್ತದೆ.
ಇನ್ನು ಇಲ್ಲಿಂದ ಖದೀಮರನ್ನ ಅರ್ಕೇಶ್ವರ ಅಲಿಯಾಸ್ ಅರ್ಕ ಅಂಡರ್‌ವರ್ಲ್ಡ್‌ಗೆ ಎಂಟ್ರಿ ಕೊಟ್ಟು ಭೂಗತಲೋಕವನ್ನೇ ‘ಕಬ್ಜ’ ಮಾಡಲು ಮುಂದಾಗುತ್ತಾನೆ. ಇವನ ಹಾದಿಯಲ್ಲಿ ಒಬ್ಬೊಬ್ಬರೇ ನರ ರಾಕ್ಷಸರಂತೆ ದೈತ್ಯ ಭೂಗತ ದೊರೆಗಳು ಎದುರಾಗುತ್ತಾ ಹೋಗುತ್ತಾರೆ. ಇವರೆಲ್ಲರೊಂದಿಗೆ ಹೊಡೆದಾಟ ಬಡದಾಟ ನಡೆಯುತ್ತಾ ಕ್ಲೈಮ್ಯಾಕ್ಸ್ ಅಂತ ತಲುಪುವಷ್ಟರಲ್ಲಿ ಮೂವರು ಘಟಾನುಘಟಿಯರ ಮುಖಾಮುಖಿಯಾಗುತ್ತದೆ. ಇದು ನಿರೀಕ್ಷೆಗೂ ಮೀರಿದ ರೋಚಕತೆ ಮೂಡಿಸುತ್ತದೆ.
ಯಾರು ಆ ಮೂವರು…?
ಅರ್ಕೇಶ್ವರ ಏನಾಗುತ್ತಾನೆ…
ಯುವರಾಣಿಯ ಸ್ಥಿತಿಗತಿ….
ಕಬ್ಜ ಮಾಡುವವರು ಯಾರು… ಈ ಎಲ್ಲಾ ವಿಚಾರಗಳನ್ನು ತಿಳಿಯಬೇಕಾದರೆ ನೀವು ಚಿತ್ರಮಂದಿರಕ್ಕೆ ಬರಲೇಬೇಕು ಕಬ್ಜ ಚಿತ್ರವನ್ನು ನೋಡಬೇಕು.
ನಿರ್ದೇಶಕ ಆರ್. ಚಂದ್ರು ಒಂದು ಹೊಸ ಲೋಕವನ್ನು ಕಟ್ಟಿಕೊಡುವ ಪ್ರಯತ್ನವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಸ್ವತಂತ್ರ ಪೂರ್ವ ದೇಶಪ್ರೇಮದ ಘಟನೆಗಳ ಜೊತೆಗೆ ಸ್ವತಂತ್ರ ಬಂದ ನಂತರ ನಡೆಯುವ ರಾಜಕೀಯ ಕುತಂತ್ರಗಳು, ರಾಜಮನೆತನದ ದರ್ಬಾರ್, ಭೂಗತ ಲೋಕದ ಆರ್ಭಟ, ತಾಯಿ ಮಕ್ಕಳ ಮಮಕಾರ , ನಿಷ್ಕಲ್ಮಶ ಪ್ರೀತಿ ಎಲ್ಲವೂ ಗಮನ ಸೆಳೆಯುವಂತಿದೆ.
ಚಿತ್ರ ಕರಿ ನೆರಳಿನಲ್ಲೇ ಹೆಚ್ಚು ಸಾಗಿದ್ದು, ಕೆಜಿಎಫ್ ಚಿತ್ರದ ಛಾಯೆ ನೆನಪಿಸುತ್ತದೆ. ಕಥೆಯನ್ನು ಇನ್ನಷ್ಟು ವಿಶೇಷವಾಗಿ ಮಾಡಬಹುದಿತ್ತು ಎನಿಸುತ್ತದೆ. ಇನ್ನು ಚಿತ್ರದ ನಾಯಕನಾಗಿ ನಟಿಸಿರುವ ಉಪೇಂದ್ರ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ನ್ಯಾಯವನ್ನು ಒದಗಿಸಿದ್ದಾರೆ. ಆಕ್ಷನ್ ದೃಶ್ಯಗಳು ಹಾಗೂ ಸಂಭಾಷಣೆಗಳು ಗಮನ ಸೆಳೆಯುವಂತೆ ಮೂಡಿ ಬಂದಿದೆ.
ಇನ್ನು ಚಿತ್ರದ ವಿಶೇಷ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸುದೀಪ್ ಭರ್ಜರಿ ಎಂಟ್ರಿ ಕೊಟ್ಟು ಖಡಕ್ ಮಾತಿನ ಮೂಲಕ ಅಬ್ಬರಿಸಿದ್ದಾರೆ. ಇನ್ನು ಚಿತ್ರದ ಓಟಕ್ಕೆ ಪೂರಕವಾಗಿ ಆಗಾಗ ಕಿಚ್ಚನ ಧ್ವನಿ ಕೇಳುತ್ತಾ ಬರುವುದು ಮತ್ತೊಂದು ವಿಶೇಷ. ಪ್ರಮುಖ ಸಂದರ್ಭ ಒಂದರಲ್ಲಿ ಎಂಟ್ರಿ ಕೊಡುವ ಶಿವರಾಜ್ ಕುಮಾರ್ ಕಬ್ಜ ಭಾಗ-2 ಕ್ಕೆ ನಾಂದಿ ಹಾಡುವ ಡೈಲಾಗ್ ಗಮನ ಸೆಳೆಯುತ್ತದೆ. ಇನ್ನು ನಟಿ ಶ್ರೀಯಾ ಶರಣ್ ಮುದ್ದು ಮುದ್ದಾಗಿ ಟ್ರೆಡಿಶನ್ ಲುಕ್ ನಲ್ಲಿ ಸಹಜ ಸುಂದರಿಯಾಗಿ ಪಾತ್ರನ್ನ ನಿರ್ವಹಿಸಿದ್ದು, ನಮಾಮಿ ನಮಾಮಿ ಹಾಡಿನಲ್ಲಿ ಸೊಗಸಾಗಿ ಕಾಣಿಸುತ್ತಾರೆ.
ನಾಯಕನ ತಾಯಿಯಾಗಿ ಅಭಿನಯಿಸಿರುವ ಹಿರಿಯ ನಟಿ ಸುಧಾ , ಶ್ರೀಯಾ ತಂದೆ ವೀರ ಬಹದ್ದೂರ್ ಪಾತ್ರದಲ್ಲಿ ಮುರಳಿ ಶರ್ಮಾ, ನಾಯಕನ ಅಣ್ಣನಾಗಿ ಸುನಿಲ್ ಪುರಾಣಿಕ್ ಗಮನ ಸೆಳೆಯುವಂತೆ ನಟಿಸಿದ್ದಾರೆ. ಮತ್ತೊಬ್ಬ ಉತ್ತಮ ಪ್ರತಿಭೆ ನೀನಾಸಂ ಅಶ್ವಥ್ ಕೂಡ ತಮ್ಮ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದಾರೆ. ಚುಮು ಚುಮು… ಎಂಬ ಐಟಂ ಹಾಡು ತಾನ್ಯಾ ಹೋಪ್ ಚಳಿ ಬಿಟ್ಟು ನಟಿಸಿದ್ದಾರೆ.
ಇನ್ನು ಪೊಲೀಸ್ ಇನ್ಸ್ಪೆಕ್ಟರ್ ಪಾತ್ರಧಾರಿಯಾಗಿ ಪ್ರಮೋದ್ ಶೆಟ್ಟಿ , ನಾಯಕನ ಗೆಳೆಯನಾಗಿ ಅನುಪ್ ರೇವಣ್ಣ , ವಿಲ್ಲನ್ ಪಾತ್ರಧಾರಿಗಳಾಗಿ ದನಿಷ್ ಅಕ್ತರ್, ಜಾನ್ ಕೊಕೇನ್, ನವಾಬ್ ಷಾ , ತಾಹಾ ಷಾ, ಕೋಟ ಶ್ರೀನಿವಾಸ ರಾವ್, ಕಬೀರ್ ದುಹಾನ್ ಸಿಂಗ್, ದೇವಗಿಲ್, ಮಾಸ್ಟರ್ ಚಿರು, ಮಾಸ್ಟರ್ ಜ್ಞಾನ ಹಾಗೂ ಹಲವಾರು ಕಲಾವಿದರು ಈ ಚಿತ್ರದಲ್ಲಿ ಕಾಣಿಸಿಕೊಂಡು ಚಿತ್ರಕ್ಕೆ ದೊಡ್ಡ ಮೆರೆಗನ್ನ ನೀಡಿದ್ದಾರೆ.
ಈ ಚಿತ್ರಕ್ಕೆ ಕಾಸ್ಟ್ಯೂಮ್ ಡಿಸೈನ್ ಮಾಡಿದವರ ಕೈಚಳಕ ಮೆಚ್ಚುವಂಥದ್ದು , ಎ.ಜೆ ಶೆಟ್ಟಿ ಕ್ಯಾಮೆರಾ ಕೈಚಳಕ ಸೊಗಸಾಗಿ ಮೂಡಿ ಬಂದಿದೆ. ಇನ್ನು ರವಿ ಬಸ್ರೂರ್ ರವರ ಸಂಗೀತ ಎಂದಿನಂತೆ ಇದು , ಕೆಜಿಎಫ್ ನೆನಪಿಸುವಂತೆ ಮಾಡುತ್ತದೆ. ಮಹೇಶ್ ರೆಡ್ಡಿ ಸಂಕಲನ ಕೆಲಸ ಉತ್ತಮವಾಗಿದ್ದು , ಕಲಾ ನಿರ್ದೇಶಕ ಶಿವಕುಮಾರ್ ಹಾಕಿರುವ ಸೆಟ್ಟುಗಳು ಗಮನ ಸೆಳೆಯುತ್ತದೆ. ಇಂತಹ ಒಂದು ಅದ್ದೂರಿ ಚಿತ್ರವನ್ನು ನಿರ್ಮಿಸುವ ನಿರ್ಮಾಪಕರಿಗೆ ಸಾತ್ ನೀಡಿರುವ ಕಲಾವಿದರು , ತಂತ್ರಜ್ಞಾನರ ಶ್ರಮ ಕಾಣುತ್ತದೆ. ಒಟ್ಟಾರೆ ಒಂದು ಅದ್ದೂರಿ ಚಿತ್ರ ಹೊರಬಂದಿದ್ದು , ಎಲ್ಲರೂ ಒಮ್ಮೆ ಚಿತ್ರಮಂದಿರಕ್ಕೆ ಹೋಗಿ ಈ ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳಬಹುದು.