Cinisuddi Fresh Cini News 

ಕರೋನಾ ಎಫೆಕ್ಟ್ : ಬಹುಕೋಟಿ ಬಜೆಟ್ ನ ‘ಕಬ್ಜ’ ಚಿತ್ರದ ಶೂಟಿಂ ಬಂದ್

ಇಡೀ ವಿಶ್ವವನ್ನೇ ಕಾಡುತ್ತಿರುವ ಕೊರೋನಾ ಎಂಬ ಮಹಾಮಾರಿ ಚಿತ್ರರಂಗವನ್ನೂ ಕಾಡುತ್ತಿದೆ. ಇದರ ಆರ್ಭಟವನ್ನು ತಗ್ಗಿಸುವ ಸಲುವಾಗಿಯೇ ಒಂದು ವಾರದ ಕಾಲ ಇಡೀ ಚಿತ್ರರಂಗವನ್ನು ಸ್ತಬ್ಧಗೊಳಿಸಲಾಗಿತ್ತು. ಇದರ ಎಫೆಕ್ಟ್ ಕನ್ನಡ ಚಿತ್ರರಂಗಕ್ಕೂ ತಟ್ಟಿದೆ.
ಕಳೆದ ವಾರ ಬಿಡುಗಡೆಯಾದ ಕೆಲ ಚಿತ್ರಗಳು ಪ್ರದರ್ಶನ ನಿಲ್ಲಿಸಿದ್ದರೆ, ಇನ್ನು ಕೆಲವು ಚಿತ್ರಗಳು ಚಿತ್ರೀಕರಣವೇ ಸ್ಥಗಿತಗೊಂಡಿದೆ. ಇದರಿಂದ ಆಯಾಯಾ ಚಿತ್ರಗಳ ನಿರ್ಮಾಪಕರಿಗೆ ಭಾರೀ ಹೊಡೆತವೇ ಉಂಟಾಗಿದೆ.

ಪರಭಾಷಾ ಚಿತ್ರಗಳನ್ನೇ ಮೀರಿಸುವಂತೆ ಏಳು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದ್ದ 100 ಕೋಟಿ ಭಾರೀ ಮೊತ್ತದ ಕಬ್ಜ ಚಿತ್ರೀಕರಣವನ್ನು ನಿಲ್ಲಿಸಿದೆ. ಆರ್.ಚಂದ್ರು ಹಾಗೂ ಉಪೇಂದ್ರ ಜೋಡಿಯಲ್ಲಿ ಹ್ಯಾಟ್ರಿಕ್ ಚಿತ್ರವಾಗಿರುವ ಕಬ್ಜ ರೆಟ್ರೋ ಸ್ಟೈಲ್‍ನಲ್ಲಿ ನಿರ್ಮಾಣವಾಗುತ್ತಿದ್ದು ಈ ಚಿತ್ರಕ್ಕಾಗಿ ಮಿನರ್ವ ಮಿಲ್‍ನಲ್ಲಿ 9 ವಿಶೇಷ ಸೆಟ್‍ಗಳನ್ನು ಹಾಕಲಾಗಿದೆ. 1947ರ ಕಾಲಮಾನದಲ್ಲಿ ನಡೆಯುವ ಕಥೆಯಾಗಿದೆ.

ನಿರ್ದೇಶಕ ಚಂದ್ರು ಪ್ರಕಾರ ಒಂದು ಚಿತ್ರ ಮಾಡಬೇಕಾದರೆ ಪೂರ್ವತಯಾರಿ ಅತ್ಯಗತ್ಯ. ಇಡೀ ದೇಶವನ್ನೇ ಒಮ್ಮೆ ತಿರುಗಿ ನೋಡುವಂತೆ ಮಾಡುವ ಆಸೆ ನನ್ನದು, ಆ ನಿಟ್ಟಿನಲ್ಲಿ ನಾನು ಹಗಲಿರುಳು ಎನ್ನದಂತೆ ನನ್ನ ತಂಡವನ್ನು ಕಟ್ಟಿಕೊಂಡು ಮುಂದೆ ನುಗ್ಗಿದ್ದೇನೆ, ಇದಕ್ಕೆ ಹಲವರ ಸಹಕಾರ, ಬೆನ್ನೆಲುಬು ನನ್ನ ಮೇಲಿದೆ. ಅದ್ಧೂರಿ ಸೆಟ್‍ಗಳಲ್ಲಿ ನಿರೀಕ್ಷಿಸಿದಂತಹ ಕಲಾವಿದರ ದಂಡೇ ಅಭಿನಯಿಸುತ್ತಿದ್ದಾರೆ.

ಅಂದುಕೊಂಡಂತೆ ಎಲ್ಲ ತಯಾರಿಗಳು ನಡೆಯುತ್ತಿದ್ದು, ಈಗ ಎರಡನೇ ಹಂತದ ಚಿತ್ರೀಕರಣವನ್ನು ನಡೆಸುತ್ತಿದ್ದೇನೆ, ಕೊರೋನಾ ವೈರಸ್‍ನಿಂದ ಒಂದು ವಾರಗಳ ಕಾಲ ಚಿತ್ರೀಕರಣಕ್ಕೆ ಬ್ರೇಕ್ ನೀಡಿದ್ದೇನೆ, 100 ಕೋಟಿ ರೂ. ವೆಚ್ಚದ ಈ ಚಿತ್ರವು 7 ಭಾಷೆಗಳಲ್ಲೂ ಸಹ ಗಮನ ಸೆಳೆಯುವಂತೆ ಚಿತ್ರವನ್ನು ಮಾಡಲಿದ್ದೇನೆ ಇದಕ್ಕೆ ಸಂಪೂರ್ಣ ಬೆಂಬಲ ರಿಯಲ್‍ಸ್ಟಾರ್ ಉಪೇಂದ್ರ ಅವರು ನೀಡಿದ್ದಾರೆ.

ಚಿತ್ರದ ಕಥೆಯ ವಿಚಾರದಿಂದ ಇಲ್ಲಿಯವರೆಗೂ ಅವರು ನನ್ನ ಜೊತೆಯಲ್ಲೇ ಇದ್ದಾರೆ. ಮುಂದೆಯೂ ಇರುತ್ತಾರೆ. ನಾನು ಈವರೆಗೆ ಮಾಡಿದ 11 ಸಿನಿಮಾಗಳಲ್ಲೇ ಇದು ದೊಡ್ಡ ಚಾಲೆಂಜಿಂಗ್ ಚಿತ್ರವಾಗಿದೆ. ಕನ್ನಡ ಚಿತ್ರರಂಗಕ್ಕೆ ನಾನು ಏನಾದ್ರೂ ದಾಖಲೆಯ ಚಿತ್ರ ಮಾಡಬೇಕು ಅಂದುಕೊಂಡು 7 ಭಾಷೆಗಳಲ್ಲಿ ಕಬ್ಜ ಸಿನಿಮಾ ಮಾಡುತ್ತಿದ್ದೇನೆ ಎಂದರು.

ಚಿತ್ರದಲ್ಲಿ ಒಂದೊಂದು ಫ್ರೇಮ್ ನೋಡೋಕೆ ಖುಷಿಯಾಗುತ್ತಿದೆ. ಕಬ್ಜ ಒಂದು ವಂಡರ್‍ಫುಲ್ ಸಿನಿಮಾವಾಗಲಿದೆ. ಪ್ರತಿಯೊಬ್ಬರೂ ಸಹ ಈ ಸುಂದರ ಜರ್ನಿಯನ್ನು ಎಂಜಾಯ್ ಮಾಡುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ನೋಡುಗರಿಗೆ ಓಂ ಸಿನಿಮಾವನ್ನು ನೆನಪಿಸುತ್ತಿದೆ. ಅಷ್ಟು ವಿಭಿನ್ನವಾಗಿ, ಹೊಸದಾಗಿ ಚಂದ್ರು ಮೇಕಿಂಗ್ ಮಾಡಿದ್ದಾರೆ ಎಂದು ಈ ಹಿಂದೆ ಉಪೇಂದ್ರ ಅವರು ಹೇಳಿದ್ದರು.

ಅದರಂತೆ ಚಿತ್ರ ಕೂಡ ಅದ್ಧೂರಿಯಾಗಿ ಮೂಡಿಬರುತ್ತಿದೆಯಂತೆ. ಈ ಚಿತ್ರಕ್ಕೆ ರವಿವರ್ಮ ಸಾಹಸ ನಿರ್ದೇಶನ ಮಾಡುತ್ತಿದ್ದು, ಎಜೆ ಅವರ ಛಾಯಾಗ್ರಹಣ ಹಾಗೂ ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಹೆಚ್ಚಿನ ಮಾಹಿತಿಯನ್ನು ತಂಡ ಸದ್ಯದಲ್ಲೇ ನೀಡಲಿದೆ ಎಂದು ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕರಾದ ಆರ್.ಚಂದ್ರು ತಿಳಿಸಿದ್ದಾರೆ.

Share This With Your Friends

Related posts