Cinisuddi Fresh Cini News 

9 ಸ್ಪೆಷಲ್ ಸೆಟ್‍ಗಳಲ್ಲಿ ‘ಕಬ್ಜ’ ಚಿತ್ರದ ಶೂಟಿಂಗ್

ರೆಟ್ರೋ ಸ್ಟೈಲ್‍ನಲ್ಲಿ ನಿರ್ಮಾಣವಾಗುತ್ತಿರುವ ಆರ್.ಚಂದ್ರು ಹಾಗೂ ರಿಯಲ್‍ಸ್ಟಾರ್ ಉಪೇಂದ್ರ ಅವರ ‘ಕಬ್ಜ’ ಚಿತ್ರಕ್ಕಾಗಿ ಮಿನರ್ವ ಮಿಲ್‍ನಲ್ಲಿ 9 ವಿಶೇಷ ಸೆಟ್‍ಗಳನ್ನು ಹಾಕಲಾಗಿತ್ತು. ಚಿತ್ರೀಕರಣದ ವಿಷಯ ತಿಳಿಸಲೆಂದು ಚಂದ್ರು ಅವರು ಮಾಧ್ಯಮದವರನ್ನು ಅಲ್ಲಿಗೆ ಆಮಂತ್ರಿಸಿದ್ದರು.

ನಿರ್ದೇಶಕ ಚಂದ್ರು ಮಾತನಾಡಿ, ಬ್ರಹ್ಮ, ಐ ಲವ್ ಯು ಚಿತ್ರಗಳಲ್ಲಿ ನಟಿಸಿರುವ ಉಪೇಂದ್ರ ಅವರು ನನ್ನ ಎಲ್ಲಾ ಚಿತ್ರಗಳಿಗೂ ಸಾಥ್ ನೀಡುತ್ತಲೇ ಬಂದಿದ್ದಾರೆ, ಈಗ ತಯಾರಾಗುತ್ತಿರುವ ‘ಕಬ್ಜ’ ಚಿತ್ರವನ್ನು 7 ಭಾಷೆಗಳಲ್ಲಿ ಮಾಡಬೇಕೆಂದುಕೊಂಡಿದ್ದೇವೆ, ಆದರೆ ಅದು ಅಷ್ಟು ಸುಲಭವಲ್ಲ.

ನಿರ್ದೇಶಕ ಹಾಗೂ ನಾಯಕನ ಹೊಂದಾಣಿಕೆಯಿಂದ ಇಂತಹ ಕೆಲಸವನ್ನು ಮಾಡಬಹುದು ನನ್ನ ಚಿತ್ರಜೀವನದಲ್ಲೇ ಅದ್ದೂರಿಯಾಗಿರುವ ಕಬ್ಜ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ದಾಖಲೆ ಮಾಡಬೇಕೆಂದುಕೊಂಡಾಗಲೇ ಈ ಚಿತ್ರವನ್ನು 7 ಭಾಷೆಯಲ್ಲಿ ಮಾಡಬೇಕೆಂದೆನಿಸಿತು. ಅದೇ ರೀತಿ ಚಿತ್ರದ ಬಜೆಟ್ ಕೂಡ ಹೆಚ್ಚಾಗಿರುವುದರಿಂದ ನನ್ನ ನೆರವಿಗೆ ಸ್ನೇಹಿತರು ಬಂದಿದ್ದಾರೆ ಎಂದು ಹೇಳಿದರು.

ನಟ ಜಾನ್ ಕೊಕೇನ್ ಮಾತನಾಡಿ, ಈ ಹಿಂದೆ ಚಂದ್ರು ಅವರು ನಿರ್ದೇಶಿಸಿದ್ದ ಮೈಲಾರಿ ಚಿತ್ರದಲ್ಲಿ ನಟಿಸಿದ್ದೆ, ಕಬ್ಜ ನನ್ನ ಎರಡನೇ ಸಿನಿಮಾ. ಈ ಸಿನಿಮಾದಲಿ ಉಪೇಂದ್ರ ಅವರೊಂದಿಗೆ ಕೆಲಸ ಮಾಡಿದ್ದು ಸಂತಸ ತಂದಿದೆ ಎಂದು ಹೇಳಿದರು.

ನಟ ಉಪೇಂದ್ರ ಮಾತನಾಡಿ, ಖಬ್ಜ ಚಿತ್ರದ ಶೂಟಿಂಗ್ ಅನ್ನು ನೋಡುತ್ತಿದ್ದರೆ ನನಗೆ ನನ್ನ ನಿರ್ದೇಶನದ ಓಂ ಚಿತ್ರದ ನೆನಪು ತರಿಸುತ್ತದೆ. ಅದಕ್ಕೆ ಕಾರಣ ಚಂದ್ರು ಅವರ ಮೇಕಿಂಗ್. ಈ ಚಿತ್ರದ ಒಂದೊಂದು ಫ್ರೇಮು ನೋಡೋಕೆ ಖುಷಿಯಾಗುತ್ತದೆ ಅದಕ್ಕೆ ಚಂದ್ರು ಅವರ ಕಾರ್ಯವೈಖರಿಯೇ ಕಾರಣ. ನನಗೆ ಈ ಸಿನಿಮಾ ಮೂಲಕ ನನ್ನ ಮೊದಲ ಸಿನಿಮಾ ಮಾಡಿದ ಅನುಭವ ಆಗುತ್ತಿದೆ ಎಂದು ಹೇಳಿದರು.

ಸಾಹಸ ನಿರ್ದೇಶಕ ರವಿವರ್ಮ ಕೂಡ ಆಕ್ಷನ್ ಕುರಿತು ಮಾತನಾಡಿದರು. ಚಿತ್ರದ ಹೀರೋಯಿನ್ ಆಯ್ಕೆಪ್ರಕ್ರಿಯೆ ನಡೆದಿದೆ. ಈ ಚಿತ್ರವನ್ನು 2020ರಲ್ಲೇ ರಿಲೀಸ್ ಮಾಡಬೇಕೆಂಬ ಪ್ಲಾನ್ ಚಿತ್ರತಂಡಕ್ಕಿದೆ. ಎಜೆ ಅವರ ಛಾಯಾಗ್ರಹಣ ಹಾಗೂ ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಕಬ್ಜ ಚಿತ್ರವು ಚಂದ್ರು ಅವರ ಬಯಕೆಯಂತೆ ಇಡೀ ಚಿತ್ರರಂಗದಲ್ಲೇ ಹೊಸದೊಂದು ದಾಖಲೆಯನ್ನು ನಿರ್ಮಿಸುವಂತಾಗಲಿ.

Related posts