Cinisuddi Fresh Cini News 

“ಇಂಡಿಯನ್ ಫಿಲಂ ಮೇಕರ್ಸ್‍ ಅಸೋಸಿಯೇಷನ್”ಗೆ ಚಾಲನೆ

ಸಿನಿಮಾ ಮಂದಿಗೆ ಅನುಕೂಲವಾಗುವಂತ ಒಂದು ಸಂಸ್ಥೆ ಈಗ ಅಧಿಕೃತವಾಗಿ ಚಾಲನೆಯನ್ನು ಪಡೆದುಕೊಂಡಿದೆ. ಫಿಲಂ ಚೇಂಬರ್ , ನಿರ್ಮಾಪಕರ ಸಂಘ, ನಿರ್ದೇಶಕರ ಸಂಘ, ಕಲಾವಿದರ ಸಂಘ ಸೇರಿದಂತೆ ಉದ್ಯಮಕ್ಕೆ ಸಂಬಂದಪಟ್ಟ ಬಹುತೇಕ ವಿಭಾಗಗಳಿಗೆ ಅದರದೇ ಆದ ಸಂಘ, ಸಂಸ್ಥೆಗಳಿವೆ.

ಅವೆಲ್ಲಾ ಸದಸ್ಯರ ಕಷ್ಟ, ನಷ್ಟಗಳಿಗೆ ಸ್ಪಂದಿಸುವಲ್ಲಿ ನಿರತವಾಗಿವೆ. ಇದೀಗ ಚಲನಚಿತ್ರೋದ್ಯಮದ 27 ವಿಭಾಗಗಳನ್ನು ಹಿತ ಕಾಪಾಡಲು ಇಂಡಿಯನ್ ಫಿಲಂ ಮೇಕರ್ಸ್ ಅಸೋಸಿಯೇಷನ್ ಎಂಬ ಸಂಸ್ಥೆ ಉಗಮವಾಗಿದೆ.

ಇದು ಕರ್ನಾಟಕ ಅಲ್ಲದೆ ದೇಶದ ಆನೇಕ ರಾಜ್ಯಗಳಲ್ಲಿ ತನ್ನ ಶಾಖೆಗಳನ್ನು ಆರಂಭಿಸಿದೆ. ಉತ್ತರ ಭಾರತದ ಶ್ರೀನಗರದಲ್ಲಿ ಮೊದಲು ಆರಂಭವಾದ ಈ ಸಂಸ್ಥೆ ಆನಂತರ ತೆಲಂಗಾಣಕ್ಕೆ ವಿಸ್ತಾರವಾಯಿತು. ಈಗ ಕರ್ನಾಟಕದಲ್ಲೂ ತನ್ನ ಸೇವೆ ಆರಂಭಿಸಿದ್ದು, ನಿರ್ಮಾಪಕ ಪಿ.ಮೂರ್ತಿ ಅವರು ಇದರ ಅಧ್ಯಕ್ಷರಾಗಿದ್ದು, ಸ್ಕೈಲೈನ್ ಸ್ಟುಡಿಯೋಸ್‍ನ ದಿಲೀಪ್‍ಕುಮಾರ್ ಪ್ರಧಾನ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇದರ ಉದ್ಘಾಟನಾ ಪತ್ರಿಕಾಗೋಷ್ಟಿ ಮಲ್ಲೇಶ್ವರಂನ ಎಸ್‍ಆರ್‍ವಿ ಥಿಯೇಟರಿನಲ್ಲಿ ನಡೆಯಿತು. ಕಳೆದ ನಾಲ್ಕೂವರೆ ತಿಂಗಳಿಂದ ನಿಂತು ಹೋಗಿದ್ದ ಚಲನಚಿತ್ರ ಪತ್ರಿಕಾಗೋಷ್ಟಿಗಳಿಗೆ ಐಎಫ್‍ಎಂಏ ನಿಂದ ಮತ್ತೆ ಚಾಲನೆ ದೊರಕಿದಂತಾಯಿತು.

ಮೊದಲಿಗೆ ಸಂಸ್ಥೆಯ ಕುರಿತಂತೆ ತೆರೆಯ ಮೇಲೆ ಹಿರಿಯರಾದ ದೊಡ್ಡರಂಗೇಗೌಡ, ವಿ.ಮನೋಹರ್, ಸುನಿಲ್ ಪುರಾಣಿಕ್, ಬೆಂಗಳೂರು ನಾಗೇಶ್ ಅಲ್ಲದೆ ನಟ ಪ್ರಥಮ್, ನಾಗೇಂದ್ರ ಪ್ರಸಾದ್ ಹಾಗೂ ಇನ್ನು ಮುಂತಾದವರ ಶುಭ ಹಾರೈಕೆಯ ನುಡಿಗಳನ್ನು ಬಿತ್ತರಿಸಲಾಯಿತು.

ಪ್ರದಾನ ಕಾರ್ಯದರ್ಶಿ ದಿಲೀಪ್‍ ಕುಮಾರ್ ಮಾತನಾಡುತ್ತ ಚಲನಚಿತ್ರರಂಗದ 27 ವಿಭಾಗಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಇಂಡಿಯನ್ ಫಿಲಂ ಮೇಕರ್ಸ್ ಅಸೋಸಿಯೇಷನ್ ಸಂಸ್ಥೆಯು ಕೆಲಸ ಮಾಡುತ್ತದೆ. ಇದರಲ್ಲಿ ಸದಸ್ಯರಾದವರು ಭಾರತದಾದ್ಯಂತ ಯಾವುದೇ ಚಿತ್ರರಂಗದಲ್ಲಿ ಕೆಲಸ ಮಾಡಬಹುದು.

ಇಲ್ಲಿ ಸದಸ್ಯರಾದರೆ 60 ವರ್ಷ ಮೇಲ್ಪಟ್ಟವರಿಗೆ ಪಿಂಚಣಿ ಯೋಜನೆ ಕೂಡ ಇರುತ್ತದೆ. ಇಎಫ್, ಪಿಎಫ್, ಗ್ರಾಚುಟಿಯಂಥ ಸೌಲಭ್ಯಗಳಿವೆ. ನಿರ್ಮಾಪಕರು ಇಲ್ಲಿ ಸದಸ್ಯರಾಗಲು 5 ಸಾವಿರ ರೂ. ಗಳನ್ನು ಪಾವತಿಸಬೇಕಾಗುತ್ತದೆ.

ಇನ್ನುಳಿದಂತೆ ಉಳಿದ ಎಲ್ಲಾ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವವರು ಕೇವಲ 2500 ರೂಗಳನ್ನು ಪಾವತಿಸಿದರೆ ಸಾಕು, ನಿಮಗೆ ಗುರುತಿನ ಚೀಟಿ ಸಿಗುತ್ತದೆ. ಹಾಗೆಯೇ ದೆಹಲಿ ಸರ್ಕಾರ, ಎಂಎಸ್‍ಎಂ ಅಲ್ಲದೆ ರಾಜ್ಯ ಸರ್ಕಾರ ಕೂಡ ಸಹಕಾರ ನೀಡುತ್ತಿದೆ ಎಂದು ದಾಖಲೆ ಪತ್ರಗಳ ಪ್ರತಿಯನ್ನು ತೋರಿಸಿದರು.

ದಕ್ಷಿಣ ಭಾರತದ ಮುಖ್ಯ ಕಚೇರಿಯಾಗಿ ಬೆಂಗಳೂರಿನಲ್ಲಿ ಆರಂಭವಾಗಿದ್ದು , ಕಿರು ಚಿತ್ರ ನಿರ್ಮಾಪಕರು, ನಿರ್ದೇಶಕರು ಕೂಡ ಸದಸ್ಯತ್ವವನ್ನು ಪಡೆದುಕೊಳ್ಳಬಹುದಾಗಿದೆ. ಮುಂದೆ ಸರ್ಕಾರದಿಂದ ಗುಣಮಟ್ಟ ಕಿರುಚಿತ್ರಗಳ ಸಬ್ಸಿಡಿ ಕೊಡಿಸುವ ವ್ಯವಸ್ಥೆ ಮಾಡಲಿದ್ದಾರಂತೆ. ನಂತರ ಸಂಘದ ಅಧ್ಯಕ್ಷ ಪಿ. ಮೂರ್ತಿ ಮಾತನಾಡುತ್ತ ಪ್ರತಿಯೊಬ್ಬರಿಗೂ ಸಿನಿಮಾರಂಗದಲ್ಲಿ ಸಾಧನೆ ಮಡಬೇಕೆಂಬ ಆಸೆಯಿರುತ್ತದೆ. ಅಂಥವರಿಗೆ ಅವಕಾಶ ಮಾಡಿಕೊಡಬೇಕೆಂದು ಈ ಸಂಸ್ಥೆ ಸ್ಥಾಪಿಸಲಾಗಿದೆ.

ಚಿತ್ರರಂಗದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಏನಾದರೂ ತೊಂದರೆ ಉಂಟಾದರೆ ಅಂಥವರ ಸಹಾಯಕ್ಕೆ ಇಂಡಿಯನ್ ಫಿಲಂ ಮೇಕರ್ಸ್ ಅಸೋಸಿಯೇಷನ್ ಸಂಸ್ಥೆ ಮುಂದೆ ಬರುತ್ತದೆ. ನಾವು ಬ್ಯಾಂಕ್‍ನಲ್ಲಿ ಉಚಿತವಾಗಿ ಕರೆಂಟ್ ಅಕೌಂಟ್ ಮಾಡಿಸಿಕೊಡುತ್ತೇವೆ.

ಇಲ್ಲಿ ಸದಸ್ಯರಾದವರು ದೇಶದ ಯಾವುದೇ ಮೂಲೆಯಲ್ಲಿ ಬೇಕದರೂ ಸಿನಿಮಾ ಇಂಡಸ್ಟ್ರಿಯ ಕೆಲಸ ಮಾಡಬಹುದು. ಕರೋನಾ ಎಂಬ ಮಹಾಮಾರಿ ಒಕ್ಕರಿಸಿದ ಸಮಯದಲ್ಲಿ ಸಾಕಷ್ಟು ಜನ ಸಂಕಷ್ಟದಲ್ಲಿದ್ದಾರೆ. ಅವರಿಗೆ ಅನುಕೂಲವಾಗಲೆಂದೇ ಈ ಸಂಸ್ಥೆ ಕೆಲಸ ಮಾಡುತ್ತದೆ ಎಂದು ಸಂಸ್ಥೆಯ ಕುರಿತು ಮಾಹಿತಿಗಳನ್ನು ನೀಡಿದರು.

ಈ ಇಂಡಿಯನ್ ಫಿಲ್ಮ್ ಮೇಕರ್ಸ್ ಅಸೋಸಿಯೇಷನ್ನಲ್ಲಿ ಬಹಳಷ್ಟು ಅನುಕೂಲಗಳು ಸಿಗಲಿದ್ದು , ಹೆಚ್ಚಿನ ಮಾಹಿತಿಯನ್ನು ಕಚೇರಿಯಲ್ಲಿ ಅಥವಾ ವೆಬ್ ಸೈಟ್ ನಲ್ಲಿ ಕೂಡ ತಿಳಿದುಕೊಳ್ಳಬಹುದಾಗಿದೆ ಯಂತೆ.

ಇದೇ ಸಂದರ್ಭದಲ್ಲಿ ಅಸೋಸಿಯೇಷನ್ ಉಪಾಧ್ಯಕ್ಷ ಶಿವಾನಂದ ಮುದ್ದಣ್ಣವರ್ ಒಂದಷ್ಟು ವಿಚಾರವನ್ನು ಹಂಚಿಕೊಂಡರು. ಹಾಗೆಯೇ ಜಂಟಿ ಕಾರ್ಯದರ್ಶಿ ಬಾಲಣ್ಣ , ಖಜಾಂಚಿ ಚೆಲುವರಾಜ್ ಹಾಗೂ ಕಮಿಟಿ ಸದಸ್ಯರು ಹಾಜರಿದ್ದರು.

Related posts