Cinisuddi Fresh Cini News Kollywood 

ಕರ್ನಾಟಕದ ಸಿನಿಮಾ ಕಾರ್ಮಿಕರ ನೆರವಿಗೆ ಬಂದ ಇಳಯ ದಳಪತಿ ವಿಜಯ್

ಕೊರೊನಾ ವೈರಸ್ ಕಾರಣದಿಂದ ಸಂಕಷ್ಟದಲ್ಲಿರುವ ಜನರಿಗೆ ನೆರವಾಗಲು ಸಾಕಷ್ಟು ಸಿನಿಮಾ ಕಲಾವಿದರುಗಳು, ನಿರ್ದೇಶಕ, ನಿರ್ಮಾಪಕರುಗಳು ತಮ್ಮಿಂದಾದ ರೀತಿಯಲ್ಲಿ ಸಹಾಯಕ್ಕೆ ಮುಂದಾಗುತ್ತಿದ್ದಾರೆ.

ಈಗಾಗಲೇ ಅನೇಕ ನಟರು, ನಟಿಯರು ಸರ್ಕಾರಗಳ ಪರಿಹಾರ ನಿಧಿಗೆ ತಮ್ಮ ದೇಣಿಗೆ ಪಾವತಿಸುವ ಮೂಲಕ ಅಥವಾ ಕಷ್ಟದಲ್ಲಿರುವ ಜನರಿಗೆ ಆಹಾರ ಸಾಮಗ್ರಿಗಳನ್ನು ಒದಗಿಸುವ ಮೂಲಕ ನೆರವಾಗುತ್ತಿದ್ದಾರೆ.

ಇನ್ನು ಕೆಲವರು ಚಲನಚಿತ್ರ ಕಾರ್ಮಿಕರಿಗೆ ಸಹಾಯ ಮಾಡುತ್ತಿದ್ದಾರೆ. ಹೀಗೆ ಸಿನಿಮಾ ಸೆಲೆಬ್ರಿಟಿಗಳು ತಾವು ಸಂಪಾದಿಸಿದ್ದರಲ್ಲಿ ಒಂದಷ್ಟು ಭಾಗವನ್ನು ಈ ಸಂಕಷ್ಟದ ಸಮಯದಲ್ಲಿ ವಿನಿಯೋಗಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ.

ಆಯಾ ರಾಜ್ಯಗಳ, ಆಯಾ ಭಾಷೆಯ ಸೆಲೆಬ್ರಿಟಿ ಕಲಾವಿದರುಗಳು ತಮ್ಮ ಭಾಗದ ಜನರಿಗೆ ನೆರವಾಗಲು ಅಥವಾ ತಮ್ಮ ರಾಜ್ಯ ಸರ್ಕಾರಕ್ಕೆ ಸಹಾಯ ಮಾಡಲು ಮುಂದಾಗುತ್ತಿದ್ದಾರೆ. ಆದರೆ ತಮಿಳು ನಟ ಇಳಯ ದಳಪತಿ ವಿಜಯ್ ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ನಡೆದಿದ್ದಾರೆ.

ಅವರು ತಮಿಳು ನಾಡು ಅಲ್ಲದೆ ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳಿಗೂ ತಮ್ಮ ನೆರವಿನ ಹಸ್ತ ಚಾಚಿದ್ದಾರೆ. ಕೊರೊನಾ ವೈರಸ್ ಸೋಂಕಿನಿಂದ ಸಂಕಷ್ಟದಲ್ಲಿರುವ ವಿವಿಧ ರಾಜ್ಯಗಳಿಗೆ ಹಾಗೂ ದಕ್ಷಿಣ ಭಾರತದ ಸಿನಿಮಾ ಕಾರ್ಮಿಕರ ಸಂಘಕ್ಕೆ ವಿಜಯ್ ದಳಪತಿ ಒಟ್ಟು 1.30 ಕೋಟಿ ರೂಪಾಯಿಗಳ ದೇಣಿಗೆಯನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಪ್ರಧಾನ ಮಂತ್ರಿಗಳ ‘ಪಿಎಂ ಕೇರ್’ ಪರಿಹಾರ ನಿಧಿಗೆ ವಿಜಯ್ ದಳಪತಿ ಅವರು 25 ಲಕ್ಷ ರೂ.ಗಳ ದೇಣಿಗೆಯನ್ನು ನೀಡಿದ್ದಾರೆ. ಹಾಗೆಯೇ ತಮ್ಮ ತವರು ತಮಿಳುನಾಡಿನ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 50 ಲಕ್ಷ ರೂ.ಗಳ ದೇಣಿಗೆ ರವಾನಿಸಿದ್ದಾರೆ. ಅಲ್ಲದೆ ಪಕ್ಕದ ರಾಜ್ಯ ಕೇರಳದಲ್ಲಿ ಹೆಚ್ಚು ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿರುವುದರಿಂದ ಅಲ್ಲಿನ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 10 ಲಕ್ಷ ರೂ ದೇಣಿಗೆಯನ್ನು ನೀಡಿದ್ದಾರೆ.

ಇದಲ್ಲದೆ, ದಕ್ಷಿಣ ಭಾರತದ ಸಿನಿಮಾ ನೌಕರರ ಸಂಸ್ಥೆಗೆ (ಎಫ್‍ಇಎಫ್‍ಎಸ್‍ಐ) 25 ಲಕ್ಷ ರೂ.ಗಳ ಸಹಾಯ ಒದಗಿಸಿದ್ದಾರೆ. ಅಷ್ಟೇ ಅಲ್ಲದೆ ಅವರು ದಕ್ಷಿಣ ಭಾರತದ ಇತರೆ ರಾಜ್ಯಗಳಿಗೂ ತಮ್ಮ ನೆರವನ್ನು ನೀಡಿದ್ದಾರೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಲಾ 5 ಲಕ್ಷ ರೂ.ಗಳನ್ನು ದೇಣಿಗೆಯಾಗಿ ನೀಡಿದ್ದಾರೆ.

ಹಾಗೆಯೇ ಕೇಂದ್ರಾಡಳಿತ ಪ್ರದೇಶವಾದ ಪುದುಚೆರಿಗೂ ಐದು ಲಕ್ಷ ರೂ.ಗಳ ದೇಣಿಗೆಯನ್ನು ಕೊಟ್ಟಿದ್ದಾರೆ. ಹೀಗೆ ವಿವಿಧೆಡೆ ತಮ್ಮ ನೆರವನ್ನು ಒದಗಿಸಿರುವ ವಿಜಯ್ ಅವರು ಸ್ಥಳೀಯರಿಗೆ ಸಹಾಯ ಮಾಡಲು ಕೂಡ ಮತ್ತೊಂದು ಯೋಜನೆ ರೂಪಿಸಿದ್ದಾರೆ. ಸಂಕಷ್ಟದಲ್ಲಿರುವ ದಿನಗೂಲಿ ಕಾರ್ಮಿಕರು, ನಿರ್ಗತಿಕರಿಗೆ ಸಹಾಯ ಮಾಡುವ ಉದ್ದೇಶದಿಂದ ತಮಿಳು ನಾಡಿನಾದ್ಯಂತ ಇರುವ ತಮ್ಮ ಅಭಿಮಾನಿ ಬಳಗದ ಸದಸ್ಯರಿಗೂ ಹಣ ನೀಡಿದ್ದಾರೆ. ಆದರೆ ಎಷ್ಟು ಮೊತ್ತದ ಹಣ ಕೊಟ್ಟಿದ್ದಾರೆ ಎನ್ನುವುದನ್ನು ಬಹಿರಂಗಪಡಿಸಿಲ್ಲ.

Related posts