Cinisuddi Fresh Cini News 

‘ ಹುಷಾರ್’ ಚಿತ್ರಕ್ಕೆ ಮುಹೂರ್ತ

ಕಳೆದ ಮೂರು ದಶಕಗಳಿಂದ ಸಿನಿಮಾ, ಕಿರುತೆರೆ ಸೇರಿ ಬಣ್ಣದ ಲೋಕದ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಅನುಭವ ಇರುವ ಸತೀಶ್ ರಾಜ್ ಇದೀಗ ಹುಷಾರ್ ಸಿನಿಮಾ ಮೂಲಕ ಆಗಮಿಸುತ್ತಿದ್ದಾರೆ. ಸಂಪೂರ್ಣ ಹೊಸ ತಂಡವನ್ನು ಜತೆಗೆ ಕರೆತರುತ್ತಿರುವ ಅವರು, ಗುರುವಾರವಷ್ಟೇ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತವನ್ನೂ ನೆರವೇರಿಸಿಕೊಂಡಿದ್ದಾರೆ.

ಹಿರಿಯ ನಿರ್ದೇಶಕ ಭಗವಾನ್ ಮತ್ತು ಎನ್.ಎಂ ಸುರೇಶ್ ಆಗಮಿಸಿ ಕ್ಲಾಪ್ ಮಾಡಿ ಹೊಸಬರ ಈ ನೂತನ ಪ್ರಯತ್ನಕ್ಕೆ ಶುಭ ಹಾರೈಸಿದರು. ಬಳಿಕ ಸುದ್ದಿಗೋಷ್ಠಿಯಲ್ಲಿ ಚಿತ್ರದ ವಿಶೇಷತೆ ಮತ್ತು ಈ ಸಿನಿಮಾದ ಕಥಾಹಂದರದ ಬಗ್ಗೆ ಇಡೀ ತಂಡ ಮಾಹಿತಿಯನ್ನು ಹಂಚಿಕೊಂಡಿತು.

‘ಸಿನಿಮಾ, ಕಿರುತೆರೆ, ನಾಟಕದಲ್ಲಿ ನಟಿಸಿದ್ದೇನೆ. ಇದೀಗ ನಿರ್ದೇಶನ ಮತ್ತು ನಿರ್ಮಾಣಕ್ಕಿಳಿದಿದ್ದೇನೆ. ಸತೀಶ್ ರಾಜ್ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ಮೂಡಿಬರಲಿದೆ. ಚಿತ್ರದ ಶೀರ್ಷಿಕೆಯೇ ಹೇಳುವಂತೆ ಸಾಮಾಜಿಕ ಕಳಕಳಿಯ ಹಿನ್ನೆಲೆಯಲ್ಲಿ ಸಿನಿಮಾ ಸಿದ್ಧವಾಗಲಿದೆ.

ಹಳ್ಳಿಗಾಡಿನಲ್ಲಿ ನಡೆಯುವ ಕಥೆ ಇದಾಗಿದ್ದು, ಸಾಮಾಜಿಕ ಜವಾಬ್ದಾರಿಯುಳ್ಳ ಯುವಕ ಹೇಗೆ ಬದಲಾವಣೆಗೆ ನಾಂದಿ ಹಾಡುತ್ತಾನೆ ಎಂಬುದೇ ಹುಷಾರು ಚಿತ್ರ ಒಂದೆಳೆ’ ಎಂದು ಮಾಹಿತಿ ನೀಡುತ್ತಾರೆ.

‘ನಾವು ಏನೇ ಮಾಡುವಾಗ ಹುಷಾರಪ್ಪ, ಹುಷಾರು ಕಣೋ ಎಂದು ಹೇಳೇ ಹೇಳುತ್ತೇವೆ. ಆ ಒಂದು ಭಾವವನ್ನೇ ಈ ಸಿನಿಮಾದಲ್ಲಿ ತುಂಬಿದ್ದೇವೆ. ನಮ್ಮ ಸುತ್ತಲಿನವರೇ ಮಾಡುವ ಕೆಲಸಗಳು, ಹೇಗೆ ಸಮಾಜಕ್ಕೆ ಕಂಟಕವಾಗುತ್ತವೆ. ಆ ಎಚ್ಚರಿಕೆ ಸಂದೇಶವನ್ನೇ ನಾವಿಲ್ಲಿ ಹೇಳಹೊರಟಿದ್ದೇವೆ’ ಎಂಬುದು ನಿರ್ದೇಶಕರ ಮಾತು.

ಈಗಾಗಲೇ ಏಳೆಂಟು ಸಿನಿಮಾಗಳಲ್ಲಿ ನಟಿಸಿರುವ ವಿಜಯ್ ಮಹೇಶ್ ಹುಷಾರ್ ಚಿತ್ರದಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ. ‘ಇಲ್ಲಿಯವರೆಗೂ ಎಲ್ಲ ಬಗೆಯ ಸಿನಿಮಾಗಳಲ್ಲಿ ನಟಿಸಿದ್ದೇನೆ. ಗ್ರಾಮೀಣ ಸೊಗಡಿನ ಸಿನಿಮಾದಲ್ಲಿ ಕಾಣಿಸಿಕೊಂಡಿರಲಿಲ್ಲ.

ಇದೀಗ ಆ ಅವಕಾಶ ಹುಷಾರ್ ಚಿತ್ರದ ಮೂಲಕ ಸಿಕ್ಕಿದೆ. ಕಾಮಿಡಿ ಎಳೆಯಿಂದ ಶುರುವಾಗುವ ಕಥೆ, ನಿಧಾನಕ್ಕೆ ಹಾರರ್ ಅವತಾರ ತಾಳುತ್ತದೆ. ಒಂದಾದ ಮೇಲೋಂದರಂತೆ ಟ್ವಿಸ್ಟ್ಗಳು ಎದುರಾಗುತ್ತವೆ. ಕಮರ್ಷಿಯಲ್ ಅಂಶಗಳೂ ಸಿನಿಮಾದಲ್ಲಿರಲಿವೆ’ ಎಂಬುದು ವಿಜಯ್ ಮಹೇಶ್ ಮಾತು.

ಸೇಡು, ಜಲ್ಲಿಕಟ್ಟು, ಅಂದುಕೊಂಡಂತಲ್ಲ ಜೀವನ ಸಿನಿಮಾದಲ್ಲಿ ನಟಿಸಿರುವ ನಟಿ ಸುಲಕ್ಷಾ ಕೈರ, ಹುಷಾರ್ ಚಿತ್ರದಲ್ಲಿ ನಾಯಕಿಯಾಗಿದ್ದಾರೆ. ‘ಈ ಸಿನಿಮಾದಲ್ಲಿ ತುಂಬ ಸಾಂಪ್ರದಾಯಿಕ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದೇನೆ.

ನನ್ನದಿಲ್ಲಿ ಶಿಕ್ಷಕಿ ಪಾತ್ರ. ಪ್ರತಿಯೊಂದು ಕ್ಷಣದಲ್ಲಿ ಏನಾಗುತ್ತದೆ ಎಂಬ ಅರಿವು ಯಾರಿಗೂ ಇರಲ್ಲ. ನಮ್ಮ ಹುಚಾರಲ್ಲಿ ನಾವಿರಬೇಕು ಎಂಬುದೇ ಈ ಸಿನಿಮಾದಲ್ಲಿ ನಿರ್ದೇಶಕರು ಹೇಳಲಿದ್ದಾರೆ. ಲವ್, ಹಾರರ್, ಕಾಮಿಡಿ ಎಲ್ಲ ಅಂಶಗಳೂ ಈ ಸಿನಿಮಾದಲ್ಲಿದೆ’ ಎನ್ನುತ್ತಾರವರು.

ಮತ್ತೋರ್ವ ನಟಿ ರಚನಾ ಮಲ್ನಾಡ್ ಕೊಂಚ ಬೋಲ್ಡ್ ಅವತಾರದಲ್ಲಿಯೇ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾಯಕಿಯ ತಂಗಿಯಾಗಿ ರಚನಾ ಅವರ ಪಾತ್ರ ಸಾಗಲಿದೆ. ಪೋಷಕ ಪಾತ್ರಗಳಲ್ಲಿ ಲಯ ಕೋಕಿಲ, ಗಣೇಶ್ ರಾವ್, ಪಿ. ಮೂರ್ತಿ, ಸತೀಶ್ ರಾಜ್, ಪುಷ್ಪ ಸ್ವಾಮಿ, ರತ್ನಮಾಲ, ಮೂಗು ಸುರೇಶ್, ಪ್ರಶಾಂತ್ ನಟನ, ವೆಂಕಟೇಶ್ ಹೇರೊಹಳ್ಳಿ, ವಸಂತ್ ಕುಮಾರ್ ಸೇರಿ ಮುಂತಾದವರು ಪಾತ್ರವರ್ಗದಲ್ಲಿದ್ದಾರೆ.

ನವೆಂಬರ್ ಎರಡನೇ ವಾರದಲ್ಲಿ ಶೃಂಗೇರಿ, ಹೊರನಾಡು, ಕುದುರೆಮುಖ ಸೇರಿ ಹಲವೆಡೆ 25 ದಿನ ಚಿತ್ರೀಕರಣ ನಡೆಯಲಿದೆ. 10 ದಿನಗಳಲ್ಲಿ ಗೋವಾ ಸುತ್ತಮುತ್ತ ನಾಲ್ಕು ಹಾಡಿನ ಶೂಟಿಂಗ್ ಮಾಡಿಕೊಳ್ಳುವ ಯೋಜನೆ ಚಿತ್ರತಂಡದ್ದು. ತಾಂತ್ರಿಕ ವರ್ಗದ ಬಗ್ಗೆ ಪೂರ್ಣಚಂದ್ರ ಛಾಯಾಗ್ರಹಣ, ಎಸ್. ನಾಗು ಸಂಗೀತ, ಜೆಜೆ ಶರ್ಮಾ ಸಂಕಲನ, ಅಕುಲ್ ಎಸ್ ನೃತ್ಯ ನಿರ್ದೇಶನ, ಚಂದ್ರು ಬಂಡೆ ಸಾಹಸ ನಿರ್ದೇಶನ ಇರಲಿದೆ.

Related posts