Cinisuddi Fresh Cini News 

ಕುತೂಹಲಗಳನ್ನು ಕೆರಳಿಸುತ್ತಿದೆ ರಿಷಬ್ ಶೆಟ್ಟಿ ‘ಹೀರೋ’ ಚಿತ್ರದ ಟೀಸರ್

ಕಳೆದವರ್ಷ ಕರೋನಾ ವಕ್ಕರಿಸಿ ಮಾರ್ಚ್ ತಿಂಗಳಿಂದ ಲಾಕ್ಡೌನ್ ಘೋಷಣೆಯಾಗಿ ಪ್ರಪಂಚದಾದ್ಯಂತ ಇಡೀ ಚಿತ್ರರಂಗವೇ ಲಾಕ್ ಆಗಿತ್ತು. ಎಲ್ಲರೂ ಮುಂದೇನು ಎಂದು ದಾರಿಕಾಣದೆ ಕುಳಿತಿದ್ದಾಗ, ನಟ-ನಿರ್ದೇಶಕ ರಿಷಬ್‍ಶೆಟ್ಟಿ ಹಾಗೂ ಅವರ ಜೊತೆ ನಿರ್ದೇಶಕ ಭರತ್‍ರಾಜ್ ಮಾತ್ರ ತಮ್ಮ ಪಾಡಿಗೆ ತಾವು ಎನ್ನುವಂತೆ ಸದ್ದಿಲ್ಲದೇ ಸಿನಿಮಾವೊಂದನ್ನು ರೆಡಿಮಾಡಿ ಮುಗಿಸಿದ್ದಾರೆ.

ಆ ಚಿತ್ರದ ಹೆಸರು ಹೀರೋ. ಇದೀಗ ಆ ಹೀರೋ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ರೇಣುಕಾಂಬ ಥಿಯೇಟರಿನಲ್ಲಿ ನೆರವೇರಿತು. ಈ ಚಿತ್ರವನ್ನು ಕೇವಲ 24 ಜನ ಕಲಾವಿದ ತಂತ್ರಜ್ಞರುಗಳು ಸೇರಿ ಚಿತ್ರೀಕರಿಸಿದ್ದಾರೆ. ಒಂದು ಎಸ್ಟೇಟ್‍ನಲ್ಲಿ ನಡೆಯುವ ಕಥಾನಕ ಇದಾಗಿದ್ದು, ಇಲ್ಲಿ ಕೆಲವೇ ಪಾತ್ರಗಳು ಬಂದು ಹೋಗುತ್ತವೆ.

150-200 ಎಕರೆ ಇರುವ ಎಸ್ಟೇಟ್‍ನಲ್ಲಿ ಇಡೀ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಕಳೆದ ಜುಲೈ ತಿಂಗಳಲ್ಲಿ ಶೂಟಿಂಗ್ ಆರಂಭಿಸಿ ಮುಗಿಸಿದ್ದಾರೆ. ಕೊಚ್ಚಿಯ ಲಾಲ್ ಮೀಡಿಯಾ ಈ ಚಿತ್ರವನ್ನು ರಿಲೀಸ್ ರಿಲೀಸ್ ಮಾಡುತ್ತಿದೆ. ಒಂದು ಚಿತ್ರದ ಶೂಟಿಂಗ್ ಎಂದರೆ ನೂರಾರು ಜನ ಟೆಕ್ನೀಷಿಯನ್‍ಗಳು ಕೆಲಸ ಮಾಡುತ್ತಾರೆ, ಆದರೆ ಇಲ್ಲಿ ಒಬ್ಬನೇ ಲೈಟ್ ಬಾಯ್ ಇಟ್ಟುಕೊಂಡು ಚಿತ್ರತಂಡ ಚಿತ್ರೀಕರಣ ಮಾಡಿ ಮುಗಿಸಿದೆ.

ಇಲ್ಲಿ ಛಾಯಾಗ್ರಾಹಕ ಅರವಿಂದ್ ಕಷ್ಯಪ್ ಬಿಟ್ಟರೆ ಬೇರೆಲ್ಲರೂ ಕ್ಯಾಮೆರಾ ಮುಂದೆ ಸಣ್ಣಪುಟ್ಟ ಪಾತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಚಿತ್ರದಲ್ಲಿ ಆಕ್ಷನ್ ಕಾಮಿಡಿ ವೈಲೆನ್ಸ್ ಇದ್ದರೂ ಎಲ್ಲೂ ಅದನ್ನು ವೈಭವೀಕರಿಸಿಲ್ಲ ಎಂದು ರಿಶಬ್‍ಶೆಟ್ಟಿ ಹೇಳಿದರು.

ರಿಷಬ್ ಶೆಟ್ಟಿ ಅವರ ನೇತೃತ್ವದ ರಿಶಭ್ ಫಿಲಂಸ್ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ರಿಶಭ್‍ಶೆಟ್ಟಿ ಅವರೇ ನಾಯಕನಾಗಿ ನಟಿಸಿದ್ದಾರೆ, ಶೆಟ್ರು ಈ ಚಿತ್ರದಲ್ಲಿ ಅಭಿನಯ ಮಾತ್ರ ಮಾಡಿದ್ದು, ಹೀರೋ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ನವಪ್ರತಿಭೆ ಭರತ್‍ರಾಜ್ ಅವರಿಗೆ ವಹಿಸಿದ್ದಾರೆ. ಇದು ಭರತ್‍ರಾಜ್ ನಿರ್ದೇಶನದ ಮೊದಲ ಸಿನಿಮಾ.

ಇನ್ನು ಈ ಚಿತ್ರವನ್ನು ನಿರ್ಮಾಣ ಮಾಡಿರುವುದು ರಿಷಬ್‍ಶೆಟ್ಟಿ ಫಿಲಂಸ್. ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಅವರ ಜೊತೆ ನಾಯಕಿಯಾಗಿ ಟಿ.ಎನ್.ಸೀತಾರಾಮ್ ಅವರ ಮಗಳು ಜಾನಕಿ ಎಂಬ ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಗಾನವಿ ಲಕ್ಷ್ಮಣ್ ಕಾಣಿಸಿಕೊಂಡಿದ್ದಾರೆ. ಪ್ರಮೋದ್ ಶೆಟ್ಟಿ ಮತ್ತು ಮಂಜುನಾಥ್‍ಗೌಡ ಚಿತ್ರದ ಉಳಿದ ತಾರಬಳಗದಲ್ಲಿದ್ದಾರೆ. ಅಲ್ಲದೆ ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ ನಿರ್ದೇಶನವಿದ್ದು, ಅರವಿಂದ್ ಎಸ್.ಕಷ್ಯಪ್ ಅವರು ಛಾಯಾಗ್ರಹಣಕಾರ್ಯ ನಿರ್ವಹಿಸಿದ್ದಾರೆ. ಪ್ರತೀಕ್ ಶೆಟ್ಟಿ ಅವರ ಸಂಕಲನ ಈ ಚಿತ್ರಕ್ಕಿದೆ.

ಸದ್ಯ ಹೀರೋ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿ ಬಿಡುಗಡೆಗೆ ಸಿದ್ದತೆ ಮಾಡಿಕೊಳ್ಳುವಲ್ಲಿ ಬ್ಯುಸಿಯಾಗಿದೆ. ಲಾಕ್ಡೌನ್ ಅವಧಿಯಲ್ಲೇ ರಿಶಭ್ ಶೆಟ್ಟಿ ಒಂದು ಸಿನಿಮಾ ಮಾಡಿ ಮುಗಿಸಿರುವುದು ನಿಜಕ್ಕೂ ಮೆಚ್ಚುಗೆಯ ವಿಚಾರ. ಇನ್ನು ನಟ ರಿಷಬ್ ಶೆಟ್ಟಿ ಅವರ ಕೈಯಲ್ಲಿ ಈಗ ಸಾಲು ಸಾಲು ಚಿತ್ರಗಳಿವೆ.

ನಾತುರಾಮï, ಮಹನಿಯರೇ ಮಹಿಳೆಯರೇ, ಕೌಬಾಯ್ ಕೃಷ್ಣ, ಗರುಡ ಗಮನ ವೃಷಭವಾಹನ, ಹರಿಕಥೆ ಅಲ್ಲ ಗಿರಿಕಥೆ, ಬೆಲ್ ಬಾಟಂ 2 ಹಾಗೂ ಇನ್ನು ಹೆಸರಿಡದ ಎರಡು ಚಿತ್ರಗಳಲ್ಲಿ ರಿಷಬ್ ಶೆಟ್ಟಿ ನಾಯಕನಾಗಿ ನಟಿಸುತ್ತಿದ್ದಾರೆ. ಇದರ ಜೊತೆ ರುದ್ರಪ್ರಯಾಗ ಎಂಬ ಚಿತ್ರಕ್ಕೆ ಸಹ ಇವರೇ ಆಕ್ಷನ್ ಕಟ್ ಹೇಳುತ್ತಿದ್ದಾರೆ.

Related posts