Cinisuddi Fresh Cini News 

ವಿಜಯಪ್ರಸಾದ್ ಹೊಸ ಸಿನಿಮಾದಲ್ಲಿ ಮತ್ತೆ ಹರಿಪ್ರಿಯಾ

ಲಾಕ್‍ಡೌನ್ ನಂತರ ನಟೀಮಣಿಯರ ಅದೃಷ್ಟ ಖುಲಾಯಿಸಿದೆ ಎಂದೆನಿಸುತ್ತದೆ. ಕಿರುತೆರೆ ನಟಿಯರಾದ ಮೇಘಶೆಟ್ಟಿಘಿ, ಸುಪ್ರೀತಾ ಸತ್ಯನಾರಾಯಣ್ ಅವರಿಗೆ ಹಿರಿತೆರೆ ಮೇಲೆ ಮಿಂಚಲು ರೆಡಿಯಾಗಿದ್ದರೆ ಡಿಂಪಲ್‍ಕ್ವೀನ್ ರಚಿತಾರಾಮ್‍ಗೆ ಡಜನ್ ಚಿತ್ರಗಳಲ್ಲಿ ನಟಿಸುವ ಯೋಗ ಕೂಡಿಬಂದಿದೆ. ಇದರ ನಡುವೆಯೇ ಸ್ಯಾಂಡಲ್‍ವುಡ್‍ನ ಸುಂದರ ನಟಿ ಹರಿಪ್ರಿಯಾ ಅವರಿಗೂ ಲಕ್ ಕುದುರಿದೆ.

ಡಾಕ್ಟರ್ ಆಫ್ ಪಾರ್ವತಮ್ಮ, ಸೂಜಿದಾರ, ಕನ್ನಡ್ ಗೊತ್ತಿಲ್ಲದಂತಹ ಮಹಿಳಾ ಪ್ರಧಾನ ಚಿತ್ರಗಳಲ್ಲಿ ನಟಿಸಿದ ನಂತರ ಹರಿಪ್ರಿಯಾಳ ಲಕ್ ಕುದುರಿತು ಎಂದುಕೊಳ್ಳುತ್ತಿದ್ದಾಗಲೇ ಲಾಕ್‍ಡೌನ್ ಕಾಟ ಶುರುವಾಯಿತು. ಈ ನಡುವೆ ಹರಿಪ್ರಿಯಾ ಕಿರುತೆರೆಯತ್ತ ಮುಖ ಮಾಡಿ ಸಂಘರ್ಷ ಸೀರಿಯಲ್‍ನಲ್ಲಿ ಜರತಾರಿ ಸೀರೆ, ಅಜ್ಜಿ ಮುಂತಾದ ಲುಕ್‍ಗಳಲ್ಲಿ ಕಾಣಿಸಿಕೊಂಡು ಪ್ರೇಕ್ಷಕರ ಗಮನ ಸೆಳೆದಿದ್ದರು.

ಹರಿಪ್ರಿಯಾಗೆ ಸಿನಿಮಾರಂಗದಲ್ಲಿ ಅವಕಾಶವಿಲ್ಲವೇನೋ? ಅದಕ್ಕೆ ಕಿರುತೆರೆಯತ್ತ ಮುಖ ಮಾಡಿದ್ದಾರೆನೋ ಎಂದು ಕೆಲವರು ಅಂದುಕೊಳ್ಳುತ್ತಿರುವಾಗಲೇ ಸಾಲು ಸಾಲು ಚಿತ್ರಗಳಲ್ಲಿ ನಟಿಸುವ ಮೂಲಕ ಎಲ್ಲರನ್ನು ಆಶ್ಚರಿಗೊಳಿಸಿದ್ದಾರೆ.

ಈ ಹಿಂದೆ ನಿರ್ದೇಶಕ ವಿಜಯಪ್ರಸಾದ್ ಅವರು ನಿರ್ದೇಶಿಸಿದ್ದ ನೀರ್‍ದೋಸೆಯಲ್ಲಿ ಕುಮುದಾ ಎಂಬ ಪಾತ್ರ ನಿರ್ವಹಿಸಿದ್ದ ಹರಿಪ್ರಿಯಾ ಬೆಲ್ಲಿ ಡ್ಯಾನ್ಸ್ ಮೂಲಕ ಪ್ರೇಕ್ಷಕರ ಚಿತ್ತ ಕೆರಳಿಸಿದ್ದರಲ್ಲದೆ ತಮ್ಮ ಡಬ್ಬಲ್ ಮೀನಿಂಗ್‍ನಿಂದಲೂ ಗಮನ ಸೆಳೆದಿದ್ದರು. ಈಗ ಮತ್ತೆ ವಿಜಯಪ್ರಸಾದ್ ಹಾಗೂ ಹರಿಪ್ರಿಯಾ ಪ್ಯಾಟ್ರೋ ಮ್ಯಾಕ್ಸ್ ಮೂಲಕ ಪ್ರೇಕ್ಷಕರನ್ನು ಮೋಡಿ ಮಾಡಲು ಬಂದಿದ್ದಾರೆ.

ಪ್ಯಾಟ್ರೋ ಮ್ಯಾಕ್ಸ್ ಕೂಡ ವಿಜಯಪ್ರಸಾದ್ ಈ ಹಿಂದೆ ನಿರ್ದೇಶಿಸಿದ್ದ ನೀರ್‍ದೋಸೆ, ಸಿದ್ಲಿಂಗು ಚಿತ್ರಗಳಂತೆಯೇ ವಿಶಿಷ್ಟ ಕಥೆಯನ್ನು ಅಳವಡಿಸಿದ್ದು ಈ ಚಿತ್ರದಲ್ಲಿ ಮೊದಲ ಬಾರಿಗೆ ನೀನಾಸಂ ಸತೀಶ್‍ರೊಂದಿಗೆ ಸ್ಕ್ರೀನ್ ಹಂಚಿಕೊಳ್ಳಲು ಹೊರಟಿದ್ದಾರೆ. ಈ ಸಿನಿಮಾಕ್ಕೆ ಮೊದಲು ಅದಿತಿ ಪ್ರಭುದೇವ ಆಯ್ಕೆಯಾಗಿದ್ದರೂ ಹಲವು ಕಾರಣದಿಂದಾಗಿ ಆ ಸ್ಥಾನಕ್ಕೆ ಈಗ ಹರಿಪ್ರಿಯಾ ಬಂದಿದ್ದು ಈ ,ಚಿತ್ರದ ಚಿತ್ರೀಕರಣವು ಈಗಾಗಲೇ ಆರಂಭಗೊಂಡಿದ್ದು ಬರುವ ವರ್ಷದ ಆರಂಭದಲ್ಲೇ ಪ್ರೇಕ್ಷಕರನ್ನು ರಂಜಿಸಲು ಚಿತ್ರಮಂದಿರಗಳಿಗೆ ಬರಲಿದೆ.

ಪ್ಯಾಟ್ರೋ ಮ್ಯಾಕ್ಸ್ ಸಿನಿಮಾದ ಚಿತ್ರೀರಣದ ನಡುವೆಯೇ ಹರಿಪ್ರಿಯಾ ಪ್ಯಾನ್ ಇಂಡಿಯಾ ಚಿತ್ರದಲ್ಲಿ ಉಪೇಂದ್ರ ಅವರೊಂದಿಗೆ ಸ್ಕ್ರೀನ್ ಹಂಚಿಕೊಳ್ಳಲು ಹೊರಟಿದ್ದಾರೆ. ಸಮಾಜದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಲಗಾಮು ಹಾಕುವ ಕಥಾಹಂದರವನ್ನು ಹೊಂದಿರುವ ಲಗಾಮ್ ಚಿತ್ರದಲ್ಲಿ ಉಪೇಂದ್ರ ಮೂರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು ಹರಿಪ್ರಿಯಾ ನಾಯಕಿಯಾಗಿ ನಟಿಸುತ್ತಿದ್ದಾರೆ.

ಗಜ, ರಾಮ್, ಬೃಂದಾವನ ಸಿನಿಮಾಗಳನ್ನು ನಿರ್ದೇಶಿಸಿರುವ ಕೆ.ಮಾದೇಶ್ ಅವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು ಮೈಸೂರು, ಬೆಂಗಳೂರು ಸುತ್ತಮುತ್ತ ನಡೆಯಲಿರುವ ಈ ಚಿತ್ರವನ್ನು ಕನ್ನಡ, ತಮಿಳು, ತೆಲುಗು ಸೇರಿದಂತೆ ಐದು ಭಾಷೆಗಳಲ್ಲಿ ಚಿತ್ರೀಕರಣ ಮಾಡಲು ಚಿತ್ರತಂಡ ನಿರ್ದೇಶಿಸಿದೆ.

ವೈಭವ್, ಸೋನಂಬಾಜ್ವಾ ನಟಿಸಿದ್ದ ತಮಿಳಿನ ಕಪ್ಪಲ್ ಚಿತ್ರದ ರೀಮೇಕ್ ಚಿತ್ರದಲ್ಲಿ ನಟಿಸುತ್ತಿದ್ದು ಹರಿಪ್ರಿಯಾ ಅಮೃತಮತಿ, ಹ್ಯಾಪಿ ಎಂಡಿಂಗ್, ಎವರು ಚಿತ್ರಗಳ ಚಿತ್ರೀಕರಣ ಬ್ಯುಜಿಯಾಗಿದ್ದರೆ, ಬಿಚ್ಚುಗತ್ತಿ ಸಿನಿಮಾ ಬಿಡುಗಡೆಗೆ ಸಜ್ಜಾಗಿರುವುದರಿಂದ ಹರಿಪ್ರಿಯಾ ಚಿತ್ರರಂಗದಲ್ಲಿ ಬಲು ಬ್ಯುಜಿ ನಟಿಯೆನಿಸಿಕೊಂಡಿದ್ದಾರೆ.

Related posts