Cinisuddi Fresh Cini News 

“ಹರೀಶ ವಯಸ್ಸು 36” ಚಿತ್ರದ ಹಾಡಿಗೆ ಅಪ್ಪು ಧ್ವನಿ

ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಪ್ರತಿಭೆಗಳೇ ಸೇರಿ ನಿರ್ಮಾಣ ಮಾಡಿರುವ ಚಿತ್ರ ಹರೀಶ ವಯಸ್ಸು 36. ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಗುರುರಾಜ ಜ್ಯೇಷ್ಠ ಅವರು ಕಥೆ, ಚಿತ್ರಕಥೆ ಬರೆದು ಮೊದಲಬಾರಿಗೆ ನಿರ್ದೇಶನ ಮಾಡಿರುವ, ಹಾಸ್ಯಪ್ರದಾನ ಕಾಥಾಹಂದರ ಹೊಂದಿರೋ ಚಲನಚಿತ್ರ ಇದಾಗಿದ್ದು, ಈಗಾಗಲೇ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನೆಲ್ಲ ಮುಗಿಸಿಕೊಂಡು ಬಿಡುಗಡೆಗೆ ಸಿದ್ದವಾಗಿದೆ.

ಈ ಚಿತ್ರದಲ್ಲಿ ವಿಶೇಷವಾಗಿ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಟೈಟಲ್‌ಸಾಂಗ್‌ನ್ನು ಹಾಡಿದ್ದಾರೆ. ಈ ಹಾಡಿನ ಪ್ರದರ್ಶನ ಹಾಗೂ ಪತ್ರಿಕಾಗೋಷ್ಟಿ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು. ಹಿರಿಯ ಕಲಾವಿದ ಎಂ.ಎಸ್. ಉಮೇಶ್ ಹಾಗೂ ಯೋಗೀಶ್ ಶೆಟ್ಟಿ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಶ್ವೇತಾ ಅರೆಹೊಳೆ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಹಗಲುಗನಸು ಕಾಣೋ ನಾಯಕನ ಸುತ್ತ ನಡೆಯುವ ಹಾಸ್ಯಪ್ರಸಂಗಗಳೇ ಈ ಚಿತ್ರದ ಕಥಾವಸ್ತುವಾಗಿದ್ದು, ಚಕ್ರಧರ್ ರೆಡ್ಡಿ, ಲಕ್ಷಿಕಾಂತರಾವ್, ತ್ರಿಲೋಕ್ ಝಾ ಒಳಗೊಂಡಂತೆ ಈ ಚಿತ್ರಕ್ಕೆ ನಾಲ್ವರು ನಿರ್ಮಾಪಕರು ಕೈಜೋಡಿಸಿದ್ದಾರೆ.

ಈ ಸಂದರ್ಭದಲ್ಲಿ ನಿರ್ದೇಶಕ ಗುರುರಾಜ ಜೇಷ್ಠ ಮಾತನಾಡುತ್ತ ಈ ಚಿತ್ರದ ಕಥೆ ಹುಟ್ಟಿದ್ದೇ ನನ್ನ ಕಸಿನ್‌ನಿಂದ. ಆತನಿಗೀಗ 37 ವರ್ಷ, ವೃತ್ತಿಪರ ನಾಟಕ ತಂಡದವನು, ಆತ ಮದುವೆ ಮಾಡಿಕೊಳ್ಳಬೇಕೆಂದು ಹೊರಟಾಗ ಹುಡುಗಿಯ ಹುಡುಕಾಟದಲ್ಲಿ ನಡೆದ ಪ್ರಸಂಗಗಳನ್ನು ನೋಡಿ ಈ ಚಿತ್ರದ ಕಥೆ ಬರೆದೆ.

ಒಂದು ಬೀದಿ ಮತ್ತು ಮನೆಯಲ್ಲಿ ಹೆಚ್ಚಿನ ಕಥೆ ನಡೆಯುತ್ತದೆ, ಉಮೇಶಣ್ಣ ಅವರನ್ನು ಬಿಟ್ಟರೆ ಉಳಿದಂತೆ ನಾವೆಲ್ಲ ಹೊಸಬರು. ನಾಯಕ ಹರೀಶನಿಗೆ ೩೬ ವರ್ಷ, ಕೆಲಸ ಇಲ್ಲ, ಬಾಡಿಗೆ ಮನೆ ಕೊಡಿಸುವ ಲ್ಯಾಂಡ್ ಬ್ರೋಕರ್, ಅದರ ಜೊತೆ ಹುಡುಗಿ ನೋಡುವ ಕೆಲಸ, ಈತನನ್ನ ಯಾವ ಹುಡುಗಿ ನೋಡಿದರೂ ಇಷ್ಟಪಡಲ್ಲ, ಕೊನೆಗೂ ನಮ್ಮ ನಾಯಕ ಹರೀಶನನ್ನು ಪ್ರೀತಿಸುವ ಹುಡುಗಿ ಸಿಕ್ತಾಳಾ, ಆತನ ಮದುವೆಯಾಯಿತೇ ಇಲ್ಲವೇ ಎಂಬುದನ್ನು ದಕ್ಷಿಣ ಕನ್ನಡದ ಕರಾವಳಿ ಪರಿಸರವನ್ನು ಹಿನ್ನೆಲೆಯಾಗಿಟ್ಟುಕೊಂಡು ಹಾಸ್ಯಮಯವಾಗಿ ಹೇಳಲು ಪ್ರಯತ್ನಿಸಿದ್ದೇನೆ.

ವಿಶೇಷವಾಗಿ ನಮ್ಮ ಚಿತ್ರದ ಟೈಟಲ್ ಟ್ರ್ಯಾಕನ್ನು ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಹಾಡಿದ್ದಾರೆ. ಧರ್ಮಸ್ಥಳದ ಬಳಿ ೧೦೫ ವರ್ಷದಷ್ಟು ಹಳೆಯದಾದ ಗುತ್ತೆಮನೆಯಲ್ಲಿ ಈ ಸಿನಿಮಾದ ಬಹುತೇಕ ಚಿತ್ರೀಕರಣ ನಡೆಸಿದ್ದೇವೆ. ಸದ್ಯದಲ್ಲೇ ಚಿತ್ರದ ಆಡಿಯೋ ಬಿಡುಗಡೆ ಮಾಡುವ ಯೋಜನೆಯಿದೆ ಎಂದು ಹೇಳಿದರು.

ಚಿತ್ರದ ನಾಯಕ ಯೋಗೀಶ್ ಶೆಟ್ಟಿ ಮಾತನಾಡುತ್ತ ಈ ಹಿಂದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದಲ್ಲಿ ಜೋಸೆಫ್ ಮಾಸ್ಟರ್ ಪಾತ್ರ ಮಾಡಿದ್ದೆ. ಇದರಲ್ಲಿ ನನಗೆ ಹೆಚ್ಚಿನ ಮೇಕಪ್ ಇಲ್ಲ. ಬಾಡಿಗೆ ಮನೆ ತೋರಿಸುವುದು, ಹುಡುಗಿ ಹುಡುಕುವುದು ನನ್ನ ಕೆಲಸ ಎಂದು ಹೇಳಿದರು,
ನಾಯಕಿ ಶ್ವೇತಾ ಅರಹೊಳೆ ಮಾತನಾಡಿ ನಾನು ಮೂಲತ: ಭರತನಾಟ್ಯ ರಂಗಭೂಮಿ ಕಲಾವಿದೆ.

ನಮ್ಮ ತಂಡಕ್ಕೆ ನಿರ್ದೇಶಕರು ಮ್ಯೂಸಿಕ್ ಮಾಡಿಕೊಡುತ್ತಿದ್ದರು, ಒಮ್ಮೆ ಈ ಚಿತ್ರದ ಬಗ್ಗೆ ಹೇಳಿ ನಾಯಕಿ ಪಾತ್ರಕ್ಕೆ ಒಪ್ಪಿಸಿದರು. ಚಿತ್ರದಲ್ಲೂ ನಾನು ಭರತನಾಟ್ಯ ಕಲಾವಿದೆ ಎಂದು ತಮ್ಮ ಪಾತ್ರದ ಬಗ್ಗೆ ವಿವರಿಸಿದರು. ನಿರ್ಮಾಪಕ ಚಕ್ರಧರ್ ರೆಡ್ಡಿ ಮಾತನಾಡಿ ಇಡೀ ಚಿತ್ರ ಹ್ಯೂಮರಸ್ ಆಗಿ ಬಂದಿದೆ. ಮುಂದಿನ ತಿಂಗಳು ಬಿಡುಗಡೆ ಮಾಡುವ ಪ್ಲಾನಿದೆ ಎಂದರು.

ಮತ್ತೊಬ್ಬ ನಿರ್ಮಾಪಕ ಬಿಹಾರ ಮೂಲದ ತ್ರಿಲೋಕ್ ಝಾ ಮಾತನಾಡುತ್ತ ನನ್ನ ಸ್ನೇಹಿತ ಚಕ್ರಧರ್ ಈ ಸಿನಿಮಾ ಬಗ್ಗೆ ಹೇಳಿದರು. ಕಥೆ ನನಗೂ ಇಷ್ಟವಾಯಿತು ಎಂದು ಹೇಳಿದರು. ಆನಂದ್ ಆಡಿಯೋ ಸಂಸ್ಥೆ ಈ ಚಿತ್ರದ ಆಡಿಯೋ ಹಕ್ಕುಗಳನ್ನು ಪಡೆದಿದೆ.

ಸಂಸ್ಥೆ ಪರವಾಗಿ ಮಾತನಾಡಿದ ಆನಂದ್ ಕನ್ನಡ ಸಿನಿಮಾಗಳನ್ನು ಮಲ್ಟಿಲಾಂಗ್ವೇಜ್‌ಗಳಲ್ಲಿ ನೋಡಿದ್ದೇವೆ, ಆದರೆ ಬೇರೆ ಭಾಷೆಯವರೇ ಸೇರಿ ಕನ್ನಡ ಸಿನಿಮಾ ಮಾಡಿದ್ದಾರೆ. ಪುನೀತ್‌ರಾಜ್‌ಕುಮಾರ್ ಹಾಡಿದ ಕೊನೇ ಹಾಡಿದು ಎಂದು ಹೇಳಿದರು.

Related posts