Cini Reviews Cinisuddi Fresh Cini News 

ಮರ್ಯಾದಾ ಹತ್ಯೆ , ಮಾಫಿಯಾ ಸುಳಿಯಲಿ “ಹೊಯ್ಸಳ” (ಚಿತ್ರವಿಮರ್ಶೆ- ರೇಟಿಂಗ್ : 4 /5)

ರೇಟಿಂಗ್ : 4 /5

ಚಿತ್ರ : ಗುರುದೇವ್ ಹೊಯ್ಸಳ
ನಿರ್ಮಾಪಕರು : ಕಾರ್ತಿಕ್ ಗೌಡ , ಯೋಗಿ.ಜಿ.ರಾಜ್
ನಿರ್ದೇಶನ : ವಿಜಯ್​ .ಎನ್​
ಸಂಗೀತ : ಅಜನೀಶ್ ಲೋಕನಾಥ್
ಛಾಯಾಗ್ರಹಣ : ಕಾರ್ತಿಕ್
ತಾರಾಗಣ : ಧನಂಜಯ್ , ಅಮೃತಾ ಅಯ್ಯಂಗಾರ್​, ನವೀನ್​ ಶಂಕರ್, ಅನಿರುದ್ಧ್​ ಭಟ್​, ಮಯೂರಿ ನಟರಾಜ್, ನಾಗಭೂಷಣ್, ಪ್ರತಾಪ್ ನಾರಾಯಣ್ , ಅಚ್ಯುತ್​ ಕುಮಾರ್​, ರಾಜೇಶ್​ ನಟರಂಗ ಹಾಗೂ ಮುಂತಾದವರು…

ಎಲ್ಲೇ ಇರು… ಹೇಗೆ ಇರು… ಎಂದೆಂದಿಗೂ ಕನ್ನಡದ ಮೇಲಿನ ಪ್ರೀತಿ ಮರೆಯದಿರು ಎನ್ನುವ ಹಾಗೆ ಕರ್ನಾಟಕದ ಯಾವುದೇ ದಿಕ್ಕಿನಲ್ಲಾದರೂ ಸರಿ..ತನ್ನ ನಿಷ್ಠೆ , ಪ್ರಾಮಾಣಿಕತೆ ಯಿಂದ ಸೇವೆ ಸಲ್ಲಿಸುವ ದಕ್ಷ ಪೊಲೀಸ್ ಅಧಿಕಾರಿಯ ಸುತ್ತ ಸುರಳಿಯಂತೆ ಸುತ್ತಿಕೊಳ್ಳುವ ಗಡಿನಾಡು ವಿಚಾರ , ಭೂ ಮಾಫಿಯಾ ದಂಧೆ , ಬಡವರ ಮೇಲೆ ಶ್ರೀಮಂತರ ದರ್ಪ, ಮರ್ಯಾದೆ ಹತ್ಯೆ , ಪ್ರೇಮಿಗಳ ತಳಮಳ ಹಾಗೂ ಕಳ್ಳ ಪೊಲೀಸರ್ ಆಟದಂತೆ ಸಾಗುವ ಕಥೆಯಲ್ಲಿ ದ್ವೇಷ , ಕಿಚ್ಚುಗಿಂತ ಜಾತಿಯನ್ನ ಮೆಟ್ಟಿ ನಿಲ್ಲುವ ಪ್ರೀತಿ , ವಿಶ್ವಾಸ , ಪ್ರಾಮಾಣಿಕತೆ ಹೀಗೆ ಹಲವು ವಿಚಾರಗಳನ್ನು ತೆರೆದಿಡುವ ಪ್ರಯತ್ನವಾಗಿ ಹೊರಬಂದಿರುವ ಚಿತ್ರವೇ “ಗುರುದೇವ್ ಹೊಯ್ಸಳ”.

ಚಿತ್ರದ ಕಥಾವಸ್ತು ತೆರೆದುಕೊಳ್ಳುವುದೇ ಗಡಿನಾಡಿನಲ್ಲಿ ಸಂಚಲನ ಮೂಡಿಸುವ ಮರಾಠ ಹಾಗೂ ಕನ್ನಡಿಗರ ಗುದ್ದಾಟ. ಗುದ್ದಾಟವನ್ನು ಸದೆಬಡಿಯಲು ಬರುವ ದಕ್ಷ ಪೊಲೀಸ್ ಅಧಿಕಾರಿ ಗುರುದೇವ್ ಹೊಯ್ಸಳ (ಧನಂಜಯ್). ತನ್ನ ನಿಷ್ಠೆ , ಪ್ರಾಮಾಣಿಕತೆಗೆ ಸಿಗುವ ಬಹುಮಾನ ಟ್ರಾನ್ಸ್ಫರ್.

ಗುರುದೇವ್ ಪ್ರೀತಿಯ ಮಡದಿ ಡ್ಯಾನ್ಸ್ ಟೀಚರ್ ಗಂಗಾ (ಅಮೃತಾ ಅಯ್ಯಂಗಾರ್) ಗಂಡನ ಮಾತನ್ನು ಪಾಲಿಸುತ್ತಾ ಅವನ ಹಿಂದೆ ಸಾಗುತ್ತಾಳೆ. ಇದರ ನಡುವೆ ಹಿರಿಯ ಪೊಲೀಸ್ ಅಧಿಕಾರಿಯ ಮೂಲಕ ನಾಪತ್ತೆ ಆಗಿರುವ ಪೊಲೀಸ್ ಇನ್ಸ್ಪೆಕ್ಟರ್ ಹುಡುಕುವ ಜವಾಬ್ದಾರಿ ವಹಿಸಿಕೊಳ್ಳುವ ಗುರುದೇವ್ ತನಿಖೆಗೆ ತನ್ನದೇ ರೀತಿಯ ಕಾರ್ಯ ವೈಕರಿಯನ್ನು ಆರಂಭಿಸುತ್ತಾನೆ.

ತನ್ನ ಇಲಾಖೆಯ ಸಹಪಾಠಿಗ ಳೊಂದಿಗೆ ಮಾಹಿತಿ ಕಲೆ ಹಾಕುವಾಗ ಮರಳು ಮಾಫಿಯಾದ ರುವಾರಿ ದಾದಾ ಹಾಗೂ ಆತನ ಮಗ, ಸಹಚರ ಹೀಗೆ ಇಡೀ ಬಳಗದ ಮಾಹಿತಿ ಕಲೆ ಹಾಕುತ್ತಾನೆ. ಅದರ ಜೊತೆಗೆ ಇಬ್ಬರು ಪ್ರೇಮಿಗಳು ಸಿಕ್ಕಿ ಹಾಕಿಕೊಳ್ಳುತ್ತಾರೆ. ಅವರ ಪ್ರೇಮ್​ ಕಹಾನಿಯನ್ನು ಕೆದಕಿದಾಗ ಜಾತಿ ತಾರತಮ್ಯದ ವಿಚಾರ ಬೆಳಕಿಗೆ ಬರುತ್ತದೆ. ಅಲ್ಲಿಂದ ಕಥೆ ಬೇರೆಯದೇ ತಿರುವು ಪಡೆದುಕೊಂಡು ಮರ್ಯಾದೆ ಹತ್ಯೆವರೆಗೂ ಸಾಗುತ್ತದೆ. ಇವೆಲ್ಲವೂ ಒಂದಕ್ಕೊಂದು ಕುಂಡಿಯಂತೆ ಸಾಗಿ ಕ್ಲೈಮಾಕ್ಸ್ ಹಂತಕ್ಕೆ ಬಂದು ನಿಲ್ಲುತ್ತದೆ.
ಕಾಣೆಯಾದ ಇನ್ಸ್ಪೆಕ್ಟರ್ ಎಲ್ಲಿ..
ಮರಳು ದಂಧೆ ಏನಾಗುತ್ತೆ…
ಪ್ರೇಮಿಗಳ ಗತಿ ಏನು …
ಮರ್ಯಾದೆ ಹತ್ಯೆಗೆ ಉತ್ತರ ಸಿಗುತ್ತಾ ಇಲ್ವಾ ಅನ್ನೋದನ್ನ ತಿಳಿದುಕೊಳ್ಳಬೇಕಾದರೆ ನೀವೆಲ್ಲರೂ ಒಮ್ಮೆ ಗುರುದೇವ್ ಹೊಯ್ಸಳ ಚಿತ್ರವನ್ನು ನೋಡಬೇಕು.ಒಬ್ಬ ಖಡಕ್ ಪೊಲೀಸ್ ಅಧಿಕಾರಿ ಎಂದರೆ ಹೀಗೆ ಇರಬೇಕು ಎನ್ನುವಂತೆ ಕಾಣಿಸಿಕೊಂಡಿದ್ದಾರೆ ನಟ ಡಾಲಿ ಧನಂಜಯ್. ಒಬ್ಬ ಆಂಗ್ರಿ ಯಂಗ್ ಪೊಲೀಸ್ ಇನ್ಸ್ಪೆಕ್ಟರ್ ಪಾತ್ರಕ್ಕೆ ಜೀವ ತುಂಬಿ ನಟಿಸಿದ್ದಾರೆ. ನಟ ರಾಕ್ಷಸರಂತೆ ಆಕ್ಷನ್ ದೃಶ್ಯವನ್ನು ನಿಭಾಯಿಸಿದ್ದು , ಮಡದಿಯ ಪ್ರೀತಿಯ ಗಂಡನಾಗಿ , ಸಮಾಜಘಾತಕರಿಗೆ ಸಿಂಹ ಸ್ವಪ್ನವಾಗಿ , ಸಂದೇಶ ನೀಡುವ ವ್ಯಕ್ತಿಯಾಗಿ ತಮ್ಮ ಪಾತ್ರಕ್ಕೆ ನ್ಯಾಯವನ್ನು ಒದಗಿಸಿದ್ದಾರೆ.

ಇನ್ನು ಅಮೃತಾ ಅಯ್ಯಂಗಾರ್ ಒಬ್ಬ ಪೊಲೀಸ ಅಧಿಕಾರಿಯ ಪತ್ನಿಯ ಪಾತ್ರವನ್ನು ಅಷ್ಟೇ ಸಮರ್ಥವಾಗಿ ನಿಭಾಯಿಸಿ ಗಮನ ಸೆಳೆಯುತ್ತಾರೆ. ಈ ಚಿತ್ರದ ಹೈಲೈಟ್ ಎಂದರೆ ವಿಲನ್ ಪಾತ್ರಧಾರಿಯಾಗಿ ಕಾಣಿಸಿಕೊಂಡಿರುವ ಗುಲ್ಟು ನವೀನ್ ಶಂಕರ್ ನೋಡಲು ಕಟ್ಟು ಮಸ್ತಾಗಿ ಇಲ್ಲದಿದ್ದರೂ ಖಡಕ್ ಲುಕ್ , ಮಾತಿನ ಶೈಲಿಯ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಇನ್ನು ಉಳಿದಂತೆ ಅಭಿನಯಿಸಿರುವ ಪ್ರಮುಖ ಪಾತ್ರಧಾರಿಗಳಾದ ಪ್ರತಾಪ್ ನಾರಾಯಣ , ನಾಗಭೂಷಣ್ , ಅಚ್ಚುತ್ ಕುಮಾರ್ , ರಾಜೇಶ್ ನಟರಂಗ , ಅನಿರುದ್ಧ ಭಟ್ , ಮಯೂರಿ ನಟರಾಜ್ , ರಾಘು ಶಿವಮೊಗ್ಗ , ಅವಿನಾಶ್ , ಹೇಮಂತ್ ಸುಶೀಲ್, ಮಾನಸಿ ಸುಧೀರ್ ಸೇರಿದಂತೆ ಎಲ್ಲಾ ಪಾತ್ರಧಾರಿಗಳು ಕೂಡ ಚಿತ್ರದ ಓಟಕ್ಕೆ ಜೀವವನ್ನು ತುಂಬಿದ್ದಾರೆ.

ಇನ್ನು ನಿರ್ದೇಶಕ ವಿಜಯ್. ಎನ್ ಪೊಲೀಸ್ ಅಧಿಕಾರಿಗೆ ಎದುರಾಗುವ ಸಮಸ್ಯೆಗಳ ಸುಳಿಯನ್ನು ತೆರೆದಿಡುವ ಪ್ರಯತ್ನ ಮಾಡಿದ್ದು , ಜಾತಿಯ ತಾರತಮ್ಯ , ಮರ್ಯಾದೆ ಹತ್ಯೆ , ಮರಳು ದಂಧೆ , ಗಡಿನಾಡಿನ ಗಲಾಟೆ ಹೀಗೆ ಒಂದಷ್ಟು ವಿಚಾರಗಳನ್ನು ಬೆಸೆದುಕೊಂಡು ತೆರೆ ಮೇಲೆ ತರುವ ಪ್ರಯತ್ನ ಮಾಡಿದ್ದಾರೆ.

ಈಗಾಗಲೇ ಇಂತಹ ವಿಚಾರಗಳ ಬಹಳಷ್ಟು ಚಿತ್ರಗಳು ಬಂದಿವೆ. ಒಬ್ಬ ನಟನ 25ನೇ ಚಿತ್ರ ಅಂದಮೇಲೆ ಹೊಸತನದ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ ಚೆನ್ನಾಗಿರುತ್ತಿತ್ತು , ಪಂಚಿಂಗ್ ಡೈಲಾಗ್ ಗೆ ಮತ್ತಷ್ಟು ಜೀವ ಕೊಡಬಹುದಿತ್ತು. ನಿರ್ದೇಶಕರ ಪ್ರಾಮಾಣಿಕ ಪ್ರಯತ್ನ ಕಾಣುತ್ತದೆ. ಒಂದು ಮಾಸ್ ಕಂಟೆಂಟ್ ಜೊತೆ ಸಂದೇಶ ನೀಡುವ ಉತ್ತಮ ಚಿತ್ರವನ್ನು ನಿರ್ಮಾಪಕರಾದ ಕಾರ್ತಿಕ್ ಗೌಡ ಹಾಗೂ ಯೋಗಿ.ಜಿ. ರಾಜ್ ಪ್ರೇಕ್ಷಕರ ಮುಂದೆ ತಂದಿದ್ದಾರೆ. ಇನ್ನು ಈ ಚಿತ್ರಕ್ಕೆ ಕಾರ್ತಿಕ್ ಕ್ಯಾಮೆರಾ ಕೈಚಳಕ ಗಮನ ಸೆಳೆಯುತ್ತದೆ. ಅಜನೇಶ್ ಲೋಕನಾಥ್ ಸಂಗೀತದ ಮೆಲೋಡಿ ಹಾಡು ಗುನುಗುವಂತಿದೆ. ಉಳಿದ ಹಾಡು ಸೊಗಸಾಗಿದ್ದು, ಹಿನ್ನೆಲೆ ಸಂಗೀತ ಚಿತ್ರದ ಓಟಕ್ಕೆ ಪೂರಕವಾಗಿ ಮೂಡಿ ಬಂದಿದೆ.

ಇನ್ನು ಮಾಸ್ತಿ ಸಂಭಾಷಣೆ ಖಡಕ್ಕಾಗಿದ್ದು, ಮತ್ತಷ್ಟು ಉತ್ತಮವಾಗಿಸ ಬಹುದಿತ್ತು. ಒಟ್ಟಾರೆ ಒಬ್ಬ ಪೊಲೀಸ್ ಇನ್ಸ್ಪೆಕ್ಟರ್ ತನ್ನ ಇತಿ ಮಿತಿಯಲ್ಲಿ ತನ್ನ ಕಾರ್ಯವನ್ನು ಹೇಗೆ ನಡೆಸಬಹುದು ಎಂಬುದನ್ನು ಅಚ್ಕಟ್ಟಾಗಿ ಕಟ್ಟಿಕೊಟ್ಟಿದ್ದು, ಪ್ರೇಕ್ಷಕರನ್ನ ಸೆಳೆಯುವ ಅಂಶ ಈ ಚಿತ್ರದಲ್ಲಿದೆ

Related posts