Bollywood Cinisuddi Fresh Cini News Trailers 

ಬಹು ನಿರೀಕ್ಷಿತ ‘ಗಲ್ಲಿ ಬಾಯ್’ ಚಿತ್ರದ ಟ್ರೈಲರ್ ರಿಲೀಸ್

ಬಾಲಿವುಡ್ ಸೂಪರ್‍ಸ್ಟಾರ್ ರಣವೀರ್ ಸಿಂಗ್ ಮತ್ತು ಕ್ಯೂಟ್ ಗರ್ಲ್ ಅಲಿಯಾ ಭಟ್ ಅಭಿನಯದ ಈ ವರ್ಷದ ಬಹು ನಿರೀಕ್ಷಿತ ಸಿನಿಮಾ ಗಲ್ಲಿ ಬಾಯ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಈ ಟ್ರೈಲರ್ ಬಿಡುಗಡೆಯಾಗಿ ಕೆಲವೇ ನಿಮಿಷಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಇದಕ್ಕೆ ಕಾರಣಗಳು ಹಲವು. ರಣ್ ಮತ್ತು ಅಲಿ 2018ರ ಸೂಪರ್‍ಹಿಟ್ ಸಿನಿಮಾಗಳ ತಾರೆಯರು. ಇಬ್ಬರೂ ಪ್ರತಿಭಾವಂತರು. ನಟನೆಯಲ್ಲಿ ಪೈಪೋಟಿಗೆ ಇಳಿದವರಂತೆ ಅಭಿನಯಿಸುತ್ತಾರೆ. ಅಲ್ಲದೇ ಜೋಯಾ ಅಖ್ತರ್ ನಿರ್ದೇಶನದ ಈ ಚಿತ್ರ ಮುಂಬೈನ್ ಸ್ಟ್ರೀಟ್ ಡ್ಯಾನ್ಸರ್ ಒಬ್ಬನ ಜೀವನ-ಸಾಧನೆಯಿಂದ ಪ್ರೇರಣೆ ಪಡೆದ ಸಿನಿಮಾ.

ಈ ಹಿಂದೆ ಇವರಿಬ್ಬರೂ ಕಾಣಿಸಿಕೊಳ್ಳದಿರುವ ಅವತಾರದಲ್ಲಿ ಮಿಂಚಲಿದ್ದಾರೆ. ಇವರಿಬ್ಬರು ಸಖತ್ ಹಿಪ್-ಹಾಪ್ ರ್ಯಾಪ್ ಸ್ಟೆಪ್‍ಗಳನ್ನು ಹಾಕಿದ್ದಾರೆ. ಕಳೆದ ವರ್ಷ ತೆರೆಕಂಡ ರಾಝಿ ಚಿತ್ರದಲ್ಲಿ ಅಲಿಯಾ ಮನೋಜ್ಞ ಅಭಿನಯ ನೀಡಿ ಅಭಿಮಾನಿಗಳಿಗೆ ಕಣ್ಮಣಿಯಾಗಿದ್ದರೆ, ವರ್ಷಾಂತ್ಯದಲ್ಲಿ ಬಿಡುಗಡೆಯಾದ ಸಿಂಬಾ ಚಿತ್ರದಲ್ಲಿ ರಣ್ ತಾನು ಬಾಲಿವುಡ್‍ನ ಅತ್ಯಂತ ಯಶಸ್ವಿ ನಟ ಎಂಬುದನ್ನು ಸಾಬೀತು ಮಾಡಿದ್ದಾರೆ.

ಹೀಗಾಗಿ ಇವರಿಬ್ಬರು ಒಟ್ಟಿಗೆ ಅಭಿನಯಿಸಿರುವ ಗಲ್ಲಿ ಬಾಯ್ ಸಹಜವಾಗಿಯೇ ಆಸಕ್ತಿ ಕೆರಳಿಸಿದೆ. ಇಷ್ಟೆಲ್ಲಾ ಆಸಕ್ತಿ ಮೂಡಿಸಿರುವ ಗಲ್ಲಿ ಬಾಯ್ ಟ್ರೈಲರ್ ಇಂದು ರಿಲೀಸ್ ಆಗಿದೆ. ಪ್ರೇಮಿಗಳ ದಿನಾಚರಣೆಯಾದ ಫೆಬ್ರವರಿ 14ರಂದು ಗಲ್ಲಿ ಬಾಯ್ ತೆರೆ ಮೇಲೆ ಬರಲಿದ್ದಾನೆ. ಒಟ್ಟಿನಲ್ಲಿ ಈಗಾಗಲೇ ಬಿ-ಟೌನ್‍ನಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದ್ದ ಈ ಚಿತ್ರ ಈಗ ಟ್ರೈಲರ್ ನಿಂದ ಮತ್ತಷ್ಟು ಕುತೂಹಲಗಳನ್ನು ಕೆರಳಿಸಿದೆ.

 

Related posts