Cinisuddi Fresh Cini News 

ವಿಜಯ ರಾಘವೇಂದ್ರ ಅಭಿನಯದ “ಗ್ರೇ ಗೇಮ್ಸ್” ಚಿತ್ರಕ್ಕೆ ಚಾಲನೆ

ಸ್ಯಾಂಡಲ್ ವುಡ್ ನಲ್ಲಿ ನೂತನ ಚಿತ್ರಗಳ ಚಾಲನೆ ಜೋರಾಗಿಯೇ ನಡೆಯುತ್ತಿದೆ. ಇತ್ತೀಚೆಗಷ್ಟೇ ಹಿರಿಯ ನಿರ್ಮಾಪಕ , ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಚಿನ್ನೆಗೌಡ್ರ ಕುಟುಂಬವು ಸೇರಿದಂತೆ ಹಲವು ಗಣ್ಯರು ಅದ್ದೂರಿ ಮುಹೂರ್ತ ಸಮಾರಂಭದಲ್ಲಿ ಹಾಜರಾಗಿತ್ತು.

ತನ್ನ ಚಿಕ್ಕವಯಸ್ಸಿನಿಂದಲ್ಲೂ ಅಮೋಘ ಅಭಿನಯದಿಂದ ಮನೆ ಮಾತಾಗಿರುವ ವಿಜಯ ರಾಘವೇಂದ್ರ ಅಭಿನಯದ “ಗ್ರೇ ಗೇಮ್ಸ್” ಚಿತ್ರದ ಮುಹೂರ್ತ ಸಮಾರಂಭ ಧರ್ಮಗಿರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ನೆರವೇರಿತು. ಮೊದಲ ಸನ್ನಿವೇಶಕ್ಕೆ ನಟ ಶ್ರೀ ಮುರಳಿ ಆರಂಭ ಫಲಕ ತೋರಿ ಚಾಲನೆ ನೀಡಿದರು. ಎಸ್.ಎ.ಚಿನ್ನೇಗೌಡ, ಬಿ.ಕೆ.ಶಿವರಾಂ ಮುಂತಾದ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.

ಮುಹೂರ್ತ ಸಮಾರಂಭದ ನಂತರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮೊದಲಿಗೆ ನಿರ್ದೇಶಕ ಗಂಗಾಧರ್ ಸಾಲಿಮಠ್ ಮಾತನಾಡಿದರು. ಸೈಬರ್ ಕ್ರೈಮ್ ಸುತ್ತ ನಡೆಯುವ ಕಥೆ. ಸೈಕಲಾಜಿಸ್ಟ್ ಪಾತ್ರದಲ್ಲಿ ವಿಜಯ ರಾಘವೇಂದ್ರ ಅಭಿನಯಿಸುತ್ತಿದ್ದಾರೆ.

ಗ್ರೇ ಗೇಮ್ ಆಡುವ ಇಪ್ಪತ್ತು ವರ್ಷದ ಹುಡುಗನ ಪಾತ್ರದಲ್ಲಿ ವಿಜಯ ರಾಘವೇಂದ್ರ ಅವರ ಅಕ್ಕನ ಮಗ ಜೈ ನಟಿಸುತ್ತಿದ್ದಾರೆ. ವರ್ಕ್ ಶಾಪ್ ಮೂಲಕ ಜೈ ಅವರಿಗೆ ಅಭಿನಯದ ತರಭೇತಿ ನೀಡಲಾಗಿದೆ.‌ ಜೈ ಅವರ ತಾಯಿಯ ಪಾತ್ರದಲ್ಲಿ ಅಪರ್ಣ ಕಾಣಿಸಿಕೊಳ್ಳಲಿದ್ದಾರೆ.‌ ಸೈಬರ್ ಕೈಮ್ ನ ವಿಶೇಷ ಅಧಿಕಾರಿ ಪಾತ್ರವನ್ನು ಭಾವನಾ ರಾವ್ ಮಾಡಲಿದ್ದಾರೆ ಎಂದು ನಿರ್ದೇಶಕರು ಎಲ್ಲರ ಪಾತ್ರ ಪರಿಚಯ ಮಾಡಿದರು.

ಚಿತ್ರಕ್ಕೆ ಇದೇ ಎಂಟರಿಂದ ಬೆಂಗಳೂರಿನಲ್ಲಿ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ .ಚಿತ್ರಕ್ಕೆ ಕಥೆ ಬರೆದಿರುವ, ನಿರ್ಮಾಪಕ ಆನಂದ್ ಹೆಚ್ ಮಗದ್ ಅವರು ಚಿತ್ರದ ಬಗ್ಗೆ ಅಭಿಪ್ರಾಯ ಹಂಚಿಕೊಂಡರು.

ಒಂದರ ಹಿಂದೆ ಒಂದು ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದಿರುವಂತಹ ನಟ ವಿಜಯ ರಾಘವೇಂದ್ರ. ಈ ಚಿತ್ರದಲ್ಲಿ ಒಬ್ಬ ಸೈಕಾಲಜಿಸ್ಟ್ ಪಾತ್ರವನ್ನು ನಿರ್ವಹಿಸಲಿದ್ದಾರೆ. ಚಿತ್ರತಂಡ ಮಾಡಿಕೊಂಡಿರುವ ಕಥೆ ಹಾಗೂ ನಿರೂಪಣಾ ಶೈಲಿ ಬಹಳ ವಿಭಿನ್ನವಾಗಿದ್ದು , ಇದು ಎಲ್ಲಾ ವರ್ಗದವರ ಗಮನ ಸೆಳೆಯುವಂಥ ಚಿತ್ರವಾಗಲಿದೆ ಎಂಬ ಭರವಸೆಯೊಂದಿಗೆ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ನನಗೆ ಈ ಅವಕಾಶ ಸಿಗಲು ಪ್ರಮುಖ ಕಾರಣ ರಾಘು ಮಾವ. ಅವರಿಗೆ ಹಾಗೂ ನಿರ್ದೇಶಕ, ನಿರ್ಮಾಪಕರಿಗೆ ತುಂಬಾ ಧನ್ಯವಾದ. ವರ್ಕ್ ಶಾಪ್ ಮೂಲಕ ನಿರ್ದೇಶಕರು ಅಭಿನಯದ ತರಭೇತಿ ನೀಡಿದ್ದಾರೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ಜೈ.ಎಲ್ಲರನ್ನೂ ಭೇಟಿಯಾಗಿ ಬಹಳ ದಿನಗಳಾಗಿತ್ತು. ಈಗ ಎಲ್ಲರನ್ನೂ ನೋಡಿ ಸಂತೋಷವಾಗಿದೆ. ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ಸೈಬರ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದರು ಭಾವನಾರಾವ್.

ಸಾಮಾನ್ಯವಾಗಿ ನಾನು ಎಲ್ಲಾ ಪಾತ್ರಗಳನ್ನು ಒಪ್ಪಿಕೊಳ್ಳುವುದಿಲ್ಲ. ಈನಿರ್ದೇಶಕರು ಹೇಳಿದ ಕೂಡಲೆ ಒಪ್ಪಿಕೊಳ್ಳೋಣ ಅನಿಸಿತು. ಇತ್ತೀಚೆಗೆ ನಾನು‌, ಜೈ ಜೊತೆ ವರ್ಕ್ ಶಾಪ್ ನಲ್ಲಿ ಪಾಲ್ಗೊಂಡಿದೆ. ಉತ್ತಮವಾಗಿ ನಟಿಸುತ್ತಾನೆ. ನಾನು ಚಿನ್ನೇಗೌಡರ ಕುಟುಂಬವನ್ನು ಚಿಕ್ಕಂದಿನಿಂದಲೂ ಬಲ್ಲೆ. ಈಗ ಅವರ ಕುಟುಂಬದವರ ಜೊತೆ ನಟಿಸುವ ಅವಕಾಶ ದೊರಕಿದ್ದು ಖುಷಿಯಾಗಿದೆ ಎಂದರು ಅಪರ್ಣ.

ಚಿತ್ರದ ಶೀರ್ಷಿಕೆ ಅನಾವರಣ ಮಾಡಿದ ಚಿನ್ನೇಗೌಡ ಅವರು ಮತ್ತು ಬಿ.ಕೆ.ಶಿವರಾಂ ಅವರು ತಮ್ಮ ಪ್ರೋತ್ಸಾಹಭರಿತ ಮಾತುಗಳ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದರು.

“ಗ್ರೇ ಗೇಮ್ಸ್” ಗೆ ವರುಣ್ ಅವರ ಛಾಯಾಗ್ರಹಣವಿದ್ದು, ಶ್ರೀಯನ್ಶ್ ಶ್ರೀರಾಮ್ ಹಾಗೂ ಡೋಲೇಶ್ವರ ರಾಜ್ ಸಂಕು ಸಂಗೀತ ನೀಡುತ್ತಿದ್ದಾರೆ. ದತ್ತಣ್ಣ ನಿರ್ಮಾಣ ನಿರ್ವಹಣೆ ಹಾಗೂ ರಂಜಿತ್ ಅವರ ಸಂಕಲನ ಈ ಚಿತ್ರಕ್ಕಿದೆ. ಡೋಲೇಶ್ವರ ರಾಜ್ ಸಂಕು, ಅರವಿಂದ್ ಜೋಷಿ, ಸತೀಶ್ ಗ್ರಾಮ್ ಪುರೋಹಿತ್ ಈ ಚಿತ್ರದ ಸಹ ನಿರ್ಮಾಪಕರು. ಎಕ್ಸಿಕ್ಯುಟಿವ್ ಪ್ರೊಡ್ಯೂಸರ್ ಆಗಿ ಬಸವರಾಜ್ ಕೆಡದ್ ಕಾರ್ಯ ನಿರ್ವಹಿಸುತ್ತಿದ್ದಾರೆ.

ಯುವಪಡೆಗಳ ಬಳಗ ಒಂದು ಉತ್ತಮ ಕಥೆಯನ್ನು ಸಿದ್ಧಪಡಿಸಿಕೊಂಡು ಚಿತ್ರ ಮಾಡಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿಯನ್ನು ತಂಡ ನೀಡಲಿದೆಯoತೆ.

Related posts