Cinisuddi Fresh Cini News 

2022ರ ಗ್ಲೋಬಲ್ ಗ್ಲೋರಿಯಸ್ ಅವಾರ್ಡ್ ಪಡೆದ ಛಾಯಾಗ್ರಾಹಕ ಪಿ.ವಿ.ಆರ್. ಸ್ವಾಮಿ

ದೇಶದ ಬೇರೆ ಬೇರೆ ಕ್ಷೇತ್ರಗಳಲ್ಲಿ ಹಲವಾರು ಸಾಧನೆಗಳನ್ನು ಮಾಡಿದಂತಹ ಪ್ರತಿಭಾನ್ವಿತರಿಗೆ ಭಾರತ ಸರ್ಕಾರದಿಂದ ಅನುಮತಿ ಪಡೆದಂತಹ ಗ್ಲೋಬಲ್ ಗ್ಲೋರಿಯಸ್ ಸಂಸ್ಥೆಯು ಪ್ರಶಸ್ತಿಯನ್ನ ನೀಡುತ್ತಿದೆ. ಕ್ರೀಡೆ , ಸಿನಿಮಾ, ಕೃಷಿ , ಉದ್ಯಮ ಹೀಗೆ ಹಲವು ಕ್ಷೇತ್ರಗಳ ಗಣ್ಯರನ್ನು ಗೌರವಿಸುತ್ತಾ ಬಂದಿದೆ.

ಈ ಸಂಸ್ಥೆಯು ಗ್ಲೋಬಲ್ ಗ್ಲೋರಿಯಸ್ ಅವಾರ್ಡ್ ಡಾಟ್ ಕಾಮ್ ಮೂಲಕ ಆನ್ ಲೈನ್ ಅರ್ಜಿಯನ್ನು ಆಹ್ವಾನಿಸುತ್ತದೆ. ಅದಕ್ಕೆ ಪೂರಕವಾದ ಮಾಹಿತಿಯನ್ನು ನೀಡಿದ ಮೇಲೆ ಸೆಲೆಕ್ಷನ್ ಕಮಿಟಿ ಅವರು ಮಾಹಿತಿ ಕಳಿಸಿದವರ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಗಳನ್ನು ನೀಡುತ್ತಾ ಬಂದಿದೆ.

ಕಳೆದ ಏಪ್ರಿಲ್ 24ರಂದು ಆಗ್ರಾದಲ್ಲಿ ಹೈಲೈಟ್ ಕ್ರಿಯೇಷನ್ಸ್ ಇವೆಂಟ್ ಪ್ಲಾನರ್ಸ್ ಅರ್ಪಿಸಿ 2022 ರ ಗ್ಲೋಬಲ್ ಗ್ಲೋರಿಯಸ್ ಪ್ರಶಸ್ತಿಯನ್ನು ವಿವಿಧ ಕ್ಷೇತ್ರದ ಗಣ್ಯರಿಗೆ ನೀಡಿದೆ. ಆ ಸಾಲಿನಲ್ಲಿ ಛಾಯಾಗ್ರಹಣದಲ್ಲಿ ತಮ್ಮದೇ ಆದ ಉತ್ತಮ ಸಾಧನೆಯನ್ನು ಮಾಡಿರುವಂತಹ ಛಾಯಾಗ್ರಾಹಕ ಪಿ .ವಿ .ಆರ್. ಸ್ವಾಮಿ ಗೂಗಾರೆದೊಡ್ಡಿ ರವರಿಗೆ 2022 ರ ಡೈರೆಕ್ಟರ್ ಆಫ್ ಫೋಟೋಗ್ರಫಿ ಪ್ರಶಸ್ತಿ ನೀಡಿದೆ.

ಪ್ರತಿಯೊಬ್ಬ ಮನುಷ್ಯರು ಯಾವುದೇ ದೃಶ್ಯವನ್ನು ನೋಡಬೇಕಾದರೆ ತಮ್ಮ ಕ್ಯಾಮೆರಾ ಮೂಲಕವೇ ನೋಡುತ್ತಾರೆ. ಹೌದು… ಯಾಕಂದ್ರೆ ಮನುಷ್ಯನ ಕಣ್ಣು ಕೂಡ ಕ್ಯಾಮೆರಾ ಇದ್ದಂತೆ. ಆ ಕಣ್ಣುಗಳ ಮೂಲಕ ಸುಂದರ ದೃಶ್ಯಗಳನ್ನು ನೋಡುತ್ತೇವೆ.

ಇವೆಲ್ಲದಕ್ಕೂ ಪೂರಕ ಎನ್ನುವಂತೆ ಕ್ಯಾಮೆರಾ ಕೈಚಳಕ ದಶಕಗಳಿಂದಲೂ ನಿರಂತರವಾಗಿ ಎಲ್ಲರನ್ನೂ ಸೆಳೆಯುತ್ತ ಬಂದಿದೆ. ಆ ನಿಟ್ಟಿನಲ್ಲಿ ಗ್ರಾಮೀಣ ಪ್ರತಿಭೆ ಪಿ. ವಿ. ಆರ್. ಸ್ವಾಮಿ ತಮ್ಮ ಕ್ಯಾಮೆರಾ ಕಾರ್ಯ ವೈಖರಿಯ ಮೂಲಕ ಬಹಳಷ್ಟು ಸಾಧನೆಯನ್ನು ಮಾಡಿ ಗಮನ ಸೆಳೆದಿದ್ದಾರೆ.

ಬಾಲ್ಯದಿಂದಲೂ ಕ್ಯಾಮೆರಾ ಬಗ್ಗೆ ಬಹಳಷ್ಟು ಆಸಕ್ತಿ ಹೊಂದಿದ್ದ ಸ್ವಾಮಿ ಅವರು ಸ್ಥಿರ ಛಾಯಾಗ್ರಹಣ ಮೂಲಕ ತಮ್ಮ ವೃತ್ತಿಯ ಕಡೆಗೆ ಬೆಳೆದು ಬಂದವರು. ಕಿರುತೆರೆ ಧಾರಾವಾಹಿಗಳಲ್ಲಿ ಸಹಾಯಕ ಛಾಯಾಗ್ರಾಹಕರಾಗಿ ದುಡಿದು, ತದನಂತರ ದೂರದರ್ಶನ ಹಾಗೂ ಖಾಸಗಿ ವಾಹಿನಿಯಲ್ಲಿ ಬಂದಂತ ಮೆಗಾ ಧಾರಾವಾಹಿಗಳಲ್ಲಿ ಸರಿ ಸುಮಾರು 3ಸಾವಿರಕ್ಕೂ ಅಧಿಕ ಸಂಚಿಕೆಗಳಲ್ಲಿ ತಮ್ಮ ಕ್ಯಾಮೆರಾ ಕೈಚಳಕ ತೋರಿಸಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿ, ನಂತರ ಹಿರಿಯ ಛಾಯಾಗ್ರಾಹಕ ಪಿ. ಕೆ .ಎಚ್ ದಾಸ್, ಹೆಚ್. ರಾಮಚಂದ್ರ ರವರ ಬಳಿ ಸಹಾಯಕ ಛಾಯಾಗ್ರಾಹಕನಾಗಿ ಕೆಲಸ ಮಾಡಿ ಒಂದಷ್ಟು ಅನುಭವವನ್ನು ಪಡೆದು, ಈಗ ಪೂರ್ಣ ಪ್ರಮಾಣದ ಛಾಯಾಗ್ರಾಹಕರಾಗಿ ಸುಮಾರು ಇಪ್ಪತೈದಕ್ಕೂ ಹೆಚ್ಚು ಚಿತ್ರಗಳಿಗೆ ಛಾಯಾಗ್ರಹಣ ಮಾಡುತ್ತಾ ಮುಂದೆ ಸಾಗುತ್ತಿದ್ದಾರೆ.

ತಮ್ಮ ಛಾಯಾಗ್ರಹಣದ ಹಾದಿಯಲ್ಲಿ ರಿಸರ್ವೇಷನ್ ಹಾಗೂ ರಜತಕಮಲ ಚಿತ್ರಗಳು ಅತ್ಯುತ್ತಮ ಪ್ರಾದೇಶಿಕ ಚಿತ್ರ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿಗಳನ್ನು ಪಡೆದುಕೊಂಡಿದೆ. “ಆಂದೋಲನ” ಎಂಬ ಮಕ್ಕಳ ಚಿತ್ರವನ್ನು ನಿರ್ದೇಶನ ಜೊತೆಗೆ ಛಾಯಾಗ್ರಹಣವನ್ನು ಕೂಡ ಮಾಡಿದ್ದಾರೆ.ಇದಲ್ಲದೆ ಹಲವು ಸಾಧಕರ ಜೀವನ ಚರಿತ್ರೆಯ ಕುರಿತಾದಂತ ಚಿತ್ರಗಳಿಗೆ ತಮ್ಮ ಕ್ಯಾಮೆರಾ ಕೈಚಳಕ ತೋರಿಸಿರುವ ಪಿ.ವಿ.ಆರ್. ಸ್ವಾಮಿ ಎಲ್ಲಾ ಚಿತ್ರತಂಡದ ಬಳಗದವರೊಂದಿಗೆ ಬಹಳ ಸ್ನೇಹ ಹಾಗೂ ಸರಳ ಜೀವಿಯಾಗಿ ಮುಂದೆ ಸಾಗಿದವರು.

ಚಿತ್ರರಂಗದಲ್ಲಿ ಬಹಳಷ್ಟು ವಿಭಿನ್ನ ಬಗೆಯ ಸೂಕ್ಷ್ಮ ಕಥಾಹಂದರವುಳ್ಳ ವಂತಹ ಸ್ಮಶಾನಮೌನ , ವೈಟ್, ಐಎಎಸ್ ಕನಸು, ಪ್ರತಿಮ, ಉಳುವಾ ಯೋಗಿಯ ನೋಡಲ್ಲಿ, ಹಸಿರು ರಿಬ್ಬನ್, ಹಲ್ಮಿಡಿ, Onlyಶ್ರೀಕೃಷ್ಣ, ನಾಯಿಗೆರೆ, ಅಮ್ಮನ ಮನೆ, ಕಂತ್ರಿಬಾಯ್ಸ್ , ಹರಿಶ್ಚಂದ್ರ ಮಕ್ಕಳು, ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ, ಓಜಸ್ , ಆಗುಂತಕ ಹಾಗೂ ರಾಜಿ ಸೇರಿದಂತೆ ಹಲವಾರು ಚಿತ್ರಗಳಲ್ಲಿ ತಮ್ಮ ಕ್ಯಾಮೆರಾ ಕಣ್ಣುಗಳ ಮೂಲಕ ಸುಂದರ ದೃಶ್ಯಗಳನ್ನು ಸೆರೆಹಿಡಿದಿದ್ದು , ಅರಿಯಮೃೆ ಎಂಬ ತಮಿಳು ಚಿತ್ರದಲ್ಲಿ ಕೂಡ ತಮ್ಮ ಚಾಕುಚಕ್ಯತೆಯನ್ನು ತೋರಿಸಿದ್ದಾರೆ. ಹಲವಾರು ಪ್ರಸಿದ್ಧ ನಿರ್ದೇಶಕರು , ಸಾಹಿತಿಗಳ ಜೊತೆಗೆ ಒಟ್ಟಿಗೆ ಕೆಲಸ ಮಾಡುವ ಮೂಲಕ ಬಹಳಷ್ಟು ಸಾಧನೆಯನ್ನು ಮಾಡಿದ್ದಾರೆ.

ಇವರ ಕ್ಯಾಮೆರಾ ಕೈಚಳಕದ ಚಿತ್ರಗಳು ಹಲವಾರು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪಾಲ್ಗೊಂಡ ಗಮನವನ್ನು ಸೆಳೆದಿದೆ. ವಸ್ತುಸ್ಥಿತಿಗೆ ಪೂರಕವಾದಂಥ ಛಾಯಾಗ್ರಹಣ ಮಾಡುವ ಮೂಲಕ ನಿರ್ಮಾಪಕ ಹಾಗೂ ನಿರ್ದೇಶಕರಿಗೆ ಆತ್ಮೀಯರಾಗಿದ್ದಾರೆ. ಇವರ ಡೈರೆಕ್ಷನ್ ಫೋಟೋಗ್ರಫಿ, ಸಿನಿಪಯಣದ ಸಾಧನೆಯನ್ನ ಗಮನಿಸಿ 2022ರ ಗ್ಲೋಬಲ್ ಗ್ಲೋರಿಯಸ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಇವರ ಈ ಸಾಧನೆಗೆ ಇನ್ನೂ ಹತ್ತು ಹಲವು ಪ್ರಶಸ್ತಿಗಳು ಲಭಿಸಲಿ. ಹಾಗೆಯೇ ಬಹಳಷ್ಟು ಚಿತ್ರಗಳು ಪಿ. ವಿ.ಆರ್. ಸ್ವಾಮಿ ರವರ ಕೈಚಳಕದ ಮೂಲಕ ಹೊರಬರುವಂತಾಗಲಿ ಎನ್ನುವುದೇ ಅವರ ಆತ್ಮೀಯರು, ಸ್ನೇಹಿತರು ಹಾಗೂ ಚಿತ್ರೋದ್ಯಮದ ಬಂಧುಗಳ ಬಳಗದವರ ಆಶಯವಾಗಿದೆ.

Related posts