Cinisuddi Fresh Cini News 

‘ಗಿರಿಕಥೆ’ ಹೇಳಲು ಬಂದ ಬೆಡಗಿಯರು

ನಿರ್ದೇಶಕ, ನಟ ಮತ್ತು ನಿರ್ಮಾಪಕರಾಗಿ ಹೆಸರಾಗಿರುವ ರಿಷಬ್ ಶೆಟ್ಟಿ ಈಗಾಗಲೇ ರಿಕ್ಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕಾಸರಗೋಡು ಹೀಗೆ ಸಾಕಷ್ಟು ಹಿಟ್ ಚಿತ್ರಗಳನ್ನು ಕೊಟ್ಟವರು. ಬಹಳ ದಿನಗಳ ನಂತರ ರಿಷಭ್ ಶೆಟ್ಟಿ ಈಗ ಮತ್ತೊಂದು ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ.

ಗಿರಿಕೃಷ್ಣ ಎಂಬ ಯುವ ನಿರ್ದೇಶಕನ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಹೆಸರು ಹರಿಕಥೆ ಅಲ್ಲ ಗಿರಿಕಥೆ. ಈ ಚಿತ್ರದ ಮೂಲಕ ಬೆಲ್ ಬಾಟಂ, ಕಥಾಸಂಗಮ ಚಿತ್ರಗಳ ನಂತರ ರಿಶಭ್ ಶೆಟ್ಟಿ ಅವರು ಮತ್ತೊಮ್ಮೆ ಬಣ್ಣ ಹಚ್ಚಿದ್ದಾರೆ.

ಹರಿಕಥೆ ಅಲ್ಲ ಗಿರಿ ಕಥೆ ಚಿತ್ರದ ಮೂಲಕ ಪ್ರೇಕ್ಷಕರಿಗೆ ಮೋಡಿ ಮಾಡಲು ಅಣಿಯಾಗಿದ್ದಾರೆ. ಗಿರಿಕೃಷ್ಣ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದು, ಅವರು ಕನ್ನಡ ಚಿತ್ರರಂಗಕ್ಕೆ ಹೊಸಬರೇನಲ್ಲ, ಈಗಾಗಲೇ ಲವ್ ಇನ್ ಮಂಡ್ಯ, ಎದೆಗಾರಿಕೆ, ಕರಿಯಾ ಕಣ್‍ಬಿಟ್ಟಾ, ಕಿರಿಕ್ ಪಾರ್ಟಿ ಸೇರಿದಂತೆ ಮೊದಲಾದ ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ನಿರ್ವಹಿಸುವ ಮೂಲಕ ಗುರ್ತಿಸಿಕೊಂಡಿದ್ದಾರೆ. ಅಲ್ಲದೆ ರೀಫಿಲ್ ಎಂಬ ಕಿರುಚಿತ್ರದಲ್ಲಿ ಸಹ ಗಿರಿಕೃಷ್ಣ ನಟಿಸಿದ್ದು, ಇದೇ ಮೊದಲ ಬಾರಿಗೆ ಸ್ವತಂತ್ರ ನಿರ್ದೇಶನಕ್ಕೆ ಕೈಹಾಕಿದ್ದಾರೆ.

ರಿಶಬ್ ಶೆಟ್ಟಿ ನಾಯಕನಾಗಿ ಅಭಿನಯಿಸುತ್ತಿರುವ ಹರಿಕಥೆ ಅಲ್ಲ ಗಿರಿಕಥೆ ಚಿತ್ರದಲ್ಲಿ ತಪಸ್ವಿನಿ ಮತ್ತು ರಚನಾ ಇಂದರ್ ಎಂಬ ಇಬ್ಬರು ನಾಯಕಿಯರು ಹರಿಕಥೆ ಹೇಳಲು ಅಣಿಯಾಗಿದ್ದಾರೆ. ಅಂದರೆ ರಿಶಭ್ ಶೆಟ್ಟಿ ಎದುರು ನಾಯಕಿಯರಾಗಿ ಕಾಣಿಸಿಕೊಳ್ಳಲಿದ್ದಾರೆ.

ರಚನಾ ಇಂದರ್ ಈಗಾಗಲೇ ಲವ್ ಮಾಕ್ಟೇಲ್ ಚಿತ್ರದಲ್ಲಿ ಅದಿತಿ ಪಾತ್ರದ ಮೂಲಕ ಪರಿಚಿತರಾಗಿದ್ದಾರೆ. ಇದು ಅವರ ಎರಡನೇ ಚಿತ್ರ. ಇನ್ನು ತಪಶ್ವಿನಿಗೆ ಇದು ಮೊದಲನೇ ಚಿತ್ರ. ಆಡಿಶನ್ ಮೂಲಕ ತಪಸ್ವಿನಿ ಅವರನ್ನು ಚಿತ್ರತಂಡ ಆಯ್ಕೆ ಮಾಡಿಕೊಂಡಿದೆ.

ಹಾಸ್ಯಪ್ರಧಾನ ಕಥೆಯಿರುವ ಹರಿಕಥೆ ಅಲ್ಲ ಗಿರಿಕಥೆ ಚಿತ್ರಕ್ಕೆ ಗಿರಿಕೃಷ್ಣ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ರಿಷಬ್ ಶೆಟ್ಟಿ ಈ ಚಿತ್ರದಲ್ಲಿ ನಿರ್ದೇಶಕನೊಬ್ಬನ ಪಾತ್ರವನ್ನು ಮಾಡುತ್ತಿದ್ದಾರೆ.

ಕಿರಿಕ್ ಪಾರ್ಟಿ ಸೇರಿದಂತೆ ಸಾಕಷ್ಟು ಚಿತ್ರಗಳಿಗೆ ಸಂಗೀತ ನೀಡಿರುವ ಅಜನೀಶ್ ಲೋಕನಾಥ್ ಅವರೇ ಈ ಚಿತ್ರಕ್ಕೂ ಸಂಗೀತ ನೀಡುತ್ತಿದ್ದಾರೆ. ‘ಕಥಾ ಸಂಗಮ’ ಚಿತ್ರದಲ್ಲಿ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದ ರಂಗನಾಥ್ ಸಿ.ಎಂ. ಈ ಚಿತ್ರದ ಛಾಯಾಗ್ರಹಕರು.

ರಿಶಬ್ ಶೆಟ್ಟಿ ಈಗಾಗಲೇ ಲಾಕ್‍ಡೌನ್ ಸಮಯದಲ್ಲಿ ಭರತ್‍ರಾಜ್ ಅವರ ನಿರ್ದೇಶನದ ಹೀರೋ ಚಿತ್ರದ ಶೂಟಿಂಗ್ ಮುಗಿಸಿಕೊಂಡಿದ್ದಾರೆ. ಇನ್ನು ರಿಶಬ್ ಶೆಟ್ಟಿ ಅವರ ನಿರ್ದೇಶನದ ರುದ್ರಪ್ರಯಾಗ್ ಚಿತ್ರ ಕೂಡ ತಯಾರಾಗುತ್ತಿದೆ. ಇದರಲ್ಲಿ ನಟ ಅನಂತ್‍ನಾಗ್ ಪ್ರಮುಖ ಪಾತ್ರದಲ್ಲಿದ್ದಾರೆ. ಜಯಣ್ಣ ಪ್ರೊಡಕ್ಷನ್ ಅಡಿಯಲ್ಲಿ ಈ ಚಿತ್ರ ತಯಾರಾಗುತ್ತಿದ್ದು 2021ರ ವೇಳೆಗೆ ತೆರೆಗೆ ಬರುವ ನಿರೀಕ್ಷೆಯಿದೆ.

Related posts