Cini Reviews Cinisuddi Fresh Cini News 

“ಜಂಟಲ್ ಮನ್”ನ ಮನ ಮುಟ್ಟುವ ಕಥೆ ( ಚಿತ್ರ ವಿಮರ್ಶೆ-ರೇಟಿಂಗ್ : 4ಟ5)

ಚಿತ್ರ : ಜಂಟಲ್ ಮನ್ ನಿರ್ದೇಶಕ : ಜಡೇಶ್ ಕುಮಾರ್ ನಿರ್ಮಾಪಕ : ಗುರು ದೇಶಪಾಂಡೆ
ಸಂಗೀತ : ಅಜನೀಶ್ ಲೋಕನಾಥ್
ಛಾಯಾಗ್ರಾಹಕ : ಆರೂರ್ ಸುಧಾಕರ್
ತಾರಾಗಣ : ಪ್ರಜ್ವಲ್ ದೇವರಾಜ್, ನಿಶ್ವಿಕಾ ನಾಯ್ಡು, ಬೇಬಿ ಆರಾಧ್ಯ , ಪ್ರಶಾಂತ್ ಸಿದ್ಧಿ, ಅರ್ಜುನ್ , ತಬ್ಲಾ ನಾಣಿ, ವಿಜಯ್ ಚೆಂಡೂರ್ ಹಾಗೂ ಮುಂತಾದವರು…

ಬೆಳ್ಳಿ ಪರದೆ ಮೇಲೆ ಒಂದಷ್ಟು ಸೂಕ್ಷ್ಮ ವಿಚಾರಗಳ ಅನಾವರಣ ಮಾಡಿರುವಂತಹ ಚಿತ್ರವೇ ಜಂಟಲ್ ಮನ್. ಇಲ್ಲಿ ಒಬ್ಬ ತಂದೆ ಹಾಗೂ ಮಗುವಿನ ಪ್ರೀತಿಯ ಅನಾವರಣವಿದೆ. ಜೊತೆಗೆ ಒಂದು ಗಹನವಾದ ವಿಷಯವನ್ನು ತೆಗೆದುಕೊಂಡು ಕಥೆ ಮಾಡಲಾಗಿದೆ. ಹೆಣ್ಣಿನ ಅಂಡಾಣುಗಳ ಅಕ್ರಮ ಮಾರಾಟ ದಂಧೆ ಈ ಚಿತ್ರದ ಪ್ರಮುಖ ವಿಷಯಗಳಲ್ಲಿ ಒಂದಾಗಿದೆ.

ಕಥಾ ಹಂದರದ ಪ್ರಕಾರ ನಾಯಕ ಸ್ಲೀಪಿಂಗ್ ಸಿಂಡ್ರೋಮ್ ಖಾಯಿಲೆಯಿಂದ ಬಳಲುವ ಭರತ್ (ಪ್ರಜ್ವಲ್ ದೇವರಾಜ್ ) ದಿನದಲ್ಲಿ ಬರೀ 6 ಗಂಟೆ ಮಾತ್ರ ಎಚ್ಚರವಾಗಿರುತ್ತಾನೆ. ಆ ಆರು ಗಂಟೆಗಳಲ್ಲೇ ತನ್ನೆಲ್ಲ ಕೆಲಸ ಕಾರ್ಯಗಳನ್ನು ನಿಭಾಯಿಸುತ್ತಿರುತ್ತಾನೆ. ಅಣ್ಣ, ಅತ್ತಿಗೆ ಜೊತೆಗೆ ಅವರ ಪುಟ್ಟ ಮಗು ಹೀಗೆ ಭರತ್ ತನಗೆ ತೊಂದರೆಯಿದ್ದರೂ ಫ್ಯಾಮಿಲಿ ಜೊತೆ ಖುಷಿಯಾಗಿಯೇ ಇರುತ್ತಾನೆ.

ನಾಯಕನ ಜೀವನದಲ್ಲಿ ಮುದ್ದಾದ ನಾಯಕಿ (ನಿಶ್ವಿಕಾ ನಾಯ್ಡು) ಪ್ರವೇಶವಾಗುತ್ತಲೇ. ಇನ್ನೇನು ಪ್ರೀತಿ ಬೆಸೆದು ಮದುವೆ ಹಂತಕ್ಕೆ ಬರುವಾಗಲೇ ನಾಯಕನ ಕಾಯಿಲೆ ಅರಿತು ನಾಯಕಿ ಹಿಂದೆ ಸರಿಯುತ್ತಾಳೆ. ಅಚಾನಕ್ಕಾಗಿ ನಾಯಕನ ಅಣ್ಣ ಅತ್ತಿಗೆ ದುರಂತದಲ್ಲಿ ಸಾವಿಗೀಡಾಗುತ್ತಾರೆ. ಇದರಿಂದ ಕಂಗಾಲಾಗುವ ನಾಯಕ ಭರತ್ ತನ್ನ ಪುಟ್ಟ ಮಗುವನ್ನು ನೋಡಿಕೊಳ್ಳುವುದರ ಜೊತೆಗೆ ತನ್ನ ಕಾಯಿಲೆಯನ್ನು ಕೂಡ ನಿಭಾಯಿಸಬೇಕಾಗುತ್ತದೆ.

ಇದರ ನಡುವೆ ಆತನ ಜೀವನದಲ್ಲಿ( ಅರ್ಜುನ್) ವಿಲನ್‍ಗಳ ಎಂಟ್ರಿಯಾಗುತ್ತಾನೆ. ಬಹಳಷ್ಟು ಏರಿಳಿತಗಳ ಪ್ರಯಾಣ ಸಾಗುವ ಈ ಚಿತ್ರದಲ್ಲಿ ನಾಯಕ ತನ್ನ ಪುಟ್ಟ ಮಗುವನ್ನು ಕಾಪಾಡಿಕೊಳ್ಳುತ್ತಾನಾ… ಆತನ ಕಾಯಿಲೆಯನ್ನು ಹೇಗೆ ನಿಭಾಯಿಸಿಕೊಳ್ಳುತ್ತಾನೆ… ಹೆಣ್ಣು ಮಕ್ಕಳ ಅಂಡಾಣು ಸಂಗ್ರಹಿಸುವ ದಂಧೆಕೋರರ ಪತ್ತೆಹಚ್ಚುತ್ತಾನಾ… ಹೀಗೆ ನಾನಾ ವಿಚಾರಗಳ ಅನಾವರಣವನ್ನು ನೋಡಬೇಕಾದರೆ ನೀವೆಲ್ಲರೂ ಒಮ್ಮೆ ಈ ಚಿತ್ರವನ್ನು ನೋಡಲೇಬೇಕು.

ನಾಯಕ ನಟ ಪ್ರಜ್ವಲ್ ದೇವರಾಜ್ ಈ ಚಿತ್ರದಲ್ಲಿ ತಮ್ಮ ನಟರ ಸಾಮರ್ಥ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿದ್ದಾರೆ. ಸ್ವೀಪಿಂಗ್ ಸಿಂಡ್ರೋಮ್ ಕಾಯಿಲೆ ಇರುವ ವ್ಯಕ್ತಿ ಹೇಗೆ ಪರಿತಪಿಸುತ್ತಾನೆ ಎಂದು ತೋರಿಸುವುದರ ಜೊತೆಗೆ ಚಿತ್ರೀಕರಣದಲ್ಲಿ ಕಸದ ರಾಶಿ , ಬೀದಿಗಳಲ್ಲಿ ಮಲಗುವ ಸನ್ನಿವೇಶವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಮಗುವಿನ ಚಿಕ್ಕಪ್ಪನಾಗಿ ಮನಮಿಡಿಯುವಂತೆ ನಟಿಸಿದ್ದಾರೆ. ಕ್ಲಾಸ್ ಹಾಗೂ ಮಾಸ್ ಎರಡು ಶೇಡ್ಗಳಲ್ಲಿ ಪ್ರಜ್ವಲ್ ಗಮನ ಸೆಳೆಯುತ್ತಾರೆ.

ಅದೇ ರೀತಿ ಪ್ರಜ್ವಲ್ ಗೆಳತಿಯಾಗಿ ನಿಶ್ವಿಕಾ ಸಿಕ್ಕ ಅವಕಾಶದಲ್ಲಿ ಉತ್ತಮ ಅಭಿನಯ ನೀಡಿದ್ದಾರೆ. ಅವರು ತೆರೆ ಮೇಲೆ ಸುಂದರವಾಗಿ ಕಾಣುತ್ತಾರೆ. ಇಲ್ಲಿ ಇಬ್ಬರು ತಂದೆಯರ ಮಮತೆಯ ಕಥೆಯಿದೆ. ತನ್ನ ಮಗಳನ್ನು ಉಳಿಸಿಕೊಳ್ಳಲು ಇನ್ನೊಂದು ಮಗುವನ್ನು ಬಲಿ ತೆಗೆದುಕೊಳ್ಳಲು ಮುಂದಾಗುವ ತಂದೆಯ ಕಥೆಯೂ ಇಲ್ಲಿದೆ.

ಸಂಚಾರಿ ವಿಜಯ್ ಪೋಲೀಸ್ ಅಧಿಕಾರಿಯಾಗಿ ಹಾಗೂ ಒಬ್ಬ ಹೃದಯವಂತ ತಂದೆಯಾಗಿ ಗಮನ ಸೆಳೆಯುತ್ತಾರೆ. ಬಾಲನಟಿ ಆರಾಧ್ಯ ತನ್ನ ಮುಗ್ಧ ಅಭಿನಯದ ಮೂಲಕ ಗಮನ ಸೆಳೆಯುತ್ತಾರೆ. ವಿಲನ್ ಪಾತ್ರಧಾರಿಯಾಗಿ ಅರ್ಜುನ್ ಕೂಡ ಉತ್ತಮವಾಗಿ ಅಭಿನಯಿಸಿದ್ದಾರೆ. ಅದೇ ರೀತಿ ವಿಜಯ್ ಚೆಂಡೂರು ಕೂಡ ಆಟೋ ಡ್ರೈವರ್ ಆಗಿ ಗೆಳೆಯನ ಸ್ನೇಹಿತನಾಗಿ ಅಭಿನಯಿಸಿದ್ದಾರೆ. ಇನ್ನು ಪ್ರಶಾಂತ್ ಸಿದ್ಧಿ ಕೂಡಾ ಒಂದು ವಿಭಿನ್ನ ಪಾತ್ರದ ಮೂಲಕ ಗಮನ ಸೆಳೆಯುತ್ತಾರೆ.

ಒಂದು ವಿಭಿನ್ನ ಕಥೆಯನ್ನು ಆಯ್ಕೆ ಮಾಡಿ ನಿರ್ಮಿಸುವುದರಲ್ಲಿ ನಿರ್ಮಾಪಕ ಗುರುದೇಶಪಾಂಡೆ ಗೆದ್ದಿದ್ದಾರೆ. ಗುರು ನಿರ್ಮಾಣದ ಪ್ರಥಮ ಚಿತ್ರದಲ್ಲೇ ಒಂದು ಸದಭಿರುಚಿಯ ಅರ್ಥಪೂರ್ಣ ಚಿತ್ರವನ್ನು ನೀಡಿದ್ದಾರೆ.

ನಿರ್ದೇಶಕ ಜಡೇಶ್ ಕುಮಾರ್ ಆಯ್ಕೆ ಮಾಡಿಕೊಂಡ ಕಥೆ ಕನ್ನಡಕ್ಕೆ ವಿಶೇಷವಾಗಿದೆ. ಅದನ್ನು ಅಷ್ಟೇ ಚೆನ್ನಾಗಿ ಅದನ್ನು ತೆರೆಯ ಮೇಲೆ ಮೂಡಿಸಿದ್ದಾರೆ . ಅವರ ಪ್ರಾಮಾಣಿಕ ಪ್ರಯತ್ನ ತೆರೆಯ ಮೇಲೆ ಎದ್ದು ಕಾಣುತ್ತದೆ. ಚಿತ್ರದ ಮೇಕಿಂಗ್ ಕೂಡ ಸುಂದರವಾಗಿದೆ. ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದು ಹಾಡುಗಳು ಕೇಳಲು ಇಂಪಾಗಿದೆ. ಸಾಹಸ ದೃಶ್ಯಗಳು ನೋಡುಗರಿಗೆ ಇಷ್ಟ ಆಗುತ್ತದೆ. ಒಂದು ಭಿನ್ನ ಚಿತ್ರ ತೆರೆ ಮೇಲೆ ಬಂದಿದ್ದು , ಎಲ್ಲರೂ ಈ ಜಂಟಲ್ ಮನ್ ಚಿತ್ರವನ್ನು ನೋಡಬಹುದಾಗಿದೆ.

Share This With Your Friends

Related posts