Cinisuddi Fresh Cini News 

‘ಗಂಡುಲಿ’ ಚಿತ್ರದ ಆಕ್ಷನ್ ಟೀಸರ್ ಅನಾವರಣ

ಈ ಹಿಂದೆ ಇಂಜಿನಿಯರ್ಸ್ ಎಂಬ ಚಿತ್ರದಲ್ಲಿ ನಾಯಕನಾಗಿ ಅಲ್ಲದೆ ನಿರ್ದೇಶಕನಾಗಿಯೂ ಗುರುತಿಸಿಕೊಂಡಿದ್ದ ಪ್ರತಿಭೆ ವಿನಯ್ ರತ್ನಸಿದ್ಧಿ ಇವರೀಗ ಮತ್ತೊಂದು ಚಿತ್ರವನ್ನು ಸದ್ದಿಲ್ಲದೆ ಮಾಡಿ ಮುಗಿಸಿ ತೆರೆಗೆ ತರಲು ಅಣಿಯಾಗಿದ್ದಾರೆ. ಈ ಚಿತ್ರದ ಹೆಸರು ‘ಗಂಡುಲಿ’. ಗಂಡುಲಿಯೆಂದರೆ ಹುಲಿಯಷ್ಟೇ ಧೈರ್ಯವಂತ ಎನ್ನಬಹುದು. ಇದು ಸಂಪೂರ್ಣ ಗ್ರಾಮೀಣ ಪ್ರದೇಶದ ಹಿನ್ನೆಲೆಯಲ್ಲಿ ನಡೆಯುವ ಕಥೆಯಾಗಿದ್ದು, ನಿರ್ದೇಶಕ ರತ್ನಸಿದ್ಧಿಯವರೇ ಈ ಚಿತ್ರದಲ್ಲಿ ನಾಯಕರಾಗಿಯೂ ಕಾಣಿಸಿಕೊಂಡಿದ್ದಾರೆ.

ನಾಯಕ ದಿವಾನರ ಕುಟುಂಬದ ಹುಡುಗ. ಈತನ ಪೂರ್ವಿಕರು ದಾನ-ಧರ್ಮ ಮಾಡುವುದರಲ್ಲಿ ಎತ್ತಿದ ಕೈ. ಹಾಗೆ ಬಡ ಜನರಿಗೆ ದಾನ ಮಾಡಿ ಇರುವ ಆಸ್ತಿಯನ್ನೆಲ್ಲಾ ಕಳೆದುಕೊಂಡಿರುತ್ತಾರೆ. ನಾಯಕ ಹಾಗೂ ಆತನ ತಾಯಿ ದೊಡ್ಡ ಮನೆತನದಿಂದ ಬಂದವರಾದರೂ ಹಳ್ಳಿಯಲ್ಲಿ ಸಾಮಾನ್ಯ ಜನರ ಹಾಗೆ ಬದುಕುತ್ತಿರುತ್ತಾರೆ. ಹೀಗೆ ಕುತೂಹಲಕರವಾದ ಕಥೆಯನ್ನು ನಿರ್ದೇಶಕ ವಿನಯ್ ರತ್ನಸಿದ್ಧಿ ಮಾಡಿದ್ದಾರೆ.

ಈ ಚಿತ್ರದ ಟೀಸರ್ ಅನಾವರಣ ಬೆಂಗಳೂರಿನ ಎಡಿಎ ರಂಗಮಂದಿರದಲ್ಲಿ ನೆರವೇರಿತು. ಹಿರಿಯ ನಟಿ ಸುಧಾನರಸಿಂಹರಾಜು ನಾಯಕನ ತಾಯಿಯ ಪಾತ್ರ ನಿರ್ವಹಿಸಿದ್ದಾರೆ. ಮಾಸ್ ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕಥೆಯನ್ನು ಇಟ್ಟುಕೊಂಡು ಮಾಡಿರುವ ಈ ಚಿತ್ರದಲ್ಲಿ ಛಾಯಾದೇವಿ ನಾಯಕಿ ಪಾತ್ರ ನಿರ್ವಹಿಸಿದ್ದಾರೆ. ವಿ.ಆರ್.ಫಿಲಂ ಲಾಂಛನದಲ್ಲಿ ಅಮರೇಂದ್ರ ಚಂದನ್ ಹಾಗೂ ಪುನೀತ್ ಕೆ.ಎಂ. ಸೇರಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಈ ಸಂದರ್ಭದಲ್ಲಿ ನಟಿ ಸುಧಾ ನರಸಿಂಹರಾಜ್ ಮಾತನಾಡಿ ಬಹಳ ದಿನಗಳ ನಂತರ ಒಂದು ಒಳ್ಳೆ ಪಾತ್ರದ ಮೂಲಕ ತೆರೆಯ ಮೇಲೆ ಬರುತ್ತಿದ್ದೇನೆ. ಊರಲ್ಲಿ ದಾನ-ಧರ್ಮಕ್ಕೆ ಹೆಸರಾದ ದಿವಾನರ ಮನೆತನದ ಹೆಣ್ಣುಮಗಳಾಗಿ ನಾನು ಕಾಣಿಸಿಕೊಂಡಿದ್ದೇನೆ. ತಾಯಿ-ಮಗನ ಸೆಂಟಿಮೆಂಟ್ ಜೊತೆಗೆ ಎಂಟರ್‍ಟೈನ್ ಮೆಂಟ್ ಕಥೆ ಈ ಚಿತ್ರದಲ್ಲಿದೆ ಎಂದು ಹೇಳಿದರು.

ನಾಯಕ ನಟ ವಿನಯ್ ರತ್ನಸಿದ್ಧಿ ಮಾತನಾಡಿ ಹಳ್ಳಿ ಬೇಸ್ ಮಾಡಿಕೊಂಡು ನಿರ್ಮಿಸಿರುವ ಚಿತ್ರವಿದು. ಇಂಜಿನಿಯರ್ಸ್ ಈಗಿನ ಕಾಲದ ಯುವ ಜನರನ್ನು ಕುರಿತಾಗಿ ಮಾಡಿದ ಚಿತ್ರವಾಗಿತ್ತು. ಆದರೆ ಗಂಡುಲಿ ಪಕ್ಕಾ ಫ್ಯಾಮಿಲಿ ಎಂಟರ್‍ಟೈನ್‍ಮೆಂಟ್ ಚಿತ್ರ. ಇದರಲ್ಲಿ ಮಾಸ್, ಕ್ಲಾಸ್, ಸೆಂಟಿಮೆಂಟ್, ಆ್ಯಕ್ಷನ್ ಜೊತೆಗೆ ಸಸ್ಪೆನ್ಸ್ & ಥ್ರಿಲ್ಲರ್ ಕಥೆಯೂ ಇದೆ.

ಊರಿನ ಜನರೆಲ್ಲಾ ಹೆದರಿಕೊಳ್ಳುವಂತಹ ಘಟನೆಗಳು ನಡೆದಾಗ ಅದರ ಹಿಂದೆ ಯಾರ್ಯಾರಿದ್ದಾರೆ ಅದಕ್ಕೆ ಕಾರಣ ಏನು ಎನ್ನುವುದನ್ನು ನಾಯಕ ಪತ್ತೆ ಹಚ್ಚುತ್ತಾನೆ. ಊರಿನ ಗಂಡುಲಿ ಎನಿಸಿಕೊಳ್ಳುತ್ತಾನೆ. ಇದು ಈ ಚಿತ್ರದ ಒನ್ ಲೈನ್ ಸ್ಟೋರಿ. ಈ ಚಿತ್ರಕ್ಕೆ ರವಿದೇವ್ ಸಂಗೀತ, ರಾಜು ಶಿವಶಂಕರ್ ಮತ್ತು ಶ್ಯಾಮ್ ಛಾಯಾಗ್ರಹಣ, ಸತೀಶ್ ಚಂದ್ರಯ್ಯ ಸಂಕಲನ, ಸುರೇಶ್ ಸಾಹಸವಿದೆ. ಉಳಿದ ತಾರಾಬಳಗದಲ್ಲಿ ಧರ್ಮೇಂದ್ರ ಅರಸ್, ಸುಬ್ಬೇಗೌಡ್ರು, ರಾಮಣ್ಣ, ರಂಜಿತ್, ಪುನೀತ್ ಮುಂತಾದವರು ಅಭಿನಯಿಸಿದ್ದಾರೆ.

Share This With Your Friends

Related posts