Cini Reviews Cinisuddi Fresh Cini News 

ಗಜಾನನ ಗ್ಯಾಂಗ್ ನ ಕಾಲೇಜ್ ಲೈಫ್…( ಚಿತ್ರ ವಿಮರ್ಶೆ ರೇಟಿಂಗ್: 3.5/5)

ಗಜಾನನ ಗ್ಯಾಂಗ್ ನ ಕಾಲೇಜ್ ಲೈಫ್

ರೇಟಿಂಗ್ : 3.5/5

ಚಿತ್ರ : ಗಜಾನನ & ಗ್ಯಾಂಗ್  ನಿರ್ದೇಶಕ : ಅಭಿಷೇಕ್ ಶೆಟ್ಟಿ ನಿರ್ಮಾಪಕ : ಯು.ಎಸ್. ನಾಗೇಶ್ ಕುಮಾರ್ ಸಂಗೀತ : ಪ್ರದ್ಯುತನ್  ಛಾಯಾಗ್ರಹಣ : ಉದಯ ಲೀಲಾ  ತಾರಾಗಣ : ಶ್ರೀ ಮಹಾದೇವ್ ಅದಿತಿ ಪ್ರಭುದೇವ, ನಾಟ್ಯರಂಗ, ಚೇತನ್ ದುರ್ಗ, ಬ್ರೋ ಗೌಡ, ವಿಜೇತ್ ಚಂದ್ರ, ಸುಚೇಂದ್ರ ಪ್ರಸಾದ್, ವಿಜಯ್ ಚೆಂಡೂರ್, ರಘ, ಅಶ್ವಿನ್ ಹಾಸನ್, ವರ್ಧನ್ ಹಾಗೂ ಮುಂತಾದವರು…

 

ಕಾಲೇಜ್ ಲೈಫ್ ಈಸ್ ಗೋಲ್ಡನ್ ಲೈಫ್ ಅನ್ನೋ ಮಾತಿದೆ. ಆ ಮಾತಿಗೆ ಪೂರಕ ಎನ್ನುವಂತೆ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರ ತರಲೆ, ತುಂಟಾಟ , ಪ್ರೀತಿ, ಸೆಳೆತ, ಪರೀಕ್ಷೆಯ ಪರದಾಟ, ಇದರ ನಡುವೆ ಗುಂಪುಗಳ ಹೊಡೆದಾಟ , ಕುತಂತ್ರಗಳ ಅವಾಂತರ, ಕುಟುಂಬಗಳ ಪರದಾಟ ಹೀಗೆ ಒಂದಕ್ಕೊಂದು ಕೊಂಡಿಯಂತೆ ಬೆಸೆದುಕೊಂಡಿರುವ ಕಥಾನಕದಲ್ಲಿ ನಂಬಿಕೆ, ಗೆಳೆತನ , ಪ್ರೀತಿಯ ಸಮಾಗಮದಲ್ಲಿ ಬಂದಿರುವ ಚಿತ್ರ “ಗಜಾನನ ಆಂಡ್ ಗ್ಯಾಂಗ್”.

ಚಿತ್ರದ ಕಥಾಹಂದರ ತೆರೆದುಕೊಳ್ಳುವುದೇ ನಾಲ್ವರು ಕಾಲೇಜು ವಿದ್ಯಾರ್ಥಿಗಳ ಎಕ್ಸಾಮ್ ವಿಚಾರ. ಸೆಮಿಸ್ಟರ್ ಹತ್ತಿರ ಬರುತ್ತಿದ್ದಂತೆ ವಿದ್ಯಾರ್ಥಿಗಳಿಗೆ ಟೆನ್ಷನ್ ಶುರು ಆಗುವುದು ಸರ್ವೇಸಾಮಾನ್ಯ. ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರ ತಿಳಿದು ಹಣ ಒದಗಿಸಿ ಪ್ರಶ್ನೆ ಪತ್ರಿಕೆ ಪಡೆದು ಎಕ್ಸಾಮ್ ಹೋದ ವಿದ್ಯಾರ್ಥಿಗಳಿಗೆ ನಿರಾಸೆ. ಇದು ಎಕ್ಸಾಂ ವಿಚಾರದ ಫ್ಲ್ಯಾಶ್ ಬ್ಯಾಕ್. ಗೆಳೆಯನೊಬ್ಬನ ಮದುವೆಗೆ ಹೊರಡುವ ಉಳಿದ ಗೆಳೆಯರು, ಇದಕ್ಕೆ ಉತ್ತರ ಕ್ಲೈಮ್ಯಾಕ್ಸ್ ನಲ್ಲಿ ಸಿಗುತ್ತದೆ. ಮುಂದೆ ಫ್ಲ್ಯಾಶ್ ಬ್ಯಾಕ್ ಮೂಲಕ ಕಥೆ ತೆರೆದುಕೊಳ್ಳುತ್ತದೆ. ನಾಯಕ (ಶ್ರೀ ಮಹಾದೇವ್)ಗಜ ಕಾಲೇಜಿಗೆ ಹೊಸ ಅಡ್ಮಿಷನ್. ಅದೇ ರೀತಿ ಯುವಕ , ಯುವತಿಯರ ಪ್ರವೇಶ. ಇನ್ನೂ ನಾಲ್ವರು ಗ್ಯಾಂಗ್ ಕಾಲೇಜಿನ ಫ್ರೆಶರ್ಸ್ ಡೇ ಯಲ್ಲಿ ಗಜನ ಗೆಳೆತನ ಪಡೆಯುತ್ತಾರೆ. ತನ್ನ ಪ್ರೀತಿಯ ಗೆಳತಿ ನಾಯಕಿ (ಅದಿತಿ ಪ್ರಭುದೇವ್)ಸಾಹಿತ್ಯ ಕೂಡ ಗಜಾನ ಕಾಲೇಜಿಗೆ ಸೇರುತ್ತಾಳೆ. ಅದೇ ರೀತಿ ಗೆಳೆಯರ ಕೂಡ ತಮ್ಮ ಇಷ್ಟದ ಗೆಳತಿಯರನ್ನ ಆರಿಸಿಕೊಳ್ಳುತ್ತಾರೆ. ಕಾಲೇಜಿನ ಖಡಕ್ ಪ್ರಿನ್ಸಿಪಾಲ್, ಇನ್ನೂ ಮುಂಗೋಪಿ, ಶಾಂತ ಸ್ವಭಾವದ ಲೆಕ್ಚರರ್ ಜೊತೆ ವಿದ್ಯಾರ್ಥಿಗಳ ತುಂಟಾಟ, ತರಲೆ ಇದರ ನಡುವೆ ಕಾಲೇಜು ಸೀನಿಯರ್ ಗಳ ಹಾವಳಿ, ಇವರ ಬೆನ್ನಿಗೆ ನಿಲ್ಲುವ ಪುಡಿ ರೌಡಿಗಳು. ಹವಾ ಮೇಂಟೇನ್ ಮಾಡಲು ಒಂದಷ್ಟು ಹೊಡೆದಾಟ , ಬಡಿದಾಟ. ವಿದ್ಯಾಭ್ಯಾಸದ ಜೊತೆಗೆ ಪ್ರೀತಿಯ ತಳಮಳ. ನಾಯಕ ನಾಯಕಿಯ ಪ್ರೇಮದ ನಡುವೆ ಪ್ರೀತಿಸುವ ಹೃದಯಗಳಿಗೆ ಕಂಟಕವಾಗುವ ವ್ಯಕ್ತಿ. ಇಲ್ಲಿಂದ ಇಡೀ ಚಿತ್ರದ ಓಟಕ್ಕೆ ಹೊಸ ತಿರುವು ಸಿಗುತ್ತದೆ.

ಆ ವ್ಯಕ್ತಿ ಯಾರು…?
ವಿದ್ಯಾರ್ಥಿಗಳ ಭವಿಷ್ಯ ಏನಾಗುತ್ತೆ…
ಫ್ಲ್ಯಾಶ್ ಬ್ಯಾಕ್ ಕಥೆಯೇನು…
ಗೆಳೆತನ ಹಾಗೂ ಪ್ರೀತಿ ಶಕ್ತಿ ಎಂಥದ್ದು… ಎಂಬ ಈ ಎಲ್ಲಾ ಮಾಹಿತಿಗಳನ್ನು ತಿಳಿಯಬೇಕಾದರೆ ಗಜಾನನ & ಗ್ಯಾಂಗ್ ಚಿತ್ರವನ್ನು ನೋಡಬೇಕು.

ನಿರ್ದೇಶಕ ಅಭಿಷೇಕ್ ಶೆಟ್ಟಿ ಯೂತ್ ಫುಲ್ ಸಬ್ಜೆಕ್ಟ್ ಆಯ್ಕೆಮಾಡಿಕೊಂಡು ಕಾಲೇಜು ವಿದ್ಯಾರ್ಥಿಗಳ ತಳಮಳ, ಗೆಳೆತನ , ಪ್ರೀತಿ, ಬದುಕಿನ ಒಡನಾಟ , ಭವಿಷ್ಯದ ಕನಸು ಹೀಗೆ ಹಲವಾರು ಅಂಶಗಳ ಜೊತೆಗೆ ನಂಬಿಕೆ , ವಿಶ್ವಾಸ ಎಷ್ಟು ಮುಖ್ಯ ಅನ್ನೋ ಸೂಕ್ಷ್ಮ ವಿಚಾರವನ್ನು ತೆರೆದಿಟ್ಟಿರುವ ರೀತಿ ವಿಭಿನ್ನವಾಗಿದೆ. ನೀರಸವಾಗಿ ಸಾಗುವ ಚಿತ್ರಕಥೆಗೆ ಮತ್ತಷ್ಟು ಲವಲವಿಕೆಯ ಅಂಶ ಸೇರಿಸಬಹುದಿತ್ತು. ಹಾಸ್ಯ ಸನ್ನಿವೇಶ, ಹಾಡುಗಳಿಗೆ ಒತ್ತು ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು. ವಿದ್ಯಾರ್ಥಿಗಳ ಮನಸ್ಥಿತಿಯನ್ನ ಅರಿತು ಮಾಡಿರುವ ಚಿತ್ರ ಇದಾಗಿದ್ದು, ಗಮನ ಸೆಳೆಯುವಂತಿದೆ.
ಕಾಲೇಜ್ ಲೈಫ್ ನೆನಪಿಸುವಂತ ಚಿತ್ರ ಮಾಡಿರುವ ನಿರ್ಮಾಪಕ ಯು.ಎಸ್. ನಾಗೇಶ್ ಕುಮಾರ್ ರವರ ಸಾಹಸವನ್ನು ಮೆಚ್ಚಲೇ ಬೇಕು.
ಇನ್ನೂ ನಾಯಕನಾಗಿ ಅಭಿನಯಿಸಿರುವ ಶ್ರೀ ಮಹಾದೇವ ಕೂಡ ಮುದ್ದುಮುದ್ದಾಗಿ ಕಂಡರೂ ತಮ್ಮ ಪಾತ್ರಕ್ಕೆ ಜೀವ ತುಂಬಿ ಆ್ಯಕ್ಷನ್ ಸಂಘರ್ಷವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಅದೇ ರೀತಿ ಅದಿತಿ ಪ್ರಭುದೇವ ಕೂಡ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಉಳಿದಂತೆ ಅಭಿನಯಿಸಿರುವ ಗೆಳೆಯ ಗೆಳತಿಯರೆಲ್ಲರೂ ಕೂಡ ಗಮನ ಸೆಳೆಯುತ್ತಾರೆ. ಅದೇ ರೀತಿ ಸೀನಿಯರ್ಸ್ ಪಾತ್ರಧಾರಿಗಳು , ಪ್ರಿನ್ಸಿಪಾಲ್, ಲೆಕ್ಚರರ್, ನಾಯಕ ತಾಯಿ, ನಾಯಕಿಯ ತಂದೆ, ತಾಯಿ ಹಾಗೂ ವಿಶೇಷ ಪಾತ್ರದಲ್ಲಿ ಅಭಿನಯಿಸಿದ ಎಲ್ಲಾ ಕಲಾವಿದರು ಕೂಡ ಚಿತ್ರದ ಓಟಕ್ಕೆ ಸಾಥ್ ನೀಡಿದ್ದಾರೆ.
ಇನ್ನು ಈ ಚಿತ್ರಕ್ಕೆ ಸಂಗೀತ ನೀಡಿರುವ ಪ್ರದ್ಯುತನ್ ಕೆಲಸ ಉತ್ತಮವಾಗಿದ್ದು, ಹಿನ್ನಲೆ ಸಂಗೀತ ಗಮನ ಸೆಳೆಯುತ್ತದೆ. ಅದೇ ರೀತಿ ಛಾಯಾಗ್ರಹಣ ಮಾಡಿರುವ ಉದಯ ಲೀಲಾ ಕೆಲಸ ಗಮನಾರ್ಹವಾಗಿದೆ.
ಒಟ್ಟಾರೆ ಒಂದು ವಿಭಿನ್ನ ಪ್ರಯತ್ನದೊಂದಿಗೆ ಮನರಂಜನಾ ಅಂಶಗಳನ್ನು ಬೆಸೆದುಕೊಂಡು ಬಂದಿರುವಂತಹ “ಗಜಾನನ ಅಂಡ್ ಗ್ಯಾಂಗ್” ಚಿತ್ರವನ್ನು ಎಲ್ಲರೂ ಚಿತ್ರಮಂದಿರಕ್ಕೆ ಹೋಗಿ ನೋಡಬಹುದು.

Related posts