Cinisuddi Fresh Cini News 

ಮೊದಲ ವರ್ಷದ ‘ಫಿಲಿಂ ಕ್ರಿಟಿಕ್ಸ್ ಪ್ರಶಸ್ತಿ’ ಪ್ರದಾನ

ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗಳನ್ನು ನೀಡುವಾಗ ಸರ್ಕಾರಗಳೇ ಒಂದು ವಿಮರ್ಶಕರ ತಂಡವನ್ನುರಚಿಸಿ ಪ್ರಶಸ್ತಿಗಳನ್ನು ಆಯ್ಕೆ ಮಾಡುತ್ತಾರೆ. ಅದರಂತೆ ಚಂದನವನ ಫಿಲಿಂ ಕ್ರಿಟಿಕ್ಸ್ ಅಕಾಡೆಮಿಯ ಮೊದಲ ವರ್ಷದ ಪ್ರಶಸ್ತಿಯನ್ನು ವಿಮರ್ಶಕರೇ ಆಯ್ಕೆ ಮಾಡಿದ್ದಾರೆ.
ಇತ್ತೀಚೆಗೆ ಹಮ್ಮಿಕೊಂಡಿದ್ದ ಸುಂದರ ಕಾರ್ಯಕ್ರಮದಲ್ಲಿ ಕನ್ನಡ ಸಿನಿಮಾ ಪತ್ರಕರ್ತರು ಹಾಗೂ ವಿಮರ್ಶಕರು ಮತ ಚಲಾಯಿಸಿ ಆಯ್ಕೆ ಆದವರಿಗೆ ಪ್ರಶಸ್ತಿಯನ್ನು ನೀಡಲಾಯಿತು.

ಪ್ರೀಮಿಯರ್ ಪದ್ಮಿನಿಯಲ್ಲಿನ ಅತ್ಯುತ್ತಮ ನಟನೆಗೆ ನಟ ಜಗ್ಗೇಶ್ ಪಾತ್ರರಾದರೆ, ಅತ್ಯಾಚಾರಿ ಸಂತ್ರಸ್ತೆ ಪಾತ್ರದ ಮೂಲಕ ರಂಗನಾಯಕಿ ಪಾತ್ರದಲ್ಲಿ ಪ್ರೇಕ್ಷಕರ ಮನ ಗೆದ್ದಿದ್ದ ಅದಿತಿ ಪ್ರಭುದೇವಗೆ ಫಿಲಿಂ ಕ್ರಿಟಿಕ್ ಅಕಾಡೆಮಿಯ ಮೊದಲ ಉತ್ತಮ ನಟಿ ಪ್ರಶಸ್ತಿಯನ್ನು ಬಾಚಿಕೊಂಡರು.

ಕವಲುದಾರಿ ಚಿತ್ರಕ್ಕಾಗಿ ಅನಂತ್ ನಾಗ್‍ಗೆ ಉತ್ತಮ ಪೋಷಕ ನಟ, ಐ ಲವ್ ಯು ಹಾಗೂ ಮಿಸ್ಸಿಂಗ್ ಬಾಯ್ ಚಿತ್ರಗಳಿಗೆ ಸೋನುಗೌಡ, ಭಾಗೀರಥಿ ಕದಂ ಉತ್ತಮ ಪೋಷಕ ನಟಿಯರಾಗಿ, ದೇವಕಿ ಚಿತ್ರದ ಅಭಿನಯಕ್ಕಾಗಿ ಐಶ್ವರ್ಯ ಉಪೇಂದ್ರ ಉತ್ತಮ ಬಾಲನಟಿ ಪ್ರಶಸ್ತಿಗಳಿಗೆ ಭಾಜನರಾದರು.

ಚಿತ್ರರಂಗದ 19 ವಿಭಾಗಗಳಿಗೆ ಈ ಬಾರಿಯ ಪ್ರಶಸ್ತಿಯನ್ನು ನೀಡಲಾಗಿದ್ದು ರಕ್ಷಿತ್ ಶೆಟ್ಟಿ ಹಾಗೂ ಶಾನ್ವಿ ಶ್ರೀವಾಸ್ತ ಅಭಿನಯದ ಶ್ರೀಮನ್ನಾರಾಯಣ ಚಿತ್ರವು ಕಲಾ, ನೃತ್ಯ, ಹಿನ್ನೆಲೆ ಸಂಗೀತ, ಸಾಹಸ, ವಿಎಫ್‍ಎಕ್ಸ್, ಛಾಯಾಗ್ರಹಣ ವಿಭಾಗಗಳ ಪ್ರಶಸ್ತಿಯನ್ನು ಬಾಚಿಕೊಂಡಿತು.
ಪ್ರೀಮಿಯರ್ ಪದ್ಮಿನಿ ಸಂಕಲನಕ್ಕೆ ರಾಜೇಂದ್ರಅರಸ್, ಬೆಲ್‍ಬಾಟಂ ಚಿತ್ರಕತೆಗೆ ಜಯತೀರ್ಥ, ಅದೇಚಿತ್ರದ ಆದಿ ಜ್ಯೋತಿ ಬನ್ಯೋ ಗೀತೆ ಹಾಡಿದ ಕಡಬಗೆರೆ ಮುನಿರಾಜು ಉತ್ತಮ ಗಾಯಕ, ಕವಲುದಾರಿಯ ಸಂಶಯ ಗೀತೆ ಹಾಡಿರುವ ಅದಿತಿಸಾಗರ್ ಉತ್ತಮಗಾಯಕಿ.

ಕಾಳಿದಾಸ ಕನ್ನಡ ಮೇಷ್ಟ್ರುಚಿತ್ರಕ್ಕೆಅರ್ಥಪೂರ್ಣ ಸಂಭಾಷಣೆ ಬರೆದಿರುವ ಕವಿರಾಜ್, ಮುಂದಿನ ನಿಲ್ದಾಣ ಚಿತ್ರದ ಇನ್ನೂನು ಬೇಕಾಗಿದೆ ಹಾಡಿನ ಸಾಹಿತ್ಯಕ್ಕೆ ಪ್ರಮೋದ್ ಮರವಂತೆ ಅತ್ಯುತ್ತಮ ಚಿತ್ರಸಾಹಿತಿ ಪ್ರಶಸ್ತಿ ಸ್ವೀಕರಿಸಿದರು.

ಸಮಾರಂಭದ ಮುಖ್ಯ ಅತಿಥಿಗಳಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿ ಅಧ್ಯಕ್ಷ ಜಯರಾಜ್, ಸಾ.ರಾ.ಗೋವಿಂದು, ಎನ್.ಎಂ.ಸುರೇಶ್, ಉಮೇಶ್ ಬಣಕಾರ್, ಎಂ.ಜಿ.ರಾಮಮೂರ್ತಿ, ರಿಷಭ್‍ಶೆಟ್ಟಿ, ನಾಗೇಂದ್ರಪ್ರಸಾದ್, ಶ್ರುತಿನಾಯ್ಡು, ಶೈಲಜಾನಾಗ್, ಆನಂದ್ ಆಡಿಯೋ ಶ್ಯಾಂ ಮತ್ತು ಆನಂದ್, ಅರುಣ್ ಸಾಗರ್, ರೂಪಾರಾವ್, ತೇಜು ಬೆಳವಾಡಿ ಮುಂತಾದವರು ಆಗಮಿಸಿದ್ದರು.

ಕನ್ನಡದಲ್ಲಿ ಉತ್ತಮ ಚಿತ್ರಗಳು ತಯಾರಾಗಬೇಕೆಂಬ ಬಯಕೆಯಿಂದ ಆರಂಭವಾಗಿರುವ ಫಿಲಂ ಕ್ರಿಟಿಕ್ಸ್ ಅಕಾಡೆಮಿಯಿಂದ ಸ್ಯಾಂಡಲ್‍ವುಡ್ ಬೆಳಗುವಂತಾಗಲಿ.

Related posts