Cinisuddi Fresh Cini News 

24 ದಿನಗಳಲ್ಲಿ ಶೂಟಿಂಗ್ ಮುಗಿಸಿದ ‘ಫ್ಯಾಂಟಸಿ’ ಚಿತ್ರತಂಡ

ಇತ್ತೀಚೆಗಷ್ಟೇ ಚಿತ್ರೀಕರಣ ಶುರುಮಾಡಿದ್ದ ಫ್ಯಾಂಟಸಿ ತಂಡ ಇದೀಗ ಕುಂಬಳಕಾಯಿ ಒಡೆದು , ಚಿತ್ರೀಕರಣ ಮುಗಿಸಿಕೊಂಡ ಸಂಭ್ರಮದಲ್ಲಿದೆ. ಕೇವಲ 24 ದಿನದಲ್ಲಿ ಶೂಟಿಂಗ್​ ಕಂಪ್ಲೀಟ್​ ಮಾಡಿಕೊಂಡಿದೆ. ಆ 24 ದಿನದ ಶೂಟಿಂಗ್​ ಪಯಣವನ್ನು ಮೆಲುಕು ಹಾಕುವ ಉದ್ದೇಶಕ್ಕೆ ಶೂಟಿಂಗ್​ ಲೋಕೆಷನ್​ನಲ್ಲಿಯೇ ಪತ್ರಿಕಾಗೋಷ್ಟಿ ಆಯೋಜಸಿತ್ತು ಫ್ಯಾಂಟಸಿ ತಂಡ.

ಪವನ್​ ಡ್ರೀಮ್​ ಫಿಲಂಸ್​ ಲಾಂಛನದಲ್ಲಿ ಸಿದ್ಧವಾಗಿರುವ ‘ಫ್ಯಾಂಟಸಿ’ ಚಿತ್ರಕ್ಕೆ ಸ್ವತಃ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜತೆಗೆ ನಿರ್ಮಾಣವನ್ನೂ ಮಾಡಿದ್ದಾರೆ ಪವನ್ ಕುಮಾರ್ ಆರ್​. ನಿರ್ದೇಶಕರ ತಂದೆ ತಾಯಿಯವರಾದ ಎಂ. ಮಹಾದೇವಿ, ಟಿ. ರಂಗಸ್ವಾಮಿ ಈ ಚಿತ್ರಕ್ಕೆ ಸಹ- ನಿರ್ಮಾಪಕರಾಗಿದ್ದಾರೆ.

‘ನಿರ್ದೇಶಕ ಗುರು ದೇಶಪಾಂಡೆ ‘ಸಂಹಾರ’ ಸಿನಿಮಾ ಮೂಲಕ ಸಹಾಯಕ ನಿರ್ದೇಶಕರಾಗಿ ಚಂದನವನಕ್ಕೆ ಬಂದೆ. ಬಳಿಕ ‘ಅಮ್ಮ ಐ ಲವ್​ ಯೂ’, ‘ಆದ್ಯಾ’ ಸಿನಿಮಾಗಳಲ್ಲಿ ನಿರ್ದೇಶಕ ಕೆ.ಎಂ. ಚೈತನ್ಯ ಅವರೊಂದಿಗೆ ಕೆಲಸ ಮಾಡಿದ್ದೇನೆ. ನಾನು ಸಿನಿಮಾರಂಗಕ್ಕೆ ಬರುವುದಕ್ಕೆ ಚಿರು ಸರ್ಜಾ ಅವರೇ ಕಾರಣರಾದರೆ, ನಿರ್ದೇಶನದ ಪಾಠವನ್ನು ಚೈತನ್ಯ ಅವರಿಂದ ಕಲಿತಿದ್ದೇನೆ’ ಎಂದು ತಮ್ಮ ಹಿನ್ನೆಲೆ ಹೇಳಿಕೊಳ್ಳುವ ಪವನ್​, ಪ್ರಸ್ತುತ ಫ್ಯಾಂಟಸಿ ಸಿನಿಮಾ ಬಗ್ಗೆಯೂ ಮಾಹಿತಿ ಹಂಚಿಕೊಂಡರು.

‘ಇಂಜಿನಿಯರಿಂಗ್​ ಅರ್ಧಕ್ಕೆ ಬಿಟ್ಟು, ಸಿನಿಮಾ ಬೆನ್ನಹಿಂದೆ ಬಿದ್ದೆ. ಅಪ್ಪ ಅಮ್ಮನಿಂದಲೂ ಸಾಥ್​ ಸಿಕ್ಕಿತು. ಒಳ್ಳೇ ಕಥೆಯೂ ಸಿದ್ಧವಾಯ್ತು. ನಾನೇ ನಿರ್ಮಾಣ ಮಾಡುವ ಬಗ್ಗೆ ನಿರ್ಧರಿಸಿ ಕೆಲಸ ಆರಂಭಿಸಿದೆ. ಕಂಟೆಂಟ್ ಎಷ್ಟೇ ಗಟ್ಟಿಯಾಗಿದ್ದರೂ, ಅದನ್ನು ತೋರಿಸುವ ಛಾಯಾಗ್ರಾಹಕ ಅಷ್ಟೇ ಮುಖ್ಯ.

ಆ ಸ್ಥಾನ ತುಂಬಲು ಪಿ.ಕೆ. ಎಚ್​ ದಾಸ್​ ಬಂದರು. ಶೇ. 100 ಕೇಳಿದರೆ, ಇನ್ನೂ ಹತ್ತು ಹೆಚ್ಚೇ ಕೊಟ್ಟಿದ್ದಾರೆ. ಗಣೇಶ್​ ನಾರಾಯಣ್​ ಸಂಗೀತ ನೀಡಿದ್ದಾರೆ. ಶಶಿರಾಮ್​ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ’ ಎಂದು ತಾಂತ್ರಿಕ ವರ್ಗವನ್ನೂ ಪರಿಚಯಿಸಿದರು.

‘ಒಂಭತ್ತು ತಿಂಗಳ ನಂತರ ಮತ್ತೆ ಕ್ಯಾಮರಾ ಮುಂದೆ ಬಂದಿರುವುದಕ್ಕೆ ಖುಷಿ ಎನಿಸುತ್ತಿದೆ. ಪವನ್ ಹೊಸ ಆಲೋಚನೆ, ಸಿನಿಮಾದ ಬಗ್ಗೆ ಆತನಿರುವ ಪ್ಯಾಷನ್, ಸೆಳೆತವನ್ನು ನಾನು ಸಂಹಾರ ಸಿನಿಮಾ ಸಮಯದಲ್ಲಿಯೇ ನೋಡಿದ್ದೆ. ನಿರ್ದೇಶಕನಾಗುವ ಎಲ್ಲ ಕೌಶಲವೂ ಆತನಿಗಿತ್ತು ಎಂದು ಆವತ್ತೇ ಹೇಳಿದ್ದೆ. ಇದೀಗ ಅದು ಸಾಕಾರವಾಗಿದೆ.

ಈ ಸಿನಿಮಾದಲ್ಲಿ ನನಗೂ ಒಂದು ಪಾತ್ರ ನೀಡಿದ್ದಾನೆ. ಭಾಸ್ಕರ್ ಪೊನ್ನಪ್ಪ ಎಂಬುದು ನನ್ನ ಪಾತ್ರ’ ಮಿಕ್ಕಿದ್ದನ್ನು ಸಿನಿಮಾದಲ್ಲಿಯೇ ನೋಡಿ ಎಂದರು ಬಾಲರಾಜ್ವಾಡಿ. ಚಿತ್ರದ ನಾಯಕಿ ಪ್ರಿಯಾಂಕಾ ಸಹ ಸಿನಿಮಾ ಬಗ್ಗೆ ತುಂಬ ಎಗ್ಸೈಟ್ ಆಗಿದ್ದಾರೆ. ‘ಬಿಗ್​ಬಾಸ್​ನಲ್ಲಿ ದಿನದೂಡಿದಂತೆ ಕೊರೊನಾದಲ್ಲಿಯೂ ಸಮಯ ಕಳೆದಿದ್ದೆವು. ಖುಷಿ ವಿಚಾರವನ್ನು ಕೇಳಿ ತುಂಬ ದಿನ ಆಗಿತ್ತು. ಆಗ ಸಿಕ್ಕ ಸಿಹಿ ಸುದ್ದಿ ಈ ಫ್ಯಾಂಟಸಿ ಸಿನಿಮಾ.

ಇದು ನನ್ನ ಮೊದಲ ಸಿನಿಮಾ ಆದರೂ, ಧಾರಾವಾಹಿಯಂತೆ ಇಲ್ಲಿಯು ನೆಗೆಟಿವ್​ ಪಾತ್ರ ಮುಂದುವರಿದಿದೆ. ’ ಎಂಬುದು ಅವರ ಮಾತು. ಅದೇ ರೀತಿ ಬಾಲನಟ ಅನುರಾಗ್ ಸಹ ತನ್ನ ಶೂಟಿಂಗ್​ ಅನುಭವ ಹಂಚಿಕೊಂಡ. ಈ ಚಿತ್ರದಲ್ಲಿ ವಿಶೇಷ ಪಾತ್ರವೊಂದನ್ನು ನಿಭಾಯಿಸಿದ ಖುಷಿ ಇದೆ ಎಂದರು ನಟ ಹೇಮಂತ್. ಪಿಕೆಎಚ್ ದಾಸ್ ಸಹ ಸಿನಿಮಾದಲ್ಲಿನ ಕ್ಯಾಮರಾ ಕೈಚಳಕದ ಬಗ್ಗೆ ಮಾತನಾಡಿದರು. ಇನ್ನುಳಿದಂತೆ ಹರಿಣಿ, ಮೂರ್ತಿ, ಗೌರಿ ಸೇರಿ ಹಲವರು ತಾರಾಬಳಗದಲ್ಲಿದ್ದಾರೆ.

ಇದೊಂದು ಥ್ರಿಲ್ಲರ್ ಶೈಲಿಯ ಸಿನಿಮಾ. ಚಿತ್ರದ ಶೇ. 90 ಭಾಗ ಒಳಾಂಗಣದಲ್ಲಿ ನಡೆದರೆ, ಇನ್ನು ಶೇ. 10 ಹೊರಾಂಗಣದಲ್ಲಿ ಶೂಟ್ ಮಾಡಿದ್ದೇವೆ. ಪೋಸ್ಟ್ ಪ್ರೊಡಕ್ಷನ್​ ಕೆಲಸವೂ ನಡೆಯುತ್ತಿದೆ. ಫೆಬ್ರವರಿ ವೇಳೆಗೆ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುವ ಉದ್ದೇಶದಿಂದಲೇ ಸಿನಿಮಾ ಮಾಡಿದ್ದೇನೆ.
– ಪವನ್ ಕುಮಾರ್ ಆರ್​

Related posts