Cinisuddi Fresh Cini News 

ದುನಿಯಾ ವಿಜಯ್ ನಿರ್ದೇಶನದ 2ನೇ ಚಿತ್ರಕ್ಕೆ ಕಿರುತೆರೆಯ ಮೋಕ್ಷಿತಾ ಪೈ ಹೀರೋಯಿನ್

ಸಲಗ ಸಿನಿಮಾ ನಿರ್ದೇಶಿಸಿ ನಾಯಕ ನಟನಾಗಿಯೂ ದುನಿಯಾ ವಿಜಯ್ ನಟಿಸಿದ್ದಾರೆ. ಇದರ ಜತೆಗೆ ಇತ್ತೀಚೆಗಷ್ಟೇ ಇನ್ನೊಂದು ಸಿನಿಮಾ ನಿರ್ದೇಶನ ಮಾಡುವುದಾಗಿ ಹೇಳಿ, ರಾಜ್ ಕುಟುಂಬದ ಲಕ್ಕಿ ಗೋಪಾಲ್​ ಅವರನ್ನು ನಾಯಕ ಎಂದು ಘೋಷಿಸಿಕೊಂಡಿದ್ದರು. ಇದೀಗ ಅದೇ ಚಿತ್ರಕ್ಕೆ ನಾಯಕಿಯನ್ನು ಅಂತಿಮ ಮಾಡಲಾಗಿದೆ. ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ಕರಾವಳಿ ಬೆಡಗಿ ಮೋಕ್ಷಿತಾ ಪೈ ಮೊದಲ ಬಾರಿಗೆ ಹಿರಿತೆರೆಗೆ ಕಾಲಿಡುವ ಕಾತರದಲ್ಲಿದ್ದಾರೆ.

ದುನಿಯಾ ವಿಜಯ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಲಿರುವ ಈ ಚಿತ್ರದಲ್ಲಿ ಬಹುತೇಕರು ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗುತ್ತಿದೆ. ಅದರಂತೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದ ಲಕ್ಕಿ ಗೋಪಾಲ್ ಈ ಚಿತ್ರದ ಮೂಲಕ ಎಂಟ್ರಿ ಪಡೆಯುತ್ತಿದ್ದರೆ, ಪಾರು ಧಾರಾವಾಹಿ ಮೂಲಕ ನಾಡಿನ ಹೆಂಗೆಳೆಯರ ಗಮನ ಸೆಳೆದಿರುವ ಮೋಕ್ಷಿತಾ ಪೈ ಚಂದನವನಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

ಇನ್ನುಳಿದಂತೆ ಮಿಕ್ಕ ಪಾತ್ರವರ್ಗದ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ತಾಂತ್ರಿಕ ವರ್ಗದ ಆಯ್ಕೆ ಅಂತಿಮವಾಗಿದೆ. ವಾಸುಕಿ ವೈಭವ್ ಮತ್ತು ಚರಣ್​ ರಾಜ್​ ಸಂಗೀತ, ಬಾಲು ಶಿವಮೊಗ್ಗ ಛಾಯಾಗ್ರಹಣ, ಮಾಸ್ತಿ ಮಂಜು ಸಂಭಾಷಣೆಯ ಜವಾಬ್ದಾರಿ ಹೊತ್ತಿದ್ದಾರೆ.

ಇನ್ನು ಶೀರ್ಷಿಕೆ ಅಂತಿಮವಾಗದ ಈ ಸಿನಿಮಾಕ್ಕೆ ಇನ್ನೂ ಹಲವು ಹೊಸಬರನ್ನು ಪರಿಚಯಿಸುವ ಉಸ್ತುವಾರಿಯನ್ನು ನಿರ್ದೇಶಕರು ಹೊತ್ತಿದ್ದು, ಶೀಘ್ರದಲ್ಲಿ ಶೀರ್ಷಿಕೆ ಅಂತಿಮ ಮಾಡಿ, ಶೂಟಿಂಗ್​ ಶುರುವಾಗುವ ಬಗ್ಗೆಯೂ ಮಾಹಿತಿ ನೀಡಲಿದ್ದಾರೆ ವಿಜಯ್.

Related posts