ಟಿವಿ ನೀಡುವ ಸಿಹಿ ಕಹಿ ಅನುಭವ ‘ದೂರದರ್ಶನ’ (ಚಿತ್ರವಿಮರ್ಶೆ -ರೇಟಿಂಗ್ : 3/5)
ರೇಟಿಂಗ್ : 3/5
ಚಿತ್ರ : ದೂರದರ್ಶನ
ನಿರ್ದೇಶಕ : ಸುಕೇಶ್ ಶೆಟ್ಟಿ
ನಿರ್ಮಾಪಕ : ರಾಜೇಶ್ ಭಟ್
ಸಂಗೀತ : ವಾಸುಕಿ ವೈಭವ್ ಛಾಯಾಗ್ರಹಕ : ಅರುಣ್ ಸುರೇಶ್
ತಾರಾಗಣ : ಪೃಥ್ವಿ ಅಂಬರ್, ಉಗ್ರಂ ಮಂಜು, ಅಯಾನಾ , ಸುಂದರ್ ವೀಣಾ, ರಘು ರಾಮನಕೊಪ್ಪ , ಹರಿಣಿ , ಕಾರ್ತಿಕ್, ಸೂರಜ್ ಹಾಗೂ ಮುಂತಾದವರು…
ಸಾಮಾನ್ಯವಾಗಿ ಪ್ರೇಕ್ಷಕರನ್ನ ರಂಜಿಸಲು ಆಕ್ಷನ್, ಲವ್ ಸೆಂಟಿಮೆಂಟ್, ಸಸ್ಪೆನ್ಸ್, ಚಿತ್ರಗಳು ಸಾಲು ಸಾಲು ಬರ್ತಿದೆ. ಆ ನಿಟ್ಟಿನಲ್ಲಿ 80ರ ಕಾಲಘಟ್ಟದಲ್ಲಿ ಕಂಡಂತಹ ಕಣ್ಣಾರೆ ಅನುಭವಿಸಿದಂತ ಕೆಲವು ನೈಜ ಘಟನೆಗಳ ಆಧಾರವಾಗಿಟ್ಟುಕೊಂಡು ಒಂದು ಟಿವಿ ಸುತ್ತ ಕಥೆಯನ್ನು ಬೆಸೆದುಕೊಂಡು ಪ್ರೀತಿ, ಗೆಳೆತನ, ದ್ವೇಷ, ಅಹಂಕಾರ ಹೀಗೆ ಹಲವು ದೃಷ್ಟಿಕೋನಗಳೊಂದಿಗೆ ತೆರೆಯ ಮೇಲೆ ಬಂದಂತ ಚಿತ್ರ “ದೂರದರ್ಶನ”. ಪಶ್ಚಿಮ ಘಟ್ಟದ ಸುಂದರ ಪರಿಸರದ ನಡುವೆ ಒಂದು ಊರು.
ಆ ಊರಿನ ಮುಖ್ಯಸ್ಥನ ದೊಡ್ಡಸ್ತಿಕೆ, ದರ್ಪ, ದಬ್ಬಾಳಿಕೆ ಎಲ್ಲವೂ ಇದ್ದದ್ದೆ. ಯಾವುದೇ ಹೊಸ ವಸ್ತು ಬಂದಿದೆ ಅಂದರೆ ಅದು ಭಟ್ಟರ ದೊಡ್ಡ ಮನೆಯವರಿಗೆ ಮಾತ್ರ ಸಾಧ್ಯ ಎಂದೆ ಖ್ಯಾತಿ. ಮನೆಯ ಮುಖ್ಯಸ್ಥ ರಾಮಕೃಷ್ಣ ಭಟ್ಟ (ಸುಂದರ್ ವೀಣಾ) ಪತ್ನಿ (ಹರಣಿ) ಅವರಿಗೆ ಮುದ್ದಾದ ಮಗ ಮನು (ಪೃಥ್ವಿ ಅಂಬರ್).
ಮನೆಯಲ್ಲಿ ತಂದೆ ಮಗನ ಕೋಪ, ಮನಸ್ತಾಪ ಇದ್ದಿದ್ದೆ. ಇದಕ್ಕೆ ತಾಯಿಯ ಪರದಾಟವು ಸಾಕ್ಷಿ. ನ್ಯಾಯಬೆಲೆ ಅಂಗಡಿ ನೋಡಿಕೊಳ್ಳುವ ಮನು ತಮ್ಮ ಮೇಷ್ಟ್ರುವಿನ ಮಾರ್ಗದರ್ಶನಂತೆ ಗೆಳೆಯರೊಟ್ಟಿಗೆ ಸೇರಿ ನಾಟಕ ಪ್ರಾಕ್ಟೀಸ್ ಗೆ ಮುಂದಾಗುತ್ತಾನೆ. ತನ್ನ ಬಾಲ್ಯದ ಗೆಳೆಯ ಕಿಟ್ಟಿ (ಉಗ್ರಂ ಮಂಜು) ಜೊತೆ ದ್ವೇಷ ಅದಕ್ಕೊಂದು ಬಲವಾದ ಕಾರಣ. ಇದರ ನಡುವೆ ತನ್ನ ಪ್ರೀತಿಯ ಗೆಳತಿ ಮೈತ್ರಿ (ಅಯಾನಾ) ಜೊತೆ ಕದ್ದು ಮುಚ್ಚಿ ಓಡಾಟ.
ಇದರ ಹೊರತಾಗಿ ಮನೆಯ ಮುಖ್ಯಸ್ಥ ರಾಮಕೃಷ್ಣ ಭಟ್ಟ ಹಾಗೂ ಆತನ ಸಹೋದರ (ರಘು ರಾಮನಕೊಪ್ಪ) ಆಸ್ತಿಯ ವಿವಾದ ಇಬ್ಬರಲ್ಲೂ ಬಿರುಕು ಮಾಡಿರುತ್ತದೆ. ಇದರ ನಡುವೆ ಬಾಮೈದ ಕಳಿಸಿರುವ ಟಿವಿಯನ್ನು ಮನೆಯಲ್ಲಿ ಕೆಲವು ದಿನಗಳ ಮಟ್ಟಿಗೆ ಇಟ್ಟುಕೊಳ್ಳಲು ಹೇಳುತ್ತಾನೆ. ಇದಕ್ಕೆ ಅಣ್ಣ ಒಪ್ಪದಿದ್ದರೂ ಬಲವಂತವಾಗಿ ಒಪ್ಪಿಸುತ್ತಾನೆ.
ಇಡೀ ಊರಿಗೆ ರಾಮಕೃಷ್ಣ ಭಟ್ಟರ ಮನೆಯಲ್ಲಿ ಟಿವಿ ಇದ್ದ ಕಾರಣ ದೂರದರ್ಶನದಲ್ಲಿ ಬರುವ ರಾಮಾಯಣ, ಚಿತ್ರಹಾರ್ ಸೇರಿದಂತೆ ಮನೋರಂಜನೆ ಕಾರ್ಯಕ್ರಮಗಳನ್ನು ನೋಡಲು ಜನರು ಮನೆಗೆ ಮುಗಿ ಬೀಳುತ್ತಾರೆ. ಮಕ್ಕಳ ಮೇಲಿನ ದರ್ಪ, ದೊಡ್ಡವರ ಮೇಲಿನ ದಬ್ಬಾಳಿಕೆ ಎಲ್ಲವೂ ಭಟ್ಟರ ಆರ್ಭಟಕ್ಕೆ ಸಾಕ್ಷಿಯಾಗಿರುತ್ತದೆ. ಹೀಗೆ ಸಾಗುವ ಹಾದಿಯಲ್ಲಿ ಒಂದಷ್ಟು ಏರುಪೇರುಗಳ ನಡುವೆ ಒಂದು ದಿನ ಮನೆಯಲ್ಲಿದ್ದ ಟಿವಿ ಕಳ್ಳತನವಾಗುತ್ತದೆ. ಇಲ್ಲಿಂದ ಚಿತ್ರದ ಓಟ ಹೊಸ ತಿರುವನ್ನ ಪಡೆದುಕೊಳ್ಳುತ್ತದೆ.
ಟಿವಿ ಕದ್ದವರು ಯಾರು…
ಭಟ್ಟರ ಕುಟುಂಬ ಎದುರಿಸುವ ಸಮಸ್ಯೆ ಏನು…
ನಾಯಕನ ಪ್ರೀತಿ ಏನಾಗುತ್ತೆ…
ಟಿವಿ ಸಿಗುತ್ತಾ ಇಲ್ವಾ…
ಈ ಎಲ್ಲಾ ಪ್ರಶ್ನೆಗೆ ಉತ್ತರ ಸಿಗಬೇಕಾದರೆ ಒಮ್ಮೆ ದೂರದರ್ಶನ ಚಿತ್ರ ನೋಡಲೇಬೇಕು.
ಯುವ ನಿರ್ದೇಶಕ ಸುಕೇಶ್ ಶೆಟ್ಟಿ ತನ್ನ ಪ್ರಥಮ ಪ್ರಯತ್ನದಲ್ಲಿ 1980ರ ಕಾಲಘಟ್ಟದಲ್ಲಿ ನಡೆಯುವ ಸಬ್ಜೆಕ್ಟ್ ಆಯ್ಕೆ ಮಾಡಿಕೊಂಡು ನೈಜಕ್ಕೆ ಹತ್ತಿರವಾದಂತೆ ನಾವು ನೋಡಿರುವ, ಕೇಳಿರುವ ಮಾಹಿತಿಯನ್ನು ಸಂಗ್ರಹಿಸಿ ಪ್ರೀತಿ, ಗೆಳೆತನ, ಕಿಚ್ಚು , ಮಾನವೀಯತೆಯ ಮೌಲ್ಯ, ಸಂಬಂಧಗಳ ಬೆಸುಗೆಗೆ ಒಂದಕ್ಕೊಂದು ಕೊಂಡಿಯಾಗಿ ಟಿವಿಯ ವಿಚಾರವನ್ನು ಪ್ರಧಾನವಾಗಿಟ್ಟುಕೊಂಡು ರೆಟ್ರೋ ಮ್ಯಾನರಿಸಂನಲ್ಲಿ ಟಿವಿ ಬರುವ ಮೊದಲು ಜನ ನೋಡುವ ರೀತಿ ಹಾಗೂ ಆ ಮನೆಗೆ ಟಿವಿ ಬಂದ ನಂತರ ಬದಲಾಗುವ ದೃಷ್ಟಿಕೋನವನ್ನು ತೆರೆದಿಡುವ ಪ್ರಯತ್ನವನ್ನು ಮಾಡಿದ್ದಾರೆ.
ಚಿತ್ರದ ದ್ವಿತೀಯ ಭಾಗ ಹೆಚ್ಹು ಗಮನ ಸೆಳೆಯುತ್ತದೆ. ಚಿತ್ರಕ್ಕೆ ಸಂಗೀತ ನೀಡಿರುವ ವಾಸುಕಿ ವೈಭವ ಒಂದು ಹಾಡು ಗುನುಗುವಂತಿದ್ದು, ಇನ್ನು ಪರಿಣಾಮಕಾರಿ ಆಗಬಹುದಿತ್ತು. ಅರುಣ್ ಸುರೇಶ್ ಕ್ಯಾಮೆರಾ ಕೈಚಳಕದ ಕೆಲವು ದೃಶ್ಯಗಳು ಸ್ಪಷ್ಟತೆ ಮಾಯವಾದಂತಿದೆ. 80ರ ಕಾಲಘಟ್ಟದ ಕೆಲವು ನೆನಪುಗಳನ್ನು ನೆನೆಸಿಕೊಳ್ಳುವಂತೆ ಮಾಡಿದ ನಿರ್ಮಾಣ ಸಂಸ್ಥೆಯ ದೈರ್ಯ ಮೆಚ್ಚಬೇಕು.
ಇನ್ನು ನಾಯಕನಾಗಿ ಅಭಿನಯಿಸಿರುವ ಪೃಥ್ವಿ ಅಂಬರ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿ, ಗೆಳೆಯನಾಗಿ, ಪ್ರೇಮಿಯಾಗಿ, ಮನೆ ಮಗನಾಗಿ ಉತ್ತಮವಾಗಿ ನಟಿಸಿದ್ದಾರೆ. ನಾಯಕಿ ಅಯಾನಾ ಕೂಡ ಸಿಕ್ಕ ಅವಕಾಶವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಗಮನ ಸೆಳೆದಿದ್ದಾರೆ. ಬಾಲ್ಯದ ಗೆಳೆಯನ ಪಾತ್ರಧಾರಿ ಉಗ್ರಂ ಮಂಜು ಖಡಕ್ಕಾಗಿ ಅಭಿನಯಿಸಿ ರೋಷ, ವೇಷದಲ್ಲಿ ಮಿಂಚಿದ್ದಾರೆ.
ಇನ್ನು ಇಡೀ ಚಿತ್ರದ ಕೇಂದ್ರ ಬಿಂದು ಪಾತ್ರವನ್ನು ನಿರ್ವಹಿಸಿರುವ ಸುಂದರ್ ವೀಣಾ ಬಹಳ ಲೀಲಾಜಾಲವಾಗಿ ಪಾತ್ರದಲ್ಲಿ ಪರ್ಕಾಯ ಪ್ರವೇಶ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಇನ್ನು ಅವರ ತಮ್ಮನ ಪಾತ್ರ ಮಾಡಿರುವ ರಘು ರಾಮನಕೊಪ್ಪ ಕೂಡ ಪಾತ್ರಕ್ಕೆ ಜೀವ ತುಂಬಿ ನಟಿಸಿದ್ದಾರೆ. ಇನ್ನು ಉಳಿದಂತೆ ತಾಯಿಯ ಪಾತ್ರಧಾರಿ ಹರಿಣಿ, ಗೆಳೆಯರಾದ ಸೂರಜ್, ಕಾರ್ತಿಕ್ ಸೇರಿದಂತೆ ಎಲ್ಲಾ ಕಲಾವಿದರುಗಳು ಉತ್ತಮ ಸಾತ್ ನೀಡಿದ್ದಾರೆ. ಒಟ್ಟಾರೆ ಯಾವುದೇ ಮುಜುಗರವಿಲ್ಲದೆ ಮನೋರಂಜನೆಯ ದೃಷ್ಟಿಯಿಂದ ಒಮ್ಮೆ ಈ ಚಿತ್ರವನ್ನು ಎಲ್ಲರೂ ನೋಡಬಹುದು.