Cinisuddi Fresh Cini News 

ನಿರ್ದೇಶನ, ನಿರ್ಮಾಣವಾಯ್ತು ಈಗ ನಟನೆಗೂ ಸೈ ಎನ್ನುತ್ತಿದ್ದಾರೆ ಸತ್ಯ ಪ್ರಕಾಶ್

‘ರಾಮಾ ರಾಮಾ ರೇ’, ‘ಒಂದಲ್ಲ ಎರಡಲ್ಲ’ ಸಿನಿಮಾ ಖ್ಯಾತಿಯ ಪ್ರತಿಭಾವಂತ ನಿರ್ದೇಶಕ ಸತ್ಯ ಪ್ರಕಾಶ್. ಎರಡು ಅಪರೂಪದ ಸಿನಿಮಾಗಳ ಮೂಲಕ ಜನಮೆಚ್ಚುಗೆ ಜೊತೆಗೆ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡಿರುವ ಸತ್ಯ ಪ್ರಕಾಶ್ ಹೊಸದೊಂದು ಸಾಹಸಕ್ಕೆ ಹೊರಳಿದ್ದಾರೆ. ನಿರ್ದೇಶಕ, ನಿರ್ಮಾಪಕನಾಗಿ ಯಶಸ್ವಿಯಾಗಿರುವ ಸತ್ಯ ಪ್ರಕಾಶ್ ನಟನಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

ಈ ನಡುವೆ ನಿರ್ದೇಶಕರು ನಟನಾಗುತ್ತಿರೋದು ಕಾಮನ್ ವಿಚಾರವಾಗಿದೆ. ಜೊತೆಗೆ ತಾವೇ ಬರೆದ ಕಥೆಗೆ ನಿರ್ದೇಶನ ಮಾಡಿ ನಿರ್ಮಾಣ ಮಾಡಿ ನಟನಾಗುವುದು ಒಂದು ರೀತಿ ಟ್ರೆಂಡ್ ಆಗಿದೆ. ಅಂತಹದ್ದೇ ಒಂದು ಪ್ರಯತ್ನಕ್ಕೆ ಸತ್ಯ ಪ್ರಕಾಶ್ ಕೈ ಹಾಕಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸತ್ಯ ಪ್ರಕಾಶ್ ಇದೊಂದು ಹೊಸ ರೀತಿಯ ಕಥೆ.

ಒಬ್ಬೊಬ್ಬರ ಜೀವನದಲ್ಲಿ ಒಂದೊಂದು ಘಟನೆ ನಡೆದಿರುತ್ತೆ. ನನ್ನ ಬದುಕಿನಲ್ಲೂ ಒಂದಷ್ಟು ಘಟನೆಗಳು ನಡೆದಿವೆ. ಅವೆಲ್ಲವನ್ನು ಆಧರಿಸಿ ಕಥೆ ಹೆಣೆದಿದ್ದೇನೆ. ಈ ಕಥೆಯಲ್ಲಿ ಒಬ್ಬ ಹೊಸ ನಾಯಕ ನನಗೆ ಕಾಣುತ್ತಿದ್ದಾನೆ ಆದ್ರಿಂದ ನಾನೇ ನಟಿಸುತ್ತಿದ್ದೇನೆ. ನಾಯಕ ನಟ ಅನ್ನೋದಕ್ಕಿಂತ ಮುಖ್ಯ ಪಾತ್ರ ಎಂದಷ್ಟೇ ಹೇಳಬಹುದು ಎನ್ನುತ್ತಾರೆ ನಿರ್ದೇಶಕ ಸತ್ಯ ಪ್ರಕಾಶ್.

ಈ ಚಿತ್ರ ಸಾಮಾನ್ಯ ಮನುಷ್ಯನ ಬದುಕಿಗೆ ಸಂಬಂಧಿಸಿದ ಕಥೆ ಒಳಗೊಂಡಿದೆ. ಸಾಮಾನ್ಯ ವ್ಯಕ್ತಿ ಬದುಕಲ್ಲಿ ಹಾಸ್ಯ, ಎಮೋಷನ್ಸ್, ರಾಜಕೀಯ ಎಲ್ಲವೂ ಇರುತ್ತೆ ಈ ಚಿತ್ರದಲ್ಲೂ ಅವೆಲ್ಲವೂ ಇದೆ. ಕಥಾನಾಯಕನಿಗೆ ಎಲ್ಲರಿಗೂ ಒಳ್ಳೆಯದನ್ನು ಬಯಸುವ ಗುಣವಿರುತ್ತೆ ಆದ್ರೆ ಆತನ ಒಳ್ಳೆಯ ಗುಣದಿಂದ ಅವನಿಗಾಗುವ ಪ್ರಯೋಜನ ಹಾಗೂ ತೊಂದರೆಗಳೇನು ಎಂಬುದನ್ನು ಹಾಸ್ಯದ ಮೂಲಕ ಹೇಳ ಹೊರಟಿದ್ದೇನೆ ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ ಸತ್ಯ ಪ್ರಕಾಶ್.

ನಾನು ಯಾವಾಗಲೂ ಯೂನಿವರ್ಸಲ್ ಸಬ್ಜೆಕ್ಟ್ ಆಯ್ಕೆ ಮಾಡಿಕೊಳ್ಳುತ್ತೇನೆ. ನನ್ನ ಸಿನಿಮಾವನ್ನು ಎಲ್ಲಾ ವರ್ಗದ ಜನರು ನೋಡಬೇಕು ಎನ್ನುವುದು ನನ್ನ ಆಸೆ. ಈ ಚಿತ್ರದ ಕಥೆಯೂ ಹಾಗೆ ಇದೆ. ಸಿನಿಮಾ ಚಿತ್ರೀಕರಣ ಜನವರಿಯಲ್ಲಿ ಆರಂಭವಾಗಲಿದೆ .ರಾಮಾ ರಾಮಾ ರೇ ಸಿನಿಮಾದಲ್ಲಿ ಕೆಲಸ ಮಾಡಿದ ತಂತ್ರಜ್ಞರೇ ಈ ಚಿತ್ರಕ್ಕೂ ಕೆಲಸ ಮಾಡಲಿದ್ದಾರೆ ಎಂದು ಮಾಹಿತಿ ನೀಡಿರುವ ಸತ್ಯ ಪ್ರಕಾಶ್ ಸದ್ಯದಲ್ಲೇ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ನೀಡೋದಾಗಿ ತಿಳಿಸಿದ್ದಾರೆ

Related posts