Cini Reviews Cinisuddi Fresh Cini News 

ದಿಲ್ ಕಿ ಧಡಕನ್ “ದಿಯಾ” (ಚಿತ್ರ ವಿಮರ್ಶೆ – ರೇಟಿಂಗ್ 4.5/5)

ಚಿತ್ರ : ದಿಯಾ
ನಿರ್ದೇಶಕ :ಅಶೋಕ್ ನಿರ್ಮಾಪಕ : ಕೃಷ್ಣ ಚೈತನ್ಯ ಸಂಗೀತ : ಅಜನೀಶ್ ಲೋಕನಾಥ್
ಛಾಯಾಗ್ರಾಹಕ : ವಿಶಾಲ್ , ಸೌರಭ್
ತಾರಾಗಣ : ದೀಕ್ಷಿತ್ ಶೆಟ್ಟಿ , ಪೃಥ್ವಿ ಅಂಬಾರ್ , ಖುಷಿ , ಪವಿತ್ರಾ ಲೋಕೇಶ್ ಹಾಗೂ ಮುಂತಾದವರು…

ಲೈಫ್​ ಈಸ್​ ಫುಲ್​ ಆಫ್​ ಸರ್ಪ್ರೈಸ್​​ಸ್ ಎನ್ನೋ ಮಾತಿಗೆ ಈ “ದಿಯಾ” ಚಿತ್ರ ಹೇಳಿ ಮಾಡಿಸಿದಂತಿದೆ. ತ್ರಿಕೋನ ಪ್ರೇಮ ಕಥೆ ಹೊಂದಿರುವ ದಿಯಾ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಎಮೋಷನಲ್​ ಡ್ರಾಮಾ ಪ್ರೇಕ್ಷಕರ ಮುಂದೆ ಬಂದಿದೆ. ಬೆರಳೆಣಿಕೆಯ ಪಾತ್ರಗಳ ಮೂಲಕವೇ ಮನ ಮುಟ್ಟುವಂತಹ ಚಿತ್ರವನ್ನು ಪ್ರೇಕ್ಷಕರ ಮುಂದೆ ಇಟ್ಟಿದ್ದಾರೆ ದಿಯಾ ಚಿತ್ರತಂಡ.

ಇದೊಂದು ವಿಭಿನ್ನ ತ್ರಿಕೋನ ಪ್ರೇಮಕಥೆಯ ಏರಿಳಿತಗಳ ಯಾನ. ಚಿತ್ರದ ಕಥಾ ಹಂದರ ತೆರೆದುಕೊಳ್ಳುವುದೇ ದುರಂತ ಬದುಕಿನ ನೆನಪಿನ ಬುತ್ತಿಯಲ್ಲಿ. ಸಾಮಾನ್ಯವಾಗಿ ಒಂದು ಹುಡುಗ ಪ್ರೀತಿಗೆ ಬಿದ್ದರೆ ತನ್ನ ಪ್ರೀತಿಯನ್ನು ಹೇಳಿಕೊಳ್ಳುವುದಕ್ಕೆ ಬಹಳ ಬೇಗ ದಾರಿಯನ್ನು ಕಂಡುಕೊಳ್ಳುತ್ತಾನೆ.

ಆದರೆ ಒಂದು ಹುಡುಗಿ ಪ್ರೀತಿಯಲ್ಲಿ ಬಿದ್ದರೆ ಆಕೆಯ ಮನಸ್ಸಿನ ತೊಳಲಾಟ, ಪರದಾಟಗಳು ಹೇಳತೀರದು, ಅಂತಹ ಹೃದಯ ವೇದನೆಗೆ ಸಿಲುಕಿಕೊಳ್ಳುವ ನಾಯಕಿ ದಿಯಾ ಕಾಲೇಜಿನಲ್ಲಿರುವಾಗ ರೋಹಿತ್ ಎಂಬ ಸುಂದರನಿಗೆ ಮನಸೋಲುತ್ತಾಳೆ. ಆದರೆ ಪ್ರಪೋಸ್​ ಮಾಡೋಕ್ಕೆ ಹೋದಾಗಲೆಲ್ಲಾ ಅಡ್ಡಿ ಆತಂಕಗಳು ಎದುರಾಗಿ ಅವಳ ಪ್ರೇಮ ನಿವೇದನೆ ಹೇಳಿಕೊಳ್ಳಲು ಮೂರು ವರ್ಷ ಬೇಕಾಗುತ್ತದೆ.

ಇದೇ ಹಾದಿಯಲ್ಲಿ ನಾಯಕ ಕೂಡ ಸಾಗುವುದು ವಿಪರ್ಯಾಸವೇ ಸರಿ. ಮುಂಬೈನಲ್ಲಿ ವಾಸ ಮಾಡುವ ಇವರಿಬ್ಬರು ಇನ್ನೇನು ಮದುವೆ ಆಗುತ್ತಾರೆ ಎನ್ನುವ ಸಂದರ್ಭದಲ್ಲಿ ವಿಧಿಯ ಕೈವಾಡದಿಂದ ಇಬ್ಬರೂ ದೂರ ಆಗುತ್ತಾರೆ. ಮುಂದೆ ಈ ಜೀವನವೇ ಬೇಡ ಎನ್ನುವ ದಿಯಾ ಸಾವಿಗೆ ಶರಣಾಗಲು ನಿರ್ಧರಿಸುತ್ತಾಳೆ.

ಆ ಸಮಯಕ್ಕೆ ದಿಯಾಳ ತಂದೆ ಮಗಳ ಮನಸ್ಥಿತಿ ಬದಲಾಗಲಿ ಎಂಬ ಕಾರಣಕ್ಕೆ ಮುಂಬೈನಿಂದ ಬೆಂಗಳೂರಿನ ಸ್ನೇಹಿತರ ಮನೆಗೆ ಕಳಿಸುತ್ತಾನೆ. ಆಗ ದಿಯಾ ಳ ಬದುಕಿಗೆ ಮತ್ತೊಬ್ಬ ವ್ಯಕ್ತಿ ಆದಿ ಯ ಆಗಮನವಾಗುತ್ತದೆ. ಪರಿಚಯ ಸ್ನೇಹವಾಗಿ ತಿರುಗುತ್ತದೆ.

ಮನಸ್ಸಿನಲ್ಲಿ ಹುಟ್ಟುವ ಹಲವಾರು ತೊಳಲಾಟಗಳ ನಡುವೆಯೂ ಸಹ ರೋಹಿತ್​ನ ಮರೆತು ಆದಿಯನ್ನು ದಿಯಾ ಒಪ್ಪಿಕೊಳ್ಳೋ ವೇಳೆಗೆ ಕಥೆಯಲ್ಲಿ ದೊಡ್ಡ ತಿರುವು ಸಿಗುತ್ತೆ. ಇನ್ನೇನು ಎಲ್ಲವೂ ಸರಿಹೋಯಿತು ಎನ್ನುವಷ್ಟರಲ್ಲಿ ಮೈ ಜುಮ್ಮೆನ್ನಿಸುವ ರೋಮಾಂಚನ ದೃಶ್ಯಗಳು ಕಣ್ಣ ಮುಂದೆ ಹಾದುಹೋಗುತ್ತದೆ. ಇವೆಲ್ಲವನ್ನು ನೀವು ನೋಡಬೇಕಾದರೆ ಚಿತ್ರಮಂದಿರಕ್ಕೆ ಹೋಗಿ “ದಿಯಾ” ಳನ್ನು ಭೇಟಿ ಮಾಡಿ.

ಈ ಚಿತ್ರದ ಪ್ರಮುಖ ಆಕರ್ಷಣೆ ಎಂದರೆ ಚಿತ್ರದ ಛಾಯಾಗ್ರಾಹಕರ ಕೆಲಸ. ಅದೇ ರೀತಿ ಮಾತು ಪೋಣಿಸಿರುವ ಸಂಭಾಷಣೆಯ ವೈಖರಿ. ಈ ಚಿತ್ರದ ನಿರ್ದೇಶಕ ಅಶೋಕ್ ಒಂದು ತ್ರಿಕೋನ ಪ್ರೇಮಕತೆಯನ್ನು ಬಹಳ ಸೂಕ್ಷ್ಮವಾಗಿ ನೈಜ್ಯಕ್ಕೆ ಹತ್ತಿರವಾದಂತೆ ತೆರೆಮೇಲೆ ತರುವುದರಲ್ಲಿ ಯಶಸ್ವಿಯಾಗಿದ್ದಾರೆ.

ಪ್ರೇಮ ವೈಫಲ್ಯ ಗೊಂಡಾಗ ಹುಡುಗಿಯ ಮನಸ್ಥಿತಿ ಯಾವ ರೀತಿ ಇರುತ್ತದೆ ಎಂಬುದನ್ನು ಬಹಳ ಸೂಕ್ಷ್ಮವಾಗಿ ತೆರೆದಿಟಿದ್ದಾರೆ. ಸಂಭಾಷಣೆಯನ್ನು ನಿರ್ದೇಶಕ ಅಶೋಕ್ ಅವರೇ ಬರೆದಿರುವುದರಿಂದ ಚಿತ್ರದ ಓಟ ವಿಭಿನ್ನವಾಗಿ ಕಾಣುತ್ತದೆ.ಇಂತಹ ಒಂದು ವಿಭಿನ್ನ ಚಿತ್ರವನ್ನ ನಿರ್ಮಿಸಲು ಧೈರ್ಯ ಮಾಡಿರುವ ನಿರ್ಮಾಪಕ ಕೃಷ್ಣ ಚೈತನ್ಯ ಅವರ ಧೈರ್ಯವನ್ನು ಮೆಚ್ಚಲೇಬೇಕು.

ಕಿರುತೆರೆಯಲ್ಲಿ ಗಮನ ಸೆಳೆದಂತ ಹೊಸ ಪ್ರತಿಭೆಗಳಾದ ದೀಕ್ಷಿತ್​ ಶೆಟ್ಟಿ, ಪೃಥ್ವಿ ಅಂಬರ್​ ಮತ್ತು ಖುಷಿ ಬಹಳ ಸೊಗಸಾದ ಅಭಿನಯ ನೀಡಿದ್ದಾರೆ. ನಟ ದೀಕ್ಷಿತ್​ ಶೆಟ್ಟಿ ಸಿಕ್ಕ ಅವಕಾಶವನ್ನ ಸೊಗಸಾಗಿ ಬಳಸಿಕೊಂಡಿದ್ದಾರೆ. ಮತ್ತೊಬ್ಬ ನಟ ಪೃಥ್ವಿ ಕೂಡ ಗಮನ ಸೆಳೆಯುತ್ತಾರೆ.

ಚಿತ್ರದ ಕ್ಲೈಮ್ಯಾಕ್ಸ್ ಹಂತದಲ್ಲಿ ಬರುವ ತಾಯಿ ಮಗನ ಸನ್ನಿವೇಶಗಳಲ್ಲಿ ಮನಮುಟ್ಟುವಂತೆ ಅಭಿನಯಿಸಿದ್ದಾರೆ. ಇನ್ನು ಎರಡನೇ ನಾಯಕನ ತಾಯಿಯ ಪಾತ್ರ ಮಾಡಿರುವ ಪವಿತ್ರಾ ಲೋಕೇಶ್ ಕೂಡ ಜೀವ ತುಂಬಿ ನಟಿಸಿದ್ದಾರೆ. ಇನ್ನು ಈ ಚಿತ್ರದ ಕೇಂದ್ರ ಬಿಂದು ಪಾತ್ರದಲ್ಲಿ ಅಭಿನಯಿಸಿರುವ ನಟಿ ಖುಷಿ ಎಲ್ಲರ ಗಮನವನ್ನು ಸೆಳೆಯುತ್ತಾರೆ.

ಒಂದು ಹೆಣ್ಣು ಅನುಭವಿಸುವ ನೋವು, ನಲಿವು, ಸುಖ, ದುಃಖ ಎಲ್ಲವನ್ನೂ ಪರಕಾಯ ಪ್ರವೇಶ ಮಾಡಿಕೊಂಡು ಅಭಿನಯಿಸಿರುವುದು ಗಮನಾರ್ಹ. ಉಜ್ವಲ ಭವಿಷ್ಯವಿರುವ ಈ ನಟಿ ಎಲ್ಲರ ಮನಸ್ಸಿನಲ್ಲಿ ದಿಯಾ ಳಾಗಿ ಉಳಿಯುತ್ತಾರೆ.

ಪ್ರೀತಿಸುವ ಹೃದಯಗಳಿಗೆ ಹೇಳಿ ಮಾಡಿರುವಂತಹ ಚಿತ್ರ ಇದಾಗಿದೆ. ಚಿತ್ರದ ಓಟ ಸ್ವಲ್ಪ ನಿಧಾನಗತಿ ಆದರೂ ದೃಶ್ಯಗಳಿಗೆ ಅವಶ್ಯಕವಾಗಿ ಇರುವಂತೆ ಕಾಣುತ್ತದೆ. ಮಿಡಿವ ಹೃದಯಗಳಿಗೆ ಇಷ್ಟವಾಗುವ ದಿಯಾ ಚಿತ್ರವನ್ನು ಎಲ್ಲರೂ ಒಮ್ಮೆ ನೋಡಬೇಕು.

Share This With Your Friends

Related posts