Cinisuddi Fresh Cini News Tv / Serial 

ಕಿರುತೆರೆ ಮೇಲೆ ಬರುತ್ತಿದೆ ದಿಯಾ ಚಿತ್ರ

ವೀಕ್ಷಕರಿಗೆ ಇಷ್ಟವಾಗುವ ಧಾರಾವಾಹಿ, ರಿಯಾಲಿಟಿ ಶೋಗಳನ್ನು ರೂಪಿಸುವ ಜೀ಼ ಕನ್ನಡ ಇದೀಗ ಕನ್ನಡದ ಸೂಪರ್ ಹಿಟ್ ಚಲನಚಿತ್ರ “ದಿಯಾ” ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಕಾಣಲಿದೆ. ಜೂನ್ 28,2020ರಂದು ಭಾನುವಾರ ಸಂಜೆ 7 ಗಂಟೆಗೆ ಜೀ಼ ಕನ್ನಡ ವಾಹಿನಿಯ ವೀಕ್ಷಕರಿಗೆ ವಿಶ್ವದಾದ್ಯಂತ ಈ ಚಲನಚಿತ್ರ ಲಭ್ಯವಿದ್ದು ಕನ್ನಡದ ಜನಪ್ರಿಯ ಚಿತ್ರಗಳ ಪ್ರಸಾರ ಸರಣಿಯಲ್ಲಿ ಇದೂ ಒಂದಾಗಿದೆ.

ಕೆ.ಎಸ್.ಅಶೋಕ ನಿರ್ದೇಶನದ ಪೃಥ್ವಿ ಅಂಬರ್, ದೀಕ್ಷಿತ್ ಶೆಟ್ಟಿ ಮತ್ತು ಖುಷಿ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರ ಫೆಬ್ರವರಿ ತಿಂಗಳಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರ ಅಪಾರ ಮೆಚ್ಚುಗೆ ಪಡೆದಿತ್ತು.

ದಿಯಾ ಒಬ್ಬ ಯುವತಿಯ ಕಥೆಯಾಗಿದ್ದು ಆಕೆ ಸ್ವಭಾತಃ ಅಂತರ್ಮುಖಿಯಾಗಿದ್ದರೂ ಒಬ್ಬ ಯುವಕನ ಪ್ರೀತಿಯಲ್ಲಿ ಸಿಲುಕಿಕೊಳ್ಳುತ್ತಾಳೆ. ಆತ ದಿಢೀರ್ ಎಂದು ಕಣ್ಮರೆಯಾಗುತ್ತಾನೆ. ಸಂಕಷ್ಟದಲ್ಲಿರುವ ಯುವತಿಗೆ ಮತ್ತೊಬ್ಬ ಬದುಕಲ್ಲಿ ವಿಶ್ವಾಸ ತುಂಬಿ ಆಕೆಯಲ್ಲಿ ಬದುಕುವ ಉತ್ಸಾಹ ಹೆಚ್ಚಿಸುತ್ತಾನೆ.

ಈ ಮಧ್ಯದಲ್ಲಿ ಆಕೆಗೆ ಮತ್ತೊಂದು ಆಘಾತ ಕಾದಿರುತ್ತದೆ. ಪ್ರೀತಿ ನಷ್ಟವಾದ ನಂತರವೂ ಬದುಕನ್ನು ಹೇಗೆ ನೋಡಬೇಕೆನ್ನುವ ಬದುಕಿನ ಪಾಠಗಳನ್ನು ದಿಯಾ ಚಿತ್ರ ಹೇಳುತ್ತದೆ.

ಕನ್ನಡದ ಸೂಪರ್ ಹಿಟ್ ಚಲನಚಿತ್ರಗಳ ಸಂಗ್ರಹ ಹೊಂದಿರುವ ಜೀ಼ ಕನ್ನಡ ಇದೀಗ ದಿಯಾ ಚಿತ್ರದ ಮೂಲಕ ಎಲ್ಲರನ್ನೂ ರಂಜಿಸಲು ಸಜ್ಜಾಗಿದೆ. ಪವಿತ್ರಾ ಲೋಕೇಶ್, ಅರವಿಂದ ರಾವ್, ರಾಜೇಶ್ ರಾವ್, ಜ್ಯೋತಿ ರೈ ಮುಂತಾದವರು ನಟಿಸಿರುವ ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಡಿ.ಕೃಷ್ಣ ಚೈತನ್ಯ ಚಿತ್ರದ ನಿರ್ಮಾಪಕರು.

Related posts