Cinisuddi Fresh Cini News 

ಪೊಗರು ನಂತರ ನಂದ ಕಿಶೋರ್-ಧ್ರುವ ಸರ್ಜಾ ಮತ್ತೊಂದು ಸಿನಿಮಾ

ಅದ್ಧೂರಿ ಡೈಲಾಗ್‍ಗಳಿಂದಲೇ ಸ್ಯಾಂಡಲ್‍ವುಡ್‍ನಲ್ಲಿ ಆ್ಯಕ್ಷನ್ ಪ್ರಿನ್ಸ್ ಆಗಿ ಮಿಂಚುತ್ತಿರುವ ಧ್ರುವಸರ್ಜಾರ ಅಭಿಮಾನಿಗಳಿಗೆ ಈಗ ಸಂತಸದ ಕಾಲ. ಚಂದನವನದಲ್ಲಿ ಭಾರೀ ಕ್ರೇಜ್ ಸೃಷ್ಟಿಸಿರುವ ಧ್ರುವಾ ಹಾಗೂ ರಶ್ಮಿಕಾ ಮಂದಣ್ಣರ ಜೋಡಿಯ ಪೊಗರು ಚಿತ್ರವು ಈ ವರ್ಷವೇ ತನ್ನ ಖದರ್ ತೋರಿಸಲಿರುವುದು ಒಂದು ಸಂತಸವಾದರೆ, ಪೊಗರು ಚಿತ್ರದ ನಿರ್ದೇಶಕರಾದ ನಂದಕಿಶೋರ್‍ರ ನಿರ್ದೇಶನದ ಮತ್ತೊಂದು ಚಿತ್ರದಲ್ಲಿ ಧ್ರುವಾ ನಟಿಸಲಿದ್ದಾರಂತೆ.

ಕೊರೊನಾ ಮಹಾಮಾರಿಯ ಕಾಟ ಇಲ್ಲದಿದ್ದರೆ ಯಾವಾಗಲೋ ಬೆಳ್ಳಿಪರದೆಯ ಮೇಲೆ ರಾರಾಜಿಸಬೇಕಾಗಿದ್ದ ಪೊಗರು ಸಿನಿಮಾಕ್ಕೆ ಗೀತೆಯೊಂದು ಬಾಕಿ ಇದ್ದು, ಸರ್ಕಾರ ನೀಡುವ ನಿರ್ದೇಶನವನ್ನು ಆಧರಿಸಿ ಅದರ ಶೂಟಿಂಗ್ ಪೂರ್ಣಗೊಳಿಸಿ ಚಿತ್ರವನ್ನು ಸೆನ್ಸಾರ್‍ಗೆ ಅಣಿಗೊಳಿಸಲು ಚಿತ್ರತಂಡವು ಸಜ್ಜಾಗಿದೆ.

ಪೊಗರು ಚಿತ್ರವು ಆರಂಭದಿಂದಲೂ ಒಂದಲ್ಲೊಂದು ಸುದ್ದಿಯಿಂದ ಚರ್ಚೆಗೆ ಕಾರಣವಾಗಿದೆ. ತೆಲುಗು ಚಿತ್ರರಂಗದಲ್ಲಿ ಬಲು ಬೇಡಿಕೆಯ ನಟಿಯಾಗಿರುವ ರಶ್ಮಿಕಾಮಂದಣ್ಣ ಪೊಗರು ಚಿತ್ರದ ಮೂಲಕ ಮತ್ತೆ ಸ್ಯಾಂಡಲ್‍ವುಡ್‍ಗೆ ಬಂದಿದ್ದು ಈಗ ಧ್ರುವಾ ಹಾಗೂ ರಶ್ಮಿಕಾರ ಜೋಡಿಯು ಅಭಿಮಾನಿಗಳಿಗೆ ರಸದೌತಣ ಕೊಡುತ್ತಿದೆ.

ಧ್ರುವಾನ ಹಿಂದಿನ ಚಿತ್ರಗಳಿಗಿಂತ ಈ ಚಿತ್ರವು ಬಲು ಅದ್ಧೂರಿಯಾಗಿದ್ದು , ಈ ಚಿತ್ರದ ಫೈಟಿಂಗ್ ದೃಶ್ಯಗಳು ಕೂಡ ಪೊಗದಸ್ತಾಗಿದೆಯಂತೆ. ಈ ವರ್ಷದ ಅದ್ದೂರಿ ಚಿತ್ರಗಳ ಸಾಲಿನಲ್ಲಿ ಪೊಗರು ಕೂಡ ಸ್ಥಾನ ಪಡೆದಿದೆ. ಅಭಿಮಾನಿಗಳ ನಿರೀಕ್ಷೆಯೂ ಕೂಡ ಹಿಂದೆಂದಿಗಿಂತಲೂ ದುಪ್ಪಟ್ಟಾಗಿದೆ.

ಈಗಾಗಲೇ ಈ ಚಿತ್ರದ ಹಾಡುಗಳು ಹಾಗೂ ಡೈಲಾಗ್‍ಗಳು ಅಭಿಮಾನಿಗಳ ಬಾಯಲ್ಲಿ ರಾರಾಜಿಸುತ್ತಿದ್ದರೆ, ಅಂತರ್ಜಾಲದಲ್ಲೂ ಕೂಡ ಪೊಗರು ಚಿತ್ರದ ಟೈಲರ್‍ರನ್ನು 22 ಮಿಲಿಯನ್‍ಗೂ ಹೆಚ್ಚು ಮಂದಿ ನೋಡಿ ಮೆಚ್ಚಿಕೊಂಡಿದ್ದರೆ, ಖರಾಬು ಗೀತೆಗೆ 55 ಮಿಲಿಯನ್‍ಗೂ ಹೆಚ್ಚು ಲೈಕ್ಸ್‍ಗಳು ಬಂದಿರುವುದರಿಂದ ಸಹಜವಾಗಿಯೇ ಚಿತ್ರದ ಬಗ್ಗೆ ಕ್ರೇಜ್ ಕ್ರಿಯೇಟ್ ಆಗಿದೆ.

ಧ್ರುವ ಹಾಗೂ ನಂದಕಿಶೋರ್‍ರ ಕಾಂಬಿನೇಷನ್ ಕೂಡ ಅಭಿಮಾನಿಗಳನ್ನು ಮುದಗೊಳಿಸಿದ್ದು ಈಗ ಇದೇ ಜೋಡಿಯು ಮತ್ತೊಂದು ಚಿತ್ರ ಹೊರಬರುವ ಸುದ್ದಿಯ ಬಗ್ಗೆ ನಿರ್ದೇಶಕ ನಂದಕಿಶೋರ್ ಇತ್ತೀಚೆಗೆ ಅಂತರ್ಜಾದಲ್ಲಿ ಹಂಚಿಕೊಂಡಿದ್ದಾರೆ.

ನಂದಕಿಶೋರ್ ಅವರೇ ಹೇಳುವ ಹಾಗೆ ಪೊಗರು ಚಿತ್ರಕ್ಕೆ ಈಗಾಗಲೇ ಬಹಳಷ್ಟು ಸಮಯವನ್ನು ತೆಗೆದುಕೊಂಡಿದ್ದೇವೆ, ಆದರೆ ನಮ್ಮ ಹಾಗೂ ಧ್ರುವ ಕಾಂಬಿನೇಷನ್‍ನ ಹೊಸ ಸಿನಿಮಾವನ್ನು ಬಲು ಬೇಗ ತೆರೆಗೆ ತರುತ್ತೇವೆ, ಅಲ್ಲದೆ ಈ ಚಿತ್ರದಲ್ಲಿ ಧ್ರುವನನ್ನು ರಗಡ್ ಲುಕ್‍ನಲ್ಲಿ ತೋರಿಸಲಿದ್ದೇವೆ, ನನ್ನ ಹಿಂದಿನ ಎಲ್ಲಾ ಚಿತ್ರಗಳಿಗಿಂತ ಸ್ಟೈಲಿಶ್ ಆಗಿರುತ್ತದೆ ಎಂದು ಹೇಳಿದ್ದಾರೆ.

ಧ್ರುವಸರ್ಜಾ ಹಾಗೂ ನಂದಕಿಶೋರ್‍ರ ಕಾಂಬಿ ನೇಷನ್‍ನ ಹೊಸ ಚಿತ್ರಕ್ಕೆ ಈಗಾಗಲೇ ಕಥೆ ಹಾಗೂ ಪ್ರೀ ಪ್ರೊಡಕ್ಷನ್ ಕಾರ್ಯಗಳು ಕೂಡ ಮುಗಿದಿವೆಯಂತೆ. ಪೊಗರು ಚಿತ್ರಕ್ಕೆ ಇನ್ನೊಂದು ಗೀತೆಯ ಚಿತ್ರೀಕರಣ ಬಾಕಿ ಉಳಿದಿದ್ದು ಆ ಚಿತ್ರ ಬೆಳ್ಳಿ ಪರದೆಗೆ ಬಂದ ತಕ್ಷಣ ಆ ಚಿತ್ರದ ಶೂಟಿಂಗ್ ಮಾಡಲಿದ್ದಾರಂತೆ.

ಕೃಷ್ಣರುಕ್ಕು, ರಾಜರಾಜೇಂದ್ರ, ಸಿಂಗ, ಬ್ರಹ್ಮಚಾರಿ ಚಿತ್ರಗಳನ್ನು ನಿರ್ಮಿಸಿದ್ದ ಉದಯ್ ಕೆ. ಮೆಹ್ತಾ ಅವರೇ ಧ್ರುವಾ ಹಾಗೂ ನಂದಕಿಶೋರ್ ಕಾಂಬಿನೇಷನ್‍ನ ಹೊಸ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರಂತೆ.
ಪೆÇಗರು ಚಿತ್ರದ ಹೊಸ ಲುಕ್, ಹೊಸ ಕಥೆ, ವಿಭಿನ್ನ ಕಥೆಯೊಂದಿಗೆ ಪ್ರೇಕ್ಷಕರನ್ನು ರಂಜಿಸಲು ಬರಲಿರುವ ನಂದಕಿಶೋರ್ ಹಾಗೂ ಆ್ಯಕ್ಷನ್ ಪ್ರಿನ್ಸ್ ಧ್ರುವಸರ್ಜಾ ಕಾಂಬಿನೇಷನ್‍ನ ಹೊಸ ಚಿತ್ರದ ಇನ್ನಷ್ಟು ವಿವರಗಳು ಸದ್ಯದಲ್ಲೇ ಸಿಗಲಿವೆಯಂತೆ.

Share This With Your Friends

Related posts